Sunday, October 14, 2018

ತುಳಸಿ ಗಿಡ

ತುಳಸಿ ಗಿಡದ ಮೇಲೆ ಮೆಣಸಿನ ಕಾಯಿ ಬಿಟ್ಟಿದೆ
ಪೂಜೆ ಮುಗಿಸಿ ಬಟ್ಟಲು ಹಿಡಿದು ನಿಂತಿದ್ದೇನೆ
ಹೂವು-ಗಂಧ-ನೀರು ಚೆಲ್ಲುವುದೋ? ಬಿಡುವುದೋ?
ಪೂಜೆ ಮಾಡಿದ ಪುಣ್ಯ ನೀರು ಚೆಲ್ಲದೇ ಬಾರದು ಅಮ್ಮ ಹೇಳಿದ್ದಳು
ಅಪ್ಪ ಚೆಲ್ಲಿದ್ದಂತೂ ನೋಡಿಲ್ಲ; ಕ್ಲೀನು ಮಾಡಿ ಬೇಜಾರಾಗಿತ್ತೇನೋ
ಎಲ್ಲೆಂದರಲ್ಲಿ ಚೆಲ್ಲಬಾರದು ಅಜ್ಜಿಯೊಂದು ದಿನ ಹೇಳಿದ್ದ ನೆನಪು
ತುಳಸೀಗಿಡ ಇದ್ದದ್ದರಲ್ಲಿ ಪವಿತ್ರ; ಹೂವು ಹಾಗೇ ಗೊಬ್ಬರವಾಗುವುದೇನೋ
ತೀರ್ಥಕ್ಕೆ ತುಳಸಿಯಿರಲೇ ಬೇಕು; ಕೆಮ್ಮಿಗೆ ತುಳಸಿ-ಜೇನು ಸಾಕು
ವರುಷಕ್ಕೊಮ್ಮೆ ಮಾಡುವ ಮದುವೆ; ನಿತ್ಯ ಬೆಳಿಗ್ಗೆಯ ಶುಭ ಇದುವೇ
ತುಳಸೀಗಿಡ ನಮ್ಮನೆಯ ಗರ್ವ;
ಚಿಕ್ಕಂದಿನಿಂದ ಬೆಳೆಸಿದ ಆದರ್ಶಗಳಷ್ಟೇ
ಕಾಸಿನ ಜರೂರತ್ತಿನ ಸಮಯದಲ್ಲಿ ವ್ಯವಹಾರ ಬಲ್ಲವರ ಮಾತು
ಸೂಜೀಮೆಣಸ ಒಣಗಿಸಿ ಮಾರಿದರೆ ಒಳ್ಳೇ ದರ; ಬಿಳಿಯ ಗೊಬ್ಬರ ಹಾಕಿ
ಆಡಚಣೆ ಬೇರೇನೂ ಇಲ್ಲ;
ಆ ತುಳಸಿಯನ್ನು ಸೂಜಿಮೆಣಸಿನ ಗಿಡವೆಂದು ಒಪ್ಪಬೇಕಷ್ಟೇ
ಎಲೆಯೊಂದ ತಿಂದು ನೋಡಿದೆ ವಾಡಿಕೆಯಂತೆ;
ತುಳಸಿಯೇ ಖಾರವೇನಿಲ್ಲ,ಘಾಟಿಲ್ಲ; ಮೆಣಸಿನ ಕಾಯಿ ಮಾತ್ರ ಕಾಣಿಸುತ್ತಿದೆ
ಕಿತ್ತು ಎಸೆದು ಬಿಡಲೇ ಮೆಣಸನ್ನು?
ಕಾಪಾಡಿಕೊಳ್ಳುವಾ ಹಿಂದಿಂದ ನಂಬಿದ ರೀತಿ ರಿವಾಜನ್ನು
ಕಾಲ ಬದಲಾಗುತ್ತಿದೆ; ಅವಕಾಶ ಮನೆಬಾಗಿಲಲ್ಲಿ ಬಂದು ಕೂತಿದೆ
ಒಂದಿಷ್ಟು ಮಾರಿಕೊಂಡು; ಗಂಟನ್ನಷ್ಟು ಕಟ್ಟಿಕೊಳ್ಳಬಾರದೇ?
ದೇವರಕೋಣೆಯೆಂಬುದೇ ಮೂರಡಿ ಜಾಗವಾಗಿರುವಾಗ
ಅಂಗಳ ಮಧ್ಯದಲ್ಲಿರುವ ಕಟ್ಟೆ ತೆಗೆದು ಸಾಗುವಳಿ ಶುರುಮಾಡಬಾರದೇ?
ಹಣೆ ಹಚ್ಚಿದ ಭಸ್ಮ ಒಣಗಿ ಕಣ್ಣಿಗೆ ಬೀಳುತ್ತಿದೆ
ಮೀಟಿಂಗಿಗೆ ಸಾಗುವ ಮುನ್ನ ಅಳಿಸಿ ಬಿಡಲೇ?
ನೀರು ಚೆಲ್ಲಿ, ಮಡಿ ಬಿಚ್ಚಿ, ಎಂದಿನ ಸ್ವಂತಿಕೆಯ ಹಠದಲ್ಲಿ ಸಾಗಿ
ಓಡುವ ಗೂಳಿಯ ಬಾಲ ಹಿಡಿವುದ ಬಿಟ್ಟು, ಎತ್ತು-ನೇಗಿಲ ಹಿಡಿಯಲೇ?
ತುಳಸಿ ಗಿಡದ ಮೇಲೆ ಮೆಣಸಿನ ಕಾಯಿ ಬಿಟ್ಟಿದೆ
ಪೂಜೆ ಮುಗಿಸಿ ಬಟ್ಟಲು ಹಿಡಿದು ನಿಂತಿದ್ದೇನೆ
-ಚಿನ್ಮಯ
14/10/2018

3 comments:

sunaath said...

ನಮ್ಮೆಲ್ಲರ ದ್ವಂದ್ವವನ್ನು ಕವನದಲ್ಲಿ ಸೊಗಸಾಗಿ ಹಿಡಿದಿದ್ದೀರಿ, ಚಿನ್ಮಯ!

ಚಿನ್ಮಯ ಭಟ್ said...

ಧನ್ಯವಾದ ಕಾಕಾ :)

Srikanth Manjunath said...

ಮನದಲ್ಲಿ ಕಾಡುವುದೇ ಹೀಗೆ.. ಅದು ಸರಿ ಇದು ತಪ್ಪು.. ಇದು ತಪ್ಪು ಅದೇ ಸರಿ.. ಈ ಒದ್ದಾಟದಲ್ಲಿಯೇ ನಮ್ಮ ನಂಬಿಕೆಗಳು ದಾರಿ ಹಿಡಿಯುತ್ತವೆ.. ಸೊಗಸಾಗಿದೆ ಕವಿತೆ ಕಟ್ಟಿದ ರೀತಿ ತುಳಸೀಕಟ್ಟೆಗೆ ಮಲ್ಲಿಗೆ ಹೂವಿನ ಹಾರ ಇಟ್ಟಹಾಗೆ .. ಸೂಪರ್ ಚಿನ್ಮಯ್