Monday, November 26, 2018

ಕನ್ಫೆಷನ್ಸ್ ಆಂಡ್ ಪ್ರಪೋಸಲ್ಸ್

#655
"ಶ್ರಾವಣಿ...ಫೈನಲ್ ಇಯರ್.. ಯು ಆರ್ ಸೋ ಕ್ಯೂಟ್...ಹ್ಯೂಜ್ ಕ್ರಶ್ ಆನ್ ಯು ....ಬಟ್ ವಾಟ್ ಆರ್ ಯು ಡೂಯಿಂಗ್ ವಿಥ್ ದಾಟ್ ನರ್ಡ್ ಶ**ಷ??"
ಅಡ್ವಾನ್ಸ್ಡ್ ಡೇಟಾಬೇಸ್ ಕ್ಲಾಸು ನಡೆಯುತ್ತಿತ್ತು..ಮತ್ತೊಮ್ಮೆ ನಾರ್ಮಲೈಜೇಷನ್ ಶುರುಮಾಡಿದ್ದರು...ಆದರೆ ಶತಭಿಷನ ಮನಸ್ಸು ಮಾತ್ರ ಅಬ್‍ನಾರ್ಮಲ್ ಆಗಿತ್ತು...ಖುಷಿಪಡುವುದಾ? ಟೆನ್ಷನ್ ಆಗುವುದಾ? ಶ್ರಾವಣಿಗೆ ಮೆಸ್ಸೇಜ್ ಮಾಡುವುದಾ? ಕಾಣಿಸಿಕೊಳ್ಳದೇ ಸ್ವಲ್ಪ ದಿನ ಹಾಗೇ ಇದ್ದು ಬಿಡುವುದಾ?
ಶತಭಿಷನಿಗೆ ಕ್ಲಾಸ್‍ಮೇಟ್ ಯಾರೋ ತೋರಿಸಿದ್ದರು...“ಏಯ್ ಹೋಗ್ರೋ” ಎಂದು ಪೋನ್ ಸ್ಕ್ರೀನ್ ಲಾಕ್ ಮಾಡಿ ವಾಪಸ್ ಕೊಟ್ಟಿದ್ದ. ಪಾಠ ಕೇಳುವಂತೆ ನಟಿಸುತ್ತಿದ್ದ...ಬೋರ್ಡ್ ಮೇಲೆ ಬರೆದಿದ್ದನ್ನು ಅನಾಮತ್ತಾಗಿ ಬರೆಯುತ್ತಿದ್ದ..
ಪಕ್ಕದ ಬೆಂಚಿನಲ್ಲಿದ್ದ ಹುಡುಗಿಯೊಬ್ಬಳು “ಪ್ಚ್” ಎಂದಳು.
“ಏನ್ ಲೇ?” ಎಂದ. “ಭಾರಿ ಆತಲ್ಲಪಾ” ಎಂಬಂತೆ ಜವಾರಿ ಭಾಷೆಯಲ್ಲಿ ಕೈ ತೋರಿದಳು..ಹುಸಿಮುನಿಸು ತೋರಿ ಸುಮ್ಮನಾದ..ಹಿಂದಿನ ಬೆಂಚಿನಿಂದ ಯಾರೋ ಕಮೆಂಟ್ ಹೊಡೆದರು...
“ಫುಲ್ ಫೇಮಸ್ ಅಲಾ ಮಗಾ...”
ಈತ “ಸುಮ್ನಿರ್ರೋ” ಎಂಬಂತೆ ಕೈ ಮುಗಿದು ಬೇಡಿದ...
ನಂತರ ವಾಡಿಕೆಯಂತೆ ಮೊಬೈಲ್ ಹಿಡಿದ..ವಾಟ್ಸಪ್ ಟ್ಯಾಪ್ ಮಾಡಿದ... ಅಷ್ಟರಲ್ಲೇ ಇವನನ್ನು ಲೆಕ್ಚರರ್ರು ಎರಡೂ ಬಾರಿ ಗುರಾಯಿಸಿ ನೋಡಿದ್ದರು...ಮೊಬೈಲ್ ಬಳಸಿದ್ದು ನೋಡಿ ಅವರಿಗೆ ಏನೋ ಅವಮಾನವಾದಂತಾಯಿತು...
“ಯೂ ಫೋರ್ಥ್ ಬೆಂಚ್... ಗೆಟ್ ಔಟ್” ಎಂದರು...
ಸಿಕ್ಕಿದ್ದೇ ಚಾನ್ಸ್ ಎಂದು ಶತಭಿಷನ ಬೆಂಚಿನ ಎಲ್ಲಾ ಹುಡುಗರು ಹೊರಡಲು ಅನುವಾದರು...”ಏಯ್ ನಾಟ್ ಯು ಆಲ್...ಯೂ” ಎಂದು ಶತಭಿಷನನ್ನು ತೋರಿಸುವವರೆಗೂ ಆತ ಮೊಬೈಲಿನಲ್ಲೇ ಮುಳುಗಿದ್ದ...ಕಾರಣ?
ಶ್ರಾವಣಿ ಮೆಸ್ಸೇಜು ಹಾಕಿದ್ದಳು...”ಕ್ಯಾನ್ ವಿ ಟಾಕ್?”
ಬ್ಯಾಗ್ ಹಾಕಿಕೊಂಡು ಹೆಲ್ಮೆಟ್ ಮರೆತು ಶತಭಿಷ ಬಾಗಿಲ ಬಳಿ ಬರುತ್ತಲೇ ರಿಪ್ಲೈ ಕೊಟ್ಟಿದ್ದ “ಎಲ್ಲಿ?”
ಲೆಕ್ಚರ್ ಹಾಲಿನಿಂದ ಹೊರಬಂದು ಮೊಬೈಲ್ ಚೆಕ್ ಮಾಡಿದಾಗ ಡಬಲ್ ಟಿಕ್ ಬಂದಿತ್ತು...ಶತಭಿಷ ನೀಲಿ ಟಿಕ್‍ಮಾರ್ಕ್ ಎನೇಬಲ್ ಮಾಡಿರಲಿಲ್ಲ...ಆಕೆಯ ಸ್ಟೇಟನ್ ಆನ್‍ಲೈನ್‍ನಿಂದ ಆಫ್‍ಲೈನಿಗೆ ಬದಲಾಗಿತ್ತು...ಇದ್ದಕ್ಕಿದ್ದಂತೆ ಹೆಲ್ಮೆಟ್ ನೆನಪಾಯಿತು...ಮತ್ತೆ ಕ್ಲಾಸಿನತ್ತ ಹೆಜ್ಜೆ ಹಾಕಿದ...ದುರುಗುಟ್ಟಿ ನೋಡುತ್ತಿದ್ದ ಲೆಕ್ಚರರ್ ಮುಖವನ್ನೇ ನೋಡಿ, ಅಲ್ಲಿಗೆ ವಾಷ್‍ರೂಮಿನತ್ತೆ ಹೆಜ್ಜೆಹಾಕಿದ..ಅಲ್ಲೊಂದು ಕನ್ನಡಿಯಿತ್ತು...ಮುಖ ತೊಳೆಯಲು ನೀರು ಬರಲಿಲ್ಲ..ಹಾಗೇಯೇ ಕನ್ನಡಿ ನೋಡುತ್ತ ನಿಂತ...ಅವನ ಬಗ್ಗೆಯೇ ಅವನಿಗೆ ಗಿಲ್ಟ್ ಫೀಲ್ ಶುರುವಾಯಿತು...ಕಾರಣ ಸ್ಪಷ್ಟವಿರಲಿಲ್ಲ...ಶ್ರಾವಣಿ ಇನ್ನೂ ರಿಪ್ಲೈ ಕೊಟ್ಟಿರಲಿಲ್ಲ...ಅಲ್ಲಿಂದಲೇ ಫೋನಾಯಿಸಿದ...
“ಟಣ್. ಟಣ್.. ಟಣ್..ಈ ಹಾಡನ್ನು ಕಾಪಿ ಮಾಡಲು ಸ್ಟಾರ್ ಒತ್ತಿ...ಎಲ್ಲೋ ಜಿನುಗಿರುವ ನೀರು..ಎಲ್ಲೋ ಜೇನಾಗಿ ಹರಿದು..”
ಪೋನ್ ಕಟ್ ಆಯಿತು... “ಎಲಾ ಇವಳಾ....” ಕಾರಣ ಸ್ಪಷ್ಟವಿರದೇ ಸಿಟ್ಟುಬಂದಿತ್ತು...ಕಾಲು ನಡುಗಲು ಶುರುವಾಗಿತ್ತು... ಅವಳ ಕ್ಲಾಸ್ ರೂಮಿನತ್ತ ಓಡಿದ...ಫೈನಲ್ ಇಯರ್ ಕ್ಲಾಸ್ ರೂಮಿನ ಸ್ಟೇರ್‍ಕೇಸಿನ ಬಳಿಯೇ ಅವಳ ಬೆಸ್ಟ್‍ಫ್ರೆಂಡ್ ಸಿಕ್ಕಳು.
..
“ಎಲ್ಲಿ?” ಎಂಬಂತೆ ಕೇಳಿದ...ವಾಷ್‍ರೂಮ್ ಕಡೆ ಸನ್ನೆ ಮಾಡಿದಳು.... ಈತ ಕಾಯುತ್ತಿದ್ದ ಅವಳಿಗಾಗಿ...ಮಾತು ಎಲ್ಲಿಂದ ಶುರುಮಾಡುವುದು? ಸಾರಿ ಕೇಳಲಾ? ಎಕ್ಸ್‍ಪ್ಲೇನ್ ಮಾಡಲಾ? ಇಗ್ನೋರ್ ಮಾಡು ಎನ್ನಲಾ? ಇಲ್ಲಾ..... ಶತಭಿಷನಿಗೆ ಒಂದೊಂದು ನಿಮಿಷಕ್ಕೆ ಒಂದೊಂದು ಸರಿ ಎನಿಸುತ್ತಿತ್ತು..ಪಕ್ಕದಲ್ಲಿ ಕಂಪೌಂಡ್ ಆಚೆ ಯಾರೋ ಸಿಗರೇಟು ಸುಡುತ್ತಿದ್ದರು...ಬೇಕಿನಿಸಿತ್ತು...ಆದರೆ ಇದ್ದಲ್ಲಿಂದ ಹೊರಡಲು ಮನಸ್ಸಾಗಲಿಲ್ಲ...ಅಷ್ಟರಲ್ಲಿ ವೇಲು ಸರಿ ಮಾಡಿಕೊಳ್ಳುತ್ತಾ ಆಕೆ ಬಂದಳು...ಬಂದ ಹಾಗೇ ಹೊರಟೂ ಹೋದಳು...
ಇವನತ್ತ ನೋಡಿದ್ದಳಾ? ನೋಡಿಯೂ ಇಗ್ನೋರ್ ಮಾಡಿದಳಾ? ಸಿಟ್ಟಾಗಿದ್ದಾಳಾ?
“ಏಯ್” ಎಂದು ಹಿಂಬಾಲಿಸಿದ...ಹಿಂದೆ ತಿರುಗಿದ ಗೆಳತಿಗೆ “ನೋ” ಎಂಬಂತೆ ಶ್ರಾವಣಿ ಇಶಾರೆಯಿತ್ತಳು...ಈತನಿಗೂ ಮುಂದೆ ಹೋಗುವ ಮನಸ್ಸಾಗಲಿಲ್ಲ...
“ನರ್ಡ್ ಅಂದ್ರೆ ಏನೋ ಮಚಾ?”...”ಗಾಂಧಿ ನನ್‍ಮಗಾ ಅಂತಾ ಕಣೋ....”
“ಹಂಗೇನೋ...ನಾ ಬೇರೆ ಏನೋ ಅನ್ಕೊಂಡಿದ್ದೆ ಮಗಾ..”
ಪಕ್ಕದಲ್ಲಿ ಹೋಗುತ್ತಿದ್ದ ಹುಡುಗರ ಗುಂಪು ಛೇಡಿಸತೊಡಗಿತ್ತು....ಶತಭಿಷ ಆವೇಶವೇರಿ ಅವರಿಗೆಲ್ಲಾ ಹೊಡೆಯಹೋಗಿದ್ದ...ಒಂದೆರಡು ಏಟು ಬಿಗಿದೂಬಿಟ್ಟಿದ್ದ...ಆದರೆ ಅವರೇನೂ ಪುಕ್ಕಲುಗಳಾಗಿರಲಿಲ್ಲ...ಇವನಿಗೂ ತದುಕಿದ್ದರು....ಕ್ಯಾಂಪಸ್ಸಿನಲ್ಲಿ ಬಂಕ್ ಹಾಕಿ ಓಡಾಡುತ್ತಾ ಇದ್ದವರೆಲ್ಲಾ ಅಲ್ಲಿಗೆ ಬಂದು ಜಗಳ ಬಿಡಿಸುವಷ್ಟರಲ್ಲಿ ಹೋಯ್ ಕೈ ನಡೆದಿತ್ತು...ಇಬ್ಬರೂ ಪ್ರಿನ್ಸಿಪಲ್ ರೂಮಿಗೆ ಹೋಗಿ ಅಪಾಲಜಿ ಲೆಟರ್ ಬರೆದು ಹ್ಯಾಂಡ್ ಶೇಕ್ ಮಾಡಿ ಹೊರಬಿದ್ದರು....ಶತಭಿಷನ ಸಿಟ್ಟು ಕೊಂಚಮಟ್ಟಿಗೆ ತಣ್ಣಗಾಗಿತ್ತು... ಅವನಿಷ್ಟದ ಪ್ರೊಫೆಸರ್ ಚೇಂಬರ್‍ನಲ್ಲಿ ಕೂತಿದ್ದ...ಮುಂದೇನು ಗೊತ್ತಿರಲಿಲ್ಲ....ಚಹಾ ತರಿಸಿ ಕುಡಿಸಿದ್ದರು ಅವನಿಗೆ...
“ಡಿಡ್‍ನಾಟ್ ಎಕ್ಸ್‍ಪೆಕ್ಟ್ ದಿಸ್ ಫ್ರಾಮ್ ಯು ಶತಭಿಷ...ವೈ ಯು ಆರ್ ವೇಸ್ಟಿಂಗ್ ಯುರ್ ಎನರ್ಜಿ ಇನ್ ದಿಸ್? ಡೂ ಸಮ್ ದಿಂಗ್ ಮೀನಿಂಗ್‍ಫುಲ್...” ಎನ್ನುತ್ತಾ ಶತಭಿಷನನ್ನು ಎಂದಿನ ಮೂಡಿಗೆ ತರಲು ಅವರು ಪ್ರಯತ್ನಿಸುತ್ತಿದ್ದರು...ಈತ ಕಲ್ಲುಬಂಡೆಯಂತೆ ಕೂತಿದ್ದ....ಎಲ್ಲದಕ್ಕೂ “ಹೂಂ” ಎನ್ನುತ್ತಿದ್ದ...
“ಟು ಡೆ ದೆರ್ ಇಸ್ ಅ ಹ್ಯಾಕಥಾನ್...ವಿಲ್ ಯು ಗಿವ್ ಇಟ್ ಅ ಟ್ರೈ? ಇಟ್ ಮೇ ಹೆಲ್ಪ್ ಯು ಟು ರಿಲ್ಯಾಕ್ಸ್” ಎಂದು ಟಿಕೇಟೊಂದನ್ನು ಕೊಟ್ಟರು...
“ಶುರ್” ಎನ್ನುತ್ತಾ ಶತಭಿಷ ಹೊರಬಿದ್ದ...ಎಲ್ಲದನ್ನೂ ಮರೆತು, ರಾತ್ರಿಯಿಡೀ ಕೋಡ್ ಮಾಡುವ ಹಂಬಲವಿತ್ತು ಅವನಿಗೆ...ಕೋಡಿಂಗ್‍ಗೆ ಇಳಿದರೆ ಆತ ಊಟ ತಿಂಡಿ ನಿದ್ದೆ ಎಲ್ಲವನ್ನೂ ಮರೆಯುತ್ತಿದ್ದ....ಎರರ್ರು ಡಿಬಗ್ಗಿಂಗ್ ಹುಚ್ಚಿನಲ್ಲಿ ಕಣ್ಣು ನೋವು ಬರುವವರೆಗೂ ಮಾನಿಟರ್‍ಅನ್ನು ಕಣ್ಣು ಮಿಟುಕಿಸದೇ ನೋಡುತ್ತಿದ್ದ....
“ನೀ ಹಿಂಗೇ ಕಂಪ್ಯೂಟರ್ ನೋಡ್ತಾ ಇದ್ರೆ ಸ್ಪೆಕ್ಸ್ ಬರತ್ತೆ ಕಣೋ ಬೇಗ...” ಶ್ರಾವಣಿ ಛೇಡಿಸುತ್ತಿದ್ದಳು....
“ಬರ್ಲಿ ಬಿಡೇ...ನಿನ್ ಸ್ಪೆಕ್ಸೇ ಕದ್ದ್ ಹಾಕ್ಕೋತೀನಿ...ನೀ ಹೆಂಗಂದ್ರೂ ಸಿಸ್ಟಮ್ ಯೂಸ್ ಮಾಡಲ್ವಲ್ಲಾ...” ಎಂದು ಉತ್ತರಿಸುತ್ತಿದ್ದ....ಅವಳಿಗೆ ಕಿಂಡಲ್‍ಗಿಂತ ಹಾರ್ಡ್‍ಕವರ್ ಕಾಪಿಯೇ ಇಷ್ಟವಾಗುತ್ತಿತ್ತು... ಯೂ ಟ್ಯೂಬು, ಸಾವನ್, ಅಮೇಜಾನ್ ಮ್ಯೂಸಿಕ್‍ನ ಹಾಡುಗಳಿಗಿಂತ ರೇಡಿಯೋದಲ್ಲಿನ ಸಣ್ಣ ನಾಯಿಸ್ ಅವಳನ್ನು ಪುಳಕಿತಗೊಳಿಸುತ್ತಿತ್ತು...ಇವತ್ತು ಆಕೆಯನ್ನು ಆಕಾಶವಾಣಿಯ ರೆಕಾರ್ಡಿಂಗ್‍ಗೆ ಕರೆದೊಯ್ಯಬೇಕೆಂದಿದ್ದ..ಸಂಜೆ ಕಬ್ಬನ್‍ಪಾರ್ಕಿನಲ್ಲಿ ಓಡಾಡಬೇಕೆಂದಿದ್ದ...ಅವಳು ಬಹಳದಿನಗಳ ಹಿಂದೆ ಕೇಳಿದ್ದ ಕಾದಂಬರಿಯೊಂದನ್ನು ಸೆಂಟ್ರಲ್ ಲೈಬ್ರರಿಯಲ್ಲಿ ಹುಡುಕಿದ್ದ...ಅಷ್ಟರಲ್ಲಿ ಇದಾಗಿತ್ತು...
ರೂಮಿಗೆ ಹೋದವನೇ ಫ್ರೆಷ್‍ಅಪ್ ಆಗಿ , ಹೊಟ್ಟೆಗೊಂದಿಷ್ಟು ಹಾಕಿಕೊಂಡು, ಹ್ಯಾಕಥಾನ್ ಇವೆಂಟ್ ನಡೆಯುವ ಜಾಗಕ್ಕೆ ಬಂದ...
ಮಾಮೂಲಿ ಕೆಂಪು ಕುರ್ಚಿಗಳಿಗೆ ಬಿಳಿಯ ಹೊದಿಕೆ ಹಾಸಿ ರೌಂಡ್ ಟೇಬಲ್ಲಿನ ಪಕ್ಕ ಇರಿಸಿದ್ದರು...ಮಿನರಲ್ ವಾಟರ್, ಚಿಪ್ಸ್, ಕುಕೀಸ್ ಒಪ್ಪವಾಗಿ ಕುಳಿತಿದ್ದವು...ಅರ್ಜಂಟಿನಲ್ಲಿ ಹಾಕಿದ್ದ ಸ್ಪೈಕ್ ಬಸ್ಟರ್ ಕನೆಕ್ಷನ್ ಸ್ಪಲ್ಪ ಲೂಸಾದಂತಿತ್ತು...ಶತಭಿಷ ಲ್ಯಾಪ್‍ಟಾಪ್ ಆನ್ ಮಾಡಿ ಕೂತ...ಅದು ಇಪ್ಪತ್ನಾಲ್ಕು ಗಂಟೆಯ ಹ್ಯಾಕಥಾನ್...ಇಪ್ಪತ್ನಾಲ್ಕು ಗಂಟೆಗಳ ಒಳಗಾಗಿ ಒಂದು ಚಾಟ್‍ಬಾಟ್ ಪ್ರಾಡಕ್ಟ್‍ನ ಪ್ರೋಟೋಟೈಪನ್ನು ಮಾಡಿಕೊಡಬೇಕಿತ್ತು...ಆಯ್ಕೆಯಾದ ಪ್ರೋಟೋಟೈಪ್‍ಗಳಿಗೆ ಪ್ರೈಜ್ ಸಿಗುತ್ತಿತ್ತು...ಮಾರಬಹುದಾದ ಸರಕು ಎನಿಸಿದರೆ ಫಂಡಿಂಗ್ ಸಿಗುವ ಸಾಧ್ಯತೆಯೂ ಇತ್ತು...ಶತಭಿಷನ ತಲೆಯಲ್ಲಿ ಇಂತಹುದೇ ಇವೆಂಟಿಗೆ ಬೇಕಾದ ಹಲವಾರು ಐಡಿಯಾಗಳಿದ್ದವು...ಅದನ್ನು ಆತ ಫ್ರೊಫೆಸರ್ ಬಳಿ ಚರ್ಚೆಮಾಡಿಯೂ ಇದ್ದ...ಅವರು ಎಲ್ಲವನ್ನೂ ಕೇಳಿಸಿಕೊಳ್ಳುತ್ತಿದ್ದರು...ಬರೆದಿಟ್ಟುಕೋ, ಮರೆತುಬಿಡುತ್ತೀಯಾ ಎನ್ನುತ್ತಿದ್ದರು...ಈತ ಸರ್ ನೆನಪಲ್ಲಿ ಇದ್ರೆ ಮಾತ್ರ ಒಳ್ಳೆ ಐಡಿಯಾ ಎಂದು ಸುಮ್ಮನಾಗುತ್ತಿದ್ದ....ಇವತ್ತಿಗೆ ಅರ್ಜಂಟಾಗಿ ಅವನಿಗೆ ಐಡಿಯಾವೊಂದು ಬೇಕಿತ್ತು...ಹುಡುಕುತ್ತಿದ್ದ...ಆ ಕಡೆ ಈ ಕಡೆ ಓಡಾಡುತ್ತಿದ್ದ...ಆಗಲೇ ಮೂರು ಕಾಫಿ ಕುಡಿದಿದ್ದ...ಏನೋ ಹೊಳೆದಂತಾಯಿತು..
ಬೆಂಗಳೂರಿನಲ್ಲಿ ಹಲವಾರು ಮಾಲ್‍ಗಳಿವೆ...ಪ್ರತೀ ಮಾಲ್‍ನ ಎಂಟ್ರೆನ್ಸಿನಲ್ಲಿ ಒಂದು ಚಾಟ್‍ಬಾಟ್...ಅಲ್ಲಿಗೆ ಬಂದವರು ಎಲ್.ಇ.ಡಿ ಸ್ಕ್ರೀನಿನ ಬದಲು ಅದರೊಂದಿಗೆ ಮಾತನಾಡಬಹುದು...
“ಕಂಪ್ಯೂಟರ್, ಐ ವಾನ್ಸ್ ಹೇರ್ ಸ್ಟೈಲಿಂಗ್” ಎಂದರೆ ಎಲ್ಲಾ ಸಲೂನ್‍ಗಳ ವಿವರಗಳನ್ನು ಅದರ ಮೂಲಕ ಹೇಳಿಸಬಹುದು..ಅದರಲ್ಲಿ ಆಫರ್‍ಗಳನ್ನೂ ಪ್ರಿಯರಿಟೈಸ್ ಮಾಡಬಹುದು...ಇನ್ನೂ ಬೇಕೆಂದರೆ ಆ ಗ್ರಾಹಕನ ಮೊಬೈಲ್ ನಂಬರ್ ಅನ್ನು ಎಲ್ಲಾ ಸಲೂನ್‍ಗಳಿಗೆ ಕೊಡಬಹುದು...ಅದ್ಭುತ ಎನಿಸಿತು...ಹಾಗೇ ಶುರುಮಾಡಿದ...
ಫಿನಿಕ್ಸ್‍ಸಿಟಿ ಮಾಲ್‍ನ ಎಲ್ಲಾ ಶಾಪ್‍ಗಳ ವಿವರಗಳನ್ನು ನೋಟ್ ಮಾಡಿಕೊಂಡ...ಅದನ್ನು ಎಕ್ಸೆಲ್‍ಗೆ ಇಳಿಸಿದ...ಜೇಸಾನ್ ಫಾರ್ಮಾಟಿನಲ್ಲಿ ಸೇವ್ ಮಾಡಿದ...ಫ್ಲೋರ್‍ಗಳ ಪ್ರಕಾರ ಡಬಲೀಲಿಂಕ್‍ಲಿಸ್ಟ್ ಸಿದ್ಧಪಡಿಸಿದ...ಅಮೇಜಾನ್ ಅಲೆಕ್ಸಾ ಪ್ಲಾಟ್‍ಫಾರಂನಲ್ಲಿ ಡೆವಲಪ್ ಮಾಡುವುದೆಂದು ನಿರ್ಧರಿಸಿ ಸ್ಕಿಲ್ಲಿನ ಡಿಸೈನ್ ಶುರುಮಾಡಿದ... ಅಷ್ಟರಲ್ಲಿ ಪಿಜ್ಜಾ ಬಂದಿದೆಯೆಂದು ಅನೌನ್ಸ್ ಮಾಡಿದರು....
ಶತಭಿಷ ಪಿಜ್ಜಾ ಬಾಕ್ಸ್ ಹಿಡಿದು ಗುಂಪಿನಿಂದ ಬರುತ್ತಿದ್ದ...ಪಿಜ್ಜಾ ಅಂದರೆ ಶ್ರಾವಣಿಗೆ ಬಹಳೇ ಇಷ್ಟ...ಪ್ಲೇಸ್‍ಮೆಂಟಿನ ಎಚ್ ಆರ್ ರೌಂಡಿನಲ್ಲಿ ವಾಟ್ ಈಸ್ ಯುರ್ ವೀಕ್‍ನೆಸ್ ಅಂದ್ರೆ ಚಾಕಲೇಟ್ ಆಂಡ್ ಪಿಜ್ಜಾ ಅಂದಿದ್ದ ಹುಡುಗಿಯವಳು...ಭ್ರಮೆಯಾ? ಪಿಜ್ಜಾ ತೆಗೆದುಕೊಂಡು ಹಿಂದೆ ಬರುವಾಗ ಗುಂಪಿನಲ್ಲೆಲ್ಲೋ ಅವಳನ್ನು ಕಂಡಂತಾಯಿತು ಶತಭಿಷನಿಗೆ...
ನೋ...ನೋ...ನೋ ವೇ ಎಂದು ಕೊಂಡು ಲ್ಯಾಪ್‍ಟಾಪಿನ ಗುಂಡಿ ಕುಟ್ಟಿದ...ಪಕ್ಕದ ಟೇಬಲ್ಲಿನವರು ಒಮ್ಮೆ ಮುಖ ನೋಡಿದರು...ಈಗ ಫೋಕಸ್ ಕಳೆದುಕೊಳ್ಳಬಾರದು ಎಂದು ಪಿಜ್ಜಾ ತುಂಡೊಂದನ್ನು ಎತ್ತಿಕೊಂಡು ಕೋಡ್ ಬರೆಯಲು ಶುರುಮಾಡಿದ...ಹನ್ನೆರಡು...ಒಂದು ಗಂಟೆ...ಎರಡು ಗಂಟೆ....ಸುಮಾರು ಬಹುತೇಕ ಅರ್ಧದಷ್ಟು ಕೆಲಸ ಮುಗಿದಿತ್ತು...ಕಣ್ಣುಗಳು ಕೆಂಪಾಗಿತ್ತು...ಅವಳು ಹತ್ತಿರದಲ್ಲೇ ಎಲ್ಲೋ ನಕ್ಕಂತಾಯಿತು..
.ತಿರುಗಿ ನೋಡಿದ..
.ಅವಳೇ...
ಎದ್ದು ಮಾತನಾಡಿಸಲು ಹೊರಟ... ಹಾಯ್ ಎಂದು ಪಾಸಾದಳು...
ಪಕ್ಕದಲ್ಲಿ ಅವಳ ಗೆಳತಿಯೂ...ಅವರ ಜೊತೆ ಅಂದಿನ ಜಡ್ಜ್ ಪ್ಯಾನಲ್ಲೂ ಇತ್ತು...
“ಹೇಯ್...” ವಾಟ್ಸಪ್ಪಿನಲ್ಲಿ ಮೆಸ್ಸೇಜು ಹಾಕಿದ....ಡಬಲ್ ಟಿಕ್ ಬರಲೇ ಇಲ್ಲ..
.ಕಾದ..
.ಕಾದ...ಕಾದ...
ಬಹುಷಃ ಬ್ಲಾಕ್ ಮಾಡಿರಬೇಕು....ಮೈಯ್ಯೆಲ್ಲ ಉರಿಯಿತು...ಈತನೂ ಬ್ಲಾಕ್ ಮಾಡಿದ...ನಂಬರ್ ಡಿಲಿಟ್ ಮಾಡಿದ.
..
ಕೋಡ್ ಕಡೆ ಗಮನ ಹರಿಸಿದ...ಆಗೊಂದು ಸಮಸ್ಯೆ ಎದುರಾಗಿತ್ತು...ಅಲ್ಲಿಯವರೆಗೆ ಆತ ಇದನ್ನೆಲ್ಲ ಯೋಚಿಸಿಯೇ ಇರಲಿಲ್ಲ...ಅವನು ಬರೆದ ಸ್ಕಿಲ್ ಥರ್ಡ್ ಪಾರ್ಟಿ ಅಪ್ಲಿಕೇಷನ್ ಆದ ಕಾರಣ ಅದನ್ನು ಪ್ರತೀ ಬಾರಿ ಮ್ಯಾನುವಲ್ ಆಗಿ ಇನ್ವೋಕ್ ಮಾಡಬೇಕಿತ್ತು...ಪ್ರತೀ ಸಲ ಅಲೆಕ್ಸಾ ಓಪನ್ ಮಾಲ್ ಫೈಂಡರ್ ಎನ್ನುವುದು ಇವನಿಗೋ ಚೆನ್ನಾಗಿ ಕಾಣಿಸಲಿಲ್ಲ...ಅದಕ್ಕೇನು ಪರಿಹಾರ...ಸ್ಟಾಕ್ ಓವರ್ ಫ್ಲೋ, ಟ್ವಿಚ್, ಸ್ಲ್ಯಾಕ್, ಡೆವಲಪರ್ ಫೋರಮ್ ಎಲ್ಲವನ್ನೂ ಹುಡುಕಿದ...ತಡಕಾಡಿದ...ಸಮರ್ಪಕವಾದ ಉತ್ತರ ಎಲ್ಲಿಯೂ ಸಿಗಲಿಲ್ಲ...
“ಟೆರೇಸ್ ಗೆ ಬಾ” ಅನ್‍ನೌನ್ ನಂಬರ್‍ನಿಂದ ಮೆಸ್ಸೇಜು ಬಂದಿತ್ತು....
ಅವಳೇ ಅದು...
ಲ್ಯಾಪ್‍ಟಾಪ್ ಮಡಚಿಟ್ಟು ಟೆರೇಸ್‍ಗೆ ಹೊರಟ...ಆಕೆ ಪಿಜ್ಜಾ ತಿನ್ನುತ್ತಿದ್ದಳು...ಜಡ್ಜ್ ಪಾಲಿನ ಪಿಜ್ಜಾ ಇರಬೇಕು...ಜೊತೆಗೆ ಮತ್ತಿಬ್ಬರಿದ್ದರು...ಇವನನ್ನು ನೋಡಿದೊಡನೆಯೇ ಆಕೆ...
“ಬಾರೋ...” ಎಂದು ಕರೆದಳು..
.
“ನೋ ಥ್ಯಾಂಕ್ಸ್..” ಮುಖ ಬಿಗಿದುಕೊಂಡೇ ಹೇಳಿದ...
“ಮುಚ್ಕೊಂಡ್ ಬಾರೋ...” ಆಕೆಯ ಹುಸಿಮುನಿಸಿನ ಮುಖ ನೋಡಿದ ಮೇಲೆ ಅವನಿಗೆ ಇಲ್ಲವೆನ್ನಲಾಗಲಿಲ್ಲ....ಪಿಜ್ಜಾ ತುಂಡುಗಳನ್ನು ಎತ್ತಿಕೊಂಡು ಟೆರೇಸ್ಸಿನ ಮೂಲೆಯೆಡೆಗೆ ನಡೆದರು...ತಣ್ಣನೆಯ ಗಾಳಿ ಬೀಸುತ್ತಿತ್ತು...ಆಕೆ ತಲೆಗೂದಲು ಹಾರಾಡದಂತೆ ಕ್ಲಿಪ್ ಸರಿ ಮಾಡಿಕೊಂಡಳು...ಗಾಳಿ ಕ್ರಾಪಿಗೆ ವಿರುದ್ಧ ಬೀಸಿ ಹಣೆಯ ಕೋಡು ಕಾಣುತ್ತಿದೆಯಾ? ಶತಭಿಷ ಕೂದಲು ಕೆದರಿಕೊಂಡ..
.
“ಮತ್ತೆ?” ಏನೂ ಆಗೇ ಇಲ್ಲ ಎಂಬಂತೆ ಆಕೆ ಕೇಳಿದಳು..
“ಏನಿಲ್ಲ”...ಶತಭಿಷ ಗಂಭೀರವಾಗಿಯೇ ಉತ್ತರ ಕೊಟ್ಟ....
ಎದುರಿಗೆ ಔಟರ್ ರಿಂಗ್ ರೋಡು ಕಾಣಿಸುತ್ತಿತ್ತು...ರಾತ್ರಿಪಾಳಿಯ ಐ.ಟಿ ನೌಕರರಿಗಾಗಿ ಕ್ಯಾಬ್‍ಗಳು ಅಲ್ಲೊಂದು ಇಲ್ಲೊಂದು ಓಡಾಡುತ್ತಿದ್ದವು....ಪಕ್ಕದಲ್ಲೇ ಇದ್ದ ಲಕ್ಷುರಿ ಅಪಾರ್ಟ್‍ಮೆಂಟಿನ ಲೈಪುಗಳು ಬಂಗಾರದ ಬಣ್ಣ ತಾಳಿದ್ದವು...ಬೆಂಗಳೂರಿನ ಮಹಾನಗರ ತಣ್ಣಗೆ ಮಲಗಿತ್ತು....
“ಏನೂ ಇಲ್ವಾ? ಸರಿ ಹೋಗಣಾ?” ಆಕೆ ನಕ್ಕು ಕಣ್ಣು ಹೊಡೆದಿದ್ದಳು..
..
“ಯಾಕೇ ಕಾಲ್ ಕಟ್ ಮಾಡದೇ? ಯಾಕೇ ಬ್ಲಾಕ್ ಮಾಡದೇ? ಯಾಕೇ ಅವಾಗ್ ಮಾತಾಡ್ಸಿಲ್ಲ? ಏನ್ ಅಂದ್ಕೊಂಡಿದಿಯಾ? ” ಶತಭಿಷ ನಾಲ್ಕೈದು ಪ್ರಶ್ನೆಗಳನ್ನು ಒಂದರ ಹಿಂದೆ ಒಂದರಂತೆ ಕೇಳಿದ..
.ಉತ್ತರಕ್ಕೆ ಕಾಯದೇ “ಸಾರಿ...ನಾನ್ ಏನೂ ಮಾಡಿಲ್ಲ...” ಎಂದ...ಪಿಜ್ಜಾ ಡಸ್ಟ್ ಬಿನ್‍ಗೆ ಹಾಕಲು ಹೋಗಿ ಹೊಡೆದಾಟಲ್ಲಾದ ಗಾಯಕ್ಕೆ ಮತ್ತೆ ತಗುಲಿಸಿಕೊಂಡ...ನೋವಲ್ಲಿ “ಹಾಯ್ ” ಎಂದ...
ಆಕೆ ಸುಮ್ಮನಿದ್ದಳು...ನಗುತ್ತಿದ್ದಳು...
“ಏನೇ?” ಈಗ ಮಾಮೂಲಿ ಧಾಟಿಯಲ್ಲಿ ಕೇಳಿದ...
“ಮುಗಿತಾ???” ಆಕೆಯ ಧ್ವನಿ ಸ್ವಲ್ಪ ಎತ್ತರಕ್ಕೇರಿತ್ತು...
.
“ಮೋಸ್ಟ್ಲೀ...” ಹಲ್ಲು ಕಿಸಿದ..
ಆಕೆ ಅದೇ ಕನ್ಫೆಷನ್ ಪೇಜ್ ತೆಗೆದು ಅವನಿಗೆ ಕೊಟ್ಟಳು..
.ಕಮೆಂಟ್ಸ್ ಓದು ಎಂದಳು...
ಬೆಸ್ಟ್ ಕಪಲ್ಸ್...
ಬೆಸ್ಟ್ ಫ್ರೆಂಡ್ಸ್...
ನೈಸ್ ಪೇರ್...
ಡ್ಯೂಡ್...ಲೀವ್ ದೆಮ್ ಯಾರ್...
ವಾಟ್ ದ ****...ಸ್ಟುಪಿಡ್ ಮ್ಯಾನ್...
ಇವನ್ ಈ ಲೈಕ್ ಹರ್...ಲಕೀ ಗಾಯ್...
ಹಿ ಲುಕ್ಸ್ ನರ್ಡ್...ಕೈಂಡಾ ಕ್ಯೂಟ್ ಟೂ...
ಶಿ ಈಸ್ ಬಾಂಬ್..ಬಟ್ ಬ್ರೋ...ಹೀ ಈಸ್ ಹ್ಯಾಕರ್ ಆಫ್ ದ ಕಾಲೇಜ್...ನಾಟ್ ನರ್ಡ್ ಬ್ರೋ..ಚಿಲ್ಲ್...
ಈಡಿಯಟ್...
ಶಿ ಈಸ್ ಆಲ್ಸೋ ನಾಟ್ ಡಿಫರೆಂಟ್....ನರ್ಡ್ ಪೇರ್...
ಶತಭಿಷನಿಗೆ ಇನ್ನೂ ಓದಲಾಗಲಿಲ್ಲ...ಮೊಬೈಲ್ ವಾಪಸ್ ಕೊಟ್ಟ...ಲಾಕ್ ಮಾಡುವಾಗ ಏನೋ ಕಂಡಂತಾಯಿತು...ಸ್ಕ್ರೀನ್ ಅನ್‍ಲಾಕ್ ಮಾಡುವ ಪ್ಯಾಟರ್ನ್ ಗೊತ್ತಿರಲಿಲ್ಲ...ಅವಳ ಮುಖ ನೋಡಿದ..
.
ಎಸ್ ಎಂದಳು...
ಎಸ್ ಎಂದರೆ ಶತಭಿಷನಾ? ಶ್ರಾವಣಿಯೂ ಆಗಬಹುದು...ಮೊಬೈಲಿನ ಸ್ಕ್ರೀನ್‍ನಲ್ಲಿ ಕನ್ನಡದ ಪುಸ್ತಕದ ಫೋಟೋವೊಂದಿತ್ತು... “ಐದು ಪೈಸೆ ವರಕ್ಷಿಣೆ”. ಜಯನಗರದ ಟೋಟಲ್ ಕನ್ನಡ ಮಾಲಿಗೆ ಹೋದಾಗ ಇವನೇ ಕೊಡಿಸಿದ್ದ...ಅಲ್ಲಲ್ಲ...ಇವನಿಗೆ ಇಂಟರ್ನ್‍ಶಿಪ್ ಸಿಕ್ಕ ಮೊದಲ ತಿಂಗಳ ಸಂಬಳದಲ್ಲಿ ಆಕೆಯೇ ಕೊಡಿಸಿಕೊಂಡಿದ್ದಳು..ನಂತರ ಮಯ್ಯಾಸಿಗೆ ಹೋಗಿ ಕಾಫಿ ಕುಡಿದಿದ್ದರು..
..
“ಏನಕ್ ಇದೆಲ್ಲಾ ಗೊತ್ತಾಗ್ತಿಲ್ಲಾ ಕಣೆ....ನಾನ್ ಏನಾದ್ರೂ ತಪ್ಪ್ ಮಾಡಿದ್ನಾ? ನಿಂಗ್ ಹರ್ಟ್ ಮಾಡಿದ್ನಾ?” ಶತಭಿಷ ಆಕೆಯ ಕಣ್ಣಲ್ಲಿ ಕಣ್ಣಿಟ್ಟು ಕೇಳಿದ್ದ..
.
“ಹೂ ...ಊಹೂಂ...”
“ಅಂದ್ರೆ”
“ಹೌದು...ಇಲ್ಲ...”
“ಕರೆಕ್ಟಾಗ್ ಹೇಳು...”
“ಗೊತ್ತಿಲ್ಲ...”
“ಲೇಯ್....ಹಿಂಗಂದ್ರೆ ಹೆಂಗೆ?”
“ಹೆಂಗಂದ್ರೆ?”
“ನಾನು...ನೀನು....ನಮ್ಮ್ ಸ್ಟೇಟಸ್ ಏನು? ಆ ಕನ್ಫೆಷನ್ ಇಂದಾ ನಿಂಗ್ ಬೇಜಾರಾಯ್ತಾ?”
“ಬೇಜಾರಾ...ಅವಾಗ್ ಆಯ್ತು...ಈಗ್ ಇಲ್ಲ...”
“ಹಮ್...ಹೆಂಗೇ ಅದು? ನಾ ಇನ್ನೂ ಕನ್ಫೂಸ್ಡ್ ಆಗೇ ಇದೀನಿ...”
“ಕಮೆಂಟ್ಸ್ ಎಲ್ಲಾ ಓದಿದಿಯಲ್ಲಾ ನೀನೇ...”
“ಹೂಂ...ಅದ್ರಲ್ಲ್ ಯಾವ್ದ್ ಕರೆಕ್ಟ್ ಅನ್ಸತ್ತೆ ನಿಂಗೆ?”
“ನಂಗೆ...ಎಲ್ಲಾದೂ..”
“ಅಂದ್ರೆ?”
ಇನ್ನಷ್ಟು ಸುತ್ತಿ ಬಳಸಿ ಮಾತನಾಡಿದ ಮೇಲೆ ಶತಭಿಷ ಕೇಳಿಯೇ ಬಿಟ್ಟ...
“ಏಯ್...ನಾನು..ನೀನು...ನಮ್ಮ್ ಸ್ಟೇಟಸ್ ಏನು? ಬರೀ ಫ್ರೆಂಡ್ಸಾ? ಬೆಸ್ಟ್ ಫ್ರೆಂಡ್ಸಾ? ಕಪಲ್ಸಾ? ಡೇಟಿಂಗ್ ಅನ್ಕೋಬಹುದಾ?”
“ನನ್ ಆಫ್ ದ ಅಬವ್...”
“ಅಂದ್ರೆ...ಇಟ್ಸ್ ಕಾಂಪ್ಲಿಕೇಟೆಡ್ ಅಂತಾ ನಾ?”
“ಆಹಾ...ಇಟ್ಸ್ ಸಿಂಪಲ್...”
“ಅಂದ್ರೆ?”
“ಈ ರಿಲೇಷನ್‍ಶಿಪ್...ಅದಕ್ಕೆ ಒಂದ್ ಹೆಸರು...ಆ ಹೆಸರಿಗೆ ಒಂದಿಷ್ಟ್ ರೂಲ್ಸು...ಇವೆಲ್ಲಾ ಸರಿಬರಲ್ಲಾ ಕಣೋ...ಜಸ್ಟ್ ಗೋ ವಿಥ್ ದ ಫ್ಲೋ...ಏನೋ ಒಂದ್ ಹೆಸರ್ ಕೊಟ್ಟು ಯಾಕ್ ಲಿಮಿಟ್ ಮಾಡಣಾ?”
“ಹಮ್...ಅಂದ್ರೆ” ಶತಭಿಷ ಮತ್ತೆನೋ ಕೇಳುವಷ್ಟರಲ್ಲೇ ಆಕೆಯ ಫ್ರೆಂಡ್ ಕಾಲ್ ಮಾಡಿದ್ದಳು...
“ಬಾಯ್ ಕಣೋ...” ಎಂದು ಆಕೆ ಹೊರಟಿದ್ದಳು...
ಈತ ಹತ್ತು ನಿಮಿಷ...ಸುಮ್ಮನೆ ನಿಂತ ... ವಾಪಸ್ ಹೊರಟ....ಹ್ಯಾಕಥಾನ್‍ನಾ ಜಡ್ಜ್‍ಗಳು ವಾಪಸ್ ಲಿಫ್ಟಿನಲ್ಲಿ ಎದುರು ಸಿಕ್ಕರು... ಹಾಯ್ ಎಂದ... ಆ ರಾತ್ರಿ ಡಿಸೈನ್ ಮಾಡುತ್ತಿದ್ದ ಅಲೆಕ್ಸಾ ಸ್ಕಿಲ್ಲಿನ ಪ್ರೋಟೋಟೈಪಿನ ಬಗ್ಗೆ ಯೋಚಿಸುತ್ತಿದ್ದ....
. ಈತನ ಮೊಬೈಲಿಗೆ ಫೇಸ್‍ಬುಕ್ ಮೆಸೆಂಜರ್ ನೋಟಿಫಿಕೇಷನ್ ಬಂದಿತ್ತು....ಕನ್ಫೆಷನ್ ಪೇಜಿನ ಅಡ್ಮಿನ್ ಅಕೌಂಟ್‍ನಿಂದ ಮೆಸ್ಸೇಜು...
.
“ಸಾರಿ ಬ್ರೋ...ಶುಡ್ ವಿ ಡಿಲೀಟ್ ದಾಟ್ ಪೋಸ್ಟ್ 655?”
ಪಕ್ಕದಲ್ಲೇ ಶ್ರಾವಣಿ ಇದ್ದಳು ವಾಲೆಂಟಿಯರ್ಸ್ ಗ್ರೂಪ್‍ನೊಂದಿಗೆ.....
“ಯಸ್...” ಎಂದು ಟೈಪಿಸಿದ ಶತಭಿಷ ಮತ್ತೊಮ್ಮೆ ಪೇಜಿನ ಟೈಟಲ್ ಓದಿದ...
ಕನ್ಫೆಷನ್ ಆಂಡ್ ಪ್ರಪೋಸಲ್ಸ್....ಓಪನ್ ಪ್ಲಾಟ್‍ಫಾರಂ ಟು ಬ್ಲೀಡ್ ಯುರ್ ಹಾರ್ಟ್...
ಹ್ಯಾಕಥಾನಿನ ಬ್ಯಾಡ್ಜು ಹಾರಾಡುತ್ತಿತ್ತು.....
.ಏನೋ ರಪ್ಪನೆ ಹೊಳೆಯಿತು...
“ಲೆಟ್ ಇಟ್ ಬಿ” ಎಂದು ರಿಪ್ಲೈ ಬರೆದು ಲ್ಯಾಪ್‍ಟಾಪಿನ ಕಡೆ ದೌಡಾಯಿಸಿದ...
****
ಶ್ರಾವಣಿ ನ್ಯೂಯಾರ್ಕಿನಲ್ಲಿದ್ದಳು...ಸ್ನೇಹಿತರೊಟ್ಟಿಗೆ ಯಾವುದೋ ಪಾರ್ಟಿಗೆ ಹೋಗಿದ್ದಳು...
ಅಲ್ಲಿದ್ದ ಅಲೆಕ್ಸಾದೊಂದಿಗೆ ಎಲ್ಲರೂ ಆಟವಾಡತೊಡಗಿದರು...ತಮಗೆ ಅನಿಸಿದ್ದ ಕನ್ಪೆಷನ್‍ಗಳನ್ನು ಹೇಳಿ, ಎಲ್ಲರೆದುರು ಕೇಳಿಸುತ್ತಿದ್ದರು..
ಯಾರು ಹೇಳಿದ್ದರೆಂಬುದು ಮಾತ್ರ ಗೌಪ್ಯವಾಗಿರುತ್ತಿತ್ತು...
ಜಗತ್ತಿನೆಲ್ಲೆಡೆ ಬಜ್ ವರ್ಡ್ ಆಗಿದ್ದ ಆ ಸ್ಕಿಲ್ಲನ್ನು ಶ್ರಾವಣಿ ಅಲೆಕ್ಸಾ ಸ್ಟೋರಿನಲ್ಲಿ ಹುಡುಕಿದಾಗ,
ಕನ್‍ಫೆಷನ್ ಬೈ ಸ್ಟೇಟಸ್ ನಾಟ್ ರಿಕ್ವೈರ್ಡ್” ಎಂದು ತೋರಿಸುತ್ತಿತ್ತು....
****
ಶತಭಿಷ ಬೆಂಗಳೂರಿನ ಏರ್‍ಪೋರ್ಟಿನಲ್ಲಿ ಕಾಯುತ್ತಿದ್ದ...
-ಚಿನ್ಮಯ
26/11/2018

4 comments:

Ranjana Bhat said...

Simply Superb... ಕತೆ ಸರಾಗವಾಗಿ ಓದಿಸಿಕೊಂಡು ಹೋಯ್ತು.. ಎಲ್ಲ ಕಡೆ ಎಷ್ಟು ಬೇಕೋ ಅಷ್ಟೇ ವಿವರಣೆ ನೀಡಿದ ಪರಿ ಚಂದ...

sunaath said...

ಕಥೆಯ ಓಟ ಚೆನ್ನಾಗಿದೆ.ಕೆಲವೊಮ್ಮೆ ತಾಂತ್ರಿಕ ಸಂದರ್ಭ ನನ್ನಂಥವರಿಗೆ ತೊಡಕಾಗುತ್ತದೆ!

Anand Burji said...

ಕಥೆ ತುಂಬಾ ಚೆನ್ನಾಗಿದೆ ಸರ್! ! ಓದಲು ಸ್ಟಾರ್ ಮಾಡಿದ್ರೆ ಮಧ್ಯದಲ್ಲಿ ಬಿಡುವ ಮನಸೇ ಆಗಲ್ಲ.

ಚಿನ್ಮಯ ಭಟ್ said...

ಧನ್ಯವಾದಗಳು ಸುನಾಥ ಕಾಕಾ,ಆನಂದ್, ರಂಜನಾ :)