Sunday, July 5, 2020

ಬೆಂಗಳೂರಿಗೆ ಬೈದರೆ ಬದುಕು ಬದಲಾಗುವುದಿಲ್ಲ
ಊರು, ವರುಷಗಳ ಹಿಂದಿದ್ದಂತೇ ಈಗ ಇರುವುದಿಲ್ಲ

ಸರ್ಟಿಫಿಕೇಟು ಹಿಡಿದು ಬಂದಿದ್ದೆವಲ್ಲ ಇಂಟರ್‍ವ್ಯೂ ಆಸೆಯಲ್ಲಿ
ಬೆರಗಾದೆವಲ್ಲ ಜನಜಂಗುಳಿ ನೋಡಿ ರೇಲ್ವೇ ಸ್ಟೇಷನ್ನಿನಲ್ಲಿ
ಬಟ್ಟೆ-ಬರೆ ಸಾಲವಿದ್ದ ಹರಕು ಬ್ಯಾಗಿನಲ್ಲಿ ಕಾಸು ತುಂಬಬೇಕಿತ್ತು
ಪುಟ್ಟ ಆಸೆಗಳನೂ ಸುಟ್ಟು ಗೊಬ್ಬರವಾಗಿಸಿ ಬೆಳೆಸಿದವರ ಮುಖ ಅರಳಿಸಬೇಕಿತ್ತು

ಯಾರೋ ಪರಿಚಯವಾದವರು ಕೊಡಿಸಿದ ಪುಟ್ಟ ಬಾಡಿಗೆ ರೂಮು
ದಿನಕ್ಕೆ ಮೂರು ಶಿಫ್ಟು-ರೊಟೇಷನ್ನು; ತಿಂಗಳು ಪೂರ್ತಿ ನಿದ್ದೆ ಜೋಮು
ಮೊದಲ ಸಂಬಳ ಸಿಕ್ಕಾಗ ಊರು ಬಿಟ್ಟಿದ್ದು ತೀರಾ ಸರಿಯೆನಿಸಿತ್ತು
ಹೊಸ ಬೈಕು ಖರೀದಿಸಿದ ಮೇಲೆ ಗಲ್ಲಿ ಗಲ್ಲಿ ಸುತ್ತುವುದೂ ಶಕ್ಯವಿತ್ತು

ಹಬ್ಬಕ್ಕೆಂದು ಊರಿಗೆ ಹೋದಾಗ; ಹತ್ತಿರದವರಿಗೆಲ್ಲ ಬಗೆ ಬಗೆ ಉಡುಗೊರೆ
ಕಂಪನಿ ಕೆಲಸದವನೆಂದು ಉದ್ದರಿ ಶೇಟನಿಂದಲೂ ವಿಶೇಷ ಅಕ್ಕರೆ
ಹಾಕಿದ ರಜೆ ಮುಗಿದು ಬೆಂಗಳೂರು ಬಸ್ಸು ಹತ್ತುವಾಗ ಅತೀವ ವೇದನೆ
ದುಡಿದುಡಿದು ಸುಸ್ತಾಗಿ ಹಾಸಿಗೆ ಹಿಡಿದಾಗ ಊರಮದ್ದಿನದೇ ಆಲೋಚನೆ

ಸಾಕಾಯ್ತು ಇರಲಾರೆ ಎನ್ನುತ್ತಲೇ ಸಾಕಷ್ಟು ಕಾಲ ಎಲ್ಲ ಉಳಿದಿದ್ದಾರೆ
ಹೊರಟೇಬಿಟ್ಟೆ ಎನ್ನುತ್ತಲೇ ಅದೊಂದು ಇದೊಂದು ತೊಡಗಿಸಿಕೊಂಡಿದ್ದಾರೆ
ಕಾರಿನ ಈ.ಎಂ.ಐ ಮುಗಿವವರೆಗೆ; ಮಕ್ಕಳು ಪಿ.ಯೂ.ಸಿ ಪಾಸಾಗುವವರೆಗೆ
ಸ್ವಂತ ಕಂಪನಿ ಗಟ್ಟಿಯಾಗುವವರೆಗೆ; ಅವರವರ ಪ್ಲಾನು ಅವರವರಿಗೆ

ಕಲಿತ ವಿದ್ಯೆಗೆ, ಕರಗತವಾಗಿಸಿಕೊಂಡ ನೈಪುಣ್ಯಕ್ಕೆ ಇಲ್ಲಿ ಅವಕಾಶ ದಕ್ಕಿದೆ
ಷೆಡ್ಯುಲು ಪ್ರಕಾರ ಎಂಟೂವರೆ ಗಂಟೆ ದುಡಿತಕ್ಕೆ ಪಿ.ಎಫು ಶೇಖರಣೆಯಾಗಿದೆ
ವೇಗ ಸಾಕಾಗದೆಂದು ಮ್ಯಾನೇಜರು ಓಡಿಸಿದರೂ; ಕಂಪನಿ ಕ್ವಾಟರ್ಲೀ ಗ್ಲೂಕೋಸು ಕೊಟ್ಟಿದೆ
ಈ ಕಂಪನಿ ಬೋರಾದರೆ ಬೇರೆಡೆ ಹಾರುವುದಕ್ಕೆ ರೆಕ್ಕೆ-ಪುಕ್ಕ ಬಲಿಸಿಕೊಟ್ಟಿದೆ

ಈಗ ಧುತ್ತೆಂದು ಊರಿಗೆ ಹೊರಟುಬಿಟ್ಟರೆ; ಅಲ್ಲಿ ಬಿಸಿನೆಸ್ಸು ರತ್ನಗಂಬಳಿ ಹಾಸುವುದಿಲ್ಲ
ಇಂಟರ್‍ನೆಟ್ಟು ಉಸಿರಾಟದಷ್ಟೇ ಸಹಜವಾಗಿರುವ ಲೈಫ್ ಸ್ಟೈಲಿಗೆ, ಸಿಗ್ನಲ್ ಬಾರದ ಹಳ್ಳಿ ಸುಲಭವೆನಿಸುವುದಿಲ್ಲ
ಹಾಗಂತ ವಾಪಸ್ಸು ಹೋಗಲೇಬಾರದೆಂದೇನಿಲ್ಲ; ಹೋಗುವುದೂ ತಪ್ಪಲ್ಲ
ಆದರೆ ಬಾಲ್ಯದಲ್ಲಿ ಪೆಪ್ಪರುಮೆಂಟು ಕೊಟ್ಟವರು; ಈಗ ಚಿನ್ನದ ಬಿಸ್ಕೇಟು ಕೊಡುವರೆಂಬ ಭ್ರಮೆ ಮಾತ್ರ ಸರಿಯಲ್ಲ


ಬೆಂಗಳೂರಿಗೆ ಬೈದರೆ ಬದುಕು ಬದಲಾಗುವುದಿಲ್ಲ
ಊರು, ವರುಷಗಳ ಹಿಂದಿದ್ದಂತೇ ಈಗ ಇರುವುದಿಲ್ಲ
ಮಹಾನಗರ ಓಡುತ್ತಿರಬಹುದು; ನಾವು ನಡೆಯಬೇಕಷ್ಟೇ
ರೋಗ-ರುಜಿನ ಹರಡುತ್ತಿಹುದು; ಎಚ್ಚರಿಕೆ-ಜಾಗರೂಕತೆ ನಮ್ಮ ಕೈಲಿರುವುದಷ್ಟೇ

-ಚಿನ್ಮಯ
5/7/2020

1 comment:

Srikanth Manjunath said...

ಹತ್ತಿದ ಏಣಿಯನ್ನು ಒದೆಯಬಾರದು.,, ಆದರೆ ಮಗು ಉದರದಲ್ಲಿದ್ದಾಗ ಒದ್ದರೂ ಅದನ್ನು ಇಷ್ಟಪಡುವಂತೆ ಬೆಂಗಳೂರು ಜೀವನ ಹುಡುಕಿಕೊಂಡು ಬಂದವರಿಗೆ ಎಂದೂ ನಿರಾಶೆ ಮಾಡಿಲ್ಲ 
ಮನೋಜ್ಞ ಬರಹ ಚಿನ್ಮಯ್.. ಎಲ್ಲಾ ಸಮಸ್ಯೆಗಳಂತೆ ಇದಕ್ಕೂ ಒಂದು  ಕೊನೆಯಿದೆ.. ಮತ್ತೆ ಬೆಂಗಳೂರು ನಳನಳಿಸುತ್ತದೆ