Wednesday, February 13, 2013

ಹಿಂಗೊಂದು ಪ್ರೇಮ ಪತ್ರ.


ಗೆ,
ಬರಿ ಹೆಸರಲ್ಲಿ ಬಣ್ಣಿಸಲಾಗದ ನನ್ನ ಹುಡುಗಿಗೆ.

ಇಂದ,
ಶಬ್ಧಗಳೆಲ್ಲಾ ಬತ್ತಿ ಬರಿದಾದ ನಿನ್ನ ಹುಡುಗನಿಂದ.

ಎಯ್,
                   ವಿಷಯ:ವಿಷಯವಿಲ್ಲದೇ ದಿನವಿಡೀ ಹರಟಬಹುದು ಕಣೆ,ವಿಷಯವಿದ್ದರೇ ತುಸು ಕಷ್ಟ.
 ಗೊತ್ತು ಕಣೆ ನಾ ನಿನಗೆ,ನೀ ನನಗೆ.ಆದರೇನೋ ಹೇಳಬೇಕೆನಿಸಿದೆ
ನಿನಗೆ ಗೊತ್ತಿರುವುದನ್ನೇ ನಾ ,ಪದಗಳಲ್ಲಿ ಬರೆಯಬೇಕೆನಿಸಿದೆ…..
ದಿನಾ ತಡರಾತ್ರಿಯವರೆಗೂ ಮಾಡುತ್ತಿದ್ದ ಮೆಸ್ಸೇಜಿನಲ್ಲೇ ನಾ ಹೇಳಬಹುದಿತ್ತೇನೋ ನಾನು,
“hmm…..” ,
“then…”,
 “wassup????? “ ಗಳ ಬದಲು..
ಆದರೇಕೋ ಬರೆವ ಅಕ್ಷರ ನನ್ನದಲ್ಲವೆನಿಸಿದೆ
ನಗುವಾಗಲೂ,ಅಳುವಾಗಲೂ ಒಂದೇ ಥರ ಇರುವ ಅಕ್ಷರ ಬೇಡವೆನಿಸಿದೆ
ಇನ್ನು ಫೇಸ್ಬುಕ್ಕು,ಜೀಮೇಲುಗಳಿವೆಯೇನೋ ನಿಜಆದರೆ ಅವೂ ನನ್ನದಲ್ಲವೆನಿಸಿದೆಯಾರೋ ಕದ್ದು ಕೇಳುವ ಭೀತಿ ನನ್ನ ಕಾಡಿದೆ
ನೋಡು ಹುಡುಗಿ ಇದು ನಿನಗಾಗಿನಿನ್ನೊಬ್ಬಳಿಗಾಗಿ….
ಅದೇನೋ ಗೊತ್ತಿಲ್ಲ ಕಣೆ..
ನನ್ನ ಕೈಯ್ಯಾರೆ, ನನ್ನಕ್ಷರದಲೆ ಮೊದಲ ಪ್ರೇಮಪತ್ರವ ಬರೆಯಬೇಕೆನಿಸಿದೆ..
ನೂರಾರು ಬಾರಿ ಗೀಚಿ,ಹತ್ತಾರು ಬಾರಿ ಹರಿದು,ಮತ್ತೆ ಮತ್ತೆ ಬರೆಯಬೇಕೆನಿಸಿದೆ
ಕೈ ನಡುಗಬಹುದು...ಅಕ್ಷರವು ಕಾಗೆ ಕಾಲು ಗುಬ್ಬಿ ಕಾಲಾಗಬಹುದು,ನಿನ್ನೊಲವ ಕಂಪನದಿಂದ..
ಅರ್ಥವಾಗುವುದು ಆದರೂ ಅಲ್ಲವೆ ನಿನಗೆ????
ಛೇ,ಬಿಡೆ….ಒಂದೆರಡು ಬಾರಿ ಭೂಮಿ ಆಕಾಶ ನೋಡಿ,ತಲೆಕೆರೆದುಕೊಂಡಾಗಲೇ, “ಯಾಕೋ??Take it Easy “ ಅಂದವಳಲ್ಲವೇ ನೀನು??… J
ನಿನಗೆಲ್ಲವೂ ಗೊತ್ತು,ಆದರೂ ನಾನೇ ಹೇಳಬೇಕು ಅಲ್ವಾ??
ಸರಿಗಂಡು ಹುಳುವಾಗಿ ನಾನೇ ಹೇಳುತ್ತಿದ್ದೇನೆ ಕೇಳು
           ಪೀಯು. ಹುಡುಗಿಯರ ಗ್ವಾಲೆಯಲಿ,ಕಣ್ಣು ಕುಕ್ಕಿದವಳು ನೀನು
                ಕುಡಿಮೀಸೆ ಮೂಡುವಾಗಲೇ ,ನನ್ನವಳೆನಿಸಿದವಳು ನೀನು
                ಹೂ-ದುಂಬಿಯ ಕವನದಲಿ,ಹೂವಾಗಿ ಕಂಡವಳು ನೀನು
                ಮನದುಂಬಿ ಬಂದ ಮಾತೆಲ್ಲ,ಕೇಳಿಸಿಕೊಂಡವಳು ನೀನು

ಛೇ,ಇವಷ್ಟೇ ಹೇಳಿದರೆ ಯಾವುದೋ ಹಳೆಯ ಕಥೆಯಂತಿದೆ ಅಲ್ವಾ???
ಚೆನ್ನಾಗಿ ಕಂಡ ಐಸ್ ಕ್ರೀಮೆಲ್ಲಾ ತಿನ್ನಲು ಬೇಕೆನಿಸುವ ವಯಸ್ಸಿನಲ್ಲಿ ಹಿಮವಾಗಿ ಸೇರಿ ಒಂದೆರಡು ತಿಂಗಳಿಗೆ ಕರಗಿ ಹೋದ ಕಥೆಯಲ್ಲ ಕಣೆ ಇದುಆ ನಿನ್ನ ಸೆಳೆತ ಧ್ರುವ ಪರ್ವ ಬಿಂದು..ಕಾಲವೆಷ್ಟೇ ಆದರೂ ನೀರೊಡೆಯದು ಕಣೆ ಅದು,ನೀರೊಡೆಯದು
ಚಾಕಲೇಟಿನ ಕನಸು ಮುಗಿದು ಹೊಸ ಹೊಸ ಬಣ್ಣ ಬಣ್ಣದ ಕನಸು ಬೀಳುವ ಹೊತ್ತಲ್ಲವಾ ಅದು???
ಅದೆಷ್ಟು ಬಾರಿ ಹೇಳಿದ್ದೆ,ನೀನಗೆ ಆ ನೀಳಕೂದಲ ಬಿಳಿಗೆಂಪು ಹುಡುಗನಾ ಕನಸನ್ನ
ಆ ಕನಸ ಕಥೆ ಕೇಳಿ ಅಲ್ಲವೇ ನಾನೂ ಉದ್ದ ಕೂದಲು ಬಿಟ್ಟಿದ್ದು
ರಜೆಯಲ್ಲಿ ಮನೆಗೆ ಹೋದಾಗ ಅಪ್ಪನ ಹತ್ತಿರ ಬೈಸಿಕೊಂಡಿದ್ದು
ಮರುದಿನ ಮಿಲಿಟರಿ ಕಟ್ಟು ಮಾಡಿಸಿಕೊಂಡು ಬಂದಾಗ ಅದೆಷ್ಟು ನಕ್ಕಿದ್ದೆ..”ಯಾರೋ ನೀನು?” ಅಂತೆಲ್ಲಾ ಕೇಳಿ ಅದೆಷ್ಟು ರೇಗಿಸಿದ್ದೆ.
ಮುಂದೆ ನಾ ವಿಜ್ನಾನಕೆ ಸಲಾಮು ಹೊಡೆದು ಕಲೆಯ ಹಾದಿ ಹಿಡಿದೆನಲ್ಲವೇ???
ಡಿಗ್ರಿಯ ಆ ದಿನಗಳುಏನೆಂದು ಹೇಳಲಿ ನಾ

    ತನ್ನ ಹೆಸರಲ್ಲಿ ಪುಸ್ತಕವ ತಂದು ಓದೆಂದು ಕೊಟ್ಟವಳು ನೀನು
                ನನ್ನಯಾ ಯೋಚನೆಗಳಿಗೆ ಸ್ಪೂರ್ತಿಯ ಸರಕಾಗಿ ನಿಂತವಳು ನೀನು
                ನನ್ನೆಲ್ಲ ಪುಟಗೋಸಿ ಬರಹವಾ ಓದಿ, “ ನಾ ನಿನ್ನ ಅಭಿಮಾನಿಎಂದವಳು ನೀನು
                ನಾ ಎಲ್ಲ ಬಲ್ಲವನೆಂದು ಕೊಚ್ಚಿಕೊಂಡಾಗ,ಬಾಯ್ತುಂಬ ಬೈದವಳು ನೀನು
ಅದ್ಯಾಕೋ ಗೊತ್ತಿಲ್ಲ ಕಣೆ..
ಎಲ್ಲ ಹೇಳುವಂತೆ ಕಾಲೇಜಿನಲ್ಲಿಕ್ರಷ್”,”ಲವ್ ಅಟ್ ಫಸ್ಟ್ ಸೈಟ್ಅನ್ನುವುದೆಲ್ಲ ಆಗಲೇ ಇಲ್ಲ ನನಗೆ….
ಮೊದಲೇ ಆಗಿ ಬಿಟ್ಟಿತ್ತೇನೋ ಬಿಡು,ನನಗೇ ಗೊತ್ತಿಲ್ಲದಂತೆ
ನಿನಗಿಂತ ಚೆನಾಗಿರುವವರು ಕಾಣಲಿಲ್ಲವಂತೇನಲ್ಲಆದರೇಕೋ ನಿನ್ನಷ್ಟು ಕಾಡಿಸಲಿಲ್ಲ ಕಣೆ ಹುಡುಗಿ ಅವರ್ಯಾರೂ..ಬಂದು ಹೋಗಿ ಬಿಟ್ಟರು ಅಷ್ಟೇ
ಹಮ್..ನನಗೂ ಗೊತ್ತು ,ನಿನಗೂ ಗೊತ್ತು ಆದೇಕೆ ಅವಾಗ ಒಂದು ವಾರ ಮಾತು ಬಿಟ್ಟಿದ್ದೆವೆಂದು
ಬಿಟ್ಟಿರಲಾರದೇ ಮತ್ತೆ ಜೊತೆಯಾದೆವೆಂದು
ಅದೆಷ್ಟು ಚೆನ್ನ ಹುಡುಗಿ ಗೆಳತಿಯ ಗುಂಪೊಡನೆ ನೀ ಸಿಕ್ಕರೆ ,ಸುಮ್ಮನೆ ಪರಿಚಯದ ನಗೆಯಾಡಿ ನಾ ಹೋಗುವಂತದ್ದು
ಸ್ಟೇಡಿಯಮ್ಮಿನ ಮೇಲುಗಡೆ ಇಬ್ಬರೇ ಇರುವಾಗ ಗಂಟೆಗಟ್ಟಲೇ ಊರ ಮೇಲಿನ  ಸುದ್ದಿಯೆಲ್ಲಾ ಹಲುಬುವಂತದ್ದು
ಬೇಲಿಯ ರಾಕ್ಷಸ ಪರಂಗಿ ಎಲೆಯ ಮೇಲೆ ಇಬ್ಬರ ಹೆಸರನ್ನೂ ಗೀರುವಂತದ್ದು….
ಬೇರೆಯವರಿಗೆ ಕಾಣಿಸುವುದೆಂದು ಅಲ್ಲೇ ಸಿಗಿದು ಹಾಕುವಂತದ್ದು
ಅದೆಷ್ಟು ನೆನಪುಗಳೋ ಹೀಗೇ ಹೇಳುತ್ತಾ ಹೋದರೆ

                          ಕಣ್ಣಲ್ಲೇ ಕೂತಿದ್ದ ಕಣ್ಣೀರ ಗುರುತಿಸಿ,ಅದನೊರೆಸಿದವಳು ನೀನು
                                ದಾರಿತಪ್ಪಿದವನೆಂದು ಮಂಕಾಗಿ ಕುಳಿತಾಗ,ಹಾದಿ ನೆನಪಿಸಿದವಳು ನೀನು
                                ಆ ಮೂರು ವರುಷವನು,ಮೂರು ಮರೆಯದ ಕನಸಾಗಿಸಿದವಳು ನೀನು
                                ಕೊನೆಯ ದಿನ ಉಟ್ಟ ಸೀರೆಯಲಿ ,ನನ್ನ ಮದುವೆಕೂಸಾಗಿ ಕಂಡವಳು ನೀನು

ಹಿಂಗಾಡಿ ಹಂಗಾಡುವುದರೊಳಗೆ ಕಾಲೇಜೇ ಮುಗಿಯಿತಲ್ಲೆ
ನೀ ಮುಂದೆ ನಿನ್ನಿಷ್ಟದ ಮಾಯಾನಗರಿಯ ಸೇರಿದೆಯಲ್ಲೆ
ನಾ ಉಳಿದೆ ಇಲ್ಲೆ
ನೋಡೆದೆ ಕಣೆ ನಾ ಡಿಗ್ರಿ ಬಳಿಕ ಜಗತ್ತನ್ನ ಮತ್ತೆಅದೆಷ್ಟು ಬದಲಾವಣೆಗಳು ಅಬ್ಬಾ
ಅದಾವ ಗೆರೆಯು ಕೈಗೂಡಿತೋ,ಬರೆಯುವುದೊಂದು ನನ್ನದಾಯಿತು..
ಬರೆದು ಹರಿದು,ಹರಿದು ಬರೆದ ಬರಹಗಳು ದೊಡ್ಡವರಿಗಿಷ್ಟವಾಯ್ತು
ಮತ್ತೆ ಅಲೆದೆ,ಬರೆದೆ..ಓದಿದೆ,ಬರೆದೆ..ಅಲೆದೆ..
ಓದೇ ಅನ್ನವಾಯ್ತುಪುಸ್ತಕಗಳೇ ಉಸಿರಾಯ್ತುಅನುಭವವೇ ಆಸ್ತಿಯಾಯ್ತುಬರವಣಿಗೆ ವ್ರತವಾಯ್ತು
ಕೊನೆಗೊಂದು ದಿನ ಕೈ ಹಿಡಿಯಿತು ಅದೂ ನಿನ್ನಂತೆ
ಈಗೇನೋ ಒಂದಿಷ್ಟು ಪ್ರಶಸ್ತಿ ಅವು ಇವು ಕಪಾಟಿನಲ್ಲಿದೆ
ಮನೆಗೆ ಸಾಕಾಗುವಷ್ಟು ದುಡಿವ ಕೆಲಸ ಕೈಯ್ಯಲ್ಲಿದೆ
ನಾಳೆಗೊಂದಿಷ್ಟು ದುಡ್ಡು ಬ್ಯಾಂಕಿನಲ್ಲಿದೆ
ಆದರೆ……..ನೀನು????
ಬರಿಗಣ್ಣಿನಿಂದ ನಿನ್ನ ನೋಡದೇ ಎಷ್ಟು ತಿಂಗಳಾಯ್ತೇ??ಇಪ್ಪತ್ತಿರಬೇಕು ಅಲ್ವಾ??..
ಏನು ಮಾಡಲಿ ಹೇಳು..ನಾನಿರುವುದು ಇದೇ ಕೊಂಪೆಯಲ್ಲಿ
ನೀ ಇರುವೆ ಆ ಮಾಯಾನಗರಿಯಲಿ..
ಇರಲಿ ಹುಡುಗಿ ರಾತ್ರಿ ಫೋನಿನಲ್ಲಾದರೂ ಸಿಗುವೆಯಲ್ಲಾ ಅದೇ ಸಂತೋಷ ನನಗೆ
ಶನಿವಾರ,ರವಿವಾರ ನೆಟ್ಟಿನಲ್ಲಿ ಸಿಕ್ಕು,ವಾರದ ಸುದ್ದಿಯಲ್ಲಾ ಖರ್ಚು ಮಾಡುವೆವಲ್ಲಾ ಅದೇ ಖುಷಿ ಎನಗೆ..
ಆದರೂ ಯಾಕೋ ನೀನು ಬೇಕೆನಿಸಿದೆ
ನೀನಿಲ್ಲದೇ ಈ ಜೀವ ಅಪೂರ್ಣವೆನಿಸಿದೆ
ಬಾ ಹುಡುಗಿ……
ಸುಮ್ಮನೆ ಎಲ್ಲರಂತೆ ನಾಳೆಯ ಬಗ್ಗೆ ನಾ ಕನಸ ಕಟ್ಟಿ ಹೇಳಲಾರೆ ಇಲ್ಲಿ..ಅದು ನನ್ನೊಬ್ಬನ ಕನಸಾದೀತು ನಿನ್ನ ಕೇಳದೇ..
ಜೊತೆಗೂಡೆ ಕನಸ ಕಟ್ಟುವಾ ಬಾ
ಜೊತೆಗೂಡೆ ಅದನು ನನಸಾಗಿಸುವಾ ಬಾ..
ಕನಸ ನನಸಾಗಿಸಲು ದುಡಿದು,ದುಡಿದು ಜೀವ ತೈಯ್ಯುವಾ ಬಾ
ಒಟ್ಟಿಗೇ ದೇವರಿಗಿಡುವ ಗಂಧ,ಚಂದನವಾಗುವಾ ಬಾ

ಏಯ್ ನೋಡೆನೀ ನನಗೆ ಪರಿಚಯವಾಗಿ ಹತ್ತು ವರುಷವಾಯ್ತು..
ನನ್ನವಳೆಂದು ನಾ ತಿಳಿದೂ ಹತ್ತು ವರುಷವಾಯ್ತು..
ಆದರೇಕೋ ಎಂದೂ ಪ್ರೇಮಪತ್ರವ ಬರೆಯಬೇಕೆನಿಸಿರಲಿಲ್ಲ..
ಇಂದೇಕೆ ಬರೆಯ ಹೊರಟೆ?? ಅದೂ ಗೊತ್ತಿಲ್ಲ
ಗೊತ್ತಿದ್ದು ನಾ ಮಾಡಿದ ಕೆಲಸ ಯಾವುದಿದೆ ಬಿಡು!!!
                                     
          ನನ್ನೆಲ್ಲ ಎಡಬಲವ ಬಲ್ಲವಳು ನೀನು.
                                                ನನ್ನೊಲವ ಕಲರವದ ಸಂಗೀತ ನೀನು.
                                                ನನ್ನದೆಯ  ಬಡಿತವಾಗಿಹೆ ನೀನು,
                                                ಹೇಳಲಿ ಇನ್ನೇನು???
                                                ಒಂದಾಗಿ ನಡೆಯೋಣ ಬಾ ಇನ್ನು
ಇದುವೆ ಎನ್ನ ಪ್ರೇಮ ನಿವೇದನೆ
ಅಲ್ಲಲ್ಲ ಆತ್ಮ ನಿವೇದನೆ

ಸ್ಥಳ: ಒಂದಿಷ್ಟು ಹೃದಯದಿಂದ,ಒಂದ್ಚೂರು ನೆನಪಿನಿಂದ                                          ಇತಿ ನಿನ್ನ ನಿನ್ನವ,
ದಿನಾಂಕ: ನೀ ಕನಸಲ್ಲಿ ಬಂದ ಅನುದಿನ                                                            ---------


=============================================================================================
*********************************************************************************************
ಶಬ್ಧಾರ್ಥ:ಗ್ವಾಲೆ=ಗುಂಪು,ಕಾಗೆ ಕಾಲು ಗುಬ್ಬಿ ಕಾಲು ಅಕ್ಷರ =ಸ್ಪುಟವಾಗಿಲ್ಲದ ಕೈಬರಹ,ಹಲುಬು,=ಮಾತನಾಡು
********************************************************************************************

ಹಮ್... ಇದು ಪಕ್ಕಾ ದಾರಿ ತಪ್ಪಿ ಬಂದ ಪ್ರೇಮ ಪತ್ರ!!!!
ಗಾಬರಿ ಆಗ್ಬೇಡಿ...
ಆಗಿದ್ದಿಷ್ಟೇ...
ಪ್ರಜಾವಾಣಿಯಲ್ಲೊಂದು ಪ್ರೇಮ ಪತ್ರ ಬರೆಯುವ ಸ್ಪರ್ಧೆ ಇದೆ ಅಂತಾ ಬ್ಲಾಗಿಗ ಮಿತ್ರ ಶ್ರೀ ವತ್ಸ ಕಂಚೀಮನೆಯವರು ತಿಳಿಸಿದ್ದರು ಡಿಸೆಂಬರಿನಲ್ಲಿ..."ಹುಂ" ಎಂದವನಿಗೆ ಮತ್ತೆ ನೆನಪಾಗಲಿಲ್ಲ ಅದು...ಮತ್ತೆ ಜನವರಿ ಮಧ್ಯದಲ್ಲೆಲ್ಲೋ ಸುಮನಕ್ಕ ಮೆಸ್ಸೆಜು ಮಾಡಿ "ಹಿಂಗಿದೆ ಕಣೊ,ಬರ್ಯದಾದ್ರೆ ಬರಿ" ಎಂದು ಅಡ್ರೆಸ್ಸನ್ನೂ ಕಳಿಸಿದ್ಲು...
ಇಲ್ಲಪ್ಪಾ ಮನೆಯಲ್ಲಿ ಏನನ್ನೂ ಬರೆಯಲು ಮನಸ್ಸೇ ಬರಲಿಲ್ಲ..ಅದೇಕೋ ಗೊತ್ತಿಲ್ಲ...ತೀರಾ ಅರಾಮವಾಗಿದ್ದೇನೆನಿಸಿದಾಗ ಬರೆಯಬೇಕೆನಿಸುವುದೇ ಇಲ್ಲ...ಮತ್ತೆ ವಾಪಸ್ಸು ಬಂದೆ ನೋಡಿ ಪ್ರಾಜೆಕ್ಟು,ಸೆಮಿನಾರು ಅಂತಾ ಚೂರು ತಲೆ ಬಿಸಿ ಶುರುವಾಯ್ತು..ಅದರ ಮಧ್ಯೆ ಒಂದು ಅಲ್ಪ ವಿರಾಮ ಈ ಬರಹ...ಅದಾವತ್ತೋ ಒಂದು ದಿನ ಮನೆಯಲ್ಲಿ ಕಷ್ಟಪಟ್ಟು ಒಂದು ಪುಟ ಬರೆದಿದ್ದೆ...ಅದನ್ನು ನಿನ್ನೆ ಪೂರ್ತಿಗೊಳಿಸಿ ಇವತ್ತು ನಿಮ್ಮೆದುರು ಇಟ್ಟಿದ್ದೇನೆ ಅಷ್ಟೇ...
ನನಗೆ ಈ ಪ್ರೇಮ ಪತ್ರ ಬರೆಯುವುದು ಓದುವುದೆಲ್ಲಾ ಹೊಸದು...
ಬರೆಯುವುದು ಕಡೆಗಾಯ್ತು,ಹಣೆಬರಕ್ಕೆ ಬರೆದ ಪತ್ರವನ್ನು ಓದಿದವನೂ ಅಲ್ಲ ನಾನು...
ಒಂದು ಪ್ರಯತ್ನ..
ಎಂದಿನಂತೆ ಒಂದಿಷ್ಟು ಕಲ್ಪನೆ..
ಬೇಡ ಬೇಡಾ ಅಂದರೂ ನುಸಿದು ಬರುವ ಕೆಲ ಶಬ್ಧಗಳು...
ಎಂದಿನಂತೆ ನೋಡಿ,ಹೆಂಗಿದೆ ಅಂತಾ ಹೇಳ್ತೀರಲ್ವಾ???
ಹಾಂ ನಿಮ್ಮ ಪ್ರೇಮ ಪತ್ರದ ಪ್ರಸಂಗಗಳೇನಾದ್ರೂ ಇದ್ರೂ ಬರಿರಿ ಒಂದಿಷ್ಟು ದಯವಿಟ್ಟು,....
ಕಾಯ್ತಿರ್ತೀನಿ ನಿಮ್ಮ ಕಮೆಂಟ್ ಗಳಿಗೆ...

Tuesday, January 8, 2013

ಪ್ರಳ(ಣ)ಯ ಗೀತೆ


ಅಂತೂ ಇಂತೂ ಒಂದುವರೆ ತಿಂಗಳ ಬಳಿಕ ಏಳನೇ ಸೆಮಿಸ್ಟರ್ ಪರೀಕ್ಷೆಗೆ ತೆರೆ ಬಿತ್ತು..ಇನ್ನೊಂದೇ ಸೆಮಿಸ್ಟರು ಉಳಿದಿರುವುದು...ಪರೀಕ್ಷೆ ಮುಗಿಯಿತಲ್ಲಾ ಇನ್ನೇನು ಮಾಡಣಾ ಅಂದ್ಕೊಂಡು ಪಟ್ಟಿ ಹಾಳೆ ತೆಗೆದೆ...ಪ್ರಳಯ ಪ್ರಳಯ ಅಂತಾ ಎಲ್ರೂ ಮಾತಾಡ್ತಿರ್ಬೇಕಾದ್ರೆ ನಾನೂ ಅದ್ರ ಬಗ್ಗೆ ಏನಾದ್ರೂ ಬರೀಬೇಕು ಅನ್ಸಿ ಒಂದಿಷ್ಟು ಶಬ್ಧಗಳನ್ನಾ ಗುಡ್ಡೆ ಹಾಕಿ ಇಟ್ಟಿದ್ದು ಕಣ್ಣಿಗೆ ಬಿತ್ತು..ಸರಿ ಇನ್ನೇನು ಬರಿಯಣಾ ಅಂದ್ಕಂಡು ಗೀಚಲು ಕೂತೆ..ವಯಸ್ಸಿನ ಹುಡುಗನಿಗೆ  ಅವನ  ಹುಡುಗಿ ಮುತ್ತು ಕೊಟ್ಟಾಗ ಏನನ್ಸತ್ತೆ ಅನ್ನೊ ಕನಸು ಕಾಣ್ತಾ ಕೂತೆ...ಒಂದಿಷ್ಟು ಏನೇನೋ ತಲೆಗೆ ಹೊಳಿತು..ಅದನ್ನೆ ನಿಮ್ಮ ಮುಂದಿಟ್ಟಿದ್ದೇನೆ...ನೋಡಿ ....ಅಕ್ಕರೆಯ ಅನಿಸಿಕೆಯ ಜೊತೆ ತಪ್ಪು-ಒಪ್ಪನ್ನಾ ತಿಳ್ಸಿ, ನನ್ನನ್ನಾ ಬೆಳಸ್ತೀರಾ ಅಲ್ವಾ???
ಇಲ್ಲಿದೆ ನೋಡಿ  ಪ್ರಳಯ/ಪ್ರಣಯ ಗೀತೆಯ ಸಾಲುಗಳು... 


ಪ್ರಳಯವಾಯ್ತು ಗೆಣತಿ ನನ್ನೆದೆಯೊಳಗೆ,
ನೀ ಮುತ್ತಿಟ್ಟಾ ಅರೆಚಣದೊಳಗೆ…..

ಮುಂಗುರುಳ ಕಚಕುಳಿಯ ಕಂಪನವು ಕೊರಳಲ್ಲಿ,
ಅಪ್ಪುಗೆಯ ಬೆವರ್ಮಳೆಯ ಸಿಂಚನವು ತೋಳಲ್ಲಿ.
ನಟ್ಟಿರುಳ ಬಳುವಳಿಯ ಕುಂಚನವು ಬೆರಳಲ್ಲಿ,
ಹೆಂಗರುಳ ಕಳಕಳಿಯ ಬಂಧನವು ನೆರಳಲ್ಲಿ.

ಜುಮುಕಿಯಾ ವಜ್ಜೆಯಲೆ ,ಕುಳಿಯೀಗ ಭುಜದಲ್ಲಿ
ಬಿಸಿಯುಸಿರ ಸದ್ದಿನಾ ಸುಳಿಯೀಗ ಕಿವಿಯಲ್ಲಿ.
ಅಂದಲದ ಕನಸಿನಾ ಹೊಳೆಯೀಗ ಮನದಲ್ಲಿ,
ಗೊಂದಲದ ಬಿರುಗಾಳಿ ನೀ ಕೊಟ್ಟ ಮುತ್ತಲ್ಲಿ

ಸವಿಜೊಲ್ಲ ಹನಿಯೊಂದು ಮಿನುಗಿರಲು ಗಡ್ಡದಲಿ,
ರವಿಮೆಲ್ಲನೆ ನಾಚಿ  ಅಡಗಿಹನು ಗುಡ್ಡದಲಿ,
ಬೆರೆಯಿತು ಎನ್ನುಸಿರು ನಿನ್ನಯಾ ಹೆಸರಲ್ಲಿ,
ಬರೆದಿರಲು ಈ ಸಾಲ ನಿನ್ನೆಯಾ ನೆನಪಲ್ಲಿ

ಪ್ರಳಯವಾಯ್ತು ಗೆಣತಿ ನನ್ನೆದೆಯೊಳಗೆ,
ನೀ ಮುತ್ತಿಟ್ಟಾ ಅರೆಚಣದೊಳಗೆ.....

-ಚಿನ್ಮಯ
(ಶಬ್ಧಾರ್ಥ(ನನಗೆ ತಿಳಿದಂತೆ):ಗೆಣತಿ=ಗೆಳತಿ,ಅರೆಚಣ=ಅರೆಕ್ಷಣ,ಮುಂಗುರುಳು=ಮುಂದಲೆಯ ಕೂದಲು,ನಟ್ಟಿರುಳು=ಮಧ್ಯರಾತ್ರಿ,ಅಂದಲ=ಪಲ್ಲಕ್ಕಿ...
ಜೊತೆಗೆ ನಮ್ಮ ಕಡೆ "ವಜ್ಜೆ" ಎಂದರೆ ಭಾರಕ್ಕೆ ಬಳಸುವ ಪದ..
ಮತ್ತೆ ಬೆವರಿನ ಮಳೆ ಎನ್ನುವ ಬದಲು ಬೆವರ್ಮಳೆ ಎಂದು ಬಳಸಿದ್ದೇನೆ...ಅದು ತಪ್ಪಾಗಿದ್ದರೆ ತಿಳಿಸಿ ದಯವಿಟ್ಟು)
  
ಹಾಂ ಅದೇನೋ ಹೇಳ್ತಾರಲ್ಲಾ ಕಲ್ಪನೆ ಅದು ಇದು ಅಂತಾ ಅದನ್ನೇ ಮಾಡ್ಕೊಂಡು ಬರೆದ ಸಾಲುಗಳಿವು..ಆ ಥರದ ಹುಡುಗಿ ಇನ್ನೂ ತಾನಾಗೇ  ಸಿಕ್ಕಿಲ್ಲ,ನಾನಾಗೇ ಹುಡ್ಕಕೂ ಹೋಗಿಲ್ಲಾ..ಬರೆದಿದ್ದೆಲ್ಲಾ ಕಾಲ್ಪನಿಕ..ನನ್ನ ನಂಬಿ ಪ್ಲೀಸ್ ಪ್ಲೀಸ್...
ಅಂದದ ಪ್ರತಿಕ್ರಿಯೆಗಾಗಿ ಕಾಯ್ತಿರ್ತೀನಿ...ಬರಿತೀರಲ್ವಾ?




Sunday, December 23, 2012

ತಿಂಗಳು ಮರೆಯಾದರೇನಂತೆ ತನ್ವಂಗಿ….



ಅಬ್ಬಾ..ಸುಮಾರು ೧೫ ದಿನದಿಂದ ಪರೀಕ್ಷೆಯ ನೆಪದಲ್ಲಿ ಬ್ಲಾಗ್ ಲೋಕದಿಂದ ದೂರವಿದ್ದೆ... ಅಂತೂ ಇಂತೂ ನಾಲ್ಕು ಪರೀಕ್ಷೆಗಳು ಮುಗಿದವು ..ಇನ್ನೆರಡು ಮುಂದಿನ ವರುಷಕ್ಕೆ (ಜನವರಿ ೩,೫ಕ್ಕೆ ಹಾ ಹಾ)...ಹಾಗಾಗಿ ಸಿಕ್ಕಾಪಟ್ಟೆ ಅಂತರವಿರುವುದರಿಂದ ಕೆಲಸ ಕಾಣದೇ ಮಾಡಿದ ಕೆಲಸವಿದು..ಒಂದು ಪುಟ್ಟ ಕವಿತೆ ಬರೆಯುವ ಪ್ರಯತ್ನ..ಸಂದರ್ಭ ಅಂತೇನೂ ಅಂದುಕೊಂಡು ಬರೆದಿದ್ದಲ್ಲ,ಬರೆಯುತ್ತಾ ಹೋದಂತೆ ಮನಸ್ಸಿಗೆ  ಬಂದ ಸನ್ನಿವೇಶ..ಗೆಳತಿಯ ಮದುವೆಯ ಹಿಂದಿನ ದಿನ ಆಕೆಯ ಗಂಡನಾಗುವವನು ಮನೆಬಿಟ್ಟು ಹೋದಾಗ ,ಆಕೆಯನ್ನು ಸಂತೈಸುವ ಭಾವ ಹೊತ್ತು ಬರೆದದ್ದು...ಎಷ್ಟರಮಟ್ಟಿಗೆ ಬರೆದೆನೋ ಕಾಣೆ..ನೀವೇ ತಿದ್ದಿ ಆಶೀರ್ವದಿಸಬೇಕು..

ತಿಂಗಳು ಮರೆಯಾದರೇನಂತೆ ತನ್ವಂಗಿ,
ಕಂಗಳಾ ಕನಸೆಲ್ಲಾ ಇಂಗೀತೇ?
ಮದರಂಗಿ ಮಸುಕಾದರೇನಂತೆ ಮುಂಗೈಲಿ,
ಅಂಗೈಯ್ಯ ಗೆರೆಯಂದ ಅಳಿಸೀತೆ?

ಮಲಾರದಲ್ಲಿಪ್ಪ ಚಿಕ್ಕಿಬಳೆಯೀಗ
ಒಡೆಯಲು,ನೀ ಹೀಗೆ ತೀಡದಿರು.
ಹಜಾರ ಬಳೆಯುಂಟು ಇನ್ನೂ ಆ ಮಾಲೆಯಲಿ
ಹೊನ್ನಿನ ಕಡಗವ ಹುಡುಕುತಿರು

ಬೇಸರದ ಸಬರವ ಮೇಲ್ಮೆತ್ತಿಗಿಟ್ಟಿರು,
ಅಂಗಳದಿ ಗೊಂದಲದಾ ಕಲ್ಲು-ಕ್ವಾಳೆಯ ಗುಡಿಸಿರು.
ಹಂಗಿಸುವ ನೆಂಟರ ಸಗಣಿಯಲಿ ತೊಡೆದಿರು,
ನಾಳಿನಾಸೆಯಾ  ಬಣ್ಣದಲಿ, ರಂಗೋಲಿ ಬಿಡಿಸಿರು.

ಚಂದಿರ  ಮರೆಯಾದರೇನಂತೆ ??

ಶಬ್ಧಾರ್ಥ: ತಿಂಗಳು:ಚಂದಿರ,ತನ್ವಂಗಿ:ಕೋಮಲವಾದ ಶರೀರವುಳ್ಳವಳು,ಮಲಾರ:ಬಳೆಗಾರನ ಬಳೆ ಸಂಚಿ,ಚಿಕ್ಕಿಬಳೆ:ಬಳೆಯ ಒಂದು ಪ್ರಕಾರ,
( ಇನ್ನು ನಮ್ಮ ಕಡೆ ಬಳಸುವ ಶಬ್ಧಗಳನ್ನು ಬಳಸುವ ಒಂದು ಪುಟ್ಟ ಯತ್ನ…ಪಕ್ಕಾ ಇದೇ ಅರ್ಥವೋ ಗೊತ್ತಿಲ್ಲ,ನನಗೆ ತಿಳಿದಂತೆ ಬರೆದಿದ್ದೇನೆ… 
ತೀಡು:ಅಳು,ಸಬರ:ಗುಂಪು,ಚಲ್ಲಾಪಿಲ್ಲಿಯಾಗಿ ಬಿದ್ದಿರುವ ವಸ್ತುಗಳು,ಮೇಲ್ಮೆತ್ತಿ:ಮೆತ್ತಿಯ ಮೇಲ್ಭಾಗ,ಮನೆಯ ಕೊನೆಯ ಹಂತ,ಕ್ವಾಳೆ-ಕತ್ತರಿಸಿದ ಗಿಡಗಂಟಿಯ ಉಳಿದ ಭಾಗ,ಕೋಳೆ..)

ದಯವಿಟ್ಟು ನಿಮ್ಮ ಅನಿಸಿಕೆಗಳನ್ನು ನಮೂದಿಸಿ..
ತಪ್ಪು ತಿದ್ದಿಕೊಂಡು ಬೆಳೆಯಲು ಸಹಕರಿಸಿ :)
ನಮಸ್ತೆ.
-ಚಿನ್ಮಯ ಭಟ್ಟ

Thursday, December 6, 2012

ಶೀತ ಗೀತೆ..



ಹಮ್..ಇವತ್ತು ಬೆಳಿಗ್ಗೆ ಯಾಕೋ ತೀರಾ ಛಳಿಯೆನಿಸತೊಡಗಿತ್ತು...ಯಾಕೋ ಬೆಚ್ಚನೆಯ ಕಂಬಳಿ ಹೊದ್ದಿದ್ದ ಹಾಸಿಗೆ ಬಿಟ್ಟೇಳಲು ಮನಸೇ ಬಾರದಾಗಿತ್ತು...ಈ ಛಳಿಯ ಯಾಕಾದರೂ ಬರುತ್ತದೆಯೋ ಅಂದುಕೊಂಡೆ..ಮತ್ತೆ ಇನ್ನೊಂದು ಕ್ಷಣದಲ್ಲಿ ಈ ಛಳಿಯಲ್ಲಿಯೂ ಏನೋ ಒಂದು ಸುಖವಿದೆ ,ಈ ಚಳಿಗಾಲವೂ ಸುಂದರವೇ ಎನಿಸಿತು...ಅದನ್ನೇ ಒಂದು ಹೆಣ್ಣಾಗಿಸಿ ಒಂದೆರಡು ಸಾಲು ಬರೆದೆ...ನೋಡಿ ಈ ಸಂಜೆ ಅದನ್ನು ಪೂರ್ತಿಗೊಳಿಸಿ ನಿಮ್ಮ ಮುಂದಿಟ್ಟಿದ್ದೇನೆ...ದಯವಿಟ್ಟು ತಪ್ಪು-ಒಪ್ಪು ತಿಳಿಸಿ...ಆಶೀರ್ವದಿಸಿ  ...


ಮರಳಿ ಬಂದಳು ಛಳಿಯಾ ಗೆಳತಿ
ಹಸಿ-ಬಿಸಿ ಕನಸಿನ ಜೊತೆಗೆ.
ಗುಬುರನು ಹಾಕಿ,ಮಲಗಿದ್ದಾ ಮನವನು
ತಂದಳು ಚವಿಯಾ ಸ್ಥಿತಿಗೆ.

ಹವಳದಾ ಇಬ್ಬನಿಯು ಹೂವಿನಾ ಪಕಳೆಗೆ,
ಕಾವಳದ ಮಂದಲಿಗೆ,ಗರಿಕೆಗೆ.
ನೇವಳದ ಈ ಒಲವು,ಪ್ರಾಲೇಯದಾ ಚೆಲುವು
ಚಿಚ್ಛಕ್ತಿ ಚಿಮ್ಮಿಸಿದೆ ಎದೆಯೊಳಗೆ.

ಛಾನಸವಾ ಹೆದರಿಸಿ,ಜಡತೆಯಾ ನಡುಗಿಸಿ
ಎಬ್ಬಿಸಿದೆ ಎನ್ನಾ ನಿನ ಶೀತ.
ಕನಸಿನ ಕಸ್ತ್ರವ ಕಂಡಿಹೆನು ನಿನ್ನಲ್ಲೇ,
ಇದುವೇ ಸಂಕ್ರಮಣ ಗೀತ.
(ಶಬ್ದಾರ್ಥ:ಗುಬುರು:ಮುಸುಕು,ಚವಿ:ಕಾಂತಿ,ಹೊಳಪು,ಕಾವಳ:ಮಂಜು(ಕತ್ತಲೆ ಎನ್ನುವ ಅರ್ಥವೂ ಇದೆಯಂತೆ),ನೇವಳ:ಉಡಿದಾರ,ಕಂಠೀಹಾರ,ಮಂದಲಿಗೆ:ಚಾಪೆ,ಪ್ರಾಲೇಯ:ಹಿಮ,ಚಿಚ್ಛಕ್ತಿ:ಚೈತನ್ಯ,ಆತ್ಮಶಕ್ತಿ,ಛಾನಸ:ಸೋಮಾರಿತನ,ಕಸ್ತ್ರ:ನಮ್ಮ ಕಡೆ ಮಾವಿನ ಹೂವಿಗೆ “ಮಾವಿನ ಕಸ್ತ್ರ” ಎಂದು ಬಳಸುತ್ತಾರೆ ಅದನ್ನು ಬರೆದೆ ಆಷ್ಟೆ…)


ನಿಮ್ಮ ಅನಿಸಿಕೆಗಳನ್ನು ದಯವಿಟ್ಟು ನಮೂದಿಸಿ..
ನಿಮ್ಮ ಸಲಹೆಗಳೆ ನಮ್ಮಂತಹ ಎಡಬಿಡಂಗಿ ಬರಹಗಾರರಿಗೆ ಶಕ್ತಿ,ಅದೇ ನಮಗೆ ಸ್ಪೂರ್ತಿ :)
ವಂದನೆಗಳೊಂದಿಗೆ
-ಚಿನ್ಮಯ ಭಟ್ಟ

Tuesday, November 27, 2012

ಬಾ ಮರಳಿ……




ಸುಮ್ಮನೆ ಒಂದು ಕವನ ಬರ್ದಿದೀನಿ...ದಯವಿಟ್ಟು ತಪ್ಪು-ಒಪ್ಪು ತಿಳಿಸಿ....

ನಗೆಯಲ್ಲೆ ಅಪಹರಿಸಿ,ನಯನದಲೆ ಉಪಚರಿಸಿ
ನಾಭಿಯಲು ಸಂಚರಿಸಿ,ನಡಿಗೆಯಲು ಛಾಪಿರಿಸಿ
ಮಂಜಿನಂತೆ ಕರಗಿ ಮರೆಯಾದ ಮೋಹಿತೆ,
ಪಂಜಿನಂತೆ ಉರಿದು ಬರಿದಾದ ಸ್ನೇಹಿತೆ
ಕಣ್ಣಲ್ಲೆ ನಿನ್ನ ಹಚ್ಚೆಯ ಬರೆದಿಹೆ
ಓ ಗಿಣಿಯೆ ಬಾ ಒಮ್ಮೆ,ನಿನಗೆ ಕಾದಿಹೆ.

ಬಜ್ಜರಂದದ ಬೆಡಗಿ,ಚಿಕಣಿಯ ಕಂಗಳ ಹುಡುಗಿ,
ಕಂಜರಿಯಂತಹ ನುಡಿಯು,ಕಾಡುವ ಮೊಗ್ಗಿನ ಜಡೆಯು,
ಎಂದೆಂದೂ ನಿನ್ನ ಜೊತೆಗೆ ಇರುವ ಹವಣಿಕೆ,
ಸರಿಸಿ ಹಳೆಯ ಪರದೆ,ಬಾ ನೀ ಸನಿಹಕೆ,

ಬಣ್ಣಗಳು ಹಳೆನೆನಪು,ಇಂದೆಲ್ಲಾ ಕರಿಬಿಳುಪು,
ಕಾಣದು ಕಣ್ಣಲಿ ಹೊಳಪು ,ಕರಗಿದೆ ಕನಸಿನ ಒನಪು,
ಆ ಕಾಲನಿಂದ ಬಿರಿದೆದೆಗೆ ಮುತ್ತಿಗೆ.
ಸೋಲಿಸುವೆ ಅವನ ನೀ ಬರುವಾ ಹೊತ್ತಿಗೆ.
-ಚಿನ್ಮಯ
(ಶಬ್ಧಾರ್ಥ : ಬಜ್ಜರ-ವಜ್ರ,ಕಂಜರಿ-ಸಣ್ಣ ತಮಟೆ,ನಾಭಿ-ಹೊಕ್ಕಳು,ಕೇಂದ್ರ ಸ್ಥಾನ,ಚಿಕಣಿ-ಚಿಕ್ಕ )

Saturday, November 24, 2012

ನಾ ನೋಡಿದ ಡ್ರಾಮಾ .....



ಈಗಷ್ಟೇ ಡ್ರಾಮಾ ಚಿತ್ರ ನೋಡಿ ಮಸಾಲೆ ದೋಸೆ ತಿಂದು ರೂಮಿಗೆ ಬಂದೆ .....ಬೆಳಿಗ್ಗೆ ಪರೀಕ್ಷೇಯಲ್ಲಿ ಔಟ್  ಪುಟ್ಟು ಬಂದ ಖುಷಿ ಒಂದು ಕಡೆಗಾದರೆ ಅಂತೂ ಇಂತೂ ಮೊದಲ ಪ್ರದರ್ಶನವನ್ನು ನೋಡಲಾಗದಿದ್ದರೂ ಎರಡನೇ ದಿನವೇ ನೋಡಿದ ಖುಷಿ..ನಾಳೆ ಬೆಳಿಗ್ಗೆ ಮನೆಗೆ...ಅದಕ್ಕೆ ರಾತ್ರಿ ಕಣ್ಣು ಕೆಂಪಗೆ ಮಾಡಿಕೊಂಡು ಬೆರಳಚ್ಚಿಸುತ್ತಿದ್ದೇನೆ...ಬೇರೆ ಎನೂ ಅರ್ಜಂಟ್ ಕೆಲಸವಿಲ್ಲದಿದ್ದರೆ ಹಂಗೇ ಒಂದ್ ಸಲ ಓದಿ....

ಚಿತ್ರದ ಬಗ್ಗೆ  ವಿಮರ್ಶಿಸುವಷ್ಟೆಲ್ಲಾ ದೊಡ್ಡವನು ನಾನಲ್ಲ..ಒಂದಿಷ್ಟು ಅನಿಸಿಕೆಗಳು ಅಷ್ಟೇ..
ಚಿತ್ರದಲ್ಲಿ ಮೊದಲಿಗೆ ಇಷ್ಟವಾಗಿದ್ದು ಮಂಡ್ಯದ ಭಾಷೆಯ ಸೊಗಡು...ಒಂದಿಷ್ಟು ಗ್ರಾಮ್ಯತೆಯ ಚಿತ್ರಣ...ಎಂದಿನಂತೆ ಭಟ್ಟರ ಚಿತ್ರದ  ಮೊದಲ ಅರ್ಧಗಂಟೆ ನಾಯಕನ ವ್ಯಕ್ತಿತ್ವವನ್ನು ಹೇಳಲು ಮೀಸಲು..ಅಲ್ಲಿಂದ ಇನ್ನೊಂದೆಡೆಗೆ ಪ್ರಯಾಣ...ಇಲ್ಲಿ ,ಬೇರೆಡೆ ಹೋದಾಗ ಪ್ರೀತಿ ಹುಟ್ಟಿದುವರ ಬದಲು ಪ್ರೀತಿಗಾಗಿಯೇ ಬೇರೆಡೆ ಹೋಗುತ್ತಾರೆ ನಾಯಕ ಯಂಕಟೇಸ ಹಾಗೂ ಸತೀಸ...ಅಲ್ಲಿ ಏನೇನೋ ನಡೆಯುತ್ತದೆ...ಜೊತೆಗೆ ಅಂಡರ್ ವರ್ಡನ ಥಳಕೂ ಚಿತ್ರಕ್ಕಿದೆ...ಒಟ್ಟಿನಲ್ಲಿ ಒಂದು ನಕ್ಕು ಹಗುರಾಗುವ ಚಿತ್ರ...ಮನಸ್ಸಿನಲ್ಲಿ ಭವಿಷ್ಯದ ಬಗೆಗಿನ ಗೊಂದಲಗಳನ್ನು ಮರೆತು ಇಂದಿನದನ್ನು ಆನಂದದಿಂದ ಕಳೆಯಿರಿ..ಉಳಿದದ್ದೆಲ್ಲಾ ಭಗವಂತನ ಮೇಲೆ ಬಿಡಿ ಎನ್ನುವ ಸಂದೇಶ ಇದೇಯೇನೋ ಅಂತ ನನಗನಿಸಿದ್ದು...

ಮೊದಲಿಗೆ ಒಂದಿಷ್ಟು ತರಲೆ ಮಾತುಗಳು...ಮಂಗಾಟಗಳು....ಆಮೇಲಾಮೇಲೆ  ಗಂಭೀರವಾಗುವಂತಹ ಪಾತ್ರದಲ್ಲಿ ಯಶ್ ಅಭಿನಯ ಇಷ್ಟವಾಯ್ತು....ಹೊಡೆದಾಟದ ದೃಶ್ಯಗಳಲ್ಲಿ ಯಶ್ ಡಿಚ್ಚಿ ಒಂದು ಸಲ ನೆನಪಿರತ್ತೆ...ಪ್ರೀತಿ ಮಾಡುವ ಹುಡುಗನ ಪಾತ್ರ ಅವರಿಗೇನು ಹೊಸದೇನಲ್ಲ...ಹಾಂ ಯಾಕೋ ಕೊನೆಯಲ್ಲಿ ,ಕುಡಿದು ಮಾಡಿದ ತಪ್ಪುಗಳಿಗೆ ಫಾದರ ಹತ್ತಿರ ಕ್ಷಮೆ ಯಾಚಿಸುವಾಗ ನಟನೆ ಇನ್ನೂ ಚೆನ್ನಾಗಿರಬಹುದ್ದೇನೋ ಅನಿಸಿದರೆ,ಗುಂಡು ಬಿದ್ದು ನರಳುವ  ಸಂದರ್ಭದಲ್ಲಿಯೂ ಕೂಡ "ಪ್ರಿಯತಮೆಯನ್ನು ಚೆನ್ನಾಗಿ ನೋಡಿಕೋ" ಎಂದು ಅವರಪ್ಪನ ಹತ್ತಿರ ಭಾಷೆ ತೆಗೆದುಕೊಳ್ಳುವಾಗ ವ್ಹಾರ ವ್ಹಾ ಎನ್ನಿಸದೇ ಇರದು....

ಇನ್ನು ನೀನಾಸಂ  ಸತೀಶರದ್ದು ಕೂಡ ನಗೆಬುಗ್ಗೆ ಚಿಮ್ಮಿಸುವ ಪಾತ್ರ....ನಾಯಕನ ಜೊತೆಗೂಡಿ ಆಡುವ ಮಂಗಾಟಗಳಿಗೆಲ್ಲಾ ಸೋ ಎನ್ನುವ ಪಾತ್ರವದು....ಜೊತೆಯಿಷ್ಟು ಮುಗ್ಧತೆ ಕೂಡ ಆ ಪಾತ್ರಕ್ಕಿದ್ದು ,ಆ ಸಮಯದಲ್ಲಿ ಸತೀಶರ ಆಂಗಿಕ ಅಭಿನಯ ಮನಸೂರೆಗೊಳ್ಳುತ್ತದೆ.... ಕೊನೆಯಲ್ಲ್ಲಿ ಸಮುದ್ರದ ಹತ್ತಿರ ನಿಂತು ಅಳುವ ಸಂಧರ್ಭದ ಅಭಿನಯ ಇಷ್ಟವಾಯ್ತು.....

ಇನ್ನು ನಾಯಕಿ ರಾಧಿಕಾ ಪಾತ್ರಕ್ಕೆ ಎಂದಿನಂತೆ  ನ್ಯಾಯ ಒದಗಿಸಿದ್ದಾರೆ...ಮೊದಲಿಗೆ ಶ್ರೀಮಂತನ ಮಗಳಾಗಿ ಅವರು ತೋರಿಸುವ ಅಭಿನಯ ಯಾಕೋ ಅಷ್ಟೇನೂ ಇಷ್ಟವಾಗಲಿಲ್ಲ...ಜೊತೆಗೆ ಮೊದಲಾರ್ಧದ ತನಕ ಮುಖ ಯಾಕೋ ಪ್ರೆಶ್ ಅನಿಸಲಿಲ್ಲ....ಆದರೆ ದ್ವಿತೀಯಾರ್ಧದಲ್ಲಿ ಅವರ ನಟನೆ ನಮ್ಮನ್ನು ಪಾತ್ರದೊಳಗೆ ಕೊಂಡೊಯ್ಯುತ್ತದೆ...ಸುಚೇಂದ್ರ ಪ್ರಸಾದ್ ಅವರ ಕೈಯ್ಯಲ್ಲಿ ಮಗಳಂತೆ ಅವರ ಡ್ರಾಮಾ ಆಡುತ್ತಾ  ಕೈತುತ್ತು ತಿನ್ನುವ ದೃಶ್ಯದಲ್ಲಿ ನಿಜಕ್ಕೂ ಕಣ್ಣೀರು ತರಿಸುತ್ತಾರೆ ರಾಧಿಕಾ..ಅದನ್ನು ನೋಡುತ್ತಾ ಯಾಕೋ ನಾನು ನನ್ನ ಕನಸು ನೆನಪಾಯ್ತು.....ದ್ವಿತೀಯಾರ್ಧದಲ್ಲಿ ಮುದ್ದಾಗಿ ಕಾಣಿಸುವ ರಾಧಿಕಾ ಪಂಡಿತ್ ಅಭಿನಯದಲ್ಲಿ ಹಿನ್ನೆಲೆಯಲ್ಲಿ ತೇಲಿಬರುವ "ಹಂಬಲದ ಹೂವಂತೆ ...."ಮನಸ್ಸಿನಲ್ಲಿ ಉಳಿದಿರುತ್ತದೆ...

ಇನ್ನು ಚಿತ್ರಕ್ಕೆ ಹೊಸ ಛಾಪು ಕೊಟ್ಟ ಎರಡು ಪಾತ್ರಗಳ ಬಗ್ಗೆ ಹೇಳಲೇಬೇಕು.."ಏಯ್ ಹುಡುಗ್ರಾ..."ಎಂದು ಗಡಸು ದನಿಯೇರಿಸಿ ಚಿತ್ರದೊಳಗಿಳಿಯುವ ಬುಲ್ ಬುಲ್ (ಅಂಬರೀಷ ಅವರಿಗೆ ನಾಯಕ ಕರೆಯುವ ಹೆಸರು )..."ಅವನು ಆಡಿಸ್ತಾನೆ ಆಡ್ಭೇಕು "ಎಂದು ಕೈಯೆತ್ತಿ ಬೊಂಬೆ ತಿರುಗಿಸುತ್ತಾರೆ...ಪ್ರತಿಯೊಂದು ತಿರುವಿನಲ್ಲು ಕಾಣಿಸಿಕೊಂಡು ಕಣ್ಣಲ್ಲೇ ಎಲ್ಲಾ ಹೇಳುವ ಅಭಿನಯ ಕನ್ನಡದ ಕರ್ಣರದ್ದು.....ಆ ಟೋಪಿ,ಆ ಬೊಂಬೆ ಅದರ ಹಿಂದಿನ ಅರ್ಥ ಅಧ್ಯಾತ್ಮದ ಬಗ್ಗೆ ಆಸಕ್ತಿ ಇರುವವರಿಗೆ ಇನ್ನಷ್ಟು ಇಷ್ಟವಾಗಬಹುದು......

ಜೊತೆಗೆ ಸುಚೇಂದ್ರ ಪ್ರಸಾದ್ ಅವರ ಅಭಿನಯವನ್ನು ಮರೆಯಲು ಅಸಾಧ್ಯ...ಕಾಲೇಜಿನ ಪ್ರಾಂಶುಪಾಲರಾಗಿ "ಕನ್ನಡದಲ್ಲೇ ವ್ಯವಹರಿಸೋಣ" ಎಂದು ಬೋರ್‍ಡು ಹಾಕಿಕೊಂಡು ಅಚ್ಚ ಕನ್ನಡ ಮಾತನಾಡುವ ಅವರು,ಮನೆಯಲ್ಲಿ ಯೆಂಕ್ಟೇಶ್,ಸತೀಶ ಬಂದಾಗ ಕಾಣದ  ಮಗಳ ಬಗೆಗಿನ ಮೋಹದಲ್ಲಿ ,ಅವಳ ಮುದ್ದಾಡುವ  ಆಸೆಯಲ್ಲಿ ಭಾವಾವೇಶಕ್ಕೊಳಗಾಗುವ ಸನ್ನಿವೇಶ ಅವಿಸ್ಮರಣೀಯ, ಅನನ್ಯ ,ಅದ್ಭುತ...ಕೋಪದಲ್ಲೂ ಅಷ್ಟೇ,ಮಮತೆಯಲ್ಲೂ ಅಷ್ಟೇ,ಹತಾಶೆಯಲ್ಲೂ ಅಷ್ಟೇ,ಪ್ರೀತಿಯಲ್ಲೂ ಅಷ್ಟೇ ಸುಚೇಂದ್ರ ಪ್ರಸಾದ ಇಡೀ ತೆರೆಯನ್ನು ಆವರಿಸಿಕೊಂಡಿರುತ್ತಾರೆ ... ಅವರ  ಸ್ಪಷ್ಟವಾದ ಉಚ್ಚಾರ,ಸಂದರ್ಭಕ್ಕೆ ತಕ್ಕಂತೆ ಬದಲಾಗುವ  ಮುಖಭಾವ ನೆನಪಿನಲ್ಲುಳಿಯುತ್ತದೆ....

ಹಾಡುಗಳ ಬಗ್ಗೆಯಂತೂ ಹೇಳುವದೇ ಬೇಡ...ಒಂದಕ್ಕಿಂತ ಒಂದು ಸುಂದರ...ಚೆಂದುಟಿಯ ಪಕ್ಕದಲಿ ಯ ನೃತ್ಯ ಸಂಯೋಜನೆ,ಬೆಳಕಿನ ಸಂಯೋಜನೆಯ ಬಹಳ ಹಿಡಿಸಿತು...ಬಂಗಾರದಂತೆ ಹೊಳೆಯುವ ಬೆಳಕಿನಲ್ಲಿ ಪ್ರೇಮ ನಿವೇದನೆ ಮಾಡುತ್ತಿರುವ ಯಶ್ ಹಾಗೂ ಅಂದದ ರಾಧಿಕಾ ಇನ್ನೂ ಕಣ್ಣಿಗೆ ಕಟ್ಟಿದಂತಿದ್ದಾರೆ....
ತುಂಡ್ ಹೈಕಳ ಸಾವಾಸ ದಲ್ಲಿ ಯಶ್ ಹಾಗೂ ಸತೀಶ ಒಂದಿಷ್ಟು ನಗಿಸ್ತಾರೆ....."ಡ್ರಾಮಾ ತನಿನಾನನ " ಹಾಡುನಲ್ಲಿ ಹಚ್ಚಿಕೊಂಡಿರುವ ಮೀಸೆ,ಕಲ್ಲಂಗಡಿ,ಸೇಬು,ಏಣಿ ಮೇಲೆ ಸೈಕಲ್ಲು  ಹಿಂಗೆ ಏನೋನೋ ಹೊಸತರದ್ದು ಎನಿಸಿ ಮುಂದೇನು ವ್ಯಾಶವೋ ಎಂದು ಕಣ್ಣು ಹುಡುಕುವಂತೆ ಮಾಡುತ್ತದೆ....ಕೃಷ್ಣ ಅವರ ಕ್ಯಾಮರಾದಲ್ಲಿ ತೆಗೆದ  ಬ್ರಿಡ್ಜಿನ ಕೆಳಗಿನ ದೃಶ್ಯಗಳು,ಸಮುದ್ರದ ತೀರ ಮತ್ತೆ ಮತ್ತೆ ನೋಡಬೇಕು ಎನಿಸುವಂತೆ ಮಾಡುತ್ತದೆ...

ಇವಿಷ್ಟು ನಮ್ಮ ಡ್ರಾಮಾಕಥೆ ಪುರಾಣಗಳು....ಈ ನನ್ ಮಗಾ ಎನ್ ಸಿನಿಮಾ ಪಂಟರಾ ಅಂತ ಬೈಕೋಬೇಡಿ...ಅನಿಸಿದ್ದನ್ನು ಬರೆಯುವ ಚಟ ನೋಡಿ...ಬೆರಳಚ್ಚಿಸಿದ್ದೇನೆ ಆಷ್ಟೇ...ಇದು ನಾ ಕಂಡ ಡ್ರಾಮಾ...

ಪುರಸೊತ್ತು ಆದ್ರೆ ನೀವೂ ಒಂದು ಸಲ ಹೋಗಿ ಬನ್ನಿ.......

ಒಟ್ಟಿನಲ್ಲಿ ಎಲ್ಲರನ್ನೂ ನಗಿಸಿ,ನಾಳೆಯ ಬಗೆಗಿನ ಚಿಂತೆ ಹೊಡೆದೊಡಿಸಿ,ಎಲ್ಲ ನಿನ್ನ ಆಟ ಕಣೋ ಎಂಬತೆ ಹಾಯಾಗಿರಿ,ಇಂದಿನದನ್ನು ಆಸ್ವಾದಿಸಿ ಎನ್ನುವ ಡ್ರಾಮಾ ನಂಗಂತೂ ಇಷ್ಟವಾಯ್ತು...

ಇನ್ನೊಮ್ಮೆ ಹೋಗಬೇಕು ಅಪ್ಪ ಬೈದೇ ಇದ್ರೆ,
ಜೇಬಲ್ಲಿ ದುಡ್ಡು ಉಳಿದಿದ್ರೆ!!!!!!
-ಚಿನ್ಮಯ.

 

Thursday, November 8, 2012

ಉಸಿರನ್ನೆ ಕಸಿದಿಟ್ಟ…..


ಸುಮಾರು  ದಿನಗಳಿಂದ ಡ್ರಾಮಾ ಚಿತ್ರದ "ಚೆಂದುಟಿಯ ಪಕ್ಕದಲಿ"...ಹಾಗೂ  "ಹಂಬಲದ ಹೂವಂತೆ ..." ಗೀತೆಗಳನ್ನು ಗುನುಗುನಿಸುತ್ತಾ ಇದ್ದೆ...ತೀರಾ ಇಷ್ಟವಾದ ಹಾಡುಗಳವು... ಯಾವಾಗಲೋ ಊರಿಗೆ ಹೋಗುವಾಗ ಬಸ್ಸಿನ ಟಿಕೆಟ್ಟಿನ ಹಿಂದೆ ಒಂದೆರಡು ಸಾಲನ್ನೂ ಗೀಚಿದ್ದೆ...ಪರೀಕ್ಷೆ ಬರೆದು ಗಣಕದ ಮುಂದೆ ಕುಂತವನಿಗೆ ಇಂದೇಕೋ "ಹಳೆ ರಾಗ ಹೊಸ ಹಾಡು " ಗುಂಪಿನಲ್ಲಿ ಹೃದಯ ಶಿವ ಅವರ ಮಾತು ಕಣ್ಣಿಗೆ  ಬಿತ್ತು...ಹಾಗೆಯೇ ಕಣ್ಣ ಮುಂದೆ ಪೆನ್ನು-ಪೇಪರಿತ್ತು...
ಅದೇ ದಾಟಿಯನ್ನು ಗುನುಗುನಿಸುತ್ತಾ ಗೀಚಿದ ಸಾಲುಗಳಿವು..ದಯವಿಟ್ಟು ನೋಡಿ ತಪ್ಪು ಒಪ್ಪು ತಿಳಿಸಿ..ಆಶೀರ್ವದಿಸಿ...

ಉಸಿರನ್ನೇ ಕಸಿದಿಟ್ಟ ನೇಸರನ ಬಿಸಿಯಿಟ್ಟ,
 ಕನಸೂರ ಕನ್ನೆಗೆ ಹೆಸರಿಲ್ಲಾ.
ಕೆಸರಿದ್ದ ಕಿಸೆಯಲ್ಲಿ ಪ್ರೀತಿಸುವ ಕಾಸಿಟ್ಟ,
ಆ ಕುಸುಮವನ್ನಿಂದು ಮರೆತಿಲ್ಲಾ.
ಮಿಸರಿಯ ಎಸರಂತೆ ಈ ಪ್ರೇಮ,
ಕೇಸರಿಯ ತಿನಿಸಷ್ಟು ವ್ಯಾಮೋಹ,
ಬಸರಿಯ ಬಳ್ಳಿಯೇ ಈ ದೇಹ.

ಬೆಂತರದ ಹುಡುಕಾಟ ಎದೆಸೆಲ್ಲೆಯಲ್ಲಿರಲು,
ಎಲ್ಲಿರುವೆಯೆಂದು ನೀ ಹೇಳವಲ್ಲೆ.
ನಿಂತಲ್ಲೇ ನಿಲ್ಲು ನೀ ನನ್ನೊಲವಿನಾ ಹುಲ್ಲೆ,
ಸಿರಿಚೆಲುವ ಸವಿಯಲು ಬರುವೆನು ಅಲ್ಲೆ.
ಸಂತಿಗೆ ಹೊಡೆಯೋಣ ಸವಿಲಲ್ಲೆ,
ಜೊತೆಗೂಡಿ ಕದಿಯೋಣ ಸಿಹಿಜಲ್ಲೆ,
ನಕ್ಕಿರಲಿ ಅದ ನೋಡಿ ಮಳೆ ಬಿಲ್ಲೆ.
ಎಲ್ಲಿರುವೆ ನೀ ಓ ನಲ್ಲೆ…


 -ಚಿನ್ಮಯ ಭಟ್ಟ. 
 (ಶಬ್ಧಾರ್ಥ:ಮಿಸರಿ- ಒಂದು ಬಗೆಯ ಜೇನು,ಕೇಸರಿ-ನಮ್ಮ ಕಡೆಯಲ್ಲಿ ಮಾಡುವ ಒಂದು ಕಜ್ಜಾಯ,ಬೆಂತರ-ಬೇತಾಳ,ಸೆಲ್ಲೆ-ಮೇಲುಹೊದಿಕೆ,ವಲ್ಲೆ-ಬಯಲು ಸೀಮೆಯಲ್ಲಿ "ಇಲ್ಲ" ಎನ್ನವುದು,ಸಂತಿಗೆ-ಜೊತೆಯಲ್ಲಿ)
ದಯವಿಟ್ಟು ತಪ್ಪುಗಳನ್ನು ತಿಳಿಸಿ....ಹಾಂ ಈ ನನ್ನ ಹುಚ್ಚುತನವನ್ನು ಕಾಯ್ಕಿಣಿ ಹಾಗೂ ಭಟ್ಟರು ಕ್ಷಮಿಸುವಿರೆಂದೂ ನಂಬಿದ್ದೇನೆ..)