Thursday, November 8, 2012

ಉಸಿರನ್ನೆ ಕಸಿದಿಟ್ಟ…..


ಸುಮಾರು  ದಿನಗಳಿಂದ ಡ್ರಾಮಾ ಚಿತ್ರದ "ಚೆಂದುಟಿಯ ಪಕ್ಕದಲಿ"...ಹಾಗೂ  "ಹಂಬಲದ ಹೂವಂತೆ ..." ಗೀತೆಗಳನ್ನು ಗುನುಗುನಿಸುತ್ತಾ ಇದ್ದೆ...ತೀರಾ ಇಷ್ಟವಾದ ಹಾಡುಗಳವು... ಯಾವಾಗಲೋ ಊರಿಗೆ ಹೋಗುವಾಗ ಬಸ್ಸಿನ ಟಿಕೆಟ್ಟಿನ ಹಿಂದೆ ಒಂದೆರಡು ಸಾಲನ್ನೂ ಗೀಚಿದ್ದೆ...ಪರೀಕ್ಷೆ ಬರೆದು ಗಣಕದ ಮುಂದೆ ಕುಂತವನಿಗೆ ಇಂದೇಕೋ "ಹಳೆ ರಾಗ ಹೊಸ ಹಾಡು " ಗುಂಪಿನಲ್ಲಿ ಹೃದಯ ಶಿವ ಅವರ ಮಾತು ಕಣ್ಣಿಗೆ  ಬಿತ್ತು...ಹಾಗೆಯೇ ಕಣ್ಣ ಮುಂದೆ ಪೆನ್ನು-ಪೇಪರಿತ್ತು...
ಅದೇ ದಾಟಿಯನ್ನು ಗುನುಗುನಿಸುತ್ತಾ ಗೀಚಿದ ಸಾಲುಗಳಿವು..ದಯವಿಟ್ಟು ನೋಡಿ ತಪ್ಪು ಒಪ್ಪು ತಿಳಿಸಿ..ಆಶೀರ್ವದಿಸಿ...

ಉಸಿರನ್ನೇ ಕಸಿದಿಟ್ಟ ನೇಸರನ ಬಿಸಿಯಿಟ್ಟ,
 ಕನಸೂರ ಕನ್ನೆಗೆ ಹೆಸರಿಲ್ಲಾ.
ಕೆಸರಿದ್ದ ಕಿಸೆಯಲ್ಲಿ ಪ್ರೀತಿಸುವ ಕಾಸಿಟ್ಟ,
ಆ ಕುಸುಮವನ್ನಿಂದು ಮರೆತಿಲ್ಲಾ.
ಮಿಸರಿಯ ಎಸರಂತೆ ಈ ಪ್ರೇಮ,
ಕೇಸರಿಯ ತಿನಿಸಷ್ಟು ವ್ಯಾಮೋಹ,
ಬಸರಿಯ ಬಳ್ಳಿಯೇ ಈ ದೇಹ.

ಬೆಂತರದ ಹುಡುಕಾಟ ಎದೆಸೆಲ್ಲೆಯಲ್ಲಿರಲು,
ಎಲ್ಲಿರುವೆಯೆಂದು ನೀ ಹೇಳವಲ್ಲೆ.
ನಿಂತಲ್ಲೇ ನಿಲ್ಲು ನೀ ನನ್ನೊಲವಿನಾ ಹುಲ್ಲೆ,
ಸಿರಿಚೆಲುವ ಸವಿಯಲು ಬರುವೆನು ಅಲ್ಲೆ.
ಸಂತಿಗೆ ಹೊಡೆಯೋಣ ಸವಿಲಲ್ಲೆ,
ಜೊತೆಗೂಡಿ ಕದಿಯೋಣ ಸಿಹಿಜಲ್ಲೆ,
ನಕ್ಕಿರಲಿ ಅದ ನೋಡಿ ಮಳೆ ಬಿಲ್ಲೆ.
ಎಲ್ಲಿರುವೆ ನೀ ಓ ನಲ್ಲೆ…


 -ಚಿನ್ಮಯ ಭಟ್ಟ. 
 (ಶಬ್ಧಾರ್ಥ:ಮಿಸರಿ- ಒಂದು ಬಗೆಯ ಜೇನು,ಕೇಸರಿ-ನಮ್ಮ ಕಡೆಯಲ್ಲಿ ಮಾಡುವ ಒಂದು ಕಜ್ಜಾಯ,ಬೆಂತರ-ಬೇತಾಳ,ಸೆಲ್ಲೆ-ಮೇಲುಹೊದಿಕೆ,ವಲ್ಲೆ-ಬಯಲು ಸೀಮೆಯಲ್ಲಿ "ಇಲ್ಲ" ಎನ್ನವುದು,ಸಂತಿಗೆ-ಜೊತೆಯಲ್ಲಿ)
ದಯವಿಟ್ಟು ತಪ್ಪುಗಳನ್ನು ತಿಳಿಸಿ....ಹಾಂ ಈ ನನ್ನ ಹುಚ್ಚುತನವನ್ನು ಕಾಯ್ಕಿಣಿ ಹಾಗೂ ಭಟ್ಟರು ಕ್ಷಮಿಸುವಿರೆಂದೂ ನಂಬಿದ್ದೇನೆ..)

24 comments:

Srikanth Manjunath said...

ಸಾಲುಗಳು ಚಂದವಾಗಿವೆ...ಏಳುಸುತ್ತಿನ ಕೋಟೆಯಲ್ಲಿರುವ ರಾಜಕುಮಾರಿಯ ಹಾಗೆ..ಸುತ್ತಿ ಸುತ್ತಿ ಬಸವಳಿದು ಬಂದಾಗ ರಾಜಕುಮಾರಿಯ ಮುದ್ದು ಮುಖ, ನಿರ್ಮಲ ಪ್ರೀತಿ ಸಿಗುತ್ತದೆ.ನಿಮ್ಮ ಕವಿತೆಯ ಸಾಲುಗಳು ಹಾಗೆ...

Badarinath Palavalli said...

ಮೂಲ ಸಾಹಿತ್ಯಕ್ಕಿಂತಲೂ ಮನಸ್ಸಿಗೆ ನಾಟುವಂತಿದೆ ಈ ಹಾಡು. ನಾನೂ ಒಮ್ಮೆ ಹಾಡಿಕೊಳ್ಳುತ್ತೇನೆ ಇರಿ.

ಅಡಿ ಬರಹವಾಗಿ ಕೊಟ್ಟ ಪದ ಅರ್ಥಗಳು ನೆಚ್ಚಿಗೆಯಾದವು.

ಮೌನರಾಗ said...

ಒಳ್ಳೆಯ ಪ್ರಯತ್ನ ಚಿನ್ಮಯ್... ಚೆನ್ನಾಗಿದೆ...
ಮೊದಲ ಓದಿಗೆ ಶಬ್ದಾರ್ಥ ಗೊತ್ತಿಲ್ಲದೇ ಕೆಲವು ಸಾಲುಗಳು ಅರ್ಥವಾಗದೆ ಹೋದರೂ ... ನೀವು ಕೆಳಗಡೆ ಶಬ್ದಾರ್ಥ ತಿಳಿಸಿರುವುದರಿಂದ ಉಪಕಾರವಾಯಿತು...
ನೈಸ್...

ದಿನಕರ ಮೊಗೇರ said...

tumbaa chennaagide Chinmay...

shabdha artha aagadavarige koTTiddu help aaytu...

very nice..

ಚಿನ್ಮಯ ಭಟ್ said...

ಅಬ್ಬಾ....ಧನ್ಯವಾದಗಳು ಶ್ರೀ...
ರಾಜಕುಮಾರಿಯನ್ನು ಇಟ್ಟ ಕೋಟೆ ಈ ಬಾರಿ ಸ್ವಲ್ಪ ಜಾಸ್ತಿಯೇ ದಪ್ಪವಾಯಿತೇನೋ...
ಇರಲಿ ಅಂದದ ಅನಿಸಿಕೆ...

ವಂದನೆಗಳು..
ನಿಮ್ಮ ಪ್ರೋತ್ಸಾಹ ಹೀಗೇ ಇರಲಿ...

ಚಿನ್ಮಯ ಭಟ್ said...

ಬದರಿ ಸರ್...
ದೊಡ್ಡ ಮಾತು...
ನಿಮ್ಮ ಕಮೆಂಟ್ ನೋಡಿದ ಕೂಡಲೇ ಅದೇನೋ ಸಂತೋಷವಾಗುತ್ತದೆ...
ಬರುತ್ತಿರಿ...ಬೆನ್ನು ತಟ್ಟುತ್ತಿರಿ...ತಪ್ಪಿದ್ದಲ್ಲಿ ಕಿವಿ ಹಿಂಡಲೂ ಮರೆಯದಿರಿ..
ನಮಸ್ತೆ...

ಚಿನ್ಮಯ ಭಟ್ said...

ಧನ್ಯವಾದಗಳು ಸುಷ್ಮಾ...
ಈ ಪ್ರತಿಕ್ರಿಯೆಗಳೇ ನನಗೆ ಸ್ಪೂರ್ತಿ...
ನಿಮ್ಮೆಲ್ಲರ ಸಹಕಾರ ಸದಾ ಹೀಗೇ ಇರಲಿ..
ಬರುತ್ತಿರಿ..

Ittigecement said...

ತುಂಬಾ ಸೊಗಸಾದ ಸಾಲುಗಳು............

ಇಷ್ಟ ಆಯ್ತು ..........

ಸುಬ್ರಮಣ್ಯ said...

:-)

ಜಲನಯನ said...

ಚಿನ್ಮಯ ಬಹಳ ಚನ್ನಾಗಿದೆ ಕವನ... ಅದರಲ್ಲೂ ಅಪರೂಪದ ಪದಗಳ ಬಳಕೆ... ಖಂಡಿತಾ ಬೆನ್ನು ತಟ್ಟೋದು ನಮ್ಮ ಕೆಲ್ಸ,,,ಬರೆಯೋದು ನಿಮ್ಮ ಕೆಲ್ಸ...

ಚಿನ್ಮಯ ಭಟ್ said...

ಧನ್ಯವಾದಗಳು ದಿನಕರಣ್ಣಾ....
ನಿಮ್ಮ ಪ್ರೋತ್ಸಾಹ ಹೀಗೇ ಇರಲಿ..
ಖುಷಿ ಆಯ್ತು...ಬರುತ್ತಿರಿ..

ಚಿನ್ಮಯ ಭಟ್ said...

ಪ್ರಕಾಶಣ್ಣಾ,
ಧನ್ಯವಾದ ಬಂದಿದ್ದಕ್ಕೆ...
ಬರ್ತಾ ಇರಿ..
ನಮಸ್ತೆ...

ಚಿನ್ಮಯ ಭಟ್ said...

ಆಜಾದ್ ಸರ್...
ವಂದನೆಗಳು ನಿಮ್ಮ ಪ್ರೋತ್ಸಾಹಕ್ಕೆ...
ನಿಮ್ಮ ಪ್ರೋತ್ಸಾಹ ಹೀಗೇ ಇರಲಿ..
ತಪ್ಪುಗಳಿದ್ದಲ್ಲಿ ದಯವಿಟ್ಟು ತಿಳಿಸಿ...


ನಮಸ್ತೆ....

ಚಿನ್ಮಯ ಭಟ್ said...

:)

balasubramanya said...

ಪ್ರೇಮ ಪ್ರೀತಿಯ ಚಿತ್ತಾರ ಬಿಡಿಸಿದ ಪದಗಳು ನಿಮ್ಮ ಕವಿತೆಯಲ್ಲಿ ನಿಮ್ಮ ಭಾವನೆಯ ನಾಯಕತ್ವದಲ್ಲಿ ಮೆರವಣಿಗೆ ಹೊರಟಿವೆ. ಕವಿತೆ ಇಷ್ಟಾ ಆಯ್ತು. ಮತ್ತಷ್ಟು ಬರಲಿ ಇಂತಹ ಪದಗಳ ಮೆರವಣಿಗೆ.
ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]

Shruthi B S said...

ಬೆಂತರದ ಹುಡುಕಾಟ ಎದೆಸೆಲ್ಲೆಯಲ್ಲಿರಲು,
ಎಲ್ಲಿರುವೆಯೆಂದು ನೀ ಹೇಳವಲ್ಲೆ. ಈ ಸಾಲುಗಳು ಬಹಳ ಚನ್ನಾಗಿದ್ದು ಚಿನ್ಮಯ್.. ಹೀ೦ಗೆ ಬರೀತಾ ಇರು....:)

umesh desai said...

ಭಟ್ರ ಕವಿತಾ ಛಂದದ ಮೂಲ ಹಾಡು ಹೆಂಗದನೋ ಗೊತ್ತಿಲ್ಲ ನಿಮ್ಮ
ಪದ ಪ್ರಯೋಗ ಸೇರತು..

ಚಿನ್ಮಯ ಭಟ್ said...

ಬಾಲು ಸರ್..
ನಿಮ್ಮ ಪ್ರೋತ್ಸಾಹಕ್ಕೆ ನಾನು ಋಣಿ...
ಧನ್ಯವಾದಗಳು ನಿಮ್ಮ ಆಶೀರ್ವಾದಕ್ಕೆ...
ಖುಷಿಯಾಯ್ತು...
ಬರುತ್ತಿರಿ..
ನಮಸ್ತೆ..

ಚಿನ್ಮಯ ಭಟ್ said...

ಶೃತಿ,
ಧನ್ಯವಾದ ನಮ್ಮನೆಗೆ ಬಂದಿದ್ದಿಕ್ಕೆ...
ಬರ್ತಾ ಇರು..

ಚಿನ್ಮಯ ಭಟ್ said...

ಶರಣ್ರೀ ದೇಸಾಯಿಯವ್ರ...
ಸ್ವಾಗತ ನಮ್ಮನಿಗ...

ಬಾಳ ಖುಷಿ ಆತ್ರಿ ನಿಮ್ ಮಾತ್ ಕೇಳಿ..ಹಿಂಗ ಬರ್ತಾ ಇರ್ರಿ...ನಾ ಏನಾರ್ ತಪ್ ಮಾಡೀನಿ ಅಂತೇಳಿ ಅನಿಸಿದ್ರ ಜರೂರ್ ಹೇಳ್ರಿ...ತಿದ್ಕೋತಿನಿ....

ನಮಸ್ತೆ..

ಪುಷ್ಪರಾಜ್ ಚೌಟ said...

ಔಟ್-ಪುಟ್ ಚೆನ್ನಾಗಿ ಬಂದಿದೆ ಚಿನ್ಮಯ್. ಅನುಕರಣೆಯನ್ನು ನಾನು ಖಂಡಿತಾ ಬೆಂಬಲಿಸುವವನಲ್ಲ. ಆದರೂ ಮೂಲ ಹಾಡಿನ ತೆರದಿ ಮತ್ತೊಮ್ಮೆ ಪದಗಳನ್ನು ಜೋಡಿಸುವುದು ಬಲು ಕಷ್ಟ. ನಿಮ್ಮ ಪ್ರಯತ್ನ ಶ್ಲಾಘನೀಯ.
ಇನ್ನಷ್ಟು ಸ್ವಂತ ರಚನೆಗಳು ಭಾವಪೂರ್ಣವಾಗಿ ಬರಲಿ.

ಚಿನ್ಮಯ ಭಟ್ said...

ಪುಷ್ಪರಾಜ ಚೌಟರೇ..
ಧನ್ಯವಾದ ನಿಮ್ಮ ಅನಿಸಿಕೆಗಾಗಿ..
ಖಂಡಿತ ಈ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತೇನೆ..

ಬರುತ್ತಿರಿ..
ನಮಸ್ತೆ...

Imran said...

hII Chinmay :)
"kidigedi kanasonda kattirlaa?"
saalanna yadva-tadva serioussaagi tagondu, naa rachisida "So Called Kavana"
but naanu ade dhaatiyalli bareyade 1 extra Maatre serisi barede :P :D
Arpisikobeku :)

ಕನಸಲ್ಲಿ ನನ್ನೆದುರು ನೀ ಬಂದು ನಿಂತಾಗ
ನಮ್ಮೆದೆಯ ನಡುವಿದ್ದ ಆ "ಗ್ಯಾಪು" ತರವೇ..?
ಅಧರಗಳ ಮುದ್ರಿಕೆಗೆ ಚಡಪಡಿಸಿ ಕಾದಿದ್ದ
ನನಗಾಗಿ ನೀನಿತ್ತ ಆ ಮುತ್ತು ವರವೇ...?
ಮಗದೊಮ್ಮೆ ಕಿವಿಯಾಗು ನೀನಿತ್ತ ಮುತ್ತಿನಲಿ
ಹೊಸದಾಗಿ ಹುಟ್ಟಿದ್ದು ಎಂಟನೆಯ ಸ್ವರವೇ...?!
.
ಮೊಗದಲ್ಲಿ ಮೂಡಿದ್ದ ಹನಿಯೊಂದು ನೀಡಿತ್ತೇ
ಮದನನಿಗೆ ಪ್ರೀತಿಯಾ ಆಹ್ವಾನ...?
ನಗೆಚಲ್ಲಿ ಹೀಗೇಕೆ ಓಡುವೆ ನೀನಿಂದು,
ಬೇಕಿತ್ತೆ ಸ್ವಪ್ನದಲೂ ಬಿನ್ನಾಣ...?
.
ಇನ್ನೆಷ್ಟು ಕಾಯುವುದು ಬಳಿ ನೀನು ಬರಲು..?
ಬೀಳ್ಬಾರ್ದೇ ನಿನ್ಮೇಲೆ ರತಿದೇವಿ ನೆರಳು...?
.
ಮೈನೆರೆದ ಸಾಲುಗಳು ಎಲ್ಲೆಯನು ಮೀರಿರಲು
ನಾಚಿಕೆಯು ನನ್ನಲಿ ಮೊಳೆದಿತ್ತು.
ಈ ನನ್ನ ನಾಚಿಕೆಯ ಪ್ರತಿನಿಧಿಸಲೆಂದೇ
"ತೆರೆ" ಮೇಲೆ ಹೂವೆರೆಡು ಮೂಡಿತ್ತು..!

ಚಿನ್ಮಯ ಭಟ್ said...

ಯಪ್ಪಾ ರಾಘವರೇ...
"ಮಾತಿಲ್ಲ ಕಥೆಯಿಲ್ಲ ಬರಿ ರೋಮಾಂಚನ"..
ನಾನಂತೂ ನಿಮ್ಮ ಗಾಳಿಪಂಕವಾದೆ(ಪ್ಯಾನು!!!)...
ಬರುತ್ತಿರಿ..
ನನ್ನ ಈ ಪುಟ್ಟಪುಟವನ್ನು ನಿಮ್ಮ ಅತಿಸುಂದರ ಅನಿಸಿಕೆಗಳಿಂದ ಶ್ರೀಮಂತಗೊಳಿಸುತ್ತಿರಿ...
ನಮಸ್ಕಾರ ...
ನಮಸ್ಕಾರ...