"ಬದುಕಿಗೆ ನಿಯಮಗಳು-ಕಟ್ಟುಪಾಡುಗಳು ಬೇಕು ,ಆದರೆ ಅದೇ ಬದುಕಾದರೆ??" ವಯಸ್ಸಿಗೆ ಮೀರಿದ ಆಲೋಚನೆ ಅಂತೀರಾ???ಹಾ ಹಾ....ಪ್ರೇಮ ಪ್ರೀತಿ ಬಿಟ್ಟು ಒಂದ್ಸ್ವಲ್ಪ ಏನೋ ವಿಚಾರ ಅದು ಇದು ಅಂತಾ ಬರ್ಯಕ್ ಹೊರ್ಟ್ನಾ???ಛೇ ಗೊತ್ತಿಲ್ಲಪ್ಪಾ...ಸರಿ ವಿಷ್ಯಕ್ ಬರ್ತೀನಿ..
ಈಗೊಂದು ತಿಂಗಳ ಹಿಂದೆ ಡಾ.ಲಕ್ಷ್ಮಿನಾರಾಯಣ ಭಟ್ಟರ "ಕಾವ್ಯ ಪ್ರತಿಮೆ" ಎಂಬ ಪುಸ್ತಕವನ್ನು ತಂದು ೪-೫ ಪುಟ ಓದಿದ್ದೆ...
ಪ್ರತಿಮೆಗಳು ಎಂದರೇನು ಎಂಬುದು ಚೂರ್ ಚೂರು ಅರ್ಥವಾಗಿ ಅದನ್ನು ಬಳಸಬೇಕು ಎಂಬುದು ತಲೆಗೆ ಹೊಕ್ಕಿತ್ತು...
ಇದೀಗ ಸುಮಾರು ದಿನದಿಂದ ತಲೆಯಲ್ಲಿ ಕೊರೆಯುತ್ತಿದ್ದ ಹುಳವೊಂದನ್ನು ನಿಮ್ಮೆದುರಿಟ್ಟಿದ್ದೇನೆ...ವಸ್ತು ನಾನೇ...ಇನ್ನೇನಿಲ್ಲ..ಮನಸ್ಸು ..ಅದರಲ್ಲಿನ ಬದಲಾವಣೆಗಳು...
ಒಮ್ಮೆ ಓದಿ...ಜೊತೆಗೆ ಕವನದ ಕೆಳಗೆ ಬರಹದ ಆಶಯವನ್ನೂ ಕೊಟ್ಟಿದ್ದೇನೆ ಅದನ್ನೂ ನೋಡಿ ಕವನ ಬೇಗ ಅರ್ಥವಾಗಬಹುದು..
ಬೇಲಿಯಾ ಮುಳ್ಳುಗಳು
ತಟ್ಟುತಿವೆ ಬಾಗಿಲಿಗೆ
ಹೇಡಿಗೆಯ ಗಡಿ ದಾಟಿ
ನಡೆಯುತಿವೆ ಜಗಲಿಗೆ
ಬಡವನೀ ಬಿಡಾರದೀ
ಜೊತೆಗಿದ್ದ ಕಪಿಯೊಂದು,
ತುಂಡುಗುಪ್ಪಣ ಹಾಕಿ
ಕುಣಿದಿತ್ತು ಊರ್ಮೇಲೆ.
ಲಿಗಾಡಿ ಜಾತಿಯದು
ನಿಂತಲ್ಲಿ ನಿಲದೆಂದು,
ನೆಡಿಸಿದೆ ಮುಳ್ಳುಗಳ
ಅಂಗಳದ ತುದಿಯಲ್ಲೇ.
ನಡುವೆತ್ತರ ಬೆಳೆಯಿತದು
ಗೊಬ್ಬರವ ಬೇಡದೇ,
ಹಾಡಿಕುಣಿಯಿತು ಮಂಗ
ಒಬ್ಬನೇ ಅದರೊಳಗೆ,
ನೋಡಿದಾ ಕಣ್ಣುಗಳು
ಅದ್ಭುತವು ಎಂದೆನಲು,
ಮೂಡಿತು ಕೋಡೊಂದು
ತಿಳಿಯದೇ ಒಳಗೊಳಗೆ.
ಗಡಿಸರಿಗೆ ಇಂದೀಗ
ಅಂಗಳಕು ಹರಡಿದೆ,
ಜಡಿತಟ್ಟಿ ನಡುಮುರಿದು
ಮನೆಕೋಳು ಹಿಡಿದಿದೆ.
ಬಡಪಾಯಿ ಮರ್ಕಟಕೆ
ಉಸಿರೊಂದೆ ಉಳಿದಿದೆ.
ನಡೆನಡೆಗು ತಡೆಯಿರಲು
ಕುಣಿಜೀವ ಸೊರಗಿದೆ,
ನಡೆನಡೆಗು ತಡೆಯಿರಲು
ಕುಣಿಜೀವ ಸೊರಗಿದೆ.
ಬೇಲಿಯಾ ಮುಳ್ಳುಗಳು
ತಟ್ಟುತಿವೆ ಬಾಗಿಲಿಗೆ,
ಹೇಡಿಗೆಯ ಗಡಿ ದಾಟಿ
ನಡೆಯುತಿವೆ ಜಗುಲಿಗೆ!!!!
-ಚಿನ್ಮಯ :)
ಶಬ್ಧಾರ್ಥ:
ಹೇಡಿಗೆ=ಮನೆಯ ಮುಂದಿನ ಕಟ್ಟೆ(ಮೆಟ್ಟಿಲುಗಳ ಪಕ್ಕ ಉದ್ದಕೆ ಏನೋ ಇರತ್ತಪಾ ಅದಕ್ಕೆ ಹಂಗನ್ನದು ನಮ್ ಕಡೆ),
ಜಗಲಿ=ಜಗುಲಿ,ಇಂದಿನ "ಹಾಲ್",
ತುಂಡುಗುಪ್ಪಣ=ಲಗಾಮಿಲ್ಲದ ಕುಣಿತ(ನಮ್ಮನೆ ಕಡೆ ಈ ರೀತಿಯ ಅರ್ಥದಲ್ಲಿ ಬಳಸುತ್ತಾರೆ,ಬಹುಷಃ ಯಕ್ಷಗಾನದಲ್ಲಿ ಮಂಡಿಯೂರಿ ಕುಣಿಯುವ ನೃತ್ಯದ ಬಗೆಗೂ ಇದೇ ಹೆಸರಿದೆ ಎನ್ನುವುದು ನನ್ನ ಭಾವನೆ),
ಊರ್ಮೇಲೆ=ಊರಿನ ಮೇಲೆ,ಊರಿನ ತುಂಬೆಲ್ಲಾ..
ಲಿಗಾಡಿ=ಹೋಳಿ,ಕಿಲಾಡಿ..
ನಡುವೆತ್ತರ=ಸೊಂಟದಷ್ಟು ಎತ್ತರ.
ಕೋಡು ಮೂಡುವುದು=ಹೆಮ್ಮೆ ,ಒಂಥರ ಅಹಂಕಾರವೂ ಇರಬಹುದು...
ಗಡಿಸರಿಗೆ=ಸರಿಗೆ ಎಂದರೆ ಕಬ್ಬಿಣದ ತಂತಿ..ಗಡಿಸರಿಗೆ ಅಂದರೆ ಗಡಿಯನ್ನು ಗುರುತಿಸುವ ತಂತಿ ಎನ್ನುವ ಅರ್ಥದಲ್ಲಿ..
ಜಡಿತಟ್ಟಿ=ಮಳೆಯಿಂದ ಮನೆಯನ್ನು ರಕ್ಷಿಸಲು ಮನೆಯ ಸುತ್ತ ಕಟ್ಟುತ್ತಿದ್ದ ಸೋಗೆಯ ಮುಚ್ಚಿಗೆ...
ಮನೆಕೋಳು=ಮನೆಯ ಮೇಲ್ಭಾಗದ ಅಂಚು..ಮನೆಕೋಳು ಅಂದರೆ ಅಧಿಕಾರದ ಪ್ರತೀಕವಾಗಿ ಇಲ್ಲಿ..
ಮರ್ಕಟ=ಮಂಗ :) (ನಾನು ಒಂದೊಂದ್ ಸಲಾ :)P )
ಅದು "ಹೊಸದನ್ನೇನೋ ಸೃಷ್ಟಿಸಲು ಹೋಗುವೆ" ಎನ್ನುವುದಿರಬಹುದು ಅಥವಾ "ಎಲ್ಲರಂತೇ ನೀನೂ ಇರು,ನಿನಗೇಕೆ ಇಲ್ಲದ ಉಸಾಬರಿ" ಎನ್ನುವುದಿರಬಹುದು..
ಈ "ಶಿಸ್ತು ಹಾಗೂ ಸೃಜಶೀಲತೆಯ ನಡುವಿನ ತಿಕ್ಕಾಟ" ,ಕೊನೆಗೆ ಒಂದು ದಿನ ನಿಯಮಗಳೇ ಜಾಸ್ತಿಯಾಗಿ ಆ ಮಂಗಾಟಗಳಿಗೆ .ಹೊಸ ಆಲೋಚನೆಗಳಿಗೆ ಆಸ್ಪದವೇ ಇರದಂತಾದ ಸ್ಥಿತಿಯೇ ನನ್ನ ಈ ಕವನದ ವಸ್ತು..
ಇಲ್ಲಿ ಹೊಸ ಹೊಸ ಆಲೋಚನೆಗಳ ಪ್ರತೀಕವಾಗಿ "ಮಂಗ"ವಿದ್ದರೆ,ಶಿಸ್ತು-ನಿಯಮಗಳನ್ನು ಬಿಂಬಿಸಲು "ಮುಳ್ಳು ಬೇಲಿ"ಯನ್ನು ಬಳಸಿದ್ದೇನೆ...ಇಲ್ಲಿಯ ಮನೆ ,ನನ್ನ ಮನಸ್ಸು...)
ತಪ್ಪು-ಒಪ್ಪನ್ನು ಕಮೆಂಟಿನ ಮೂಲಕ ತಿಳಿಸಿ ಎಂದಿನಂತೆ ಈ ಹುಡುಗನ್ನಾ ಪ್ರೋತ್ಸಾಹಿಸ್ತೀರಾ ಅಲ್ವಾ???
ನಮಸ್ತೆ :)
41 comments:
Tumbaa chennaagide... kaviteya aashaya mana muttuttade.....
ತುಂಬಾ ಇಷ್ಟವಾಯ್ತು ಗೆಳೆಯ.
"ಕಾವ್ಯ ಪ್ರತಿಮೆ"ಯಂತಹ ಒಳ್ಳೆಯ ಪುಸ್ತಕವನ್ನು ನೆನಪಿಸಿದಕ್ಕಾಗಿ ಧನ್ಯವಾದಗಳು.
ಮುಖ್ಯವಾಗಿ ನನಗೆ ಮನಸೆಳೆದಿದ್ದು ಈ ಕವನದ ಶೀರ್ಷಿಕೆ.
ಕಾಯ್ದುಕೊಂಡ ಲಯ ಮತ್ತು ಉತ್ತಮ ಭಾವ ಸಂಚಯ ಅನೂಹ್ಯವಾಗಿವೆ.
ದಿನಕರಣ್ಣಾ,
ಖಂಡಿತವಾಗಿಯೂ ಈ ವಿಚಾರ ತುಂಬಾ ದಿನದಿಂದ ಕೊರಿತಾ ಇತ್ತು...
ಬರೆಯುವುದು ಹೆಂಗೆ ಅಂತಾ ಗೊತ್ತಿರ್ಲಿಲ್ಲ...
ಆ ಪುಸ್ತಕ ಓದಿದ ಮೇಲೆ ನೇರವಾಗಿ ಬರ್ಯೋದಕ್ಕಿಂತಾ ಬೇರೆ ಥರಾ ಬರ್ಯಣಾ ಅನಿಸ್ತು...
ಮತ್ತೆ ಈ ರೀತಿಯ ಬರಹಕ್ಕೆ ನಂಗೆ ಪ್ರೋತ್ಸಾಹ ಕೊಟ್ಟಿದ್ದು ಒಂದಿಷ್ಟು ಭಾವಗೀತೆಗಳು..
"ಬೇಸರದ ಬಯಲಿನಲಿ ಬೋಳು ಮರ ಕರೆಯುತಿದೆ"..
"ಬಯಲಿನೊಳಗೆ ಯಾರೋ ಮರೆದ ಶೃತಿ ಮಾಡಿದ ವೀಣೆಯ"
ಆಹಾ ಎಂಥಹ ಹಾಡುಗಳವು...
ಏನೋ ಒಂದು ಪ್ರಯತ್ನ...
ಹರಸಿದ್ದಕ್ಕಾಗಿ ವಂದನೆಗಳು :) :)
ಪ್ರತಿಮೆಯೂ, ಆಶಯವೂ ಚೆನ್ನಿದೆ ಚಿನ್ಮಯ್... ನಿಮಗೆ ಗೊತ್ತಾ, ನಿನ್ನೆಯಷ್ಟೇ ನಾನು ನನ್ನ ಗೆಳತಿಯ ಜೊತೆ ಈ ಚೌಕಟ್ಟು ಅನ್ನೋದು ಎಲ್ಲಕಾಲಕ್ಕೂ ಇರ್ಬೇಕು, ಆದ್ರೆ ಅಜ್ಜ ನೆಟ್ಟ ಗೋಳಿಮರಕ್ಕೆ ಸೀಮಿತ ಆಗದೆ ಪ್ರಸ್ತುತಕ್ಕೆ ತಕ್ಕಂತೆ ಅದರ ಸ್ವರೂಪ ಮತ್ತೆ ಪರಿಧಿಯ ಉದ್ದಳತೆ ಬದಲಾಗಬೇಕು ಅನ್ನೋದರ ಬಗ್ಗೆ ಒಂದು ಗಂಟೆ ಮಾತಾಡಿದ್ದೆ... ಇವತ್ತು ಅದೇ ತರದ ಅನಿಸಿಕೆ ನಿಮ್ಮಬರಹದಲ್ಲಿ ನೋಡಿ ಖುಷಿಯಾಯಿತು...
ಇಷ್ಟವಾಯಿತು...
ಸಿಂಪಲ್ ಆಗಿ ತುಂಬಾ ಚನಾಗಿದೆ ಭಟ್ರೆ,
ಆದರೂ ನೀವು ಈ ಕವನದಲ್ಲಿ ನಿಮ್ಮ ಕಲ್ಪನೆಗು ಗಡಿಸರಿಗೆ ಇದ್ದ ಹಾಗೆ ಅನ್ನಿಸಿತು,
ಇನ್ನೊಂದು ಸ್ವಲ್ಪ ಉತ್ಪ್ರೇಕ್ಷೆ ಕೊಡಬಹುದಿತ್ತೇನೋ.ಇನ್ನೊಂದ ಸ್ವಲ್ಪ ಕಲ್ಪನೆ ಇದ್ದಿದ್ದರೆ
ಮಾಡಿದ ಅಡಿಗೆಗೆ ಮಸಾಲೆ ಚೂರು ಜಾಸ್ತಿ ಇದ್ದರೆ ಅದರ ನಿಷೆ ಚನ್ನಾಗಿರುತ್ತೆ ಅಂತ ಅಟ್ಷೆ ಇನ್ನೇನಿಲ್ಲ
totally ಸೂ......ಪರ್
ಕವನದ ಆಶಯ ತುಂಬಾ ಚೆನ್ನಾಗಿದೆ. ಶೀರ್ಷಿಕೆ ಸೂಕ್ತವಾಗಿದೆ.
soopper brother.........
ಕವನ ಬಹಳ ಚನ್ನಾಗಿದೆ ಚಿನ್ಮಯ್... ನನಗ೦ತೂ ಕವನ ಹಾಗೂ ಆಶಯ ಎರಡೂ ತು೦ಬಾನೆ ಇಷ್ಟ ಆತು.. ನಮ್ಮ ಆಲೋಚನೆಗಳು ಹಾಗೂ ಕಟ್ಟುಪಾಡುಗಳ ನಡುವಿನ ತಿಕ್ಕಾಟ ಬಹುಶಃ ಎಲ್ಲರಲ್ಲೂ ಇದೆ... ಆದರೆ ಆ ತಿಕ್ಕಾಟದಲ್ಲಿ ಗೆಲುವು ಯಾರದ್ದು ಆಗುತ್ತೆ ಅನ್ನೋದು ಮುಖ್ಯ... ಅದೇನೋ ಹೆಚ್ಚಿನ ಸ೦ದರ್ಭಗಳಲ್ಲಿ ಕಟ್ಟುಪಾಡುಗಳೇ ಗೆದ್ದುಬಿಡುತ್ತದೆ.... ನಾನ೦ತೂ ಮರ್ಕಟ ಮನಸ್ಸಿನ ಆಲೋಚನೆಗಳನ್ನೇ ಗೆಲ್ಲಿಸುವ ಪ್ರಯತ್ನದಲ್ಲಿದ್ದೀನಿ... ಜೊತೆಗೆ ಸ್ವಲ್ಪ ಮಟ್ಟಿಗೆ ಕಟ್ಟುಪಾಡುಗಳೂ ಇರಬೇಕು...ನಾವೂ ಪೂರ್ಣವಾಗಿ ಮರ್ಕಟವಾಗಬಾರದಲ್ಲ....:p
ಬದರಿ ಸರ್,
ಧನ್ಯವಾದಗಳು ...
ನನ್ನ ಸಾಹಿತ್ಯದ ಅಧ್ಯಯನ ೧೦ನೇ ತರಗತಿಗೆ ಮುಗಿದಿದೆ ಅನ್ಸತ್ತೆ....
ಪುಸ್ತಕದ ಅಂಗಡಿಗೆ ಹೋದಾಗ ಸುಮ್ಮನೆ ಎತ್ತಿಕೊಂಡು ಬಂದದ್ದದು...ನೋಡಿದರೆ ಅದ್ಭುತವಾಗಿದೆ...ಸ್ವಲ್ಪ ಸ್ವಲ್ಪವೇ ಓದುತ್ತಾ ಇದ್ದೇನೆ...
ಧನ್ಯವಾದಗಳು ನಿಮ್ಮ ಪ್ರೋತ್ಸಾಹಕ್ಕಾಗಿ...
ನಮಸ್ತೆ ...
ಅನು ಮೇಡಮ್...
ಖಂಡಿತವಾಗಿಯೂ ನಿಮ್ಮ ನಿಲುವು ನಿಜವೆನಿಸುತ್ತದೆ...
ಕಾಲಕ್ಕೆ ತಕ್ಕಂತೆ ಎಲ್ಲರೂ ಬದಲಾಗಲೇ ಬೇಕು...
ನಿಯಮಗಳೂ ಸಹ...
ಹಮ್...ಧನ್ಯವಾದ ನಿಮ್ಮ ಚಂದದ ಅನಿಸಿಕೆಗಾಗಿ..
ಬರ್ತಾ ಇರಿ..
ನಮಸ್ತೆ :)
ಹಾಯ್ ಚಿನ್ಮಯ್,
ಪ್ರಬುದ್ಧ ಕವನ....
ಲಯಬದ್ಧವಾದ ಸಾಲುಗಳು, ಬಲವಂತ ಎನಿಸದ ಪ್ರಾಸ, ಎಂದಿನಂತೆ ನಿಮ್ಮ ಹೊಸ ಹೊಸ ಪದಗಳ ಬಳಕೆ, ಕವಿತೆಯ ಸುಂದರ ಆಶಯ, ಯಾವಗಲೂ ಏನಾದರೂ ಹೊಸತನ್ನು ತರಬೇಕೆಂಬ ನಿಮ್ಮ ಹುಮ್ಮಸ್ಸು ಎಲ್ಲವೂ ಇಷ್ಟ ಆಯಿತು ...ನಿಮ್ಮಿಂದ ನಾವು ಕಲಿಯಬೇಕಾಗಿರೋದು ಬಹಳಷ್ಟು ಇದೆ ಚಿನ್ಮಯ್ ..ಒಂದು ಸುಂದರ ಕವನಕ್ಕೆ ಅಭಿನಂದನೆಗಳು ......
ವಂದನೆಗಳು ಶ್ರೀವತ್ಸಜೀ :)...
ಪ್ರಥ್ವಿರಾಜ ಮಹಾರಾಜರೇ,
ಧನ್ಯವಾದ ಕಣ್ರೀ ಎಂದಿನಂತೆ ನಿಮ್ಮ ಆತ್ಮೀಯವಾದ ಪ್ರತಿಕ್ರಿಯೆಗೆ...
ಹಮ್...ನೀವು ಹೇಳಿದ್ದೂ ನಿಜ ಒಂದು ಥರಕ್ಕೆ...ಇನ್ನಷ್ಟು ಕಲ್ಪನೆಗಳಿದ್ದರೆ ಚೆನ್ನವಿತ್ತೇನೋ..
ಆದರೆ ನನ್ನ ವಿಚಾರ ಏನಿತ್ತು ಅಂದ್ರೆ ಮನಸ್ಸಿನ ತೊಳಲಾಟವನ್ನು ಆ ಮನೆ-ಬೇಲಿ-ಮಂಗ ಇವುಗಳ ಮಧ್ಯೆಯೇ ಹೇಳಬೇಕು ಅಂತಾ..ಇಷ್ಟೇ ವಸ್ತುಗಳನ್ನಿಟ್ಟುಕೊಂಡು ಒಂದು ದಿನ ಅಡುಗೆ ಮಾಡುವಾ ಅಂತಾ ಹೊರ್ಟಿದ್ದು...ಹಂಗಾಗಿ ಒಂದು ಪ್ರಯತ್ನ..ಮಸಾಲೆ ಕಥೆ ಬಿಡಿ,ಉಪ್ಪು ಸರ್ಯಾಗಿದೆ ತಾನೇ????
ಅಷ್ಟಾದ್ರೆ ಸಾಕಪಾ :)...
ತುಂಬಾ ಖುಷಿಯಾಯ್ತು ಪ್ರಥ್ವಿ :)...
ಇದೇ ಥರ ನಿಮಗನಿಸಿದ್ದನ್ನು ಹೇಳಿ ನನ್ನನ್ನು ತಿದ್ದುತ್ತಾ ಇರಿ...
ಹಾಂ ..ಇನ್ನೊಂದು ದಿನ ಮಸಾಲೆ ಹಾಕಿದ್ದ ವಿಷಯ ಸಿಕ್ಕಾಗ ಹೇಳ್ತೀನಿ, ಬರೋಕೆ ಮರಿಬೇಡಿ!!!!
ನಮಸ್ತೆ :)
ಸುಗುಣಾ ಮೇಡಮ್,
ಸ್ವಾಗತ ಮತ್ತೊಮ್ಮೆ ನಮ್ಮನೆಗೆ...
ಧನ್ಯವಾದ ನಿಮ್ಮ ಪ್ರೀತಿಪೂರ್ವಕ ಪ್ರೋತ್ಸಾಹಕ್ಕೆ...
ಬರ್ತಾ ಇರಿ..
ನಮಸ್ತೆ :)
ಸಮನ್ವಯಕ್ಕಾ ಧನ್ಯವಾದನೇ :)
ಮನದ ಹಾಡು ತುಂಬಾ ಚೆನ್ನಾಗಿದೆ ..... ಎಷ್ಟೋ ಸಲ ನಾವು ಹಾಕಿಕೊಂಡ ಬೇಲಿಯೇ ಅಸಹನೀಯ ಅನ್ನಿಸದೇ ಇರಲಾರದು .... ಚೌಕಟ್ಟು ,ಕಟ್ಟುಪಾಡುಗಳ ಎಳೆಯನ್ನು ಮನಸ್ಸಿಗೆ ತಟ್ಟೋ ತರ ಬಿಂಬಿಸಿದ್ದೀರ ...
ಅಂತೂ ನೀವೂ ಮಂಗ (ಒಮ್ಮೊಮ್ಮೆ ) ಅನ್ನೋದನ್ನ ಎಲ್ಲರೆದುರು ಒಪ್ಪಿಕೊಂಡಿದೀರಿ ;);)
ಎಂದಿನಂತೆ ಪ್ರೌಢ ಬರಹ ... ಮುಂದುವರೆಯಲಿ ...
ಧನ್ಯವಾದ .
ಮತ್ತೊಂದು ಒಳ್ಳೆಯ ಕವನ ಚಿನ್ಮಯ್.
ಲಯ, ಪ್ರಾಸ ಮತ್ತು ಕವನದ ಆಶಯ ಎಲ್ಲವೂ ಆಕರ್ಷಕ.
ಏನೇ ಹೇಳಿ ನಿಮ್ ಕವನ ಯಾವತ್ತಿಗೂ ವಿಶಿಷ್ಟವಾಗಿ ಕಾಣೋದಕ್ಕೆ ಕಾರಣ ನಿಮ್ಮ ಶೈಲಿ. ಮತ್ತದನ್ನ ನೀವು ನಿಮ್ಮ ಭಾಷೆ ಬಿಟ್ಟು ಕೊಡದೆ ಬರೆದು ಕೂಡ ಎಲ್ಲರ ಮನಸ್ಸು ತಲುಪಿಸುವ ರೀತಿ. ಇಷ್ಟವಾಯ್ತು ಚಿನ್ಮಯ್.
Hi Chinmay,
Kavana tumbaa chennaagide, aashaya ishtavaagide! Managa manasina kapi cheshtegalu, ee saalugalu tumbaa ishtavaadavu:
ನಡುವೆತ್ತರ ಬೆಳೆಯಿತದು ಗೊಬ್ಬರವ ಬೇಡದೇ,
ಹಾಡಿಕುಣಿಯಿತು ಮಂಗ ಒಬ್ಬನೇ ಅದರೊಳಗೆ,
ನೋಡಿದಾ ಕಣ್ಣುಗಳು ಅದ್ಭುತವು ಎಂದೆನಲು,
ಮೂಡಿತು ಕೋಡೊಂದು ತಿಳಿಯದೇ ಒಳಗೊಳಗೆ.
Roopa
ಕೊಂಬೆಯ ಮೇಲಿನ ಮರ್ಕಟನಂತೆ ಲಂಘಿಸೂದೆನ್ನ ಮನವು,
ನಿಂದಲ್ಲಿ ನಿಲಲೀಯದೆನ್ನ ಮನವು,
ಹೊಂದಿದಲ್ಲಿ ಹೊಂದಲೀಯದೆನ್ನ ಮನವು...
ಹಿಂಗೆ ಆಗಿದೆ ನಿಮ್ಮ ಮನಸ್ಸು.. ಕವಿತೆ ಚೆಂದ ಇದೆ..ಒಳ ಅರ್ಥ ಬಹಳ ಇದೆ.. ಇನ್ನು ಬರೆಯಿರಿ...
ಎರ್ರಾಬಿರ್ರಿ ಜಿಗಿಯುವ ಮನಸ್ಸೆಂಬ ಮರ್ಕಟವ ಹಿಡಿಯುವ ಪ್ರಯತ್ನ ಚೆನ್ನಾಗಿದೆ ಬರೆಯುತ್ತಿರಿ.
ಶೃತಿ,
ನಿಜವಾದ ಮಾತಿದು..ಪ್ರತಿ ಕೆಲಸಕ್ಕೂ ಈ ಎರಡು ವಿಚಾರಗಳು ಬಂದೇ ಬರುತ್ತವೆ...
ಅವುಗಳ ಸಮತೋಲನವನ್ನು ಕಾಯ್ದುಕೊಳ್ಳುವುದೇ ಕಷ್ಟ...
ಹಾಂ ಕಟ್ಟುಪಾಡುಗಳಂತೂ ಬೇಕೇ ಬೇಕು..ಖಂಡಿತ ಇಲ್ಲದಿದ್ದರೆ ಮನುಷ್ಯ ಪ್ರಾಣಿ ಮಾನವನೆನಿಕೊಳ್ಳಲಾರೆನೇನೋ....ಆದರೆ ಮಿತಿಯಲ್ಲಿದರೆ ಒಳ್ಳೆಯದು ಅಷ್ಟೇ...
ಧನ್ಯವಾದನೇ ಸಖತ್ ಸುಂದರವಾದ ಪ್ರತಿಕ್ರಿಯೆಗಾಗಿ...
ಖುಷಿ ಆತು...
ಬರ್ತಾ ಇರು :)...
ನಮಸ್ತೆ :)
ಅಶೋಕ್ ಸರ್,
ಧನ್ಯವಾದಗಳು ಸಾರ್ ನಿಮ್ಮ ಪ್ರೀತಿಭರಿತ ಪ್ರೋತ್ಸಾಹಕ್ಕೆ...
ಭಾಳ ಖುಷಿಯಾಯ್ತು..
ಬರ್ತಾ ಇರಿ ಸಮಯ ಸಿಕ್ಕಾಗೆಲ್ಲಾ...
ನಮಸ್ತೆ :)
ಭಾಗ್ಯಾ ,
ಅದೆಷ್ಟು ಚೆಂದದ ಕಮೆಂಟು ಮಾರಾಯ್ತಿ :) :)...
ನಾನು ಮಂಗನೇ ಒಂಥರಾ :)P ..ಒಂದೊಂದ್ ಸಲಾ ಒಂದೊಂದ್ ಥರಾ,ಹಾ ಹಾ!!!!...
ಧನ್ಯವಾದನೇ ..
ಬರ್ತಾ ಇರು :)..
ಸತೀಶ್,
ಧನ್ಯವಾದ ಸುಂದರವಾದ ಅನಿಸಿಕೆಗೆ ...
ನಿಮ್ಮ ಪ್ರೋತ್ಸಾಹ ಸದಾ ಇದೇ ಥರ ಮುಂದುವರೆಯಲಿ...ನನ್ನ ಕೈಲಾದ ಪ್ರಯತ್ನ ಮಾಡ್ತಾ ಇರ್ತಿನಿ ಅಷ್ಟೇ :)
ನಮಸ್ತೆ :)
ರೂಪಾ ಮೇಡಮ್.
ಧನ್ಯವಾದಗಳು ನಿಮ್ಮ ಅನಿಸಿಕೆಗಾಗಿ...
ಹಮ್...ಆ ಸಾಲುಗಳಲ್ಲಿ ಮೊದಲು ಬೇರೆ ಎರಡು ಅದೇ ಥರ ಅರ್ಥಬರುವ ಸಾಲುಗಳಿದ್ದವು... ಆಮೇಲೆ ಈ ಸಾಲುಗಳು ಕ್ಲಾಸಿನಲ್ಲಿ ಪಾಠ ಕೇಳುವಾಗ ಮೂಡಿದ್ದು :)P..
ಅದ್ನೇ ಬರ್ದೆ ಅಷ್ಟೇ...
ವಂದನೆಗಳು...
ಬರ್ತಾ ಇರಿ..
ನಮಸ್ತೆ :)
ಗಿರೀಶ್,
ವಾವ್..ಆಶವನ್ನೇ ಮೂರು ಸುಂದರ ಸಾಲುಗಳಲ್ಲಿ ಬರೆದುಬಿಟ್ಟಿರಲ್ಲಾ..
ಧನ್ಯವಾದ :)..
ಹಮ್..ನನ್ನ ಮನಸ್ಥಿತಿ ನಿಮಗೆ ಚೆನ್ನಾಗೇ ಅರ್ಥಾ ಆಯ್ತು ಅಂದ್ಕೋಂಡಿದೀನಿ...ಮುಂದೇನು ಹೇಳಕ್ ಹೊಳಿತಾ ಇಲ್ಲಾ...
ಧನ್ಯವಾದ ಮತ್ತೊಮ್ಮೆ..
ಬರ್ತಾ ಇರಿ ...
ನಮಸ್ತೆ :)
ವೀಣಾ ಭಟ್,
ಸ್ವಾಗತ ನಮ್ಮನೆಗೆ :)..
ಖಂಡಿತ ಮನಸ್ಸು ಒಂದು ಮರ್ಕಟವೇ..
ಅದರ ಬಗ್ಗೆ ಬರೆಯುವ ಒಂದು ಹುಚ್ಚು ಪ್ರಯತ್ನ :)D..
ಧನ್ಯವಾದ..
ಮುಂದೆ ಕೂಡಾ ಬರ್ತಾ ಇರಿ...ಸಲಹೆಗಳನ್ನಾ ಕೊಟ್ಟು ನನ್ನನ್ನಾ ತಿದ್ದಿ ಬೆಳೆಸಿ...
ನಮಸ್ತೆ :)
ಭಾವಗೀತೆಯ ರೂಪದಲ್ಲಿದೆ ಕವನ, ಒಳ್ಳೆಯ tune ಹಾಕಿ ಹಾಡಬಹುದು
ದೀಪಸ್ಮಿತಾ,
ಸ್ವಾಗತ ನಮ್ಮನೆಗೆ :)...
ಪ್ರಯತ್ನ ಮಾಡುವುದಿದ್ದರೆ ದಯವಿಟ್ಟು ಮಾಡಿ ನಂಗೂ ಖುಷಿ ಆಗತ್ತೆ,ಇದಕ್ಕೊಂದು ದನಿ ಬಂದರೆ :)...
ಧನ್ಯವಾದಗಳು...
ನಮಸ್ತೆ :)
ಚಿನ್ಮಯ,
ನಿಮ್ಮ ಈ ಕವನವನ್ನು ಹಾಗು ಇದರ ಮೊದಲಿನ ಕೆಲವು ಕವನಗಳನ್ನು ಓದಿ ಖುಶಿಯಾಯಿತು. ಮನಸ್ಸು ಮಂಗನಾಗಿದ್ದರೇ ಕವನ ಬರೆಯಲು ಸಾಧ್ಯ! ಆದುದರಿಂದ ಹೆಚ್ಚಿಗೆ ನಿರ್ಬಂಧ ಹೇರದೆ ಹಾರಾಡಲು ಬಿಡಿ. ನೀವು ಉತ್ತಮ ಭವಿಷ್ಯವಿರುವ ಕವಿ ಎನ್ನುವುದರಲ್ಲಿ ಸಂದೇಹವಿಲ್ಲ. ಶುಭಾಶಯಗಳು.
ಚಿನ್ಮಯ್....ಕವನ ಎಂದಿನಂತೆ ತುಂಬಾ ಚೆನ್ನಾಗಿ ಮೂಡಿದೆ. ಪ್ರತಿಬಾರಿ ನಿಮ್ಮಿಂದ ಹೊಸ ಹೊಸ ಪದಗಳ ಅರ್ಥ ತಿಳ್ಕೋತಾ ಇದ್ದೀನಿ... ಮುಂದುವರಿಯಲಿ ನಿಮ್ಮ ಸಾಹಿತ್ಯ ಪಯಣ... :)
ಸುನಾಥ ಅವರೇ,
ಸ್ವಾಗತ ಸರ್ ನಮ್ಮನೆಗೆ...
ನೀವು ಬೇಂದ್ರೆಯವರ ಕವಿತೆಗಳನ್ನು ಕುರಿತು ಬರೆದದ್ದುನ್ನು ಓದಿದ್ದೆ....ಅವರ ಕವಿತೆಗಳನ್ನು ಓದಲು ನಿಮ್ಮ ಬ್ಲಾಗ್ ಸಹಕಾರಿಯಾಯಿತು...ಅದಕ್ಕೆ ನಾನು ಆಭಾರಿ ನಿಮಗೆ..
ಇದೀಗ ನನ್ನ ಬರಹವನ್ನು ನೋಡಿ ಮೆಚ್ಚಿ ಪ್ರೋತ್ಸಾಹಿಸಿದ್ದೀರಿ..
ತುಂಬಾ ಖುಷಿ ಆಗ್ತಾ ಇದೆ :)..
ಸರ್ ಸಮಯ ಆದಾಗ ಖಂಡಿತ ಬರ್ತಾ ಇರಿ...
ತಪ್ಪುಗಳನ್ನಾ ಮಾಡ್ತಾನೆ ಇರ್ತೀನಿ ಬಿಡಿ,ದಯವಿಟ್ಟು ಅದರ ಬಗ್ಗೆ ಹೇಳಿ,ತಿದ್ಕೊಳೋದಕ್ಕೆ ಸಹಕರಿಸಿ...:)..ನಿಮ್ಮ ಆಶೀರ್ವಾದ ಸದಾ ಹೀಗೆ ಇರ್ಲಿ..
ನಮಸ್ತೆ :)
ಧನ್ಯವಾದಗಳು ಸುಮತಿ ಮೇಡಮ್...
ಬರ್ತಾ ಇರಿ :) ):
ನಿಮ್ಮ ಕವಿತೆಯ ಕಲ್ಪನೆ ವಿಶೇಷವಾಗಿರುತ್ತೆ ಓದುಗರನ್ನು ತನ್ನದೇ ಆಕರ್ಷಣೆ ಯಿಂದ ಸೆರೆ ಹಿಡಿಯುತ್ತದೆ. ಒಮ್ಮೆ ಇಷ್ಟ ಪಡದೆ ಇರಲು ಸಾಧ್ಯವಿಲ್ಲ ನನ್ನ ಅಭಿನಂದನೆಗಳು ರಸಿಕ ಕವಿಗೆ.
"ಬಾಲಕ್ಕೆ ಬೆಂಕಿ ಹಚ್ಚಿದಾಗ ಉರಿಯುತು ಲಂಕೆ
ಮನಕ್ಕೆ ಕೊಳ್ಳಿಯಿಟ್ಟಾಗ ಉರಿಯದಿರದೆ ಶಂಕೆ"
"ಮನ"ದ ಮೇಲೆ "ಮನ"ಸಿಟ್ಟು ಒ"ಮ್ಮನ"ದಿಂದ "ಮನ"ಸಾ ಬರೆಯುವ ನಿಮ್ಮ "ಮನ"ಕ್ಕೆ ನ"ಮನ"ಗಳು!
ಸುಂದರ ಪದಗಳ ಜೋಡಣೆ!
ಬಾಲು ಸರ್,
ವಂದನೆಗಳು ಸಾರ್...
ಏನೋ ಹೊಸ ಹೊಸ ಪ್ರಯೋಗಗಳನ್ನು ಮಾಡುವ ಆಸೆ ಆಷ್ಟೇ...
ನಿಮ್ಮೆಲ್ಲ ಹಿರಿಯರ ಪ್ರೋತ್ಸಾಹದೊಂದಿಗೆ ನನ್ನ ಪ್ರಯತ್ನ ಮಾಡ್ತಾ ಇರ್ತೀನಿ :)..
ಧನ್ಯವಾದ ಬರ್ತಾ ಇರಿ :) :)..
ನಮಸ್ತೆ :)
ಶ್ರೀ,
ಆಹಾ...ನಿಮ್ಮ ಪದಗಳ ಆಟಕ್ಕೂ ನಾ ಮನಸೋತೆ.....
"ಮನ"ದಾಳದಿಂದ ನ"ಮನ"ಗಳು..
ನ"ಮ"ಸ್ತೆ..
ನಾನು ಆಕಸ್ಮಿಕವಾಗಿ ನಿಮ್ಮ ಬ್ಲಾಗ್ ತೆರೆದು ಓದಿದ್ದು.
ನಿಮಗೆ ಕನ್ನಡ ಕವಿತೆ ಬ್ರೆಯುವ ಆಸಕ್ತಿ, ನಿಮ್ಮ ಕಾವ್ಯ
ಎಲ್ಲ ತುಮ್ಬ ಹಿಡಿಸಿತು. ನೀವು ಬರೆದಿರುವ ಶೈಲಿ ತುಮ್ಬಾ ಹಿಡಿಸಿತು
ಸುಧಾ ಮೇಡಮ್,
ಸ್ವಾಗತ ನಮ್ಮನೆಗೆ..
ಅದು ನನ್ನ ಅದೃಷ್ಟವೋ ಏನೋ ಗೊತ್ತಿಲ್ಲ...ಅಕಸ್ಮಾತಾಗಿ ಬಂದವರೂ ನನ್ನನ್ನು ಪ್ರೋತ್ಸಾಹಿಸ್ತಾ ಇದಾರೆ...
ತುಂಬಾ ಖುಷಿ ಆಯ್ತು ಮೇಡಮ್..
ಏನೋ ಒಂದು ಹವ್ಯಾಸ,ಒಂದಿಷ್ಟು ಹುಚ್ಚು ಅಷ್ಟೇ...
ನಿಮ್ಮ ಪ್ರತಿಕ್ರಿಯೆಗಳನ್ನಾ ಓದಿ ಖುಷಿ ಆಗ್ತಿದೆ...
ಬರ್ತಿರಿ ಮುಂದೆ ಕೂಡಾ...
ನಮಸ್ತೆ:)
Post a Comment