Monday, December 16, 2013

ಚೀಟಿ

ನಮಸ್ಕಾರ ಎಲ್ರಿಗೂ...
ಹೆಂಗಿದೀರಿ ಎಲ್ರೂ ???? ಅರಾಮಲ್ವಾ ???
ಇದೊಂದು ಪುಟ್ಟ ಕವಿತೆ....

 ಬ್ಲಾಗ್ ಬರಹವೊಂದನ್ನು ಓದಿ ಕಮೆಂಟಿಸಲು ಬರೆದಿದ್ದು ಹಾಗೇ ಕವನದ ರೂಪ ತಳೆಯಿತು,...
ಮರುದಿನ ಚಟ ತಡೆಯಲಾರದೆ ಫೇಸ್ ಬುಕ್ಕಿಗೆ ಹಾಕಿದೆ...
ಇವತ್ತು ಹಿರಿಯರೊಬ್ಬರ ಪ್ರೀತಿಯ ಮಾತುಗಳಿಂದ ಬ್ಲಾಗಿಗೆ ಹಾಕುತ್ತಿದ್ದೇನೆ....

 ದಯವಿಟ್ಟು ನೋಡಿ,ಅನಿಸಿಕೆ ಹೇಳಿ...
ಧನ್ಯವಾದ :)

ಚೀಟಿ 
====================================== 


ಅಂದು ಬರೆದು ಬಾರದ ಚೀಟಿ,
ಇಂದು ಬಂದಿದೆ ಕಣೆ ಹುಡುಗಿ...
ಒಂದಿಷ್ಟು ದೀರ್ಘವಿರಾಮಕೊಟ್ಟು ,
ನಾ ಬಿಟ್ಟ ಕಣ್ಣೀರಿನಂಗಿ ತೊಟ್ಟು..

ಬೆಟ್ಟು ಬಿದ್ದಿಲ್ಲ ಕಾಲಾಂತರದಲಿ,
ಭಾವವಿನ್ನೂ ಹಸಿಯಾಗಿದೆ,
ಆದರೆ,ವಿರಹದಕಾವಿಗೋ,ಕೈಸಿಗದನೋವಿಗೂ
ಅಕ್ಷರಗಳುರಿದು ಕರಿಮಸಿಯಾಗಿದೆ...

ನಿನ್ನಪೆನ್ನಿನ ಶಾಯಿಯ ಸ್ಪರ್ಶಮಾತ್ರದಲೆ,
ವರ್ಣಮಾಲೆಯೆದ್ದು ನಲಿದಾಡಿದೆ..
ಆದರೆ,ಬರಿಗಣ್ಣುಗಳದನು ಗುರುತಿಸಲಾಗದೇ
ಚಾಲೀಸಿನ ಚಸ್ಮಕ್ಕೆ ತಡಕಾಡಿದೆ....

ಕಟ್ಟಿಟ್ಟ ಕನಸಹೊತ್ತಿಗೆಗಳೆಲ್ಲಾ
ಈಗ ಒಂದೊಂದೇ ಬಿಚ್ಚಿಕೊಳ್ಳುತ್ತಿವೆ...
ನಿನ್ನೆಪತ್ರಿಕೆಯನಿಂದು ಮಾರಲಾಗಂದೆಂಬುದನರಿತು
ಮತ್ತೆ ಸದ್ದಿಲ್ಲದೇ ಮುಡುಗಿ ಮಡಚಿಕೊಳ್ಳುತ್ತಿವೆ...

ನಿನ್ನಪಾತ್ರವನೂ ಹೊಲಿದು ಬರೆದಿದ್ದ ನಾಟಕದಿ,
ನೀನಿಲ್ಲ,ನಾನೊಬ್ಬನೇ ಹಳೆಯ ಪಾತ್ರವಾಗಿದ್ದೇನೆ..
ಹೊಸ ಮುಖಗಳೊಡಗೂಡಿ ಕಥೆಹೇಳುತ್ತಾ,
ಅವರಿಗಾಸರೆಯಾಗುವ ಸಂಘಸೂತ್ರಧಾರನಾಗಿದ್ದೇನೆ...

ಅಂದು ಬರೆದು ಬಾರದ ಚೀಟಿ,ಇಂದು ಬಂದಿದೆ .....
ನನ್ನೆಲ್ಲ ಬಣ್ಣ,ಪಗಡಿಯ ಕಳಚಿ ,
ಚೌಕಿಯಂಚಿನ ಮನುಜಗನ್ನಡಿಯೆದುರು ತಂದು ನಿಲ್ಲಿಸಿದೆ..

===========================================================

ಅಹ್... ಏನೋ ಗೊತ್ತಿಲ್ಲ...
ಪ್ರತಿಸಲ ಹೇಳುತ್ತಿದ್ದರೆ ಅತೀ ಅನ್ನಿಸಬಹುದೇನೋ..ಆದ್ರೆ ನನ್ನಲ್ಲೊಂದಿಷ್ಟು ಗೊಂದಲ ಇರೋದಂತೂ ನಿಜ...
ಇದನ್ನೇ ನಿಮ್ಮೆದುರು ಹಂಚಿಕೊಳ್ಳುತ್ತಿದ್ದೇನೆ....

ಈ ಕವಿತೆ ನನ್ನ ಮಾಮೂಲಿ ಶೈಲಿಯಲ್ಲಿಲ್ಲ...
ಹೊಸ ಶಬ್ಧ,ಅಲ್ಲಲ್ಲಿ ಒಂದಿಷ್ಟು ಪ್ರಾಸಗಳು..
ಅದರಲ್ಲೇ ಎನೇನೋ ಪ್ರಯೋಗ,ಪ್ರತಿಮೆಗಳು ಹೀಗೆ ಇವುಗಳ ಬಗ್ಗೆ ಜಾಸ್ತಿ ಯೋಚಿಸಿ ಬರೆದದ್ದಲ್ಲ...

ಎನೋ ಇವುಗಳಿಗೆ ಹೋಲಿಸಿದರೆ ಅವಕ್ಕೆ ಸ್ವಲ್ಪ ಜಾಸ್ತಿೇ ಸಮಯ ಬೇಕು...
ಸುಮಾರು ಹುಡುಕಾಡಿ ತಡಕಾಡಿ ಗೀಚಬೇಕು..(ಎಲ್ ಬೋರ್ಡಲ್ವಾ ಅದ್ಕೆ :P)
ಒಂದು ಕವನವನ್ನು ಬಿಡಿಸಿ ಬಿಡಿಸಿ ತಿಳಿದು ಅದರ ಭಾವವನ್ನು ಪೂರ್ತಿ ತಿಳಿದಾಗಿನ ಖುಷಿಯ ಅನುಭವ ನನಗಿಷ್ಟ...ಬರಿಯ ನೇರವಾಗಿ ಅರ್ಥವಾಗುವ ಸಾಲುಗಳಿಗಿಂತ ಅವುಗಳಲ್ಲೇನೋ ಒಂದು ಆನಂದವಿದೆ... 
ಬಹುಷಃ ಅದೇ ನನ್ನ ಕವನಗಳಲ್ಲೂ ಬಂದಿದೆಯೇನೋ....ಗೊತ್ತಿಲ್ಲ... 
  ಜೊತೆಗೆ ಹೊಸ ಹೊಸ ಶಬ್ಧಗಳನ್ನು ಎಲ್ಲರಿಗೂ ಪರಿಚಯಿಸುವುದರ ಜೊತೆಗೆ ,ಆ ಪದದ ಬಳಕೆಯ ಸಂದರ್ಭ ಚೆನ್ನಾಗಿ ತಿಳಿದಿರುವುದರಿಂದ ಅದನ್ನು ಬಳಸಲು ಸುಲಭ ಎನ್ನುವ ಯೋಚನೆ ನನ್ನದು...ಗೊತ್ತಿಲ್ಲ...

ಹಮ್... ಆದರೆ ಬರೀ ಅವುಗಳ ಯೋಚನೆಯಲ್ಲಿ ಸುಲಭವಾಗಿ ಅರ್ಥವಾದಾಗಿನ ಸಹಜ ಸಂತೃಪ್ತಿಗೆ ಭಂಗ ತರುತ್ತಿದ್ದೇನಾ?? ಬರೀ ಅಲಂಕಾರದ ಗೋಜಲಿನಲ್ಲೇ ರಚನೆಯನ್ನು ಜಡಕು ಮಾಡ್ತಾ ಇದೀನಾ ??ಗೊತ್ತಿಲ್ಲ...ಒಂದು ಸಲ ಬರೀ ಶಬ್ಧಗಳ ಹುಡುಕಾಟದಲ್ಲೇ,ಅವುಗಳ ಬಳಕೆ ಸರಿಕಾಣದೇ ಭಾವದ ಓಘವನ್ನು ಕಳೆದುಕೊಂಡಂತೆನೂ ಅನಿಸಿದ್ದಿದೆ...ಬರೀ ಪದ,ಪ್ರಾಸನೇ ಕಣ್ಣಿಗೆ ಬಿದ್ದು ಮುಂದಿನ ಭಾವದ ಹರಿವು ಅಲ್ಲೇ ನಿಂತಿದ್ದೂ ಇದೆ...ಮತ್ತೆ ಯಾವಾಗಲೋ ಬರೀಬೇಕು ಅನ್ನಿಸಿದರೂ ಶುರುಮಾಡಿದಾಗಿನದಕ್ಕೂ ಮುಂದಿನಕ್ಕೂ ಹೊಂದಾಣಿಕೆ ಮಾಡುವುದು ಕಷ್ಟವಾದದ್ದೂ ಇದೆ...

ಹಾಗೆಲ್ಲಾ ನೋಡಿದರೆ ಹೊಳೆದ ವಿಚಾರಕ್ಕೆ ಏನೋ ಒಂದು ಸಿಕ್ಕ ಕಾವ್ಯದಲ್ಲಿ ಬಳಸುವ ಪದಗಳ ತರಹದ್ದನ್ನು ಬಳಸಿಬಿಟ್ಟರೆ ಕವಿತೆ ಅನ್ನಿಸಿಕೊಂಡುಬಿಡುತ್ತದೆ ಅನ್ನಿಸುತ್ತದೆ...ಆದರೆ ಮತ್ತೆ ಅರೆಚಣದಲ್ಲೇ ಇದನ್ನು ಯಾವುದಾದರೂ ಪ್ರಬಂಧ,ಲೇಖನದಲ್ಲೇ ಬಿಡಿಸಿ ಹೇಳಬಹುದಿತ್ತಲ್ಲಾ ,ಕವಿತೆಗಳೇ ಬೇಕಿತ್ತೇ???ಆಕಾರ,ಪ್ರಾಸಗಳಿಲ್ಲದಿದ್ದರೆ ಅದನ್ನು ಬರೆದದ್ದೇಕೆ ಅನ್ನಿಸಿಬಿಡುತ್ತದೆ... ಕವಿತೆ ಎಂಬುದು ಒಗಟಿನಂತೆ,ಅದನ್ನು ಬಿಡಿಸಿ ತಿಂದಾಗಲೇ ಸ್ವಾದ ತಿಳಿಯುವುದು ಎಂಬ ನನಗಿಷ್ಟದ ಮಾತು ಗುಯ್ಯ್ಂ ಗುಡುತ್ತದೆ....

ನಿಜಾ ಹೇಳ್ಬೇಕು ಅಂದ್ರೆ, ಕವನವನ್ನು ಹೇಗೆ ಬರೀಬೇಕು ಅನ್ನೋದೇ ಒಂಥರ ತಿಳಿದೇ ಇದ್ದಂಗೆ ಆಗಿದೆ.... :(
ದಯವಿಟ್ಟು ನಿಮ್ಮ ಅಮೂಲ್ಯ ಸಲಹೆ ನೀಡಿ,ನನಗೊಂದು ದಾರಿ ತೋರಿಸಿ...
ಧನ್ಯವಾದ 

11 comments:

sunaath said...

ಕವನ ತುಂಬ ಚೆನ್ನಾಗಿ ಬಂದಿದೆ. ನಿಮ್ಮೊಳಗೆ ಒಬ್ಬ ಕವಿ ಇದ್ದಾನೆ. ಅವನನ್ನು ಬರೆಯಲು ಬಿಡಿ!

Swarna said...

ಇವು ಬಿಡಿ ಬಿಡಿ ಸಾಲು ಅಂತ ನನಗೇನೂ ಅನ್ನಿಸಲಿಲ್ಲ...ಎಲ್ಲ ಸೇರಿ ಕೊನೆಗೆ
ಮನುಜನ ಕನ್ನಡಿ ಎದುರು ನಿಲ್ಲಿಸಿ ಒಳ್ಳೇ ಅಂತ್ಯವನ್ನೇ ಕೊಟ್ಟಿದ್ದಿರಿ ಚಿನ್ಮಯ್
ಪ್ರಾಸ ಬಧ್ಧವಾದ ಕವಿತೆಗಳು ಎಷ್ಟು ಸುಂದರವೋ, ತನ್ನಷ್ಟಕ್ಕೆ ತಾನು ಹರಿವ ತೊರೆಯಂತೆ ಹರಿವ
ಪದಗಳೂ ಅಷ್ಟೇ ಸುಂದರ. ಕಾಕಾ ಹೇಳಿದಂತೆ ನಿಮ್ಮೊಳಗಿನ ಕವಿಯನ್ನು ಬರೆಯಲು ಬಿಡಿ ...
ಬರೆದದ್ದನ್ನು ಬೇಜಿಝಾಕ್ ಇಲ್ಲಿ ಹಾಕಿ

Badarinath Palavalli said...

ಕವನ ಮತ್ತು ಅದರ ಹುಟ್ಟು ಕವಿಯ ನಿಜವಾದ ಪ್ರಸವ ವೇದನೆ. ತಿಣಕಾಡಿ ತಿಣಕಾಡಿ ಹೊಂಚಿದಷ್ಟೂ ಕೆಲವೊಮ್ಮೆ ಕವಿತಾ ಸುಂದರಿ ಕೈಗೆಟುಕುವಳೇ ಅಲ್ಲ! ಒಮ್ಮೆ ದೀಢೀರೆಂದು ಆವರೆಸಿಕೊಂಡು ಬಿಡುತ್ತಾಳೆ ಅದೇ ಸಾರ್ಥಕತೆ ನಮಗೆ.

ಕವನದ ಅಂತ್ಯ ಇಡೀ ಕವನವನ್ನು ಎಬ್ಬಿಸಿ ನಿಲ್ಲಿಸಿದೆ.
"ಚೌಕಿಯಂಚಿನ ಮನುಜಗನ್ನಡಿಯೆದುರು ತಂದು ನಿಲ್ಲಿಸಿದೆ.."

ಚಿನ್ಮಯ ಭಟ್ said...

ಸುನಾಥ ಕಾಕಾ......
ನೀವ್ ಹೇಳಿದ್ದು ಪೂರ್ತಿ ಅರ್ಥ ಆಗ್ಲಿಲ್ಲ,ಏನೋ ಒಂದ್ಚೂರು ಹೋಯ್ತು ಒಳಗೆ...
ಧನ್ಯವಾದ :)...ತಲೆ ತಿನ್ತಾ ಇರ್ತೀನಿ ಏನೇನೋ ..ಬೇಜಾರಾಗ್ಬೇಡಿ...

ಚಿನ್ಮಯ ಭಟ್ said...

ಸ್ವರ್ಣಾ ಅಕ್ಕಾ...
ಧನ್ಯವಾದಗಳು ನಿಮ್ಮ ಅಕ್ಕರೆಯ ಮಾತುಗಳಿಗೆ....
ಹಮ್...ಏನೋ ನನ್ನೊಳಗೇನೆ ಎರಡು ಪಾರ್ಟಿ ಹುಟ್ಟಿಕೊಂಡಿದೆ..ಏನ್ ಕಥೆನೊ ಮುಂದೆ ಗೊತ್ತಿಲ್ಲ....
ಧನ್ಯವಾದ...ಖಂಡಿತ ನಿಮ್ಮ ಮಾರ್ಗದರ್ಶನ ಅಗತ್ಯ ನಂಗೆ ...

ಚಿನ್ಮಯ ಭಟ್ said...

ಬದರಿ ಸರ್....
ಧನ್ಯವಾದಗಳು ನಿಮ್ಮ ಮಾತುಗಳಿಗೆ.....
ಅಹ್ ಗೊತ್ತಿಲ್ಲ ನನ್ನ ಸಮಸ್ಯೆ ಸಧ್ಯಕ್ಕೆ ಕವನದ ಮಧ್ಯಭಾಗ...ಕವನದ ಆರಂಭದ ಗುಟುಕು ಎಲ್ಲೋ ಹೊಳೆದಿರುತ್ತದೆ...ಅದನ್ನು ಗೀಚಿರುತ್ತೇನೆ ಪಟ್ಟಿ ತುದಿಗೆ....ಇನ್ನು ಅಂತ್ಯ ಅವಾಗಲೇ ಸಿಕ್ಕಿರುತ್ತದೆ ಅಥವಾ ಮತ್ಯಾವತ್ತಾದ್ರೂ ಯೋಚಿಸಿದಾಗ ಸಿಗುತ್ತದೆ....ಗೊತ್ತಿಲ್ಲ ಅಂತ್ಯದ ಬಗ್ಗೆ ಇನ್ನೂ ನನ್ನ ಮೇಲೇ ನನಗೆ ತೃಪ್ತಿಯಿಲ್ಲ ಬಹಳಷ್ಟು ಕವನಗಳಿಗೆ...ಇನ್ನು ಮಧ್ಯದ ಸಾಲುಗಳೇ ಸಮಸ್ಯೆ ಯಾಗಿರುವವು...
ಏನೋ ಗೊತ್ತಿಲ್ಲ ಭಾವ ಸ್ಪಷ್ಟ್ತವಾಗಿರುತ್ತದೆ...ಅದನ್ನು ಸುಮ್ಮನೆ ಸರಳ ಶಬ್ಧದಲ್ಲಿ ಹೇಳಲೇ ಅಥವಾ ಒಂದಿಷ್ಟು ಅಲಂಕಾರಕೊಟ್ಟು ನನಗಿಷ್ಟದ ರೂಪುಕೊಡಲೇ ಎನ್ನುವ ಗೊಂದಲ ನನ್ನದು :(...

ಹಮ್....ಧನ್ಯವಾದ ನಿಮ್ಮ ಅನಿಸಿಕೆ ,ಸಲಹೆಗಳಿಗಾಗಿ.......ನಮಸ್ತೆ :)

ಸತೀಶ್ ನಾಯ್ಕ್ said...

ನಿಮ್ಮ ಕವಿತಾ ವಸ್ತುಗಳಿಗೆ ಪ್ರಾಸ ಲಯಗಳೆಂಬ ಆಭರಣ ಗಳಿಂದಲೇ ಕೂಡಿರಬೇಕೆಂಬ ಬೇಲಿ ಹಾಕ್ಕೊಬೇಡಿ ಚಿನ್ಮಯ್.. ಎಲ್ಲಾ ಕವಿತೆಗಳು ಹಾಗಿರಲೇ ಬೇಕೆಂದಿಲ್ಲ. ನಿರಾಭರಣತೆಯೂ ಕೆಲವೊಮ್ಮೆ ಸುಂದರವಾಗಿರಬಲ್ಲದು. ಪದ ಮೋಹಕ್ಕೆ ಬಿದ್ದು ಸುಂದರ ಭಾವದ ಓಘವನ್ನ ಕೆಡಿಸೋ ಪ್ರಯತ್ನ ಬೇಡ. ಬುದ್ಧಿಗಿಂಥ ಜಾಸ್ತಿ ಮನಸಿಗೆ ಕೆಲಸ ಕೊಟ್ರೆ ಆಯ್ತು.. ನಿಮ್ಮ ಕವಿ ಸದಾ ಕಾಲಕ್ಕೂ ಹಸನ್ಮುಖಿ.

ಕವನ ಇಷ್ಟವಾಯ್ತು ಚಿನ್ಮಯ್. :)

ಕನಸು ಕಂಗಳ ಹುಡುಗ said...

ಅಂದು ಬರೆದು ಬಾರದ ಚೀಟಿ,ಇಂದು ಬಂದಿದೆ .....
ನನ್ನೆಲ್ಲ ಬಣ್ಣ,ಪಗಡಿಯ ಕಳಚಿ ,
ಚೌಕಿಯಂಚಿನ ಮನುಜಗನ್ನಡಿಯೆದುರು ತಂದು ನಿಲ್ಲಿಸಿದೆ..

ಕೆಲವು ಸೋಜಿಗದ ಸಾಲುಗಳಿವೆ...
ಚೌಕಿಯಂಚಿನ ಮನುಜಗನ್ನಡಿ...
ನನ್ನೆಲ್ಲ ಬಣ್ಣ,ಪಗಡಿಯ ಕಳಚಿ ,
ಚಾಲೀಸಿನ ಚಸ್ಮಕೆ.......

ಚಂದವಿದೆ......

ಚಿನ್ಮಯ ಭಟ್ said...

ಸತೀಶ್ ಜೀ......
ನಿರಾಭರಣತೆ ....ಚೆನಾಗಿದೆ ಗುರುಗಳೇ :)........
ಧನ್ಯವಾದ..ಬರ್ತಾ ಇರಿ :)

ಚಿನ್ಮಯ ಭಟ್ said...

ನಮಸ್ಕಾರ :)....
ಧನ್ಯವಾದ ನನ್ನ ಸಾಲುಗಳನ್ನು ಮೆಚ್ಚಿ ಪ್ರೋತ್ಸಾಹಿಸಿದ್ದಕ್ಕೆ...
ನಮಸ್ತ್ಸೆ :)

Unknown said...

hi anna super ide kavana...