Sunday, March 16, 2014

ಪೂರ್ಣಾಹುತಿ

ನಮಸ್ತೆ,
ಅಹ್. ಜೀವಬಂಧ ಎನ್ನಿಸುವಷ್ಟಗಿನ ಮಟ್ಟಿಗೆ ಹಚ್ಚಿಕೊಂಡ  ಪ್ರೀತಿಯು ಮುರಿದುಹೋಗುವಾಗಿನ ಕೊನೆಯ ಹಂತದ ಚಡಪಡಿಕೆ ಹಾಗೂ ಮರುಮೈತ್ರಿಸಾಧ್ಯವೆನಿಸದಿದ್ದರೂ ಸಾಧ್ಯ ಎಂದು ಸತಾಯಿಸುವ  ಒಳಮನಸ್ಸಿನ ಆಸೆಗಳಿಗೊಂದು ಪೂರ್ಣವಿರಾಮವಿಡುವ ಭಾವ ಹೊತ್ತು ಬರೆದ ಒಂದಿಷ್ಟು ಸಾಲುಗಳಿವು....ದಯಮಾಡಿ ಓದಿ ಅನಿಸಿಕೆ ತಿಳಿಸಿ...

ಪೂರ್ಣಾಹುತಿ
=============
ಒಂದೆಳೆಯ ಉಸಿರಿನಲೆ ನಿಂತಿರುವೆ ಹುಡುಗಿ,
ಹನಿಸಿಬಿಡು ನೀ ಬೇಗ ಮಂಗಳದ ಗಂಗೆಯನು.
ಕುತೂಹಲದ ಸಣ್ಣುರಿಯಲೇ ಕಾಸದಿರು ಗೆಳತಿ,
ಅದೆಷ್ಟು ದಿನ ಹೊರಲಿ ಗೊಜಗುಟ್ಟುವಾ ಈ ಭೋಳೆದೆಯನು.

ಒಂದೋ,ನಿನ್ನ ನೆನಪಲೆ ಮಣ್ಣೊಳಗೆ ಮಲಗುವೆ,
ಜಗದೆಲ್ಲ ಉಬ್ಬುತಗ್ಗುಗಳ ಮರೆತು,ತೆಗೆದುಮುಚ್ಚಿದ ಗುಂಡಿಯೊಳಗೆ.
ಅಸ್ಥಿಯದು ಕರಗಿ ಕೆಂಕಣವಾಗುವವರೆಗೂ ಜತನದಿಂದಿರುವೆ,
ಆರುಗನಸೂದಿಸಿ ಬಚ್ಚಿಟ್ಟ ಮರುಜನುಮದಾ ಹಾರುಪುಗ್ಗಿಯೊಳಗೆ.

ಒಂದೊಮ್ಮೆ ದಕ್ಕಿದರೆ ನೀ ಕೊಡುವ ವಿಧಿಮದ್ದು,
ಹಾರುವೆ ಗರಿಬಿಚ್ಚಿ ಸುಂಗಿನಾಚೆಯ ಶ್ವೇತದಿಗಂಬರ ಚಿಟ್ಟೆಯಾಗಿ.
ಪೂರ್ವಭಾವಬಂಧನಸರಪಣಿಯ ತರಚುಗಾಯದಾರೈಕೆಗೆ
ಚುಚ್ಚಿಕೊಳ್ಳುವೆ ಕಳೆದೊಲವ ಕೋಶಗಳನೆ ಜೀವಲಸಿಕೆಯಾಗಿ.

ಒಂದೆಳೆಯ ಉಸಿರಿನಲೆ ನಿಂತಿರುವೆ ಹುಡುಗಿ,
ಹನಿಸು ನೀ ಬೇಗ ಮಂಗಳದ ಗಂಗೆಯನು.......


--------------------------
*ಗೊಜಗುಟ್ಟು=ಕುದಿ,ಕಾಸು=ಕಾಯಿಸು
ಪುಗ್ಗಿ=ಬಲೂನು,
ಸುಂಗು=ನಮ್ಮೂರ ಕಡೆ ತೆಳ್ಳಗಿನ ಮುಳ್ಳಿನಂಥ ರಚನೆಗಳಿಗೆ ಸುಂಗು ಎಂದು ಬಳಸುವುದುಂಟು( ಕಂಬಳಿಹುಳದ ಮೇಲಿನ ಮುಳ್ಳಿನ ಸಲುವಾಗಿ ಅದನ್ನು ಸುಂಗುನುಳ ಎಂದೂ ಕರೆಯುತ್ತಾರೆ )

ವಂದನೆಗಳು :)
ನಮಸ್ತೆ :)


33 comments:

Badarinath Palavalli said...

ಮೊದಲಿಗೆ ಒಂದು ಮಾತು,
ಕವಿತೆಗೆ ತಾವು ಕೊಟ್ಟ ಪೀಠಿಕೆಯು ನನ್ಟನ್ನು ಜಮಾನಕ್ಕೆ ಕರೆದೊಯ್ದು ನಿಲ್ಲಿಸಿತು.
ಮರಳಿ ಬೆಸೆಯಲಾರದ ಆ 'ಮಾಜೀ' ಬಂಧನಗಳು ಅಚಾನಕಾಗಿ ನೆನಪಿಗೆ ಬಂದವು! :(

ವಿಶಿಷ್ಟ ಶೀರ್ಷಿಕೆ.
ಆಕೆಯ ಸಾಮೀಪ್ಯದ ದೂರವನ್ನು ಪದಗಳಲ್ಲಿ ತೋರಿದ ರೀತಿಗೂ ಮತ್ತು ಒಪ್ಪಿ ಬಂದಾಗ ಅಥವಾ ತಿರಸ್ಕರಿಸಿದಾಗ ಘಟಿಸುವ ಘಟನಗಳಿಗೂ ನಮ್ಮ ವಿಶೇಷ ಮೆಚ್ಚುಗೆ.

ಮನಸೆಳೆದ ಪದ ಲಾಸ್ಯ:
ಹಾರುಪುಗ್ಗಿ
ವಿಧಿಮದ್ದು

Dileep Hegde said...

ಹೌದು.. ಪ್ರೀತಿ ದಕ್ಕಲಿ.. ದಕ್ಕದೇ ಇರಲಿ.. ಕಳೆದೊಲವ ಕೋಶಗಳು ಮಾತ್ರ ಯಾವತ್ತಿಗೂ ಹೃದಯದ ತರಚುಗಾಯಗಳಿಗೆ ಜೀವಲಸಿಕೆಯೇ... ಕವನ ಚೆನ್ನಾಗಿದೆ.. ಆದರೆ ಯಾಕೋ ಸ್ವಲ್ಪ "ಚಿನ್ಮಯಿಕೆ" ಕಮ್ಮಿ ಎನಿಸಿತು.. ಹಳೆಯ ಕವನಗಳಿಗೆ ಬಂದ ಪ್ರತಿಕ್ರಿಯೆಗಳ ಪ್ರಭಾವವೋ ಅಥವಾ ಸಮಯಾಭಾವವೋ ತಿಳಿಯೆ..

ಚಿನ್ಮಯ ಭಟ್ said...

ಬದರಿ ಸರ್....
ಮಾಜೀ ಬಂಧನ... ಹಾ ಹಾ...
ಶೀರ್ಷಿಕೆ...
ಅದೇನೋ ಗೊತ್ತಿಲ್ಲ...ಒಂದು ಗಟ್ಟಿಯಾದ ದನಿ ಬೇಕಿತ್ತು..ಅದನ್ನು ಹೇಳಲು ಪೂರ್ಣಾಹುತಿಯ ಸಮಯವೇ ಸರಿ ಎನಿಸಿತು..ಹಾಂ ಪ್ರಸಾದದ ಕಥೆ ಏನೂ ಅಂತಾ ಗೊತ್ತಿಲ್ಲಾ,ಕೇಳ್ಬೇಡಿ :P

ಹಮ್..ಹಾರುಪುಗ್ಗಿ,ವಿಧಿಮದ್ದನ್ನು ಮೆಚ್ಚಿಕೊಂಡಿದ್ದಕ್ಕೂ ಧನ್ಯವಾದಗಳು.....
ಬರ್ತಾ ಇರಿ :) ಖುಷಿ ಆಯ್ತು :)
ನಮಸ್ತೆ :)

Anonymous said...

Pada prayoga vinoothanavaagide...
Hecchige helalu naanu thilidavanalla....
Saadhya aadashtu motukaagi chutukaagi helalu prayathnisi....

innu nimma baravanige(kavithe)ya bagge heluvudaadare..,
Prashamsanaatheetha....:)!!

Sundaravaada sthalakke aamanthrisiddakke dhanyavaada...:)!!

munduvaresi....shubhavaagali nimage...:)

nimma....... Poorva Surya.

ಚಿನ್ಮಯ ಭಟ್ said...

ದಿಲೀಪಣ್ಣಾ...
"ಚಿನ್ಮಯಿಕೆ"...ಅಹ್..ಸಿಕ್ಕಾಪಟ್ಟೆ ಖುಷಿ ಆಗೋಥರ ಶಬ್ಧಹೇಳ್ಬಿಟ್ರಿ....ಧನ್ಯವಾದ ಧನ್ಯವಾದ ಧನ್ಯವಾದ :)...


ಹಳೆಯ ಕವಿತೆಗಳ ಪ್ರತಿಕ್ರಿಯೆ ಪ್ರಭಾವ ಬೀರ್ತಾ ಗೊತ್ತಿಲ್ಲ...
ಬ್ಲಾಗ್ ಕವಿತೆಗಳು+ಮತ್ತದರ ಅನಿಸಿಕೆಗಳಿಂದಲೆ ಇಷ್ಟು ಗೀಚಲು ಕಲಿತದ್ದು...ಅಹ್ ಇದು ನಿಜಾ ಹೇಳ್ಬೇಕು ಅಂದ್ರೆ ಹಿಂದಿನ ಕವಿತೆ "ಮೂರುತ್ತರ"ದ ಜೊತೆಗೇ ಬರೆದದ್ದು :). ಸಮಯದ ಅಭಾವ...ಇರ್ಬೊದು... ಅದಕ್ಕೇಂತ ಕೊಟ್ಟ ಸಮಯ ಕಡಿಮೆ ಆಯ್ದೇನೋ...ಈಗ ನಿಮ್ಮ ಮಾತು ಕೇಳಿದ ಮೇಲೆ ಯಾಕೋ ಜಾಸ್ತಿ ವಿಚಾರದ ಕೊರತೆ ಆಯ್ತಾ ಅನಿಸ್ತಾ ಇದೆ... ಅಲ್ಲಿ ಇದ್ದದ್ದೆ ಎರಡು ಆಯ್ಕೆ ಅಂದ್ಕೊಂಡು ಬರ್ದೆ...ನಿರೂಪಣೆಯಲ್ಲಿ ಒಂದಿಷ್ಟು ಏರುಪೇರು ಆಗೊರ್ಬೋದು.. ಗೊತ್ತಿಲ್ಲ...ನೋಡ್ತಿನಿ....ಧನ್ಯವಾದಗಳು ಬರೀ ಹೊಗಳಿಕೆಯಲ್ಲಿ ನನ್ನನ್ನ ತೇಲಿಸದೆ ಅಕ್ಕರೆಯಿಂದ ಕಿವಿಹಿಂಡಿದ್ದಕ್ಕಾಗಿ..
ಬರ್ತಾ ಇರಿ :)..ಇದೇ ಥರ ನಿಮಗನ್ನಿಸಿದ್ದನ್ನ ಮುಕ್ತವಾಗಿ ಹೇಳಿ ನನ್ನನ್ನ ತಿದ್ದಿ ಬೆಳೆಸ್ತಾ ಇರಿ :)
ಖುಷಿ ಅಯ್ತು.. :)
ನಮಸ್ತೆ :)

Vinayak Bhagwat said...

ಗೊಜಗುಟ್ಟಿ ಎಂಬ ಶಬ್ಧದ ಬಳಕೆ ತುಂಬ ಇಷ್ಟ ಆತು... ಈಗ ಮಾತ್ರ ನಾನು ಸಹ ಇದೆ ಶಬ್ಧ ಬಳಸಿ ೧ ಕವನ ಬರೆದಿದ್ದು ಅದಕ್ಕೆ ಪೂರಕ ಎನಿಸಿದಂತಾಗದ್ದು ಸಮಾದಾನ ತಂತು. ಯಾಕೋ ಚಿನ್ಮಯನಲಿ ಚಿನ್ನ ಸವೆದಂತೆ ಅಂತನಿಸಿತು...ಹೊಸ ತನದ ಅಭಾವ ತೋರುತ್ತಿದೆ ಅದ ಬಿಟ್ಟು ಉಳಿದೆಲ್ಲವು ಅಭಿನಂದನಾರ್ಹ.

ಚಿನ್ಮಯ ಭಟ್ said...

ಪೂರ್ವ ಸೂರ್ಯ..ಧನ್ಯವಾದಗಳು ನಿಮ್ಮ ನೆಚ್ಚಿನ ಮಾತುಗಳಿಗೆ :) :)...
ನನ್ನ ಬರೆಬೆಂದ ಬರಹಗಳ ಮನೆಗೆ ಬಂದಿದ್ದಕ್ಕೂ,ಅನಿಸಿಕೆ ನಮೂದಿಸಿದ್ದಕ್ಕೂ ವಂದನೆ..
ಬರ್ತಿರಿ..
ನಮಸ್ತೆ :)

ಚಿನ್ಮಯ ಭಟ್ said...

ವಿನಾಯಕಣ್ಣಾ.....
ಧನ್ಯವಾದ..ಮತ್ತೊಂದು ನೇರ ಅನಿಸಿಕೆಗೆ :) :)
ಖಂಡಿತ ಇದೊಂದು ಪ್ರಯೋಗವೇ..
ಬರಿ ಎರಡು ಎಳೆ ಇಟ್ಟುಕೊಂಡು ಬರೆಯಲು ಹೋದದ್ದು...
ಹಮ್..ಅದೇ ಇದಕ್ಕೆ ಹಿಂದಿನ ಕವನಗಳ ರೂಪುಕೊಡಲು ವಿಫಲವಾಯ್ತಾ ಗೊತ್ತಿಲ್ಲ..ಹಮ್..ನಾನೂ ಗೊಂದಲದಲ್ಲಿದ್ದೇನೆ..ಆದ್ರೆ ಒಂದರ ಬಗ್ಗೆ ಯಂತೂ ನನಗೆ ಖಾತ್ರಿಯಿದೆ..ಅಹ್ ಸುಮ್ಮನೆ ತುರುಕಲು ಹೋಗಿ ಇಲ್ಲಿ ಹೆಚ್ಚಿನದೇನನ್ನೂ ಹೇಳಿಲ್ಲ..ಇದರ ಬಂಡವಾಳಷ್ಟೇ ಇದ್ದದ್ದಷ್ಟು ನನ್ನಲ್ಲಿ..ಹಾ ಹಾ :D..
ಧನ್ಯವಾದಗಳು ನಿಮ್ಮ ಅಕ್ಕರೆಯ ಅನಿಸಿಕೆಗೆ...ಮುದ್ದಿನ ಪ್ರೋತ್ಸಹಕ್ಕೆ..
ಹಾಂ ಗೊಜಗುಟ್ಟವ...ಅದೊಂಥರಾ ಇಷ್ಟವಾದ ಪದ..
ಹೌದು ಮತ್ತೊಂದು ಅನುಮಾನ ನನಗಿನ್ನೂ ಪೂರ್ತಿಯಾಗಿ ಗೊತ್ತಾಗಿಲ್ಲ....ಗೊಜಗುಟ್ಟದು ಯಾವಾಗಾ ?? ಗೊಡಗುಟ್ಟದು ಯಾವಾಗಾ??ಎರಡೂ ಬಳಕೆಯಲ್ಲಿದೆ ಅಲಾ ?ಗೊತ್ತಾದ್ರೆ ಹೇಳಿ ಹಾಂ ?

ಬರ್ತಾ ಇರಿ :)
ನಮಸ್ತೆ :)ಖುಷಿ ಆಯ್ತು :)
ಇದೇ ಥರ ನಿಮಗನ್ನಿಸದ್ದು ಖಂಡಿತವಾಗಿಯೂ ಹಂಚಿಕೊಳ್ಳಿ :)

ಮನಸು said...

ಆಹಾ.. ಹಳೆಯ ನೆನಪುಗಳು ಮರುಕಳಿಸುವಂತೆ ಕವನ ಕಟ್ಟಿದ್ದೀರಿ.. ಚೆನ್ನಾಗಿದೆ

prashasti said...

ಒಂದೆಳೆ ಸರ, ಮೂರೆಳೆ ಜನಿವಾರ ಅಂತೆಲ್ಲಾ ಬಳಸೋದು ಕಾಮನ್ನು. ಆದ್ರೆ ಒಂದೆಳೆ ಉಸಿರು !! ಮೊದಲ ಪದವೇ ಕವಿತೆಯೊಳ್ಗೆ ಎಳ್ಕಂಬುಟ್ತು ಚಿನ್ಮಯ್. ಸುಂಗಿನಾಚೆಯ ಶ್ವೇತದಿಗಂಬರ ಚಿಟ್ಟೆ, ಜಗದೆಲ್ಲಾ ಉಬ್ಬು ತಗ್ಗುಗಳ ಮರೆತು ತೆಗೆದು ಮುಚ್ಚಿದ ಗುಂಡಿ .. ಉಫ್ ಅದೆಲ್ಲಿಂದ ಬರಿತ್ಯೋ ಮಾರಾಯ .. ಎಲ್ಲೋ ಹೋಗ್ಬಿಟ್ಟಿ ! ಸಖತ್ತಾಗಿದ್ದು. ಖುಷಿಯಾತು ಓದಕ್ಕೆ. ಆ ಮಂಗಳದ ಗಂಗೆ ಬೇಗ ಹರೀಲಿ ಹೇಳೋ ಹಾರೈಕೆ.

Pradeep Rao said...

ಎಂಥ ಕವನ! ಮೊದಲನೆಯದಾಗಿ ಪೀಠಿಕೆಯೇ ಮನಸ್ಸನ್ನು ಎಲ್ಲೆಲ್ಲಿಗೋ ಎಳೆದೊಯ್ಯಿತು. ಬದರಿ ಸಾರ್ ಹೇಳಿದಂತೆ ಸಾಧ್ಯವಾಗದ ಮರುಮೈತ್ರಿ ಇಂದಿಗೂ ನನ್ನ ನಿದ್ದೆ ಕೆಡಿಸುವಂಥದ್ದು! ಅದರ ಮೇಲೆ ನೀವು ಬರೆದ ಕವನವೋ ಅಷ್ಟೇ ಸ್ಮರಣೀಯವಾಗಿದೆ. ಎಂದಿನಂತೆ ಪದ ಪ್ರಯೋಗ ಕವನದ ವಿಷಯಕ್ಕೆ ಕಿರೀಟವಿಟ್ಟಂತೆ ಸಂದರವಾಗಿಸಿದೆ. ಚಿಟ್ಟೆ, ಹಾರುಪುಗ್ಗೆಯ ಹೋಲಿಕೆಗಳು ಸುಂದರ ಅತೀ ಸುಂದರ. ಓದುಗರಿಗೆ ಮಧುರ ಅನುಭವ.

ಚಿನ್ಮಯ ಭಟ್ said...

ಸುಗುಣಾ ಮೇಡಮ್...
ಧನ್ಯವಾದಗಳು :) :)...ಬರ್ತಾ ಇರಿ :)
ನಮಸ್ತೆ :)

ಚಿನ್ಮಯ ಭಟ್ said...

ಪ್ರಶಸ್ತಿ ಧನ್ಯವಾದನೋ :)..
ಮಂಗಳದ ಗಂಗೆ :)...ಅದು ಗಂಗಾಜಲದಿಂದ ಶುರು ಆಗಿ ಆಮೇಲೆ ಅಲ್ಲಿಗೆ ಬಂದು ನಿಂತಿದ್ದು :)...ಒಂದೆಳೆ ಉಸಿರು..ಏಯ್ ಒಂದೆಳೆ ಪಾಕ ಮರ್ತ್ಯಾ?? ಅಡಿಗೆ ಮನೆ ಮರ್ಯಾದೆ ಪ್ರಶ್ನೆ ಅದು ;)....\
ಬರ್ತಾ ಇರು :)..
ಮತ್ತೊಂದ್ ಸಲ ಆತ್ಮೀಯವಾದ ಧನ್ಯವಾದ ಅಂದದ ಅನಿಸಿಕೆಯನ್ನ ಅಚ್ಚಿಸಿದ್ದಕ್ಕೆ :)
ನಮಸ್ತೆ :)

ಚಿನ್ಮಯ ಭಟ್ said...

ಪರ್ದೀಪಣ್ಣಾ....;)
ಧನ್ಯವಾದ...
ಅಲ್ಲಾ ಪೀಠಿಕೆ ಅದು ಹೇಗೆದಿಯೋ ಕಾಣೆ...ನಿಮಗೆಲ್ಲರಿಗೂ ಇಷ್ಟವಾದದ್ದು ನೋಡಿ ನನಗೆ ಆಶ್ಚರ್ಯ ಮತ್ತು ಸಂತೋಷ ಒಟ್ಟೊಟ್ಟೊಗೇ ಆಗ್ತಾ ಇದೆ...ಅದು ಸುಮ್ಮನೆ ಬ್ಲಾಗಿಸುವ ಮುಂಚೆ ಒಂದೆರಡು ನಿಮಷದಲ್ಲಿ ಬರೆದದ್ದು...ಹಮ್..ಗೊತ್ತಿಲ್ಲ...ಬಹುಷಃ ಅದಕ್ಕೆ ಇರಬೇಕು ಅನುಭವ ಬೇಕು ಅನ್ನೋದು ..:P..
ಧನ್ಯವಾದಗಳು ಮೆಚ್ಚಿಕೊಂಡಿದ್ದಕ್ಕೆ..
ನಿಮ್ಮ ಕಮೆಂಟುಗಳಲ್ಲಿ ಅದೇನೋ ಒಂದು ಶಕ್ತಿಯಿದೆ...ಬರ್ತಾ ಇರಿ :)..ಅನ್ನಿಸಿದ್ದನ್ನ ಮುಕ್ತವಾಗಿ ಹಂಚಿಕೊಳ್ತಾ ಇರಿ :)...
ನಮಸ್ತೆ :)

Subrahmanya said...

chanda iddo :) khushi aathu bhaavapoorna kavana.

Bareetaa iru :)

ಚಿನ್ಮಯ ಭಟ್ said...

ಸುಬ್ರಹ್ಮಣ್ಯ...
ಧನ್ಯವಾದನಲೆ :):)
ಬರ್ತಾ ಇರು ...
ನಮಸ್ತೆ :)

MPPRUTHVIRAJ KASHYAP said...

ಒಂದು ಸರಳವಾದ ಭಾವಕ್ಕೆ ಮೂರ್ತರೂಪ ಕೊಟ್ಟದ್ದು ತುಂಬಾ ಖುಷಿಯಾಯಿತು ಗುರುಗಳೇ.
ಆಮೇಲೆ ಆ ಸರಳಭಾವಕ್ಕೆ ಸರಳ ಪದಗಳ ಪೋಣಿಸಿ ಸರಳವಾಗಿ ಎದೆಯೊಳಗೆ ಹನಿಸಿದ್ದು ಇನ್ನೂ ಖುಷಿಯಾಯಿತು.ನನಗನಿಸಿದ ಮಟ್ಟಿಗೆ ಈ ಕವನ ಪದಗಳ ಅರ್ಥ ಹುಡುಕುವ ಯುದ್ದವಿಲ್ಲದೆ ಭಾವನೆಗಳ ಹೊತ್ತು ಪಾಠಕನ ಎದೆಯೊಳಗೆ ತನ್ನ ಭಾವ ಬೀಜವನ್ನ ಬಿತ್ತಿ ಹೊಗುವ ಶಕ್ತಿ ಈ ಕವನಕ್ಕೆ ಇದೆ ಎಂದೆನಿಸುತ್ತದೆ.
ಒಬ್ಬ ನಿರೀಕ್ಷಕನಾಗಿ ನಿಮ್ಮಲ್ಲಿ ನಾನು ಬೇಂದ್ರೆಯವರ ಕವನದ ಕಂಪನ್ನು,ಸೊಗಡನ್ನು ಕಾಣಲು ಹಾತೊರೆಯುತ್ತಿದ್ದೆ ಇದು ಈ ಕವನದಲ್ಲಿ ಎಲ್ಲಿಯೋ ಹಿದಕ್ಕೆ ಬಿದ್ದಂತೆ ಭಾಸವಾಗುತ್ತಿದೆ ಗುರುಗಳೇ.
ನಿಮ್ಮ ಕೆಲವು ಕವನಗಳಲ್ಲಿ ಕವನ ಭಾವವು ಶುರುವಾಗುತ್ತಿದ್ದೆ ಎಂದೊಡನೆಯೆ ಮುಗಿಯುವ ರೀತಿ ಇತ್ತು ಅದು ಇಲ್ಲಿಯೂ ಮುಂದುವರೆದಿರಬಹುದು ಅದು ಸರಿಯೋ ಇಲ್ಲವೋ ತಿಳಿಯದು.
ಸಲಹೆ:- ಎಲ್ಲಾ ಕಟ್ಟು ಕಟ್ಟಲೆಗಳನ್ನ, ಬಂದನಗಳನ್ನ, ಕೈಕೊಂಡಿಗಳನ್ನು ಬಿಸುಟು ನಿಮ್ಮ ಕವನಗಳನ್ನು ಬರೆದರೆ ಅದು ಮನಕ್ಕೆ ಇಂಪು ಕೊಡುತ್ತಿತ್ತೇನೋ ಗುರುಗಳೆ ಇದರಿಂದ ಒಂದಷ್ಟು ಬಕಪಕ್ಷಿಗಳ ಹೃದಯಕ್ಕೆ ಹಾಲೆರೆದಂತಾಗುತ್ತದೆ ಗುರುಗಳೆ.
ಒಟ್ಟಿನಲ್ಲಿ ಕವನ ತುಂಬಾ ಚೆನ್ನಾಗಿದೆ, ಜೊತೆಯಲ್ಲಿ ಎಂದಿನಂತೆ ನಿಮ್ಮ ಭಾಷಾ ಪ್ರಯೊಗಕ್ಕೆ ಒಂದು ಸಲಾಮ್

Sudeepa ಸುದೀಪ said...

ತುಂಬಾ ಚಂದದ ಭಾವ ಬರಹ.... ಕೊನೆಯಲ್ಲಿ ಹೊಸ ಪದಗಳ ಅರ್ಥದೊಂದಿಗೆ... ಇಷ್ಟ ಆಯ್ತು... ಧನ್ಯವಾದಗಳು ನಮಗೂ ಪ್ರತಿಬಾರಿ ಒಂದಷ್ಟು ಹೊಸ ಹೊಸ ಶಬ್ದಗಳ ಕಲಿಸುವುದಕ್ಕೆ .... carry on....

ಚಿನ್ಮಯ ಭಟ್ said...

ಸುಮತಿ ಅಕ್ಕಾ...
ಸ್ವಾಗತ್ತ ಮತ್ತೊಮ್ಮೆ ನಮ್ಮನೆಗೆ :)..
ಧನ್ಯವಾದಗಳು ಅನಿಸಿಕೆ ಬರ್ದು ಪ್ರೋತ್ಸಾಹಿಸಿದ್ದಕ್ಕೆ :) :)..
ಬರ್ತಾ ಇರಿ :)..
ನಮಸ್ತೆ :)

Swarna said...

ಜನ್ಮಾಂತರವನ್ನು ಪುಗ್ಗಿ ಎಂದದ್ದು ಸೆಳೆಯಿತು.
ಅವಳ ಮದ್ದು ದೊರಕಲಿ ಹಾರಿ ಹಾರಿ ಸುಂಗಿನಾಚೆ

ಚಿನ್ಮಯ ಭಟ್ said...

ಸ್ವರ್ಣಾ ಮೇಡಮ್..
ಧನ್ಯವಾದಗಳು :) :)...
ಬರ್ತಾ ಇರಿ :)
ನಮಸ್ತೆ :)

ಭಾವಲಹರಿ said...

ತುಂಬಾ ಚಂದದ ಭಾವ ಪ್ರಸ್ತುತಿ..... ಪದಗಳ ಕಟ್ಟುವಿಕೆ ನಿಜಕ್ಕೂ ಹೆಮ್ಮೆಯಾಯ್ತು...., ಮತ್ತಷ್ಟು ಕಾವ್ಯ ಕೃಷಿ ಸಾಗಲಿ.

Shruthi B S said...

ಚಿನ್ಮಯ್ ಎ೦ದಿನ೦ತೆ ಬಹಳ ಚನ್ನಾಗಿದೆ. ಕೆಲವು ಸಾಲುಗಳು ನನಗೆ ಬಹಳಾನೆ ಇಷ್ಟವಾಯಿತು. "ಒಲವ ಕೋಶಗಳನೇ ಜೀವಲಸಿಕೆಯಾಗಿ", ಜನ್ಮಾ೦ತರವೆ೦ಬ ಪುಗ್ಗಿ, ಕ೦ಕಲವಾಗುವವರೆಗೂ ಪ್ರೀತಿಸುವ ಪರಿ ಎಲ್ಲವೂ ತು೦ಬಾ ಚನ್ನಾಗಿದೆ.
ಹೀಗೆ ಬರೀತಾ ಇರು....:)

ಪದ್ಮಾ ಭಟ್ said...

ಒಂದು ಸಲ ಅಲ್ಲ.. ಎರಡು ಸಲ ಅಲ್ಲ... ಮೂರು ಸಲನೇ ಓದಿದೆ... ಚಂದಿದ್ದು ಮೊದಲ ಸಾಲಿನಲ್ಲಿಯೇ, ಮನ ಸೆಳೆಯುವಂತೆ....

ಚಿನ್ಮಯ ಭಟ್ said...

ಪ್ರೀತಿಯ ಗೆಳೆಯ ಪ್ರಥ್ವಿ,
ಮೊದಲಿಗೆ ಧನ್ಯವಾದ ನಿನಗೆ ನನ್ನೆಲ್ಲಾ ಬರಹಗಳನ್ನಾ ಆಸ್ಥೆಯಿಂದ ಓದಿ ನಿನಗನ್ನಿಸಿದ್ದನ್ನ ನೇರವಾಗಿ ಹೇಳುವುದಕ್ಕೆ.
ಕಮೆಂಟಿನಲ್ಲಿರುವ ಕೆಲಗೊಂದಲಗಳನ್ನ ಫೋನಾಯಿಸಿ ಪರಿಹರಿಸಿಕೊಂಡ ಮೇಲೆ ನನಗೆ ಹೇಳಬೇಕೆನ್ನಿಸಿದ್ದಿಷ್ಟು.

ಈ ಕವನದಲ್ಲಿ ಖಂಡಿತ ಹಿಂದಿನ ಕವನಗಳಲ್ಲಿರುವ ಮೊನಚು ಇಲ್ಲ.ಕಾರಣ ಹಲವಿರಬಹುದು.ಪ್ರಾಯಶಃ ಈ ವಸ್ತುವಿಗೆ ಈ ಥರಹದ ಶೈಲಿ ಸರಿಯೆನ್ನಿಸಿತೋ ಏನೋ ಬರೆಯುತ್ತ ಹೋದದ್ದು ಅಷ್ಟೇ.ಅಹ್ ಗೊತ್ತಿಲ್ಲ.ಒಂದು ಪ್ರಯೋಗ.
ನಿಮ್ಮೆಲ್ಲ ಆತ್ಮೀಯರ ಸಲಹೆಗಳಿಂದ ಒಂದಿಷ್ಟು ಕಲಿತೆ.
ವಂದೆನೆಗಳು :)...
ಇದೇ ರೀತಿ ನಿಮ್ಮ ಅನಿಸಿಕೆಗಳನ್ನು ಮುಕ್ತವಾಗಿ ಹಂಚಿಕೊಳ್ಳುತ್ತಿರಿ :)...
ನಮಸ್ತೆ :)

ಚಿನ್ಮಯ ಭಟ್ said...

ಚೆನ್ನಬಸವರಾಜ ಸರ್...
ಸ್ವಾಗತ ಮತ್ತೊಮ್ಮೆ :)...
ವಂದನೆಗಳು ನಿಮ್ಮ ಪ್ರೋತ್ಸಾಹಕ್ಕೆ :)..
ಬರ್ತಾ ಇರಿ...
ನಮಸ್ತೆ :)

ಚಿನ್ಮಯ ಭಟ್ said...

ಶೃತಿ,
ಧನ್ಯವಾದನೆ :) :)...
ಕೆಂಕಣ...ನನಗಿಷ್ಟವಾದ ಪದ ಅದು...ಅದನ್ನು ಅಲ್ಲಿಗೆ ಕೂರಿಸಲು ಸ್ವಲ್ಪ ತ್ರಾಸುಪಡಬೇಕಾಯ್ತು :D...
ಹಾಂ ಪುಗ್ಗಿ ಅದರ ಹಿಂದಿನ ಆರು ಜನುಮದಾ ಬಗ್ಗೆ :)...ಏಳುಜನಮದಲ್ಲಿ ಒಂದು ಜನುಮ ಸಧ್ಯದ್ದು.. ಇನ್ನು ಉಳಿದದ್ದು ಆಗಿಯೋ,ಆಗಬೇಕಾಗಿಯೋ ಇರುವಂಥದ್ದು...ಹಂಗಾಗಿ ಆ ಥರ ಬರ್ದಿದ್ದು...

ಖುಷಿ ಆತು.,.
ಬರ್ತಾ ಇರು :)..
ನಮಸ್ತೆ :)

ಚಿನ್ಮಯ ಭಟ್ said...

ಪದ್ಮಾ...
ಖುಷಿ ಆತು ಮೂರ್ ಮೂರ್ ಸಲ ಓದಿದ್ದು ಕೇಳಿ...
ಧನ್ಯವಾದ...
ಏನೋ ಅಲ್ಪಸ್ವಲ್ಪ ನಾಕು ಸಾಲು ಕೂಡಿಸಲು ಕಲ್ತಿದ್ದಷ್ಟೇ,ನಿಮ್ಮ ಥರ ಅದನ್ನ ಚಂದದ ಅಂಕಣವನ್ನಾಗಿಸದು ಯಾವಾಗಲೋ....
ಇರ್ಲಿ...
ಬರ್ತಾ ಇರು..ನೀನೂ ಬರೀತಾ ಇರು...
ಟಾಟಾ :)

Srikanth Manjunath said...

​​ಒಂದೆಳೆಯ ಉಸಿರಿನಲೆ ನಿಂತಿರುವೆ ಹುಡುಗಿ,
ಹನಿಸಿಬಿಡು ನೀ ಬೇಗ ಮಂಗಳದ ಗಂಗೆಯನು.

ಹಾರಲು ಸಿದ್ಧವಿರುವ ವಿಮಾನಕ್ಕೆ ಒಂದೇ ಕ್ಷಣಕ್ಕೆ ಟೇಕ್ ಆಫ್ ಸಿಕ್ಕಿದಂತಿದೆ ಈ ಮೊದಲ ಎರಡು ಸಾಲುಗಳು.. ಮನದಾಳಕ್ಕೆ ಇಳಿಯುತ್ತಲೇ ನೋಡದ ಕಾಣದ ಲೋಕದ ಕಡೆಗಿನ ಪೂರ್ಣಾಹುತಿ ಇಷ್ಟವಾಗುತ್ತದೆ..

ಮತ್ತೊಮ್ಮೆ ನಿಮ್ಮದೇ ಜಾಡಿನಲ್ಲಿ ಸೂಪರ್ ಚಿನ್ಮಯ್

ಚಿನ್ಮಯ ಭಟ್ said...

ಶ್ರೀಕಾಂತಣ್ಣಾ.ಧನ್ಯವಾದಗಳು ಛಂದದ ಅನಿಸಿಕೆಗೆ :)
ಬರ್ತಾ ಇರಿ :)

Ramesh H T said...

Nice. I like it.

ಚಿನ್ಮಯ ಭಟ್ said...

ರಮೇಶ ಸರ್....
ಸ್ವಾಗತ ನಮ್ಮನೆಗೆ :)...
ಧನ್ಯವಾದಗಳು ನಿಮ್ಮ ಪ್ರೋತ್ಸಾಹಕ್ಕೆ.....ಖುಷಿ ಆಯ್ತು :)
ಬರ್ತಾ ಇರಿ :)..ಅನಿಸಿಕೆ ತಪ್ಪು-ಒಪ್ಪುಗಳನ್ನ ಮುಕ್ತವಾಗಿ ತಿಳಿಸಿ ನನ್ನನ್ನು ಬೆಳೆಸಿ :)
ವಂದನೆಗಳು
ನಮಸ್ತೆ :)....

ಚಿನ್ಮಯ ಭಟ್ said...

ಶಿವಕುಮಾರರೇ...
ನಿಮಗೂ ನನ್ನ ಪುಟ್ಟ ಅಂಗಳಕ್ಕೆ ಆತ್ಮೀಯವಾದ ಸ್ವಾಗತ :)....
ಖಂಡಿತ ನಿಮ್ಮ ವೆಬ್ ಸೈಟ ಅನ್ನು ನೋಡುತ್ತೇನೆ...ಕೊಂಡಿಯನ್ನು ಹಂಚಿಕೊಂಡಿದ್ದಕ್ಕಾಗಿ ವಂದನೆಗಳು..
ನಮಸ್ತೆ :)