Saturday, April 19, 2014

ಈ ಚುನಾವಣೆ ಮತ್ತು "ಬೂತ"ಗಣ್ಣು

ಅದು ಮಹಾಭಾರತದ ಕುರುಕ್ಷೇತ್ರ ಯುಧ್ದದ ಸಂದರ್ಭ.ಎರಡೂ ಪಂಗಡಗಳು ಹೋರಾಡಲು ಸಜ್ಜಾಗಿ ನಿಂತಿವೆ.ಗಜ-ಅಶ್ವ ಸವಾರರು,ರಥಿಕ-ಪದಾತಿಗಳು ತಮ್ಮ ತಮ್ಮ ಸ್ಥಾನದಲ್ಲಿ ರಣತಂತ್ರಗಳಿಗನುಗುಣವಾಗಿ ನಿಂತಿವೆ.ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭರತಖಂಡದ ಸೈನಿಕರು ಭರ್ಜಿ,ಬಿಲ್ಲು,ಬಾಣ,ಗದೆಗಳನ್ನು ಹಿಡಿದು ಹಣಾಹಣಿಗೆ ನಿಂತಿದ್ದಾರೆ.ಅದನ್ನು ನೋಡಲು ನಭದಲ್ಲಿ ದೇವ,ಗಂಧರ್ವ,ಕಿಂಕರಾದಿಗಣವೂ ಕಾದುಕುಳಿತಿದೆ......
ಹೀಗೆ ಯುದ್ಧಭೂಮಿಯಲ್ಲಿ ನಡೆಯುತ್ತಿರುವುದನ್ನೆಲ್ಳಾ ಕುರುವಂಶದ ರಾಜ ದೃತರಾಷ್ಟ್ರನಿಗೆ  ಸಂಜಯನು ಅರಮನೆಯಲ್ಲಿ ಕೂತಲ್ಲಿಯೇ ಹೇಳುತ್ತಿರುತ್ತಾನೆ.ತನ್ನ ದಿವ್ಯದೃಷ್ಟಿಯ ಮೂಲಕ ಪ್ರತೀಗಳಿಗೆಯ ಮಾಹಿತಿಯನ್ನು ಮಹಾರಾಜನಿಗೆ ತಿಳಿಸುತ್ತಾನೆ.ಇದು ದ್ವಾಪರಾಯುಗದ ಕಥೆ ,ನಮಗೆಲ್ಲರಿಗೂ ಗೊತ್ತು. ಆದರೆ ಕಲಿಯುಗದಲ್ಲಿಯೂ ಇದರ ಅನುಕರಣೆ ನಡೆದಂತಿದೆ ಅಂದ್ರೆ ನಂಬ್ತೀರಾ ??


ಹೌದು,ಇಂತಹ ಒಂದು ಪ್ರಯೋಗಕ್ಕೆ ಸಾಕ್ಷಿಯಾಗುತ್ತಿರುವುದು ಈ ಸಲದ ಲೋಕಸಭಾ ಚುನಾವಣೆ -೨೦೧೪.ಮತದಾರರಿಂದ ಮನ್ನಣೆ ಪಡೆಯುವ ಈ ಚುನಾವಣಾ ಸಂಗ್ರಾಮದಲ್ಲಿ  ಶಾಂತಿಯುತ,ಪಾರದರ್ಶಕ ಮತದಾನ ಪ್ರಕ್ರಿಯೆಗೆ ಆಸ್ಪದ ನೀಡುವ ಉದ್ದೇಶದಿಂದ ಈ ಬಾರಿ ಕೆಲವು ಆಯ್ದ ಲೋಕಸಭಾಕ್ಷೇತ್ರಗಳಲ್ಲಿ ಚುನಾವಣಾ ಆಯೋಗ "ವೆಬ್ ಕಾಸ್ಟಿಂಗ್" ತಂತ್ರಜ್ನಾನವನ್ನು ಅಳವಡಿಸಿಕೊಂಡಿದೆ.ಈ ತಂತ್ರಜ್ನಾನದ ಮೂಲಕ ಪ್ರತೀ "ಬೂತ್" ನಲ್ಲಿ ನಡೆಯುವ ಚಲನವಲನಗಳ ಬಗ್ಗೆ ಆಯೋಗ ಹದ್ದಿನಗಣ್ಣಿಡಬಹುದು. ಕರ್ನಾಟಕದಲ್ಲಿ ಪ್ರಾಯೋಗಿಕವಾಗಿ ಬೆಂಗಳೂರಿನಲ್ಲಿ ಇದನ್ನು ಅನುಷ್ಠಾನಗೊಳಿಸಿದ್ದು,ಇದಕ್ಕಾಗಿ ಇಂಜಿನಿಯರಿಂಗ್ ಸ್ನಾತಕೋತ್ತರ ವಿದ್ಯಾರ್ಥಿಗಳ ನೆರವುಪಡೆಯಲಾಗಿತ್ತು.
 ಬೆಂಗಳೂರು ವಿಶ್ವವಿದ್ಯಾಲಯ ವಿಶ್ವೇಶ್ವರಯ್ಯ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿಯಾಗಿ ನಾನು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ವಸಂತನಗರದ ಮತಗಟ್ಟೆಯೊಂದರಲ್ಲಿ ಈ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದು ನನ್ನ ಮೊದಲ ಚುನಾವಣೆಯ  ಅನುಭವ,ತಿಳಿದುಕೊಂಡ ಕೆಲವಿಚಾರಗಳನ್ನು ಹಂಚಿಕೊಳ್ಳಬಯಸುತ್ತೇನೆ.






ಏನಿದು "ವೆಬ್ ಕಾಸ್ಟಿಂಗ್ "?? 

ವೆಬ್ ಕಾಸ್ಟಿಂಗ್ ಅಂದರೆ ಅಂತರ್ಜಾಲದಲ್ಲಿ ಮಾಹಿತಿಯನ್ನು ಹರಿಯಬಿಡುವುದು ಎಂದರ್ಥ.ಇಲ್ಲಿ ಚುನಾವಣಾ ಮತಗಟ್ಟೆಯಲ್ಲಿ ನಡೆಯುವ ವಿದ್ಯಮಾನಗಳನ್ನು ಕ್ಯಾಮರಾದಲ್ಲಿ ದಾಖಲಿಸಿಕೊಂಡು ತತ್ ಕ್ಷಣ ಹಾಗೆ ಅದನ್ನು ಅಂತರ್ಜಾಲಕ್ಕೆ ಹರಿ ಬಿಡುವುದು ಎಂದು ಅರ್ಥೈಸಿಕೊಳ್ಳಬಹುದು.

ಇದರ ಕಾರ್ಯವಿಧಾನವೇನು ?

ಮೊದಲಿಗೆ ನಿಗದಿಪಡಿಸಿದ ಜಾಗದಲ್ಲಿ ಲ್ಯಾಪ್ ಟಾಪ್ ಅನ್ನು ಇರಿಸಿ(ಪೂರ್ತಿ ಕೋಣೆ, ಮತಗಟ್ಟೆ ಅಧಿಕಾರಿಗಳು,ಮತದಾರರು  ಕಾಣುವಂತೆ ಮತ್ತು ಮತಯಂತ್ರದ ಬಗ್ಗೆ ತೀರಾ ಪೋಕಸ್ ಮಾಡದಂತೆ)ಅದರಲ್ಲಿನ ವೆಬ್ ಕ್ಯಾಮರಾವನ್ನು ಚಾಲೂ ಮಾಡಬೇಕು.ನಂತರ ಅಂತರ್ಜಾಲದ ಸಂಪರ್ಕವನ್ನು ಪಡೆದು(ಡೋಂಗಲ್ ಗಳ ಮೂಲಕ) ಮೊದಲೇ ಸಿಧ್ಧಪಡಿಸಿದ ಚಾನೆಲ್ಲಿನ ಮೂಲಕ ರೆಕಾರ್ಡಮಾಡಿದ ವಿಡಿಯೋವನ್ನು ಅಂತರ್ಜಾಲಕ್ಕೆ ಕಳಿಸಬೇಕು.





ಇಲ್ಲಿ  ಬಳಸಲಾಗುವ ತಂತ್ರಾಂಶಗಳೇನು ?

ಇದಕ್ಕೆ ಯಾವುದೇ ನಿರ್ದಿಷ್ಟ ತಂತ್ರಾಶದ ಬಳಕೆಯ ಬಗ್ಗೆ ಮಾಹಿತಿ ನೀಡಿರಲಿಲ್ಲ,ಬದಲಿಗೆ ಈಗಾಗಲೇ ರೂಢಿಯಲ್ಲಿರುವ ಕೆಲ ಸೋಶಿಯಲ್ ವೆಬ್ ಸೈಟ್ ಗಳನ್ನೇ ಉಪಯೋಗಿಸಲು ನಿರ್ದೇಶನ ನೀಡಲಾಗಿತ್ತು.www.ustream.tv ಎನ್ನುವ ವೆಬ್ ಸೈಟ್ ನಲ್ಲಿ ವೆಬ್ ಕಾಸ್ಟಿಂಗ್ ನ ಸೌಲಭ್ಯ(ಬೇಸಿಕ್ ವರ್ಗದ್ದು) ಮುಕ್ತವಾಗಿದ್ದು,ಅಲ್ಲಿಗೆ ನಮ್ಮ ಹೆಸರನ್ನು ನೊಂದಾಯಿಸಿಕೊಂಡು ಬ್ರೋಡ್ ಕಾಸ್ಟ  ಮಾಡಲು ಹೇಳಲಾಗಿತ್ತು.

ಪ್ರತಿ ಮತಗಟ್ಟೆಯಿಂದ ಸೆರೆಹಿಡಿದ ತುಣುಕುಗಳನ್ನು ಗುರುತಿಸುವುದು ಹೇಗೆ ?

ನಾವು ಸೆರೆಹಿಡಿದ ವಿಡಿಯೋಗಳನ್ನು ಭಿತ್ತರಿಸುವ ಚಾನೆಲ್ ಗಳಿಗೆ ಹೆಸರು ನೀಡುವ ಬಗ್ಗೆ  ಒಂದಿಷ್ಟು ಸೂಚನೆಗಳನ್ನು ನೀಡಲಾಗಿತ್ತು,ಇದು ಪ್ರತೀ ಮತಗಟ್ಟೆಯನ್ನು ಗುರುತಿಸಲು ಸಹಕಾರಿಯಾಗುತ್ತದೆ.
ಚಾನಲ್ ನ ಹೆಸರು  ಒಟ್ಟೂ ೧೧ ಅಕ್ಷರಗಳದ್ದಾಗಿದ್ದು ಈ ಕೆಳಗಿನ ಮಾದರಿಗಳಲ್ಲಿರುತ್ತಿತ್ತು
GEAC-XXX-YYYY
ಇಲ್ಲಿ ಮೊದಲ ನಾಲ್ಕು ಅಕ್ಷರಗಳು ಕಡ್ಡಾಯವಾಗಿದ್ದರೆ ನಂತರದ ಮೂರು ಅಂಕೆಗಳು ಲೋಕಸಭಾಕ್ಷೇತ್ರದ ಸಂಖ್ಯೆ(Assembly Number) ಯನ್ನೂ
ನಂತರದ ನಾಲ್ಕು ಸಂಖ್ಯೆಗಳು ಪೋಲಿಂಗ್ ಬೂತಿನ ಸಂಖ್ಯೆಯನ್ನೂ (Part Number)ಹೇಳುತ್ತಿದ್ದವು.
ಉದಾಹರಣೆಗೆ :GEAC1620040

ಈ ವಿಧಾನದ  ಪ್ರಯೋಜನಗಳೇನು ??
ಪ್ರತೀ ಮತಗಟ್ಟೆಯಲ್ಲಿನ ಕ್ಷಣಕ್ಷಣದ ತುಣುಕುಗಳನ್ನು ಅಧಿಕಾರಿಗಳು ಕೇಂದ್ರ ಕಛೇರಿಯಲ್ಲಿ ಕೂತಂತೆಯೇ ನೋಡಬಹುದು.ಇದರಿಂದ ಮತ್ತಷ್ಟು ಮತದಾನ ಪ್ರಕ್ರಿಯೆ ಮತ್ತಷ್ಟು ಪಾರದರ್ಶಕ ಹಾಗೂ ಸುಗಮವಾಗಿ ನಡೆಯುವ ಆಶಯವಿದೆ.

ಮತಗಟ್ಟೆ ಅಧಿಕಾರಿಗಳು ಇದನ್ನು ಹೇಗೆ ಸ್ವೀಕರಿಸಿದರು ?

ನಾನು ಗಮನಿಸಿದಂತೆ  ಚುನಾವಣಾ ಅಧಿಕಾರಿಗಳಿಗೆ ಇದು ಬಿಸಿ ಮುಟ್ಟಿಸಿತ್ತು.ತಮ್ಮ ಮಾತುಕತೆಗಳೆಲ್ಲವೂ ಕೇಂದ್ರ ಕಛೇರಿಯಲ್ಲಿ ದಾಖಲಾಗುವ ಮಾಹಿತಿ ಅವರಿಗಿದ್ದುದ್ದರಿಂದ ಅವರ ಕಾಡುಹರಟೆಗಳಿಗೆ ಅವಕಾಶವಿರಲಿಲ್ಲ.ಜೊತೆಗೆ ಮತಗಟ್ಟೆಯ ಎಜೆಂಟರು,ಕೆಲ ಮತದಾರರ ಒರಟು ವಾದಗಳನ್ನು ಸಾಗು ಹಾಕಲೂ ಇದು ಸಹಾಯಕವಾಗಿತ್ತು."ನೋಡಿ ನೀವು ಮಾತನಾಡುವುದೆಲ್ಲವೂ ಅಲ್ಲಿ ರೆಕಾರ್ಡ ಆಗಿ ಹೆಡ್ಡಾಫೀಸಿಗೆ ಕಾಣುತ್ತದೆ" ಎಂದಾಗ ತೆಪ್ಪಗಾದ ಸುಮಾರು ಜನರನ್ನು ನೋಡಿದ್ದೆ

.



ಸಾರ್ವಜನಿಕರಿಗೆ ಈ ತುಣುಕುಗಳನ್ನು  ನೋಡುವ ಅವಕಾಶ ಇದೆಯೇ ?

www.ustream.tv ವೆಬ್ ಸೈಟ್ ಸಾರ್ವಜನಿಕ ವೀಕ್ಷಣೆಗೆ  ಮುಕ್ತವಾಗಿರುವುದರಿಂದ ಅಲ್ಲಿನ ವಿಡಿಯೋಗಳನ್ನು ಸಾರ್ವಜನಿಕರೆಲ್ಲರೂ ನೋಡಬಹುದು.ಅಲ್ಲಿ ನಿಮಗೆ ಬೇಕಾದ ಚಾನೆಲ್ ಅನ್ನು (ಚಾನಲ್ ಬರೆಯುವ ವಿಧಾನ ಮೇಲಿದೆ) ಹುಡುಕಿ ಮತಗಟ್ಟೆಯ ವಿಡಿಯೋವನ್ನು ನೋಡಬಹುದು.


 ಇನ್ನು ವೆಬ್ ಕಾಸ್ಟಿಂಗ್ ನ ಬಗ್ಗೆ ನನಗನ್ನಿಸಿದ ವಿಷಯಗಳಲ್ಲಿ ಆಯೋಗ ಬೇರೆ ವೆಬ್ ಸೈಟ್ ಗಳನ್ನು ಆಧರಿಸುವ ಬದಲು ತನ್ನದೇ ಆದ ಪೋರ್ಟಲ್ ಅನ್ನು ಆರಂಭಿಸುವುದು,ಆಪರೇಟರುಗಳಿಗೆ ಸಾಧ್ಯವಿದ್ದೆಡೆ ವೈ-ಫೈ ವ್ಯವಸ್ಥೆ ಮಾಡುವುದು(ಕೆಲವೆಡೆ 3G ಯ ನೆಟವರ್ಕ ಆಗಾಗ ಕಡಿತವಾಗುವುದರಿಂದ) ಸೇರಿದೆ.







ಮತಗಟ್ಟೆಯಲ್ಲಿ ಚುನಾವಣಾ ಆಯೋಗದಿಂದ ಕೊಟ್ಟ ಬ್ಯಾಚು ಸಿಕ್ಕಿಸಿಕೊಂಡೆನೆಂಬ ಖುಷಿ ಬೇರೆ.ಹಿಂದಿನ ದಿನವೇ ಬಸ್ಸಿನಲ್ಲಿ ಮತಗಟ್ಟೆ ಯಂತ್ರಗಳನ್ನು ತೆಗೆದುಕೊಂಡು ಹೋಗುವುದು ,ಅಲ್ಲಿ ಮೇಜು ಕುರ್ಚಿಗಳನ್ನು ಜೋಡಿಸಿಕೊಳ್ಳುವುದು,ಮರುದಿನ ಬೆಳಿಗ್ಗೆ  ಪಕ್ಷದಿಂದ ಒಬ್ಬೊಬ್ಬ ಎಜೆಂಟುಗಳು ಬಂದು ಕುಳಿತುಕೊಳ್ಳುವುದು,ಮೊದಲನೇ ಮತಗಟ್ಟೆ ಅಧಿಕಾರಿ ಮತದಾರರ ಗುರುತು ನೋಡಿ ಅವರ ಹೆಸರನ್ನು,ಸಂಖ್ಯೆಯನ್ನು  ಜೋರಾಗಿ ಕೂಗುವುದು ಅದನ್ನುಎಜೆಂಟರುಗಳು ಗುರುತು ಹಾಕಿಕೊಳ್ಳುವುದು,ನಂತರ ಎರಡನೇಯ ಅಧಿಕಾರಿ ಹೆಬ್ಬರಳಿಗೆ ಶಾಯಿ ಬಳಿದು ,ಸಹಿ ಹಾಕಿಸಿಕೊಂಡು ,ಸ್ಲಿಪ್ ನೀಡುವುದು.ಅದನ್ನು ಪಡೆದ ಕಂಟ್ರೋಲ್ ಯುನಿಟ್ಟಿನ   ಮೂರನೇಯ ಅಧಿಕಾರಿ  ಯಂತ್ರದಲ್ಲಿ ಒಟ್ಟೂ ಮತದಾರರ  ಸಂಖ್ಯೆಯನ್ನು ಲೆಕ್ಕ ಹಾಕಿ,ಮತಚಲಾವಣೆ ಯಂತ್ರವನ್ನು ಸಿದ್ಧ ಮಾಡುವುದು.ಓಟು ಹಾಕಿದ ಕೂಡಲೇ ಅದು ಕುಯ್ಯ್ ಎಂದು ಕೂಗುವುದು(ತುಂಬಾ ಸಲ ಕೂಗಿದ ಮೇಲೆ ಅದೇ ಶಬ್ಧ ತಲೆಚಿಟ್ಟು ಬರಿಸಿತ್ತು ಅನ್ನುವ ವಿಷಯ ಬೇರೆ )ಎಲ್ಲವೂ ಕುತೂಹಲಕಾರಿಯಾಗಿತ್ತು.ಮತಗಟ್ಟೆಯ ಮೇಲಧಿಕಾರಿ ಪ್ರತೀ ಎರಡು ತಾಸಿಗೊಮ್ಮೆ ಒಟ್ಟೂ ಮತದಾರದ ಸಂಖ್ಯೆಯನ್ನು "ಇಷ್ಟು ಗಂಡು,ಇಷ್ಟು ಹೆಣ್ಣು " ಎಂದು ತನ್ನ ಮೇಲಿನವರಿಗೆ ಮೊಬೈಲಿನ ಮೂಲಕ ತಿಳಿಸುವುದನ್ನೂ ನೋಡುವ ಅವಕಾಶವಾಯಿತು.ಇದೆಲ್ಲದರ ಜೊತೆಗೆ  ಕೊನೆಯಲ್ಲಿ ಕಿಟಕಿ,ಗಾಳಿಪಂಖಗಳಿಲ್ಲದ ಕೊಠಡಿಯಲ್ಲಿ ಬಿಸಿಲುಬಾಳೆಹಣ್ಣು ತಿಂದ ಅನುಭವವವೂ ಉಚಿತವಾಗಿದ್ದಿತ್ತು.

ವಿಶೇಷ ಕೃತಜ್ನತೆ :ಪದ್ಮಾ ಭಟ್ (ಲೇಖನ ಬರೆಯುವ ಅಂಗಾಕಾರ ಹೇಳಿಕೊಟ್ಟು ಬರೆಸಿದ್ದಕ್ಕಾಗಿ )

16 comments:

sunaath said...

ಉಪಯುಕ್ತ ಮಾಹಿತಿ. ತುಂಬ ಧನ್ಯವಾದಗಳು.

ಚಿನ್ಮಯ ಭಟ್ said...

ಧನ್ಯವಾದ ಸುನಾಥ ಕಾಕಾ :)

Badarinath Palavalli said...

ವೆಬ್ ಕಾಸ್ಟಿಂಗ್ - ಬಗ್ಗೆ ತುಂಬಾ ಒಳ್ಳೆಯ ಮಾಹಿತಿಪೂರ್ಣ ಬರಹವಿದು.
ತಮಗೆ ಇನ್ನೂ ಇಂತಹ ಹಲವಾರು ಲೇಖನಗಳನ್ನು ಕೊಡುತ್ತಿರಿ ಎನ್ನುವುದು ನಮ್ಮೆಲ್ಲರ ಬೇಡಿಕೆ.

Prabhakar said...

ಕನ್ನಡ ಬ್ಲಾಗುಗಳಲ್ಲಿ ಮಾಹಿತಿ ಕೊಡುವ ಪೋಸ್ಟ್ಗಳು ಕಡಿಮೆ. ಚೆನ್ನಾಗಿದೆ.

ಪದ್ಮಾ ಭಟ್ said...

ತುಂಬಾ ಮಾಹಿತಿಯುಕ್ತ ಬರಹ..ನನಗೆ ಈ ಬಾರಿಯ ಚುನಾವಣೆಯಲ್ಲಿ ಮೊದಲ ಬಾರಿಗೆ ಶಾಯಿ ಹಚ್ಚಿಸಿಕೊಂಡು ಮತ ಹಾಕಿದಾಗಲೇ ಒಂದು ರೀತಿಯ ಖುಷಿಯಿತ್ತು..ಆದರೆ ನಿನಗೆ ಚುನಾವಣಾ ಆಯೋಗದ ಗುರುತಿನ ಚೀಟಿಯೊಂದಿಗೆ ಅಲ್ಲಿ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿದ್ದು ಬಹುಶಃ ಮರೆಯಲಾಗದ ದಿನವೇನೋ..ನಿನ್ನ ತಾಳ್ಮೆ ಮಾತ್ರ ಅದ್ಭುತ... ಕುಯ್ಯ್ ಎಂದು ಮಷಿನ್ ಕೂಗಿದರೂ ಸಹಿಸಿಕೊಂಡಿದ್ದಕ್ಕೆ...
ಹಾಂ.... ಕೃತಜ್ಞತೆಯನ್ನು ನಾನೇ ನಿನಗೆ ಹೇಳವು..

ಚಿನ್ಮಯ ಭಟ್ said...

ಬದರಿ ಸರ್..
ವಂದನೆಗಳು :) :)...ಖಂಡಿತ ನನಗೂ ನನ್ನ ಓದಿನ ವಿಷಯವಾದ ಕಂಪ್ಯೂಟರಗಳ ಬಗ್ಗೆ ಬರೆಯುವ ಆಸೆಯಿದೆ ..ಪ್ರಯತ್ನ ಮಾಡುವೆ..
ಧನ್ಯವಾದ :)

ಚಿನ್ಮಯ ಭಟ್ said...

ಪ್ರಭಾಕರ ಅವ್ರೇ,
ಸ್ವಾಗತ ನಮ್ಮನೆಗೆ ...
ವಂದನೆಗಳು ನಿಮ್ಮ ಪ್ರೋತ್ಸಾಹಕ್ಕೆ :)..
ಬರುತ್ತಿರಿ :)..ನಮಸ್ತೆ :)

ಚಿನ್ಮಯ ಭಟ್ said...

ಪದ್ಮಾ,
ಧನ್ಯವಾದನೆ :)...ಮತಗಟ್ಟೆ ಕುಯ್ಯ್ ಶಬ್ಧ..ಹುಂ ಮೊದಮೊದಲಿಗೆ ಛಂದ,ಅಮೇಲೆ ತಲೆಓಡೆತ ತರ್ತು..ಖಂಡಿತ ಅದೊಂದು ಮರೆಲಾಗದ ದಿನ(ಪ್ರಾಯಶಃ ಮರೆಯ ಬಾರದ ದಿನ )..
ಹಮ್ ವಂದನೆಗಳು ಅಕ್ಕರೆಯ ಅನಿಸಿಕೆಗೆ,ಪ್ರೋತ್ಸಾಹಕ್ಕೆ..
ಬರ್ತಾ ಇರು :)..
ನಮಸ್ತೆ :)

balasubramanya said...

ಬಹಳ ಒಳ್ಳೆಯ ವಿಚಾರ ವನ್ನು ಬ್ಲಾಗ್ನಲ್ಲಿ ಬರೆದಿದ್ದೀರ ಚಿನ್ಮೈ , ನಾನೂ ಸುಮಾರು ಮೂವತ್ತಕ್ಕೂ ಹೆಚ್ಚು ವಿವಿಧ ಚುನಾವಣ ಪ್ರಕ್ರಿಯೆಗಳಲ್ಲಿ ಪಾಲ್ಗೊಂಡಿದ್ದೇನೆ , ಚುನಾವಣೆಯ ಯಶಸ್ಸಿನ ಹಿಂದೆ ಹಲವಾರು ಜನರ ಶ್ರಮ ಇರುತ್ತದೆ, ಅದು ಹೊರಗಿನ ಜಗತ್ತಿಗೆ ಕಾಣ ಸಿಗುವುದಿಲ್ಲ, ಚುನಾವಣಾ ಸಿದ್ದತೆ ಬಹಳ ಕಷ್ಟದ ಕೆಲಸ , ಯಾವುದೇ ಹಂತದಲ್ಲಿ ಎಚ್ಚರ ತಪ್ಪಿದರೂ ಇದೇ ಪ್ರಕ್ರಿಯೆಯೇ ಹಾಳಾಗುತ್ತದೆ , ವೆಬ್ ಕ್ಯಾಸ್ಟಿಂಗ್ ಈ ಬಾರಿಯ ಚುನಾವಣ ವಿಶೇಷ , ಮುಂದೆ ಹಂತ ಹಂತ ವಾಗಿ ಇದು ಎಲ್ಲಾ ಮತಗಟ್ಟೆ ಗಳಿಗೆ ವಿಸ್ತರಿಸಲಾಗುತ್ತದೆ , ಅದರ ಬಗ್ಗೆ ಒಳ್ಳೆಯ ತಿಳುವಳಿಕೆ ಕೊಟ್ಟಿದ್ದೀರಿ ಹಾಗು n o t a ಗುಂಡಿ ಕೂಡ ಈ ಬಾರಿಯ ಚುನಾವಣೆಯ ವಿಶೇಷ , ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಅನುಭವವನ್ನು ಚೆನ್ನಾಗಿ ಹಂಚಿ ಕೊಂಡಿದ್ದೀರಿ, ಒಳ್ಳೆಯ ಮಾಹಿತಿಗೆ ನಿಮಗೆ ಜೈ ಹೊ,

Swarna said...

ಉಪಯುಕ್ತ ಮಾಹಿತಿ

Shruthi B S said...

ಬಹಳ ಉಪಯುಕ್ತ ಮಾಹಿತಿ ಚಿನ್ಮಯ್.. ನಾನೂ ಕೂಡ ವೋಟ್ ಹಾಕೊದಿಕ್ಕೆ ಹೋಗಿದ್ದಾಗ, ಅಲ್ಲಿ ಪೋಲಿಸ್ ಅ೦ಕಲ್ ಒಬ್ರು ಹೀಗೆ ರೆಕಾರ್ಡ್ ಆಗುತ್ತಿರುವ ಬಗ್ಗೆ ಹೇಳಿದರು. ಆದರೆ ಅದನ್ನ ಸಾರ್ವಜನಿಕರೆಲ್ಲರು ನೋಡಬಹುದು ಅ೦ತ ಈಗ ಗೊತಾಯ್ತು. ಧನ್ಯವಾದಗಳು ಮಾಹಿತಿಗಾಗಿ...:)

ಚಿನ್ಮಯ ಭಟ್ said...

ಬಾಲು ಸರ್...
ಧನ್ಯವಾದಗಳು ನಿಮ್ಮ ಆಶೀರ್ವಾದಪೂರ್ವಕ ಸಲಹೆ ಪ್ರೋತ್ಸಾಹಗಳಿಗೆ...ಲೇಖನ ಓದಿ ಕರೆ ಮಾಡಿ ಮೆಚ್ಚಿಗೆ ಸೂಚಿಸಿದ್ದು ಬಹಳ ಸಂತೋಷವಾಯಿತು.ನಿಮ್ಮ ಚುನಾವಣೆ ಕಾರ್ಯದ ಅನುಭವಗಳನ್ನು ಕೇಳುವ ಅವಕಾಶವೂ ಆಯಿತು..
ವಂದನೆಗಳು..
ಬರುತ್ತಿರಿ..
ನಮಸ್ತೆ :)

ಚಿನ್ಮಯ ಭಟ್ said...

ಸ್ವರ್ಣಾ ಮೇಡಮ್..
ಧನ್ಯವಾದಗಳು ..ಬರ್ತಾ ಇರಿ :)..

ಚಿನ್ಮಯ ಭಟ್ said...

ಶೃತಿ ಧನ್ಯವಾದನೇ... :) :)....
ಸುಮಾರು ಜನಕ್ಕೆ ಹೆದರಿಸುವ ಸಾಧನವೂ ಆಗಿದ್ದು ಈ ಸಲದ ವೆಬ್ ಕಾಸ್ಟಿಂಗ್ ;)

ಭಾವಲಹರಿ said...

ಅಬ್ಬಬ್ಬಾ ... ಇಷ್ಟೆಲ್ಲಾ ಇದೇಯೇ... ಕುರುಕ್ಷೇತ್ರದ ಯುದ್ಧದಲ್ಲಿ, ಸಂಪೂರ್ಣ ಚುನಾವಣೆಗೆ ಸಂಬಂಧಿಸಿದ ಮಾಹಿತಿ; ಮತ್ತಷ್ಟು ನಿಮ್ಮಿಂದ ವೈವಿಧ್ಯಮಯ ಲೇಖನಗಳು ಬರುತ್ತಿರಲಿ.

ಚಿನ್ಮಯ ಭಟ್ said...

ಧನ್ಯವಾದಗಳು ಚೆನ್ನಬಸವರಾಜ ಸರ್ :)