Friday, November 11, 2022

ಪಾರಿವಾಳ

ತಣ್ಣಗಿದ್ದ ಬೀದಿಯಲ್ಲಿ ಗುಮೀಟು ಬಿದ್ದಂತೆ ದುಢುಂ ಸದ್ದು

ದಿವ್ಯಧ್ಯಾನದಲ್ಲಿ ಕೂತಿದ್ದ ಪಾರಿವಾಳದ ಹಿಂಡು ಥಟ್ಟನೆ ದಂಡೆದ್ದಿತು

ಪಟಪಟ ರೆಕ್ಕೆ ಬಡಿತ, ಪ್ರದಕ್ಷಿಣಾಕಾರ ಒಂದು ದೊಡ್ಡ ಸುತ್ತು

ಸಾವರಿಸಿ ವಾಪಸಾದಾಗ ಕೂತ ಜಾಗ ಬೇರೆಯವರ ಪಾಲಾಗಿತ್ತು

 

ಜಾಗವೇನೂ ಸ್ವಂತದ್ದಲ್ಲ, ಕಾರ್ಪೊರೇಷನ್ ಸಬ್ಸಿಡಿಯ ಸೋಲಾರ್ ಪ್ಯಾನೆಲ್ಲು

ಮೊದಲಿದ್ದವರ್ಯಾರೋ ಪಿಷ್ಟಿ ಹಾಕಿ ಬಿಟ್ಟುಹೋದ ಸಿಲಿಕಾನ್ ಜಾರುಗಲ್ಲು

ಪಕ್ಕದ ಬೀದಿಯ ಕಿರಾಣಿ ಅಂಗಡಿಯೇ ದಿನಕ್ಕೂ ಇವಕ್ಕೆ ರೇಷನ್ನು ದಾತ

ಚಂದ ಸಿಂಗರಿಸಿದ ಬಾಲ್ಕನಿಯಲಿ ಗೂಡುಕಟ್ಟುವುದು ಇವುಗಳ ಚಿರ ಇಂಗಿತ

 

ಕಡ್ಡಿ ಹುಲ್ಲು ಗರಿಕೆ ಇಂತಹುದೇ ಬೇಕೆಂದಿಲ್ಲ, ಜಂಗು ತಂತಿ ರಟ್ಟುಗಳೂ ಆದೀತು

ಚದರಡಿ ಲೆಕ್ಕದಲ್ಲೆಲ್ಲ ಗೂಡು ಬೇಕಿಲ್ಲ, ಒಂದುವರೆ ಕಾಲು ಊರುವಷ್ಟೇ ಸಂದೀತು

ಶಹರದ ಅಂಗವಾಗಿವೆ ಇವೀಗ, ಬ್ರಿಟೀಶ್ ಕಾಲದ ಗೋಡೆಗಳಿಗೆ ನೈಸರ್ಗಿಕ ಚಿತ್ತಾರ

ನಾಕುದಿನ ಬೀಗ ತೆಗೆಯದ ಆಫೀಸು ಸ್ಟೋರ್ ರೂಮಿನಲ್ಲೆಲ್ಲ ಸಾಂದರ್ಭಿಕ ಸಂಸಾರ

 

ನಿತ್ಯ ಕೋಲಾಹಲ ಗದ್ದಲ ಹೆದರುವುದಿಲ್ಲ ಇವು; ಶತಮಾನಗಳಿಂದಲೂ ಶಾಂತಿದೂತ

ಬಹುಶ ಬಹಳ ಹಿಂದೇ ಎಲ್ಲರಿಗಿಂತ ಮೊದಲು ಕೆಲಸವರಸಿ ವಲಸೆ ಬಂದ ಸಂದೇಶದಾತ

ಕತ್ತು ಅಲ್ಲಾಡಿಸಿ ಮುಂದೆ ಸಾಗಿ ಎಂಬುದೇ ಸಂದೇಶವೇನೋ ಹಳಿವ ನವ ಶಹರವಾಸಿಗಳಿಗೆ

ಎಸೆದ ಕಸದಿಂದ ಗೂಡುಕಟ್ಟುವ ಕುಸುರಿ, ಒಂಟಿಕಾಲ ಯೋಗಕ್ಕೆ ಸಿಗಲೇಬೇಕಿದೆ ಮೆಚ್ಚುಗೆ

 

ಪರರ ಮೆಚ್ಚಲಿಸಲಿಕ್ಕಲ್ಲ, ಸ್ವಂತದ ರಿಯಾಜಿಗಲ್ಲ; ದಿನಕ್ಕೊಂದಿಷ್ಟು ಸಹಜ ಹೂಂಕರಿಕೆ

ಹೇಗೂ ತೂರಿ, ಅಡುಗೆಮನೆ ಸೇರಿ ಯಜಮಾನತಿ ಕಂಡೊಡನೆ ಹೊರಡುವ ಪಟಪಟಿಕೆ

ಇವುಗಳ ದೆಸೆಯಿಂದ ದೇವ ಗೋಪುರ, ಓಪನ್ ಕೆನೊಪಿಗಳಿಗೂ ಹಸಿರು ಜಾಳಿಗೆ

ಒತ್ತುವರಿಯೆಂದು ಒಕ್ಕಲೆಬ್ಬಿಸಲೂ ಬಹುದು, ಖಾತರಿಯೇನಿಲ್ಲ ಯಾವುದಕ್ಕೂ ಇಲ್ಲಿ ನಾಳೆಗೆ

 

ನಗರ ಮತ್ತು ಪಾರಿವಾಳ ಸೂರ್ಯ-ಚಂದ್ರರಂತೇ ಜೋಡಿಯಾಗಿ ಹೋಗಿವೆ

ಕಮಟು ವಾಸನೆಯೇ ಪಾರಂಪರಿಕತೆಯ ಪರಿಮಳವೆನಿಸುವಷ್ಟು ನಂಬಿಸಿಬಿಟ್ಟಿವೆ

 

-ಚಿನ್ಮಯ

11/11/2022

4 comments:

sunaath said...

ಪರಿವಾಳದ ಬದುಕನ್ನು ಚೆಂದವಾಗಿ ವರ್ಣಿಸಿದ್ದೀರಿ. ಮಾನವರಿಗೂ ಸಹ ಇದೊಂದು ಕೈಗನ್ನಡಿ. ನಿಮ್ಮ ಕಾವ್ಯಧಾರೆ ಸುಲಲಿತವಾಗಿದೆ. ಅಭಿನಂದನೆಗಳು!

ಅನಂತ ಪ್ರಣಯ said...

ಸುಂದರ ಬರಹ 😊

ಚಿನ್ಮಯ ಭಟ್ said...

ಧನ್ಯವಾದ ಸುನಾಥ ಸರ್

ಚಿನ್ಮಯ ಭಟ್ said...

"ಅನಂತ" ಧನ್ಯವಾದಗಳು