Sunday, March 17, 2013

ನಮನ

ಮೊದಲನೇ ಇಂಟರ್ನಲ್ಸು ಮುಗಿತು...ಹೆಂಗಾಯ್ತು ಅಂತೆಲ್ಲಾ ಕೇಳ್ಬೇಡಿ ಪ್ಲೀಸ್ ;)...
ಅದೇ ಖುಷಿಗೆ ಒಂದು ಕವನ ಬ್ಲಾಗಿಸ್ತಾ ಇದೀನಿ...
ಈಗ ಸುಮಾರು ಹದಿನೈದು ದಿನಗಳ ಹಿಂದೆ ವಿ.ಟಿ.ಯು ಫೆಸ್ಟ್ ಗೆ ಅಂತಾ ಅರ್ಜಂಟಿನಲ್ಲೊಂದು ದೇಶಭಕ್ತಿ ಗೀತೆಯನ್ನು ಬರೆಯಲು ಹೊರಟು ಹಿಂಗಾಯ್ತು...
ಜಾಸ್ತಿ ತೀರಾ ಯೋಚಿಸಿ ಬರೆದದ್ದೇನಲ್ಲಾ,ಹಂಗೆ ಸುಮ್ಮನೆ ಗೀಚಿದ್ದು...
ಫೆಸ್ಟ್ ನಾ ಸುದ್ದಿಯಂತೂ ಇಲ್ಲ,ಬರೆದದ್ದನ್ನಾ ನಿಮ್ಮೆದುರು ಇಟ್ಟಿದ್ದೇನೆ....
ಸಮಯವಿದ್ದಾಗ ಒಮ್ಮೆ ದಯವಿಟ್ಟು  ನೋಡಿ,ಹೆಂಗಿದೆ ಹೇಳಿ.....


ಮೂಡಣ ಪಡುವಣ,ಬಡಗಣ ತೆಂಕಣ
ಕೂಡಿದೆ ಜನಮನ ಹಾಡಲು ಜನಗಣ||

ಸಾಗರದಲೆಯಲು ಸರಿಗಮ ಸ್ವರವಿದೆ,
ಹಿಮಗಿರಿ ಜಾಲದಿ ವೇದದ ಅರಿವಿದೆ,
ಸಮತೆಯ ಬಯಲಲಿ ಹಸುರಿನ ಗರಿಯಿದೆ,
ನಲುಮೆಯ ನದಿಯಲಿ ಕಾಯಕ ಝರಿಯಿದೆ.

ಗಣಗಳ ಹಿರಿತನ,ಗಣಕದ ಹೊಸತನ,
ಚಿಗುರಿಗೆ ಬೇರಿನ ನೆರವಿನ ಸಿರಿತನ.
ಕಲೆಗಳ ನಂದನ,ಭಾಷೆಯ ಗೆಳೆತನ,
ವಿವಿಧತೆಯಲ್ಲೂ ಏಕತೆಯಾ ಗುಣ.

ಜ್ನಾನದ ಸ್ಪುರಣ,ಭಕುತಿಯ ಹೂರಣ,
ದೇಶಕೆ ದೇಹದ ಶಕ್ತಿಯೇ ಅರ್ಪಣ..
ವೈರಿಗೆ ಶೌರ್ಯದ ರಕುತದ ತರ್ಪಣ,
ನೀಡುವ ಸೈನ್ಯಕೆ ನಮ್ಮಯ ನಮನ..
ಹೆಮ್ಮೆಯ ನಮನ..

-ಚಿನ್ಮಯ ಭಟ್ಟ

(ಇದರಲ್ಲಿ ಅದೇಕೋ ಹೊಸ ಶಬ್ದಗಳು ಹೊಳೆಯಲಿಲ್ಲ....ಸುಮ್ಮನೆ ತುರುಕಲೂ ಮನಸಾಗಲಿಲ್ಲ... ಅದಕ್ಕಾಗಿ ಕ್ಷಮೆ ಇರಲಿ)
ಹಾಂ ಎಂದಿನಂತೆ ನಿಮ್ಮ ಸಲಹೆ-ಸೂಚನೆಗಾಗಿ ಕಾಯ್ತಿರ್ತಿನಿ..ನಿಮ್ಮ ಅನಿಸಿಕೆ ನಾ ದಯವಿಟ್ಟು ಬರಿರಿ...ನಂಗೆ ಅದೇ ಶಕ್ತಿ..
ತಪ್ಪುಗಳೇನಾದ್ರೂ ಕಂಡ್ರೆ ಮರೆಯದೇ ತಿಳಿಸಿ ನನ್ನನ್ನಾ ಬೆಳೆಸ್ತೀರಾ ಅಲ್ವಾ???


Sunday, February 24, 2013

ಬೇಲಿಯಾ ಮುಳ್ಳುಗಳು( ಇದೆನ್ನ ಮನದ ಹಾಡು!!)

"ಬದುಕಿಗೆ ನಿಯಮಗಳು-ಕಟ್ಟುಪಾಡುಗಳು  ಬೇಕು ,ಆದರೆ ಅದೇ ಬದುಕಾದರೆ??" ವಯಸ್ಸಿಗೆ ಮೀರಿದ ಆಲೋಚನೆ ಅಂತೀರಾ???ಹಾ ಹಾ....ಪ್ರೇಮ ಪ್ರೀತಿ ಬಿಟ್ಟು ಒಂದ್ಸ್ವಲ್ಪ ಏನೋ ವಿಚಾರ ಅದು ಇದು ಅಂತಾ ಬರ್ಯಕ್ ಹೊರ್ಟ್ನಾ???ಛೇ ಗೊತ್ತಿಲ್ಲಪ್ಪಾ...ಸರಿ ವಿಷ್ಯಕ್ ಬರ್ತೀನಿ..
ಈಗೊಂದು ತಿಂಗಳ ಹಿಂದೆ ಡಾ.ಲಕ್ಷ್ಮಿನಾರಾಯಣ ಭಟ್ಟರ "ಕಾವ್ಯ ಪ್ರತಿಮೆ" ಎಂಬ ಪುಸ್ತಕವನ್ನು ತಂದು ೪-೫ ಪುಟ ಓದಿದ್ದೆ...
ಪ್ರತಿಮೆಗಳು ಎಂದರೇನು ಎಂಬುದು ಚೂರ್ ಚೂರು ಅರ್ಥವಾಗಿ ಅದನ್ನು ಬಳಸಬೇಕು ಎಂಬುದು ತಲೆಗೆ ಹೊಕ್ಕಿತ್ತು...
ಇದೀಗ ಸುಮಾರು ದಿನದಿಂದ ತಲೆಯಲ್ಲಿ ಕೊರೆಯುತ್ತಿದ್ದ ಹುಳವೊಂದನ್ನು ನಿಮ್ಮೆದುರಿಟ್ಟಿದ್ದೇನೆ...ವಸ್ತು ನಾನೇ...ಇನ್ನೇನಿಲ್ಲ..ಮನಸ್ಸು ..ಅದರಲ್ಲಿನ ಬದಲಾವಣೆಗಳು...
ಒಮ್ಮೆ ಓದಿ...ಜೊತೆಗೆ ಕವನದ ಕೆಳಗೆ ಬರಹದ ಆಶಯವನ್ನೂ ಕೊಟ್ಟಿದ್ದೇನೆ ಅದನ್ನೂ ನೋಡಿ ಕವನ ಬೇಗ ಅರ್ಥವಾಗಬಹುದು..


ಬೇಲಿಯಾ ಮುಳ್ಳುಗಳು ತಟ್ಟುತಿವೆ ಬಾಗಿಲಿಗೆ
ಹೇಡಿಗೆಯ ಗಡಿ ದಾಟಿ ನಡೆಯುತಿವೆ ಜಗಲಿಗೆ

ಬಡವನೀ ಬಿಡಾರದೀ ಜೊತೆಗಿದ್ದ ಕಪಿಯೊಂದು,
ತುಂಡುಗುಪ್ಪಣ ಹಾಕಿ ಕುಣಿದಿತ್ತು ಊರ್ಮೇಲೆ.
ಲಿಗಾಡಿ ಜಾತಿಯದು ನಿಂತಲ್ಲಿ ನಿಲದೆಂದು,
ನೆಡಿಸಿದೆ ಮುಳ್ಳುಗಳ ಅಂಗಳದ ತುದಿಯಲ್ಲೇ.

ನಡುವೆತ್ತರ ಬೆಳೆಯಿತದು ಗೊಬ್ಬರವ ಬೇಡದೇ,
ಹಾಡಿಕುಣಿಯಿತು ಮಂಗ ಒಬ್ಬನೇ ಅದರೊಳಗೆ,
ನೋಡಿದಾ ಕಣ್ಣುಗಳು ಅದ್ಭುತವು ಎಂದೆನಲು,
ಮೂಡಿತು ಕೋಡೊಂದು ತಿಳಿಯದೇ ಒಳಗೊಳಗೆ.

ಗಡಿಸರಿಗೆ ಇಂದೀಗ ಅಂಗಳಕು ಹರಡಿದೆ,
ಜಡಿತಟ್ಟಿ ನಡುಮುರಿದು ಮನೆಕೋಳು ಹಿಡಿದಿದೆ.
ಬಡಪಾಯಿ ಮರ್ಕಟಕೆ ಉಸಿರೊಂದೆ ಉಳಿದಿದೆ.
ನಡೆನಡೆಗು ತಡೆಯಿರಲು ಕುಣಿಜೀವ ಸೊರಗಿದೆ,
ನಡೆನಡೆಗು ತಡೆಯಿರಲು ಕುಣಿಜೀವ ಸೊರಗಿದೆ.

ಬೇಲಿಯಾ ಮುಳ್ಳುಗಳು ತಟ್ಟುತಿವೆ ಬಾಗಿಲಿಗೆ,
ಹೇಡಿಗೆಯ ಗಡಿ ದಾಟಿ ನಡೆಯುತಿವೆ ಜಗುಲಿಗೆ!!!!

-ಚಿನ್ಮಯ :)

ಶಬ್ಧಾರ್ಥ: 
ಹೇಡಿಗೆ=ಮನೆಯ ಮುಂದಿನ ಕಟ್ಟೆ(ಮೆಟ್ಟಿಲುಗಳ ಪಕ್ಕ ಉದ್ದಕೆ ಏನೋ ಇರತ್ತಪಾ ಅದಕ್ಕೆ ಹಂಗನ್ನದು ನಮ್ ಕಡೆ),
ಜಗಲಿ=ಜಗುಲಿ,ಇಂದಿನ "ಹಾಲ್",
ತುಂಡುಗುಪ್ಪಣ=ಲಗಾಮಿಲ್ಲದ ಕುಣಿತ(ನಮ್ಮನೆ ಕಡೆ ಈ ರೀತಿಯ ಅರ್ಥದಲ್ಲಿ ಬಳಸುತ್ತಾರೆ,ಬಹುಷಃ ಯಕ್ಷಗಾನದಲ್ಲಿ ಮಂಡಿಯೂರಿ ಕುಣಿಯುವ ನೃತ್ಯದ ಬಗೆಗೂ ಇದೇ ಹೆಸರಿದೆ ಎನ್ನುವುದು ನನ್ನ ಭಾವನೆ),
ಊರ್ಮೇಲೆ=ಊರಿನ ಮೇಲೆ,ಊರಿನ ತುಂಬೆಲ್ಲಾ..
ಲಿಗಾಡಿ=ಹೋಳಿ,ಕಿಲಾಡಿ..
ನಡುವೆತ್ತರ=ಸೊಂಟದಷ್ಟು ಎತ್ತರ.
ಕೋಡು ಮೂಡುವುದು=ಹೆಮ್ಮೆ ,ಒಂಥರ ಅಹಂಕಾರವೂ ಇರಬಹುದು...
ಗಡಿಸರಿಗೆ=ಸರಿಗೆ ಎಂದರೆ ಕಬ್ಬಿಣದ ತಂತಿ..ಗಡಿಸರಿಗೆ ಅಂದರೆ ಗಡಿಯನ್ನು ಗುರುತಿಸುವ ತಂತಿ ಎನ್ನುವ ಅರ್ಥದಲ್ಲಿ..
ಜಡಿತಟ್ಟಿ=ಮಳೆಯಿಂದ ಮನೆಯನ್ನು ರಕ್ಷಿಸಲು ಮನೆಯ ಸುತ್ತ ಕಟ್ಟುತ್ತಿದ್ದ ಸೋಗೆಯ ಮುಚ್ಚಿಗೆ...
ಮನೆಕೋಳು=ಮನೆಯ ಮೇಲ್ಭಾಗದ ಅಂಚು..ಮನೆಕೋಳು ಅಂದರೆ ಅಧಿಕಾರದ ಪ್ರತೀಕವಾಗಿ ಇಲ್ಲಿ..
ಮರ್ಕಟ=ಮಂಗ :) (ನಾನು ಒಂದೊಂದ್ ಸಲಾ :)P )



(ಆಶಯ: ನಮ್ಮ ಮನಸ್ಸಿನ  ಮಂಗಾಟಗಳು ಹಾಗೂ ಅದನ್ನು ನಿಯಂತ್ರಿಸಲು ನಾವೇ ಹಾಕಿಕೊಳ್ಳುವ ಕೆಲವು ನಿಯಮಗಳು...
ಅದು "ಹೊಸದನ್ನೇನೋ ಸೃಷ್ಟಿಸಲು ಹೋಗುವೆ" ಎನ್ನುವುದಿರಬಹುದು ಅಥವಾ "ಎಲ್ಲರಂತೇ ನೀನೂ ಇರು,ನಿನಗೇಕೆ ಇಲ್ಲದ ಉಸಾಬರಿ" ಎನ್ನುವುದಿರಬಹುದು.. 
ಈ "ಶಿಸ್ತು ಹಾಗೂ ಸೃಜಶೀಲತೆಯ ನಡುವಿನ ತಿಕ್ಕಾಟ" ,ಕೊನೆಗೆ ಒಂದು ದಿನ  ನಿಯಮಗಳೇ ಜಾಸ್ತಿಯಾಗಿ ಆ ಮಂಗಾಟಗಳಿಗೆ .ಹೊಸ ಆಲೋಚನೆಗಳಿಗೆ ಆಸ್ಪದವೇ ಇರದಂತಾದ ಸ್ಥಿತಿಯೇ  ನನ್ನ ಈ ಕವನದ ವಸ್ತು..
ಇಲ್ಲಿ ಹೊಸ ಹೊಸ ಆಲೋಚನೆಗಳ ಪ್ರತೀಕವಾಗಿ "ಮಂಗ"ವಿದ್ದರೆ,ಶಿಸ್ತು-ನಿಯಮಗಳನ್ನು ಬಿಂಬಿಸಲು "ಮುಳ್ಳು ಬೇಲಿ"ಯನ್ನು ಬಳಸಿದ್ದೇನೆ...ಇಲ್ಲಿಯ ಮನೆ ,ನನ್ನ ಮನಸ್ಸು...)

ತಪ್ಪು-ಒಪ್ಪನ್ನು ಕಮೆಂಟಿನ ಮೂಲಕ ತಿಳಿಸಿ ಎಂದಿನಂತೆ ಈ ಹುಡುಗನ್ನಾ ಪ್ರೋತ್ಸಾಹಿಸ್ತೀರಾ ಅಲ್ವಾ??? 
ನಮಸ್ತೆ :)

Friday, February 22, 2013

ಮೈನಾ ..ತುಂಬಾ ತುಂಬಾ ವೈನ !




ತೇವವಾದ ನೋಡುಗರ ಕಣ್ಣುಗಳನ್ನು ಅತ್ತಿತ್ತ ಸರಿಯದಂತೆ ಹಿಡಿದಿಟ್ಟ ಸನ್ನಿವೇಶ,ಹಿನ್ನೆಲೆಯಲ್ಲಿ ತೇಲಿ ತೇಲಿ ಬಂದು ಎದೆಯಲಿ ಮಾರ್ದನಿಸುವ ಸೋನು ನಿಗಮರ ಹಿನ್ನೆಲೆ ಗಾಯನ,ಕರುಳು ಕಿತ್ತು ಬರುವಂತೆ ಇರುವ ಪಾತ್ರಗಳ ಅಭಿನಯ..ಅಭ್ಭಾ ವಾವ್..ಮೈನಾ ಚಿತ್ರದ ಕ್ಲೈಮ್ಯಾಕ್ಸ್ ಗೆ ಅದೇ ಸಾಟಿ…ಜೀವನದಲ್ಲಿ ಮೊದಲ ಬಾರಿಗೆ ಕಾಲೇಜು ಹುಡುಗರೆಲ್ಲಾ ಚಿತ್ರಮಂದಿರದಿಂದ ಅಳುತ್ತಾ ಹೊರಬರುವುದನ್ನು ನೋಡಿದೆ..ಇನ್ನೊಂದು ಸಲ ಅದೇ ಚಿತ್ರ ನೋಡಿದರೆ ನಾನೂ ಅಳುತ್ತೇನೋ ಏನೋ..ಅದೇನೋ ಗೊತ್ತಿಲ್ಲ ಇದೀಗ ೮:೩೦ರ ಷೋ ಮುಗಿಸಿ ರೂಮಿಗೆ ಬಂದವನನ್ನು ತಾನಾಗೇ ಬೆರಳುಗಳು ಕುಣಿಸುತ್ತಿವೆ…ಒಂದೊಳ್ಳೆ ಕನ್ನಡ ಚಿತ್ರ ನೋಡಿದ ಖುಷಿಯಲ್ಲಿ ಏನೇನೋ ಗೀಚುತ್ತಿವೆ…
ಕಳೆದೆರಡು ವಾರದಿಂದ ಪ್ರಾಜೆಕ್ಟಿನ ಗೊಂದಲದಲ್ಲಿ ಮುಳುಗಿದ್ದೆ….ಮಧ್ಯದಲ್ಲೊಂದಿಷ್ಟು ತೀವ್ರ ತರವಾದ ನಿರಾಸೆ,ಬಿಡದೇ ಕಾಡಿದ ಹತಾಶೆ….ಅದರಿಂದ ಸುಧಾರಿಸಿಕೊಳ್ಳುವುದೇ ಸ್ವಲ್ಪ ಕಷ್ಟವಾಯಿತು…ಸುಮ್ಮನೆ ಬೇಜಾರು ಕಳೆಯಲೆಂದು ಗೆಳೆಯ ಪ್ರಥ್ವಿಯ ಜೊತೆಗೂಡಿ “ಮೈನಾ” ಚಿತ್ರಕ್ಕೆ ಹೋಗಿದ್ದೆ…ತುಂಬಾ ವೈನಾದ ಚಿತ್ರವದು..ನನಗಂತೂ ಬಹಳ ಇಷ್ಟವಾಯ್ತು …ಈಗೇನೋ ಮನಸ್ಸು ಹಗುರವೆನಿಸಿದೆ …
ನಾಗಶೇಖರ್ ನಿರ್ದೇಶನದ,ರಾಜಕುಮಾರ್ ನಿರ್ಮಾಣದ ಈ ಚಿತ್ರಕ್ಕೆ ಆ ದಿನಗಳು ಚೇತನ್ ಹಾಗೂ ನಿತ್ಯಾ ಮೆನನ್ ನಾಯಕ- ನಾಯಕಿಯರು..ಉಳಿದಂದತೆ ತಾರಾಗಣದಲ್ಲಿ ಮಾಳವಿಕಾ,ತಬ್ಲಾನಾಣಿ.ಸುಮನಾ ರಂಗನಾಥ್,ಸುಹಾಸಿನಿ,ಅನಂತ್ ನಾಗ್ ಮುಂತಾದವರಿದ್ದಾರೆ… ಸಂಗೀತ ಜೆಸ್ಸಿಗಿಫ್ಟ್ ಹಾಗೂ ಹಿನ್ನೆಲೆ ಸಂಗೀತ, ಚಿತ್ರದಲ್ಲೂ ಬಂದು ನಗಿಸಿಹೋಗುವ ಸಾಧುಕೋಕಿಲ..ನನ್ನ ಮಟ್ಟಿಗೆ ಈ ಚಿತ್ರದ ಇನ್ನೊಂದು ಹೀರೋ ಚಿತ್ರದ ಛಾಯಾಗ್ರಾಹಕ ಸತ್ಯ ಹೆಗಡೆ..
ನಿಜ ….ದೂದ್ ಸಾಗರ ಜಲಪಾತವನ್ನು ಕ್ಯಾಮರಾ ಕಣ್ಣುಗಳಲ್ಲಿ ತೋರಿಸಿದ ಪರಿ ಮನಮೋಹಕ…ಅದನ್ನು ನೋಡಿದ ಕೂಡಲೇ ಒಮ್ಮೆ ಅಲ್ಲಿಗೆ ಹೋಗಲೇಬೇಕು ಅನ್ನಿಸದೇ ಇರಲಾರದು…ಹಸಿರು ಕಾನನದ ಮಧ್ಯ ಚೆಲ್ಲಿದ ಹಾಲಿನಂತೆ ಇಳಿಯುವ ಜಲಧಾರೆಯನ್ನು ತೋರಿಸಿರುವ ರೀತಿಯೇ ಮೊದಲಾರ್ಧದಲ್ಲಿ ನಿಮ್ಮನ್ನು ಸೆರೆಹಿಡಿಯುತ್ತದೆ…ಅದೇ ಸುಂದರ ಪರಿಸರದಲ್ಲಿ ಬಹುತೇಕ ಮೊದಲಾರ್ಧದ ಕಥೆ ಸಾಗುತ್ತದೆ…
ಮುಂದೆ ಅನೇಕ ತಿರುವುಗಳಲ್ಲಿ ಸಾಗುವ ಕಥೆಯಲ್ಲಿ ನಾಯಕ ಚೇತನ್ ಪ್ರೇಕ್ಷಕರ ಮನಮುಟ್ಟುವಂತೆ ಅಭಿನಯಿಸಿದ್ದಾರೆ…ಪ್ರೀತಿಗಾಗಿ ತಹತಹಿಸುವ ಹುಡುಗನಾಗಿ,ಹೆಂಡತಿಯನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡುವ ಗಂಡನಾಗಿ ,ಕೊನೆಗೆ ಹೊಡೆದಾಟದ ಸನ್ನಿವೇಶದಲ್ಲೂ  ಸಹ ಅವರ ಅಭಿನಯ ಇಷ್ಟವಾಗುತ್ತದೆ…ಇನ್ನು ವಿಶೇಷ ರೀತಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಾಯಕಿ ನಿತ್ಯಾ ಮೆನನ್ ತಮ್ಮ ಮುದ್ದು ನಗೆಯಿಂದ ಮೊದಲಾರ್ಧದಲ್ಲಿ ಇಷ್ಟವಾದರೆ,ನಂತರ ಕಥೆ ಸಾಗಿದಂತೆ ಕರುಳು ಕಿವಿಚುವಂತೆ ಅಭಿನಯಿಸಿದ್ದಾರೆ…ಇದರ ಜೊತೆಗೆ ಚಿತ್ರದಲ್ಲಿ ಪೋಲಿಸರ ಮಾನವೀಯ ಭಾವನೆಗಳಿಗೆ ಮಹತ್ವದ ಸ್ಥಾನ ನೀಡದ್ದು ಇಷ್ಟವಾಯಿತು.…
ಇನ್ನೂ ಬರೆದರೆ ಉತ್ಪ್ರೇಕ್ಷೆ ಎನ್ನಿಸಬಹುದೇನೋ…ಗೊತ್ತಿಲ್ಲ…ಆದರೇಕೋ ಮುಂಗಾರುಮಳೆ ಬಿಟ್ಟರೆ ಮನಸ್ಸಿಗೆ  ತುಂಬಾ ಕ್ಲೈಮಾಕ್ಸ್ ಈ ಚಿತ್ರದ್ದು… ಸುಂದರವಾದ ಹಾಡುಗಳು,ಅಂದದ ಲೊಕೇಶನ್ ಗಳಿರುವ ಈ ಚಿತ್ರ ಎಲ್ಲರಿಗೂ ಇಷ್ಟವಾಗುತ್ತದೆ ಎಂಬುದು ನನ್ನ ಅಭಿಪ್ರಾಯ…ಸಮಯವಿದ್ದರೆ ಖಂಡಿತ ಹೋಗಿ ನೋಡಿ…ನೋಡಿ ಖುಷಿ ಪಡಿ…
ಓದಿ,ಪ್ರೋತ್ಸಾಹಿಸಿದ್ದಕ್ಕಾಗಿ ಧನ್ಯವಾದಗಳು..
ನಮಸ್ತೆ 

Wednesday, February 13, 2013

ಹಿಂಗೊಂದು ಪ್ರೇಮ ಪತ್ರ.


ಗೆ,
ಬರಿ ಹೆಸರಲ್ಲಿ ಬಣ್ಣಿಸಲಾಗದ ನನ್ನ ಹುಡುಗಿಗೆ.

ಇಂದ,
ಶಬ್ಧಗಳೆಲ್ಲಾ ಬತ್ತಿ ಬರಿದಾದ ನಿನ್ನ ಹುಡುಗನಿಂದ.

ಎಯ್,
                   ವಿಷಯ:ವಿಷಯವಿಲ್ಲದೇ ದಿನವಿಡೀ ಹರಟಬಹುದು ಕಣೆ,ವಿಷಯವಿದ್ದರೇ ತುಸು ಕಷ್ಟ.
 ಗೊತ್ತು ಕಣೆ ನಾ ನಿನಗೆ,ನೀ ನನಗೆ.ಆದರೇನೋ ಹೇಳಬೇಕೆನಿಸಿದೆ…
ನಿನಗೆ ಗೊತ್ತಿರುವುದನ್ನೇ ನಾ ,ಪದಗಳಲ್ಲಿ ಬರೆಯಬೇಕೆನಿಸಿದೆ…..
ದಿನಾ ತಡರಾತ್ರಿಯವರೆಗೂ ಮಾಡುತ್ತಿದ್ದ ಮೆಸ್ಸೇಜಿನಲ್ಲೇ ನಾ ಹೇಳಬಹುದಿತ್ತೇನೋ ನಾನು,
“hmm…..” ,
“then…”,
 “wassup????? “ ಗಳ ಬದಲು..
ಆದರೇಕೋ ಬರೆವ ಅಕ್ಷರ ನನ್ನದಲ್ಲವೆನಿಸಿದೆ…
ನಗುವಾಗಲೂ,ಅಳುವಾಗಲೂ ಒಂದೇ ಥರ ಇರುವ ಅಕ್ಷರ ಬೇಡವೆನಿಸಿದೆ…
ಇನ್ನು ಫೇಸ್ಬುಕ್ಕು,ಜೀಮೇಲುಗಳಿವೆಯೇನೋ ನಿಜ …ಆದರೆ ಅವೂ ನನ್ನದಲ್ಲವೆನಿಸಿದೆ…ಯಾರೋ ಕದ್ದು ಕೇಳುವ ಭೀತಿ ನನ್ನ ಕಾಡಿದೆ…
ನೋಡು ಹುಡುಗಿ ಇದು ನಿನಗಾಗಿ …ನಿನ್ನೊಬ್ಬಳಿಗಾಗಿ….
ಅದೇನೋ ಗೊತ್ತಿಲ್ಲ ಕಣೆ..
ನನ್ನ ಕೈಯ್ಯಾರೆ, ನನ್ನಕ್ಷರದಲೆ ಮೊದಲ ಪ್ರೇಮಪತ್ರವ ಬರೆಯಬೇಕೆನಿಸಿದೆ..
ನೂರಾರು ಬಾರಿ ಗೀಚಿ,ಹತ್ತಾರು ಬಾರಿ ಹರಿದು,ಮತ್ತೆ ಮತ್ತೆ ಬರೆಯಬೇಕೆನಿಸಿದೆ…
ಕೈ ನಡುಗಬಹುದು...ಅಕ್ಷರವು ಕಾಗೆ ಕಾಲು ಗುಬ್ಬಿ ಕಾಲಾಗಬಹುದು,ನಿನ್ನೊಲವ ಕಂಪನದಿಂದ..
ಅರ್ಥವಾಗುವುದು ಆದರೂ ಅಲ್ಲವೆ ನಿನಗೆ????
ಛೇ,ಬಿಡೆ….ಒಂದೆರಡು ಬಾರಿ ಭೂಮಿ ಆಕಾಶ ನೋಡಿ,ತಲೆಕೆರೆದುಕೊಂಡಾಗಲೇ, “ಯಾಕೋ??Take it Easy “ ಅಂದವಳಲ್ಲವೇ ನೀನು??… J
ನಿನಗೆಲ್ಲವೂ ಗೊತ್ತು,ಆದರೂ ನಾನೇ ಹೇಳಬೇಕು ಅಲ್ವಾ??
ಸರಿ…ಗಂಡು ಹುಳುವಾಗಿ ನಾನೇ ಹೇಳುತ್ತಿದ್ದೇನೆ ಕೇಳು…
           ಪೀಯು. ಹುಡುಗಿಯರ ಗ್ವಾಲೆಯಲಿ,ಕಣ್ಣು ಕುಕ್ಕಿದವಳು ನೀನು
                ಕುಡಿಮೀಸೆ ಮೂಡುವಾಗಲೇ ,ನನ್ನವಳೆನಿಸಿದವಳು ನೀನು
                ಹೂ-ದುಂಬಿಯ ಕವನದಲಿ,ಹೂವಾಗಿ ಕಂಡವಳು ನೀನು
                ಮನದುಂಬಿ ಬಂದ ಮಾತೆಲ್ಲ,ಕೇಳಿಸಿಕೊಂಡವಳು ನೀನು

ಛೇ,ಇವಷ್ಟೇ ಹೇಳಿದರೆ ಯಾವುದೋ ಹಳೆಯ ಕಥೆಯಂತಿದೆ ಅಲ್ವಾ???
ಚೆನ್ನಾಗಿ ಕಂಡ ಐಸ್ ಕ್ರೀಮೆಲ್ಲಾ ತಿನ್ನಲು ಬೇಕೆನಿಸುವ ವಯಸ್ಸಿನಲ್ಲಿ ಹಿಮವಾಗಿ ಸೇರಿ ಒಂದೆರಡು ತಿಂಗಳಿಗೆ ಕರಗಿ ಹೋದ ಕಥೆಯಲ್ಲ ಕಣೆ ಇದು…ಆ ನಿನ್ನ ಸೆಳೆತ ಧ್ರುವ ಪರ್ವ ಬಿಂದು..ಕಾಲವೆಷ್ಟೇ ಆದರೂ ನೀರೊಡೆಯದು ಕಣೆ ಅದು,ನೀರೊಡೆಯದು…
ಚಾಕಲೇಟಿನ ಕನಸು ಮುಗಿದು ಹೊಸ ಹೊಸ ಬಣ್ಣ ಬಣ್ಣದ ಕನಸು ಬೀಳುವ ಹೊತ್ತಲ್ಲವಾ ಅದು???
ಅದೆಷ್ಟು ಬಾರಿ ಹೇಳಿದ್ದೆ,ನೀನಗೆ ಆ ನೀಳಕೂದಲ ಬಿಳಿಗೆಂಪು ಹುಡುಗನಾ ಕನಸನ್ನ…
ಆ ಕನಸ ಕಥೆ ಕೇಳಿ ಅಲ್ಲವೇ ನಾನೂ ಉದ್ದ ಕೂದಲು ಬಿಟ್ಟಿದ್ದು…
ರಜೆಯಲ್ಲಿ ಮನೆಗೆ ಹೋದಾಗ ಅಪ್ಪನ ಹತ್ತಿರ ಬೈಸಿಕೊಂಡಿದ್ದು…
ಮರುದಿನ ಮಿಲಿಟರಿ ಕಟ್ಟು ಮಾಡಿಸಿಕೊಂಡು ಬಂದಾಗ ಅದೆಷ್ಟು ನಕ್ಕಿದ್ದೆ..”ಯಾರೋ ನೀನು?” ಅಂತೆಲ್ಲಾ ಕೇಳಿ ಅದೆಷ್ಟು ರೇಗಿಸಿದ್ದೆ.
ಮುಂದೆ ನಾ ವಿಜ್ನಾನಕೆ ಸಲಾಮು ಹೊಡೆದು ಕಲೆಯ ಹಾದಿ ಹಿಡಿದೆನಲ್ಲವೇ???
ಡಿಗ್ರಿಯ ಆ ದಿನಗಳು…ಏನೆಂದು ಹೇಳಲಿ ನಾ…

    ತನ್ನ ಹೆಸರಲ್ಲಿ ಪುಸ್ತಕವ ತಂದು ಓದೆಂದು ಕೊಟ್ಟವಳು ನೀನು
                ನನ್ನಯಾ ಯೋಚನೆಗಳಿಗೆ ಸ್ಪೂರ್ತಿಯ ಸರಕಾಗಿ ನಿಂತವಳು ನೀನು
                ನನ್ನೆಲ್ಲ ಪುಟಗೋಸಿ ಬರಹವಾ ಓದಿ, “ ನಾ ನಿನ್ನ ಅಭಿಮಾನಿ” ಎಂದವಳು ನೀನು
                ನಾ ಎಲ್ಲ ಬಲ್ಲವನೆಂದು ಕೊಚ್ಚಿಕೊಂಡಾಗ,ಬಾಯ್ತುಂಬ ಬೈದವಳು ನೀನು
ಅದ್ಯಾಕೋ ಗೊತ್ತಿಲ್ಲ ಕಣೆ..
ಎಲ್ಲ ಹೇಳುವಂತೆ ಕಾಲೇಜಿನಲ್ಲಿ “ಕ್ರಷ್”,”ಲವ್ ಅಟ್ ಫಸ್ಟ್ ಸೈಟ್” ಅನ್ನುವುದೆಲ್ಲ ಆಗಲೇ ಇಲ್ಲ ನನಗೆ….
ಮೊದಲೇ ಆಗಿ ಬಿಟ್ಟಿತ್ತೇನೋ ಬಿಡು,ನನಗೇ ಗೊತ್ತಿಲ್ಲದಂತೆ…
ನಿನಗಿಂತ ಚೆನಾಗಿರುವವರು ಕಾಣಲಿಲ್ಲವಂತೇನಲ್ಲ…ಆದರೇಕೋ ನಿನ್ನಷ್ಟು ಕಾಡಿಸಲಿಲ್ಲ ಕಣೆ ಹುಡುಗಿ ಅವರ್ಯಾರೂ..ಬಂದು ಹೋಗಿ ಬಿಟ್ಟರು ಅಷ್ಟೇ…
ಹಮ್..ನನಗೂ ಗೊತ್ತು ,ನಿನಗೂ ಗೊತ್ತು ಆದೇಕೆ ಅವಾಗ ಒಂದು ವಾರ ಮಾತು ಬಿಟ್ಟಿದ್ದೆವೆಂದು…
ಬಿಟ್ಟಿರಲಾರದೇ ಮತ್ತೆ ಜೊತೆಯಾದೆವೆಂದು…
ಅದೆಷ್ಟು ಚೆನ್ನ ಹುಡುಗಿ ಗೆಳತಿಯ ಗುಂಪೊಡನೆ ನೀ ಸಿಕ್ಕರೆ ,ಸುಮ್ಮನೆ ಪರಿಚಯದ ನಗೆಯಾಡಿ ನಾ ಹೋಗುವಂತದ್ದು…
ಸ್ಟೇಡಿಯಮ್ಮಿನ ಮೇಲುಗಡೆ ಇಬ್ಬರೇ ಇರುವಾಗ ಗಂಟೆಗಟ್ಟಲೇ ಊರ ಮೇಲಿನ  ಸುದ್ದಿಯೆಲ್ಲಾ ಹಲುಬುವಂತದ್ದು…
ಬೇಲಿಯ ರಾಕ್ಷಸ ಪರಂಗಿ ಎಲೆಯ ಮೇಲೆ ಇಬ್ಬರ ಹೆಸರನ್ನೂ ಗೀರುವಂತದ್ದು….
ಬೇರೆಯವರಿಗೆ ಕಾಣಿಸುವುದೆಂದು ಅಲ್ಲೇ ಸಿಗಿದು ಹಾಕುವಂತದ್ದು…
ಅದೆಷ್ಟು ನೆನಪುಗಳೋ ಹೀಗೇ ಹೇಳುತ್ತಾ ಹೋದರೆ…

                          ಕಣ್ಣಲ್ಲೇ ಕೂತಿದ್ದ ಕಣ್ಣೀರ ಗುರುತಿಸಿ,ಅದನೊರೆಸಿದವಳು ನೀನು
                                ದಾರಿತಪ್ಪಿದವನೆಂದು ಮಂಕಾಗಿ ಕುಳಿತಾಗ,ಹಾದಿ ನೆನಪಿಸಿದವಳು ನೀನು
                                ಆ ಮೂರು ವರುಷವನು,ಮೂರು ಮರೆಯದ ಕನಸಾಗಿಸಿದವಳು ನೀನು
                                ಕೊನೆಯ ದಿನ ಉಟ್ಟ ಸೀರೆಯಲಿ ,ನನ್ನ ಮದುವೆಕೂಸಾಗಿ ಕಂಡವಳು ನೀನು

ಹಿಂಗಾಡಿ ಹಂಗಾಡುವುದರೊಳಗೆ ಕಾಲೇಜೇ ಮುಗಿಯಿತಲ್ಲೆ…
ನೀ ಮುಂದೆ ನಿನ್ನಿಷ್ಟದ ಮಾಯಾನಗರಿಯ ಸೇರಿದೆಯಲ್ಲೆ…
ನಾ ಉಳಿದೆ ಇಲ್ಲೆ…
ನೋಡೆದೆ ಕಣೆ ನಾ ಡಿಗ್ರಿ ಬಳಿಕ ಜಗತ್ತನ್ನ ಮತ್ತೆ…ಅದೆಷ್ಟು ಬದಲಾವಣೆಗಳು ಅಬ್ಬಾ…
ಅದಾವ ಗೆರೆಯು ಕೈಗೂಡಿತೋ,ಬರೆಯುವುದೊಂದು ನನ್ನದಾಯಿತು..
ಬರೆದು ಹರಿದು,ಹರಿದು ಬರೆದ ಬರಹಗಳು ದೊಡ್ಡವರಿಗಿಷ್ಟವಾಯ್ತು…
ಮತ್ತೆ ಅಲೆದೆ,ಬರೆದೆ..ಓದಿದೆ,ಬರೆದೆ..ಅಲೆದೆ..
ಓದೇ ಅನ್ನವಾಯ್ತು…ಪುಸ್ತಕಗಳೇ ಉಸಿರಾಯ್ತು…ಅನುಭವವೇ ಆಸ್ತಿಯಾಯ್ತು…ಬರವಣಿಗೆ ವ್ರತವಾಯ್ತು…
ಕೊನೆಗೊಂದು ದಿನ ಕೈ ಹಿಡಿಯಿತು ಅದೂ ನಿನ್ನಂತೆ…
ಈಗೇನೋ ಒಂದಿಷ್ಟು ಪ್ರಶಸ್ತಿ ಅವು ಇವು ಕಪಾಟಿನಲ್ಲಿದೆ…
ಮನೆಗೆ ಸಾಕಾಗುವಷ್ಟು ದುಡಿವ ಕೆಲಸ ಕೈಯ್ಯಲ್ಲಿದೆ…
ನಾಳೆಗೊಂದಿಷ್ಟು ದುಡ್ಡು ಬ್ಯಾಂಕಿನಲ್ಲಿದೆ…
ಆದರೆ……..ನೀನು????
ಬರಿಗಣ್ಣಿನಿಂದ ನಿನ್ನ ನೋಡದೇ ಎಷ್ಟು ತಿಂಗಳಾಯ್ತೇ??ಇಪ್ಪತ್ತಿರಬೇಕು ಅಲ್ವಾ??..
ಏನು ಮಾಡಲಿ ಹೇಳು..ನಾನಿರುವುದು ಇದೇ ಕೊಂಪೆಯಲ್ಲಿ…
ನೀ ಇರುವೆ ಆ ಮಾಯಾನಗರಿಯಲಿ..
ಇರಲಿ ಹುಡುಗಿ ರಾತ್ರಿ ಫೋನಿನಲ್ಲಾದರೂ ಸಿಗುವೆಯಲ್ಲಾ ಅದೇ ಸಂತೋಷ ನನಗೆ…
ಶನಿವಾರ,ರವಿವಾರ ನೆಟ್ಟಿನಲ್ಲಿ ಸಿಕ್ಕು,ವಾರದ ಸುದ್ದಿಯಲ್ಲಾ ಖರ್ಚು ಮಾಡುವೆವಲ್ಲಾ ಅದೇ ಖುಷಿ ಎನಗೆ..
ಆದರೂ ಯಾಕೋ ನೀನು ಬೇಕೆನಿಸಿದೆ…
ನೀನಿಲ್ಲದೇ ಈ ಜೀವ ಅಪೂರ್ಣವೆನಿಸಿದೆ…
ಬಾ ಹುಡುಗಿ……
ಸುಮ್ಮನೆ ಎಲ್ಲರಂತೆ ನಾಳೆಯ ಬಗ್ಗೆ ನಾ ಕನಸ ಕಟ್ಟಿ ಹೇಳಲಾರೆ ಇಲ್ಲಿ..ಅದು ನನ್ನೊಬ್ಬನ ಕನಸಾದೀತು ನಿನ್ನ ಕೇಳದೇ..
ಜೊತೆಗೂಡೆ ಕನಸ ಕಟ್ಟುವಾ ಬಾ…
ಜೊತೆಗೂಡೆ ಅದನು ನನಸಾಗಿಸುವಾ ಬಾ..
ಕನಸ ನನಸಾಗಿಸಲು ದುಡಿದು,ದುಡಿದು ಜೀವ ತೈಯ್ಯುವಾ ಬಾ…
ಒಟ್ಟಿಗೇ ದೇವರಿಗಿಡುವ ಗಂಧ,ಚಂದನವಾಗುವಾ ಬಾ…

ಏಯ್ ನೋಡೆ…ನೀ ನನಗೆ ಪರಿಚಯವಾಗಿ ಹತ್ತು ವರುಷವಾಯ್ತು..
ನನ್ನವಳೆಂದು ನಾ ತಿಳಿದೂ ಹತ್ತು ವರುಷವಾಯ್ತು..
ಆದರೇಕೋ ಎಂದೂ ಪ್ರೇಮಪತ್ರವ ಬರೆಯಬೇಕೆನಿಸಿರಲಿಲ್ಲ..
ಇಂದೇಕೆ ಬರೆಯ ಹೊರಟೆ?? ಅದೂ ಗೊತ್ತಿಲ್ಲ…
ಗೊತ್ತಿದ್ದು ನಾ ಮಾಡಿದ ಕೆಲಸ ಯಾವುದಿದೆ ಬಿಡು!!!
                                     
          ನನ್ನೆಲ್ಲ ಎಡಬಲವ ಬಲ್ಲವಳು ನೀನು.
                                                ನನ್ನೊಲವ ಕಲರವದ ಸಂಗೀತ ನೀನು.
                                                ನನ್ನದೆಯ  ಬಡಿತವಾಗಿಹೆ ನೀನು,
                                                ಹೇಳಲಿ ಇನ್ನೇನು???
                                                ಒಂದಾಗಿ ನಡೆಯೋಣ ಬಾ ಇನ್ನು…
ಇದುವೆ ಎನ್ನ ಪ್ರೇಮ ನಿವೇದನೆ…
ಅಲ್ಲಲ್ಲ ಆತ್ಮ ನಿವೇದನೆ…

ಸ್ಥಳ: ಒಂದಿಷ್ಟು ಹೃದಯದಿಂದ,ಒಂದ್ಚೂರು ನೆನಪಿನಿಂದ                                          ಇತಿ ನಿನ್ನ ನಿನ್ನವ,
ದಿನಾಂಕ: ನೀ ಕನಸಲ್ಲಿ ಬಂದ ಅನುದಿನ                                                            ---------


=============================================================================================
*********************************************************************************************
ಶಬ್ಧಾರ್ಥ:ಗ್ವಾಲೆ=ಗುಂಪು,ಕಾಗೆ ಕಾಲು ಗುಬ್ಬಿ ಕಾಲು ಅಕ್ಷರ =ಸ್ಪುಟವಾಗಿಲ್ಲದ ಕೈಬರಹ,ಹಲುಬು,=ಮಾತನಾಡು
********************************************************************************************

ಹಮ್... ಇದು ಪಕ್ಕಾ ದಾರಿ ತಪ್ಪಿ ಬಂದ ಪ್ರೇಮ ಪತ್ರ!!!!
ಗಾಬರಿ ಆಗ್ಬೇಡಿ...
ಆಗಿದ್ದಿಷ್ಟೇ...
ಪ್ರಜಾವಾಣಿಯಲ್ಲೊಂದು ಪ್ರೇಮ ಪತ್ರ ಬರೆಯುವ ಸ್ಪರ್ಧೆ ಇದೆ ಅಂತಾ ಬ್ಲಾಗಿಗ ಮಿತ್ರ ಶ್ರೀ ವತ್ಸ ಕಂಚೀಮನೆಯವರು ತಿಳಿಸಿದ್ದರು ಡಿಸೆಂಬರಿನಲ್ಲಿ..."ಹುಂ" ಎಂದವನಿಗೆ ಮತ್ತೆ ನೆನಪಾಗಲಿಲ್ಲ ಅದು...ಮತ್ತೆ ಜನವರಿ ಮಧ್ಯದಲ್ಲೆಲ್ಲೋ ಸುಮನಕ್ಕ ಮೆಸ್ಸೆಜು ಮಾಡಿ "ಹಿಂಗಿದೆ ಕಣೊ,ಬರ್ಯದಾದ್ರೆ ಬರಿ" ಎಂದು ಅಡ್ರೆಸ್ಸನ್ನೂ ಕಳಿಸಿದ್ಲು...
ಇಲ್ಲಪ್ಪಾ ಮನೆಯಲ್ಲಿ ಏನನ್ನೂ ಬರೆಯಲು ಮನಸ್ಸೇ ಬರಲಿಲ್ಲ..ಅದೇಕೋ ಗೊತ್ತಿಲ್ಲ...ತೀರಾ ಅರಾಮವಾಗಿದ್ದೇನೆನಿಸಿದಾಗ ಬರೆಯಬೇಕೆನಿಸುವುದೇ ಇಲ್ಲ...ಮತ್ತೆ ವಾಪಸ್ಸು ಬಂದೆ ನೋಡಿ ಪ್ರಾಜೆಕ್ಟು,ಸೆಮಿನಾರು ಅಂತಾ ಚೂರು ತಲೆ ಬಿಸಿ ಶುರುವಾಯ್ತು..ಅದರ ಮಧ್ಯೆ ಒಂದು ಅಲ್ಪ ವಿರಾಮ ಈ ಬರಹ...ಅದಾವತ್ತೋ ಒಂದು ದಿನ ಮನೆಯಲ್ಲಿ ಕಷ್ಟಪಟ್ಟು ಒಂದು ಪುಟ ಬರೆದಿದ್ದೆ...ಅದನ್ನು ನಿನ್ನೆ ಪೂರ್ತಿಗೊಳಿಸಿ ಇವತ್ತು ನಿಮ್ಮೆದುರು ಇಟ್ಟಿದ್ದೇನೆ ಅಷ್ಟೇ...
ನನಗೆ ಈ ಪ್ರೇಮ ಪತ್ರ ಬರೆಯುವುದು ಓದುವುದೆಲ್ಲಾ ಹೊಸದು...
ಬರೆಯುವುದು ಕಡೆಗಾಯ್ತು,ಹಣೆಬರಕ್ಕೆ ಬರೆದ ಪತ್ರವನ್ನು ಓದಿದವನೂ ಅಲ್ಲ ನಾನು...
ಒಂದು ಪ್ರಯತ್ನ..
ಎಂದಿನಂತೆ ಒಂದಿಷ್ಟು ಕಲ್ಪನೆ..
ಬೇಡ ಬೇಡಾ ಅಂದರೂ ನುಸಿದು ಬರುವ ಕೆಲ ಶಬ್ಧಗಳು...
ಎಂದಿನಂತೆ ನೋಡಿ,ಹೆಂಗಿದೆ ಅಂತಾ ಹೇಳ್ತೀರಲ್ವಾ???
ಹಾಂ ನಿಮ್ಮ ಪ್ರೇಮ ಪತ್ರದ ಪ್ರಸಂಗಗಳೇನಾದ್ರೂ ಇದ್ರೂ ಬರಿರಿ ಒಂದಿಷ್ಟು ದಯವಿಟ್ಟು,....
ಕಾಯ್ತಿರ್ತೀನಿ ನಿಮ್ಮ ಕಮೆಂಟ್ ಗಳಿಗೆ...

Tuesday, January 8, 2013

ಪ್ರಳ(ಣ)ಯ ಗೀತೆ


ಅಂತೂ ಇಂತೂ ಒಂದುವರೆ ತಿಂಗಳ ಬಳಿಕ ಏಳನೇ ಸೆಮಿಸ್ಟರ್ ಪರೀಕ್ಷೆಗೆ ತೆರೆ ಬಿತ್ತು..ಇನ್ನೊಂದೇ ಸೆಮಿಸ್ಟರು ಉಳಿದಿರುವುದು...ಪರೀಕ್ಷೆ ಮುಗಿಯಿತಲ್ಲಾ ಇನ್ನೇನು ಮಾಡಣಾ ಅಂದ್ಕೊಂಡು ಪಟ್ಟಿ ಹಾಳೆ ತೆಗೆದೆ...ಪ್ರಳಯ ಪ್ರಳಯ ಅಂತಾ ಎಲ್ರೂ ಮಾತಾಡ್ತಿರ್ಬೇಕಾದ್ರೆ ನಾನೂ ಅದ್ರ ಬಗ್ಗೆ ಏನಾದ್ರೂ ಬರೀಬೇಕು ಅನ್ಸಿ ಒಂದಿಷ್ಟು ಶಬ್ಧಗಳನ್ನಾ ಗುಡ್ಡೆ ಹಾಕಿ ಇಟ್ಟಿದ್ದು ಕಣ್ಣಿಗೆ ಬಿತ್ತು..ಸರಿ ಇನ್ನೇನು ಬರಿಯಣಾ ಅಂದ್ಕಂಡು ಗೀಚಲು ಕೂತೆ..ವಯಸ್ಸಿನ ಹುಡುಗನಿಗೆ  ಅವನ  ಹುಡುಗಿ ಮುತ್ತು ಕೊಟ್ಟಾಗ ಏನನ್ಸತ್ತೆ ಅನ್ನೊ ಕನಸು ಕಾಣ್ತಾ ಕೂತೆ...ಒಂದಿಷ್ಟು ಏನೇನೋ ತಲೆಗೆ ಹೊಳಿತು..ಅದನ್ನೆ ನಿಮ್ಮ ಮುಂದಿಟ್ಟಿದ್ದೇನೆ...ನೋಡಿ ....ಅಕ್ಕರೆಯ ಅನಿಸಿಕೆಯ ಜೊತೆ ತಪ್ಪು-ಒಪ್ಪನ್ನಾ ತಿಳ್ಸಿ, ನನ್ನನ್ನಾ ಬೆಳಸ್ತೀರಾ ಅಲ್ವಾ???
ಇಲ್ಲಿದೆ ನೋಡಿ  ಪ್ರಳಯ/ಪ್ರಣಯ ಗೀತೆಯ ಸಾಲುಗಳು... 


ಪ್ರಳಯವಾಯ್ತು ಗೆಣತಿ ನನ್ನೆದೆಯೊಳಗೆ,
ನೀ ಮುತ್ತಿಟ್ಟಾ ಅರೆಚಣದೊಳಗೆ…..

ಮುಂಗುರುಳ ಕಚಕುಳಿಯ ಕಂಪನವು ಕೊರಳಲ್ಲಿ,
ಅಪ್ಪುಗೆಯ ಬೆವರ್ಮಳೆಯ ಸಿಂಚನವು ತೋಳಲ್ಲಿ.
ನಟ್ಟಿರುಳ ಬಳುವಳಿಯ ಕುಂಚನವು ಬೆರಳಲ್ಲಿ,
ಹೆಂಗರುಳ ಕಳಕಳಿಯ ಬಂಧನವು ನೆರಳಲ್ಲಿ.

ಜುಮುಕಿಯಾ ವಜ್ಜೆಯಲೆ ,ಕುಳಿಯೀಗ ಭುಜದಲ್ಲಿ
ಬಿಸಿಯುಸಿರ ಸದ್ದಿನಾ ಸುಳಿಯೀಗ ಕಿವಿಯಲ್ಲಿ.
ಅಂದಲದ ಕನಸಿನಾ ಹೊಳೆಯೀಗ ಮನದಲ್ಲಿ,
ಗೊಂದಲದ ಬಿರುಗಾಳಿ ನೀ ಕೊಟ್ಟ ಮುತ್ತಲ್ಲಿ

ಸವಿಜೊಲ್ಲ ಹನಿಯೊಂದು ಮಿನುಗಿರಲು ಗಡ್ಡದಲಿ,
ರವಿಮೆಲ್ಲನೆ ನಾಚಿ  ಅಡಗಿಹನು ಗುಡ್ಡದಲಿ,
ಬೆರೆಯಿತು ಎನ್ನುಸಿರು ನಿನ್ನಯಾ ಹೆಸರಲ್ಲಿ,
ಬರೆದಿರಲು ಈ ಸಾಲ ನಿನ್ನೆಯಾ ನೆನಪಲ್ಲಿ

ಪ್ರಳಯವಾಯ್ತು ಗೆಣತಿ ನನ್ನೆದೆಯೊಳಗೆ,
ನೀ ಮುತ್ತಿಟ್ಟಾ ಅರೆಚಣದೊಳಗೆ.....

-ಚಿನ್ಮಯ
(ಶಬ್ಧಾರ್ಥ(ನನಗೆ ತಿಳಿದಂತೆ):ಗೆಣತಿ=ಗೆಳತಿ,ಅರೆಚಣ=ಅರೆಕ್ಷಣ,ಮುಂಗುರುಳು=ಮುಂದಲೆಯ ಕೂದಲು,ನಟ್ಟಿರುಳು=ಮಧ್ಯರಾತ್ರಿ,ಅಂದಲ=ಪಲ್ಲಕ್ಕಿ...
ಜೊತೆಗೆ ನಮ್ಮ ಕಡೆ "ವಜ್ಜೆ" ಎಂದರೆ ಭಾರಕ್ಕೆ ಬಳಸುವ ಪದ..
ಮತ್ತೆ ಬೆವರಿನ ಮಳೆ ಎನ್ನುವ ಬದಲು ಬೆವರ್ಮಳೆ ಎಂದು ಬಳಸಿದ್ದೇನೆ...ಅದು ತಪ್ಪಾಗಿದ್ದರೆ ತಿಳಿಸಿ ದಯವಿಟ್ಟು)
  
ಹಾಂ ಅದೇನೋ ಹೇಳ್ತಾರಲ್ಲಾ ಕಲ್ಪನೆ ಅದು ಇದು ಅಂತಾ ಅದನ್ನೇ ಮಾಡ್ಕೊಂಡು ಬರೆದ ಸಾಲುಗಳಿವು..ಆ ಥರದ ಹುಡುಗಿ ಇನ್ನೂ ತಾನಾಗೇ  ಸಿಕ್ಕಿಲ್ಲ,ನಾನಾಗೇ ಹುಡ್ಕಕೂ ಹೋಗಿಲ್ಲಾ..ಬರೆದಿದ್ದೆಲ್ಲಾ ಕಾಲ್ಪನಿಕ..ನನ್ನ ನಂಬಿ ಪ್ಲೀಸ್ ಪ್ಲೀಸ್...
ಅಂದದ ಪ್ರತಿಕ್ರಿಯೆಗಾಗಿ ಕಾಯ್ತಿರ್ತೀನಿ...ಬರಿತೀರಲ್ವಾ?




Sunday, December 23, 2012

ತಿಂಗಳು ಮರೆಯಾದರೇನಂತೆ ತನ್ವಂಗಿ….



ಅಬ್ಬಾ..ಸುಮಾರು ೧೫ ದಿನದಿಂದ ಪರೀಕ್ಷೆಯ ನೆಪದಲ್ಲಿ ಬ್ಲಾಗ್ ಲೋಕದಿಂದ ದೂರವಿದ್ದೆ... ಅಂತೂ ಇಂತೂ ನಾಲ್ಕು ಪರೀಕ್ಷೆಗಳು ಮುಗಿದವು ..ಇನ್ನೆರಡು ಮುಂದಿನ ವರುಷಕ್ಕೆ (ಜನವರಿ ೩,೫ಕ್ಕೆ ಹಾ ಹಾ)...ಹಾಗಾಗಿ ಸಿಕ್ಕಾಪಟ್ಟೆ ಅಂತರವಿರುವುದರಿಂದ ಕೆಲಸ ಕಾಣದೇ ಮಾಡಿದ ಕೆಲಸವಿದು..ಒಂದು ಪುಟ್ಟ ಕವಿತೆ ಬರೆಯುವ ಪ್ರಯತ್ನ..ಸಂದರ್ಭ ಅಂತೇನೂ ಅಂದುಕೊಂಡು ಬರೆದಿದ್ದಲ್ಲ,ಬರೆಯುತ್ತಾ ಹೋದಂತೆ ಮನಸ್ಸಿಗೆ  ಬಂದ ಸನ್ನಿವೇಶ..ಗೆಳತಿಯ ಮದುವೆಯ ಹಿಂದಿನ ದಿನ ಆಕೆಯ ಗಂಡನಾಗುವವನು ಮನೆಬಿಟ್ಟು ಹೋದಾಗ ,ಆಕೆಯನ್ನು ಸಂತೈಸುವ ಭಾವ ಹೊತ್ತು ಬರೆದದ್ದು...ಎಷ್ಟರಮಟ್ಟಿಗೆ ಬರೆದೆನೋ ಕಾಣೆ..ನೀವೇ ತಿದ್ದಿ ಆಶೀರ್ವದಿಸಬೇಕು..

ತಿಂಗಳು ಮರೆಯಾದರೇನಂತೆ ತನ್ವಂಗಿ,
ಕಂಗಳಾ ಕನಸೆಲ್ಲಾ ಇಂಗೀತೇ?
ಮದರಂಗಿ ಮಸುಕಾದರೇನಂತೆ ಮುಂಗೈಲಿ,
ಅಂಗೈಯ್ಯ ಗೆರೆಯಂದ ಅಳಿಸೀತೆ?

ಮಲಾರದಲ್ಲಿಪ್ಪ ಚಿಕ್ಕಿಬಳೆಯೀಗ
ಒಡೆಯಲು,ನೀ ಹೀಗೆ ತೀಡದಿರು.
ಹಜಾರ ಬಳೆಯುಂಟು ಇನ್ನೂ ಆ ಮಾಲೆಯಲಿ
ಹೊನ್ನಿನ ಕಡಗವ ಹುಡುಕುತಿರು

ಬೇಸರದ ಸಬರವ ಮೇಲ್ಮೆತ್ತಿಗಿಟ್ಟಿರು,
ಅಂಗಳದಿ ಗೊಂದಲದಾ ಕಲ್ಲು-ಕ್ವಾಳೆಯ ಗುಡಿಸಿರು.
ಹಂಗಿಸುವ ನೆಂಟರ ಸಗಣಿಯಲಿ ತೊಡೆದಿರು,
ನಾಳಿನಾಸೆಯಾ  ಬಣ್ಣದಲಿ, ರಂಗೋಲಿ ಬಿಡಿಸಿರು.

ಚಂದಿರ  ಮರೆಯಾದರೇನಂತೆ ??

ಶಬ್ಧಾರ್ಥ: ತಿಂಗಳು:ಚಂದಿರ,ತನ್ವಂಗಿ:ಕೋಮಲವಾದ ಶರೀರವುಳ್ಳವಳು,ಮಲಾರ:ಬಳೆಗಾರನ ಬಳೆ ಸಂಚಿ,ಚಿಕ್ಕಿಬಳೆ:ಬಳೆಯ ಒಂದು ಪ್ರಕಾರ,
( ಇನ್ನು ನಮ್ಮ ಕಡೆ ಬಳಸುವ ಶಬ್ಧಗಳನ್ನು ಬಳಸುವ ಒಂದು ಪುಟ್ಟ ಯತ್ನ…ಪಕ್ಕಾ ಇದೇ ಅರ್ಥವೋ ಗೊತ್ತಿಲ್ಲ,ನನಗೆ ತಿಳಿದಂತೆ ಬರೆದಿದ್ದೇನೆ… 
ತೀಡು:ಅಳು,ಸಬರ:ಗುಂಪು,ಚಲ್ಲಾಪಿಲ್ಲಿಯಾಗಿ ಬಿದ್ದಿರುವ ವಸ್ತುಗಳು,ಮೇಲ್ಮೆತ್ತಿ:ಮೆತ್ತಿಯ ಮೇಲ್ಭಾಗ,ಮನೆಯ ಕೊನೆಯ ಹಂತ,ಕ್ವಾಳೆ-ಕತ್ತರಿಸಿದ ಗಿಡಗಂಟಿಯ ಉಳಿದ ಭಾಗ,ಕೋಳೆ..)

ದಯವಿಟ್ಟು ನಿಮ್ಮ ಅನಿಸಿಕೆಗಳನ್ನು ನಮೂದಿಸಿ..
ತಪ್ಪು ತಿದ್ದಿಕೊಂಡು ಬೆಳೆಯಲು ಸಹಕರಿಸಿ :)
ನಮಸ್ತೆ.
-ಚಿನ್ಮಯ ಭಟ್ಟ

Thursday, December 6, 2012

ಶೀತ ಗೀತೆ..



ಹಮ್..ಇವತ್ತು ಬೆಳಿಗ್ಗೆ ಯಾಕೋ ತೀರಾ ಛಳಿಯೆನಿಸತೊಡಗಿತ್ತು...ಯಾಕೋ ಬೆಚ್ಚನೆಯ ಕಂಬಳಿ ಹೊದ್ದಿದ್ದ ಹಾಸಿಗೆ ಬಿಟ್ಟೇಳಲು ಮನಸೇ ಬಾರದಾಗಿತ್ತು...ಈ ಛಳಿಯ ಯಾಕಾದರೂ ಬರುತ್ತದೆಯೋ ಅಂದುಕೊಂಡೆ..ಮತ್ತೆ ಇನ್ನೊಂದು ಕ್ಷಣದಲ್ಲಿ ಈ ಛಳಿಯಲ್ಲಿಯೂ ಏನೋ ಒಂದು ಸುಖವಿದೆ ,ಈ ಚಳಿಗಾಲವೂ ಸುಂದರವೇ ಎನಿಸಿತು...ಅದನ್ನೇ ಒಂದು ಹೆಣ್ಣಾಗಿಸಿ ಒಂದೆರಡು ಸಾಲು ಬರೆದೆ...ನೋಡಿ ಈ ಸಂಜೆ ಅದನ್ನು ಪೂರ್ತಿಗೊಳಿಸಿ ನಿಮ್ಮ ಮುಂದಿಟ್ಟಿದ್ದೇನೆ...ದಯವಿಟ್ಟು ತಪ್ಪು-ಒಪ್ಪು ತಿಳಿಸಿ...ಆಶೀರ್ವದಿಸಿ  ...


ಮರಳಿ ಬಂದಳು ಛಳಿಯಾ ಗೆಳತಿ
ಹಸಿ-ಬಿಸಿ ಕನಸಿನ ಜೊತೆಗೆ.
ಗುಬುರನು ಹಾಕಿ,ಮಲಗಿದ್ದಾ ಮನವನು
ತಂದಳು ಚವಿಯಾ ಸ್ಥಿತಿಗೆ.

ಹವಳದಾ ಇಬ್ಬನಿಯು ಹೂವಿನಾ ಪಕಳೆಗೆ,
ಕಾವಳದ ಮಂದಲಿಗೆ,ಗರಿಕೆಗೆ.
ನೇವಳದ ಈ ಒಲವು,ಪ್ರಾಲೇಯದಾ ಚೆಲುವು
ಚಿಚ್ಛಕ್ತಿ ಚಿಮ್ಮಿಸಿದೆ ಎದೆಯೊಳಗೆ.

ಛಾನಸವಾ ಹೆದರಿಸಿ,ಜಡತೆಯಾ ನಡುಗಿಸಿ
ಎಬ್ಬಿಸಿದೆ ಎನ್ನಾ ನಿನ ಶೀತ.
ಕನಸಿನ ಕಸ್ತ್ರವ ಕಂಡಿಹೆನು ನಿನ್ನಲ್ಲೇ,
ಇದುವೇ ಸಂಕ್ರಮಣ ಗೀತ.
(ಶಬ್ದಾರ್ಥ:ಗುಬುರು:ಮುಸುಕು,ಚವಿ:ಕಾಂತಿ,ಹೊಳಪು,ಕಾವಳ:ಮಂಜು(ಕತ್ತಲೆ ಎನ್ನುವ ಅರ್ಥವೂ ಇದೆಯಂತೆ),ನೇವಳ:ಉಡಿದಾರ,ಕಂಠೀಹಾರ,ಮಂದಲಿಗೆ:ಚಾಪೆ,ಪ್ರಾಲೇಯ:ಹಿಮ,ಚಿಚ್ಛಕ್ತಿ:ಚೈತನ್ಯ,ಆತ್ಮಶಕ್ತಿ,ಛಾನಸ:ಸೋಮಾರಿತನ,ಕಸ್ತ್ರ:ನಮ್ಮ ಕಡೆ ಮಾವಿನ ಹೂವಿಗೆ “ಮಾವಿನ ಕಸ್ತ್ರ” ಎಂದು ಬಳಸುತ್ತಾರೆ ಅದನ್ನು ಬರೆದೆ ಆಷ್ಟೆ…)


ನಿಮ್ಮ ಅನಿಸಿಕೆಗಳನ್ನು ದಯವಿಟ್ಟು ನಮೂದಿಸಿ..
ನಿಮ್ಮ ಸಲಹೆಗಳೆ ನಮ್ಮಂತಹ ಎಡಬಿಡಂಗಿ ಬರಹಗಾರರಿಗೆ ಶಕ್ತಿ,ಅದೇ ನಮಗೆ ಸ್ಪೂರ್ತಿ :)
ವಂದನೆಗಳೊಂದಿಗೆ
-ಚಿನ್ಮಯ ಭಟ್ಟ