Sunday, September 23, 2018

ಹ್ಯಾಶ್‍ಟ್ಯಾಗ್ # ಪ್ರೀತಿ(ಭಾಗ-ಸರಿಯಾಗ್ ಗೊತ್ತಿಲ್ಲ)

“ನೀನೋ..ನಿನ್ ಮೂಡೋ...ಭಗವಂತಾ..ನೀನೇ ಕಾಪಾಡ್ಬೇಕು..”
“ಭಗವಂತಾ” .... “ತುಂಬಾ ಸ್ವೀಟ್ ಆಗ್ ಕೇಳ್ಸತ್ತೆ ಕಣೆ ನೀನ್ ಹೇಳದ್ರೆ..”
“ಏನೋ..ಸುಮ್ನೆ ಹೇಳ್ತಿಯಾ ಕಣೋ..”
“ನಿಜ್ಜಾ ಲೇಯ್...”
“ಅದ್ ಹೆಂಗೋ...ಎಲ್ರೂ ಹೇಳ್ತಾರೆ ಭಗವಂತಾ..ದೇವ್ರೇ..ರಾಮಾ ಅಂತಾ...ನಿಮ್ಮನೆಲ್ ಯಾರೂ ಹೇಳಲ್ವಾ?”
“ಹೇಳ್ತಾರೆ....ಆದ್ರೆ”
“ಏನ್ ಆದ್ರೆ?”
“ಏನೋ ನಿನ್ನಷ್ಟ್ ಚೆನಾಗ್ ಕೇಳ್ಸಲ್ಲ”
[ಆಕೆ ಜೋರಾಗಿ ನಕ್ಕಳು. ಅವಳ ಭಾಷೆಯಲ್ಲೇ ಹೇಳೋದಾದ್ರೆ ಕಿಸಿಯುತ್ತಿದ್ದಳು. ಶತಭಿಷ ಕಾಫಿ ಮುಗಿಸಿ ನೀರು ಕುಡಿಯಲು ಹೊರಟ]
“ಲೋ..ನೀರ್ ಕುಡಿಬಾರ್ದೋ...”
“ಏಯ್...ಹೋಗೇ...”
“ಆಯ್ಯಾ..ಬಿಡು...”
“ಲೇಯ್ ಯಾಕೇ ಕುಡಿಬಾರ್ದು?”
“ಕಾಫಿ ಕುಡದು ಅರ್ಧ ಗಂಟೆ ಏನೂ ತಿನ್ಬಾರ್ದು, ಕುಡಿಬಾರ್ದು ...ಕಾಫಿ ಘಮ ಹಂಗೆ ಬಾಯಲ್ಲೇ ಇರ್ಬೇಕು...”
“ಏನೋ..ನಾವ್ ಈಗೀಗ್ ಕಾಫಿ ಕುಡಿತಿರೋದು...ನಿಮ್ಮಷ್ಟ್ ಎಲ್ಲಾ ಚೆನಾಗ್ ಕುಡ್ಯಕ್ ಬರಲ್ಲ ಮೇಡ,..ಕಲಸ್ ಕೊಡಿ ಸ್ವಲ್ಪ...”
“ಇರ್ಲಿ ಇರ್ಲಿ..ಕಲಸ್ ಕೊಡಣಾ”
[ಅಷ್ಟರಲ್ಲಿ ಬಿಲ್ ಬಂತು..]
[ಶತಭಿಷ ವಾಡಿಕೆಯಂತೆ ಬಿಲ್ ಕಸಿದುಕೊಂಡು ಹಣ ಕೊಟ್ಟ]
“ಎಷ್ಟಾಯ್ತೋ?”
“ಎಷ್ಟೋ ಆಯ್ತು ...ಯಾಕೀಗ?”
“ಏಯ್..ಎಷ್ಟ್ ಆಯ್ತು ಹೇಳೋ..”
“ಹೇಳಲ್ಲ...”
“ಸರಿ...” [ಆಕೆ ಐನೂರರ ನೋಟನ್ನು ಅವನ ಕೈಗಿಡಲು ಬಂದಳು]
“ಲೇಯ್ ಇರ್ಲಿ ಬಿಡೆ...”
“ಊಹೂಂ..ಸರಿ ಆಗಲ್ಲ ಕಣೋ..”
“ಯಾಕೇ?”
“ಅದ್ ಹಂಗೆ...ಮುಚ್ಕೊಂಡ್ ಎಷ್ಟ್ ಆಯ್ತು ಹೇಳು”
“ಓಕೇ..ಓಕೇ...50-50 ಮಾಡೋ ತನ್ಕಾ ಬಿಡಲ್ಲಾ ಅಲ್ಲಾ ನೀ...100 ಕೊಡು ಹೋಗ್ಲಿ..”
“ಚೇಂಜ್ ಇಲ್ಲಾ..”
“ನನ್ ಹತ್ರ ಇದೆ ಕೊಡು...”
“ಕೊಡಲ್ಲ”
“ಲೇ..ಎಷ್ಟೇ ನಾಟಕಾ ಮಾಡ್ತಿಯಾ?..”
“ನಾಟಕಾ ನಾ? ನಾನಾ? ಇಲ್ಲಪ್ಪಾ...ನಾನ್ ನಾಟಕಾ ನೋಡಕ್ ಬಂದಿರದು..”
[ಕುಂತಲ್ಲಿಂದಲೇ ಕಣ್ಣು ಹೊಡೆದು ಹೊರಡಲು ಅನುವಾದಳು]
“ಕಥೆ...ಹೋಗಣಾ ಬಾ...” [ಶತಭಿಷನಿಗೆ ಅವರಿಬ್ಬರ ಮೊದಲ ಭೇಟಿಯ ನೆನಪಾಯಿತು]
ಕಾಲೇಜಿನಿಂದ ಇಬ್ಬರೂ ಒಂದು ಕಾನ್ಫರೆನ್ಸಿಗೆ ಹೋಗಿದ್ದರು. ಲಂಚ್‍ಗೆ ಆರ್ಡರ್ ಮಾಡಿದ್ದು ಪಲಾವ್ ಮತ್ತು ಒಂದು ನಾರ್ಥ್ ಇಂಡಿಯನ್ ಥಾಲಿ. ಈತ ಸೂಪ್ ಮುಗಿಸುವಷ್ಟರಲ್ಲಿ ಆಕೆ ಹಪ್ಪಳಕ್ಕೆ ಕೈ ಹಾಕಿದ್ದಳು. ಈ ಚಂಪಾಕಲಿ ಇಷ್ಟವೆಂದು ಹೇಳಿದ್ದಕ್ಕೆ ಪಾಯಸಕ್ಕೆ ಸಕ್ಕರೆ ಹಾಕಿ ತಿನ್ನುವಷ್ಟು ಸಿಹಿಯ ಹುಚ್ಚಿರುವ ಆತ ಅದನ್ನು ಬಿಟ್ಟು ಕೊಟ್ಟಿದ್ದ. ಆಕೆ ಊಟವಾದ ಕೂಡಲೇ ಹೇಳಿಬಿಟ್ಟಿದ್ದಳು...
”50-50”
ಅಂದೂ ಆಕೆಯ ಬಳಿ ಚಿಲ್ಲರೆ ಇರಲಿಲ್ಲ. ಮರುದಿನ ಹುಡುಕಿಕೊಂಡು ಬಂದು ಕೊಟ್ಟಿದ್ದಳು.
“ಥ್ಯಾಂಕ್ಸ್ ಫಾರ್ ಅ ನೈಸ್ ಡೇ ಔಟ್” ಎನ್ನುವ ಕಾಂಪ್ಲಿಮೆಂಟ್ ಜೊತೆ. ಶತಭಿಷನಿಗೆ ಚಂಪಾಕಲಿ ತಿಂದಷ್ಟೇ ಖುಷಿಯಾಗಿತ್ತು...
ಆದರೆ ಇವತ್ತೇಕೋ ಕಾಫಿಯ ಕಹಿ ಬಾಯಿಗಂಟಿತ್ತು. ಆದರೆ ಅದರಲ್ಲೇನೋ ಮಜವಿತ್ತು..
50-50, 100-0 ಕ್ಕೆ ಬದಲಾಗುವ ಎಲ್ಲಾ ಸಾಧ್ಯತೆಯಿತ್ತು. ಆದರೆ ಆ ಕಡೆಗೋ ಈ ಕಡೆಗೋ ಶತಭಿಷನ ತಲೆತುಂಬಾ ಗೊಂದಲ ಗುಯ್ಯ್‍ಗುಡುತ್ತಿತ್ತು...
ನಾಟಕ ಶುರುವಾಗಲು ಹದಿನೈದು ಇಪ್ಪತ್ತು ನಿಮಿಷ ಇರುವಂತೆಯೇ ಎಲ್ಲರೂ ಕ್ಯೂನಲ್ಲಿ ನಿಂತರು. ಅಚಾನಕ್ಕಾಗಿ ಶ್ರಾವ್ಯಾಳ ಆಂಟಿಯೊಬ್ಬರು ಕ್ಯೂನಲ್ಲಿ ಕಾಣಿಸಿಕೊಂಡರು. ಮಾತಾಡಿಸಿದರು. ಶ್ರಾವ್ಯಾ ನಗುನಗುತ್ತಲೇ ಮಾತಾಡಿದ್ದರೂ ಸ್ವಲ್ಪ ಪೆಚ್ಚಾದಂತೆ ಕಂಡಿತು.
ನಂತರ ಶತಭಿಷನ ಕಡೆ ತಿರುಗಿದವಳು “ಸುಮ್ನೆ ಕುಯ್ಯಂ ಅಂತಾರೆ ಕಣೋ” ಎಂದಳು.
ಆಕೆ ಶತಭಿಷನನ್ನು ಆ ಆಂಟಿಗೆ ಪರಿಚಯಿಸಲಿಲ್ಲ..
“ಪರಿಚಯಿಸಿದ್ದರೆ ಏನೆಂದು ಹೇಳಿಯಾಳು?” ಶತಭಿಷ ಹುಳಬಿಟ್ಟುಕೊಂಡ.
“ಫ್ರೆಂಡ್...?” “ತುಂಬಾ ಸಿಂಪಲ್”
“ಕಾಲೇಜ್ ಫ್ರೆಂಡ್?”, “ಊಹೂಂ”
“ಸೀನಿಯರ್?”, “ನಾಟ್ ಹಿಯರ್. ಔಟ್ ಸೈಡ್ ದ ಕಾಲೇಜ್”
“ಏನಾಯ್ತೋ?” ಭುಜ ತಿವಿದಳು.
“ಏನಿಲ್ವೇ” ಗೋಣು ಅಲ್ಲಾಡಿಸಿದ.
“ಏಯ್ ಅರುಂಧತಿ ಮೇಡಂ ಅಲ್ವಾ?”
“ಹೂಂ”
“ಬಾರೋ ಮಾತಾಡ್ಸಣಾ”
“ಊಹೂಂ”
“ಸರಿ ...ಇರು ಬಂದೆ”
[ಆಕೆ ಅವರಿಗೊಂದು ವಿಷ್ ಮಾಡಿ ಫೋಟೋ ತೆಗೆಸಿಕೊಂಡು ಬಂದಳು]
“ಯಾಕೋ ಬರ್ಲಿಲ್ಲ?”
“ಮೂಡ್ ಇಲ್ಲ”
“ಸರಿ” ಎಂದು ಫೋನ್‍ನಲ್ಲಿ ಫೋಟೋವನ್ನು ಮತ್ತೆ ನೋಡಿದಳು. ಅಷ್ಟರಲ್ಲಾಗಲೇ ಕ್ಯೂ ನಿಧಾನವಾಗಿ ಕರಗತೊಡಗಿತ್ತು. ಶತಭಿಷ ಆಚೀಚೆ ನೋಡುತ್ತಿರುವಂತೇ ಕಲೀಗ್ ಒಬ್ಬರನ್ನು ನೋಡಿದಂತಾಯಿತು. ಶ್ರಾವ್ಯಾಳ ಜೊತೆ ನಿಂತಿದ್ದ ಇವನಿಗೆ ಏನೋ ಮುಜುಗರ..ತಿಣುಕಾಡುತ್ತಲೇ “ಹಾಯ್ ” ಅಂದ.
ಸಾಲು ಕರಗುತ್ತಾ ಇನ್ನೇನು ಮೆಟ್ಟಿಲ ಬಳಿ ಹೋಗುವಷ್ಟರಲ್ಲಿ ಸೆಕ್ಯುರಿಟಿ ಹಗ್ಗವನ್ನು ಅಡ್ಡ ಹಾಕಿದ. ಕಲೀಗ್ ಮೆಸ್ಸೇಜ್ ಮಾಡಿದ್ದರು.
“ಗರ್ಲ್ ಫ್ರೆಂಡ್ ಅಹ್? ಎಂಜಾಯ್”
ಶತಭಿಷನ ಹಾರ್ಟ್‍ಬಿಟ್ ಇದ್ದಕ್ಕಿದ್ದಂತೇ ಜಾಸ್ತಿಯಾಯಿತು. ಅವರೆಡೆ ನೋಡಿದ. ಏನೋ ಹೇಳಬೇಕೆನ್ನುವಷ್ಟರಲ್ಲೇ ಸೆಕ್ಯುರಿಟಿ ಹಗ್ಗವನ್ನು ಬಿಟ್ಟ.  ರಿಪ್ಲೈ ಮೆಸ್ಸೇಜು ಬರೆಯಲು ತಿಣಕಾಡುತ್ತಾ ಶತಭಿಷ ಮೆಟ್ಟಿಲು ಹತ್ತಿದ್ದ.
“ಏನೋ?” ಶ್ರಾವ್ಯಾ ಅವನಿಗಾಗಿ ಕಾಯುತ್ತಿದ್ದಳು.
ಶತಭಿಷ ಕಲೀಗ್ ಕಡೆ ನೋಡಿದ ...ಅವರು ನಗುತ್ತಿದ್ದರು...
“ಸೆಲ್‍ಫೋನ್ ಸ್ವಿಚ್ ಆಫ್ ಮಾಡಿ ಸರ್...” ಟಿಕೇಟ್ ಹರಿಯಲು ನಿಂತಿದ್ದ ಟೀ ಶರ್ಟ್ ಹಾಕಿದ ಹುಡುಗಿ ಮೆಲ್ಲಗೆ ಹೇಳಿದಳು. ಶತಭಿಷ ಡು ನಾಟ್ ಡಿಸ್ಟರ್ಬ್ ಮೋಡಿನಲ್ಲಿಟ್ಟ. ಅದಾಗಲೇ ಡಿಸ್ಟರ್ಬ್ ಆಗಿದ್ದ ಮನಸ್ಸನ್ನ ನಿಯಂತ್ರಿಸಲು ಕಷ್ಟಪಡುತ್ತಿದ್ದ.
“ರಂಗಶಂಕರದಲ್ಲಿ ನಿಮಗೆಲ್ಲಾ ಸ್ವಾಗತ...ದಯವಿಟ್ಟು ನಿಮ್ಮ ಮೊಬೈಲ್ ಫೋನ್‍ಗಳನ್ನು ಸ್ವಿಚ್ ಆಫ್ ಮಾಡಿ... ವೆಲ್ ಕಮ್ ಟು ...”
“ಲೇ ಅದು ರಂಗಶಂಕರಕ್ಕೆ ಆಗ್ಬೇಕಲ್ವಾ?”
“ರಂಗಶಂಕರದಲ್ಲಿ ಅಂದ್ರೆ ತಪ್ಪಾ?”
“ತಪ್ಪು ಅಂತಾ ಅಲ್ಲ...ಆದ್ರೆ ಯಾಕೋ ಸರಿ ಅನಸ್ತಾ ಇಲ್ಲ”
“ತಪ್ಪು ಅಂತಾ ಕರೆಕ್ಟಾಗ್ ಗೊತ್ತಾಗೋವರ್ಗೂ ಅದ್ ಸರಿನೇ ಕಣೋ..”
“ಹೌದಾ...ಸರಿ...” ಶತಭಿಷ ಸುಮ್ಮನಾದ.
ಶ್ರಾವ್ಯಾ ಎಫ್.ಬಿಯಲ್ಲಿ ಪೋಸ್ಟ್ ಮಾಡುವುದಕ್ಕಾಗಿ ಫೋಟೋವೊಂದನ್ನು ಕ್ಲಿಕ್ಕಿಸಿದಳು. ಶತಭಿಷನನ್ನು ಟ್ಯಾಗ್ ಮಾಡುವುದಾ ಬಿಡುವುದಾ ಎಂಬ ಗೊಂದಲ ಹೊಕ್ಕಿ ಪೋಸ್ಟಿನ ಯೋಚನೆಯನ್ನೇ ಕೈಬಿಟ್ಟಳು.
ನಾಟಕ ಶುರುವಾಯಿತು.
“ತಲೆದಂಡ”
ಕಲಚೂರಿಯ ಬಿಜ್ಜಳ ಮತ್ತು ಬಸವಣ್ಣನವರ ನಡುವಿನ ಸೈದ್ಧಾಂತಿಕ ಭಿನ್ನಾಭಿಪ್ರಾಯ. ಆದರೆ ಆಂತರ್ಯದಲ್ಲಿ ಗಟ್ಟಿಯಾಗಿರುವ ಸ್ನೇಹ. ಯಾರಿಗೂ ಏನನ್ನೂ ಆದೇಶಿಸದ ಘನತೆ, ಮಗನ ಬಗೆಗಿನ ಅಸಹಾಯಕತೆ....ಶತಭಿಷ ಹನ್ನೆರಡನೇ ಶತಮಾನಕ್ಕೇ ಹೋಗಿದ್ದ.
ವಾಸ್ತವದ ಕೂಪದಿಂದ ಹೊರಗೇಳಿಸುವ ಆದರ್ಶ
ಆದರ್ಶದ ಅಮಲಿನಿಂದ ನೆಲಕ್ಕಿಳಿಸುವ ಹಸಿವು
ಇಂದಿನ ಉಳಿವೋ, ನಾಳಿನ ಏಳ್ಗೆಯೋ ಎಲ್ಲ ಅಸ್ಪಷ್ಟ
ಹಳೆ ಸಲುಗೆ ಹೊಸ ಫಾರ್ಮಾಲಿಟಿ ಚೂಸ್ ಮಾಡುವುದು ತೀರ ಕಷ್ಟ

ಎಲ್ಲಾದರೂ ಬರೆದಿಡಬೇಕು ಅನಿಸಿತು. ಪೆನ್ನು-ಪೇಪರ್ರು ಕೈ ಸಿಗಲಿಲ್ಲ. ಮೊಬೈಲು ತೆಗೆಯಲು ಹೊರಟ.
“ಚೆನಾಗಿತ್ತು ಅಲ್ವೇನೋ” ರಂಗತಂಡದ ಜೊತೆ ಫೋಟೋ ತೆಗೆಯುತ್ತಾ ಶ್ರಾವ್ಯಾ ಕೇಳಿದಳು. ಎದ್ದು ನಿಂತು ಎಲ್ಲರೂ ಚಪ್ಪಾಳೆ ಹೊಡೆಯುತ್ತಿದ್ದರು.  ಆ ಸದ್ದಿನ ನಡುವೆ ಅವಳ ಮಾತು ಪೂರ್ತಿ ಕೇಳಿಸಿರಲಿಲ್ಲ.
“ಆಂ?” ಎಂದು ಅವಳತ್ತ ನೋಡಿದ..
ಕತ್ತಲಿಗೆ ಕಣ್ಣುಗಳು ಅರಳಿದ್ದವು. ಆಗಷ್ಟೇ ಆಡಿಯನ್ಸ್ ಲೈಟ್ ಆನ್ ಆಗಿತ್ತು. ಮೆಲು ಹಳದಿ ಬಣ್ಣದ ಲೈಟಿಗೆ ಶ್ರಾವ್ಯಾಳ ಕೂದಲು ಮಿನುಗುತ್ತಿತ್ತು. ಆಕೆ ಕೂದಲು ಹರಡಿಕೊಂಡಾಗಲೆಲ್ಲಾ ಶತಭಿಷನಿಗೆ ಕೂದಲ ನೇವರಿಸುವ ಮನಸ್ಸಾಗುತ್ತಿತ್ತು.  ಪ್ರೊಫೈಲಿನಲ್ಲಿ ಕಾರಣವಿಲ್ಲದೇ ತುಟಿಗಳು ಮಿನುಗಿತ್ತಿದ್ದವು. ಲಿಪ್‍ಸ್ಟಿಕ್ ಜಾಸ್ತಿಯಾಯಿತಾ? ಅವಳನ್ನೇ ನೋಡುತ್ತಾ ಶತಭಿಷ ಹಾಗೇ ನಿಂತಿದ್ದ. ಪಕ್ಕದಲ್ಲಿದ್ದವರೆಲ್ಲಾ ಹೊರಡಲು ರೆಡಿಯಾದರು.
“ಏನೋ? ನಡಿ” ಎಂಬಂತೆ ಶ್ರಾವ್ಯಾ ಇಶಾರೆಯಿತ್ತಳು. ಶತಭಿಷನಿಗೆ ಸೀನನ್ನು ಕಟ್ ಮಾಡಲು ಇಷ್ಟವೇ ಇರಲಿಲ್ಲ.
“ಇಷ್ಟ ಆಯ್ತೇನೋ?”
“ಸಖತ್ ಇಷ್ಟ....” ಶತಭಿಷ ಯಾವ ಕಡೆ ಗುರಿಯಿಟ್ಟಿದ್ದ ಸ್ಪಷ್ಟವಿರಲಿಲ್ಲ.
ನಿಧಾನವಾಗಿ ಬೆಳಕಿಗೆ ಬಂದರು.  ಶ್ರಾವ್ಯಾ ಒಮ್ಮೆ ದುರುಗುಟ್ಟಿ ನೋಡಿದಳು.
“ವಾಟ್” ಎಂಬಂತೆ ಶತಭಿಷ ಕೈತಿರುಗಿಸಿದ. ಆಕೆ ದವಡೆಯ ಮೇಲಿದ್ದ ಎಡಕೋರೆಹಲ್ಲು ಕಾಣಿಸುವಂತೆ ನಕ್ಕಳು. ಶತಭಿಷ ಸುಮ್ಮನೆ ಹೊರನಡೆದ.
ಸುಮಾರು ದೂರ ಹೋದಮೇಲೆ, “ಕಾಫಿ ಕುಡಿಬೇಕು ಅನಸ್ತಿದೆ ಕಣೋ” ಎಂದಳು..
“ಇಷ್ಟೊತ್ನಲ್ಲಾ?” ಶತಭಿಷ ಮತ್ತೆ ಕೇಳಿದ..
“ಹೂಂ”..
“ಲೇಯ್ ಇಷ್ಟೊತ್ನಲ್ ಯಾರೇ ಕಾಫಿ ಕುಡಿತಾರೆ?”
“ನಾನು...”
“ಅದ್ ಗೊತ್ತು..ಈಗ್ ಯಾಕೆ? ಒಂಬತ್ತೂವರೆಗೆ?”
“ಗೊತ್ತಿಲ್ಲ....ಯಾಕ್ ಕುಡಿಬಾರ್ದು?”
“ಯಾಕೆ ಅಂದ್ರೆ?”
“ಕಾಫಿ ತಾನೆ ಕುಡಿತೀನಿ ಅಂದಿದ್ದು....” ಎಂದು ಕಣ್ಣು ಹೊಡೆದಳು...ಶತಭಿಷ ಪೆಚ್ಚಾದ...ಅಲ್ಲೇ ಎಲ್ಲೋ ಉಡುಪಿ ಹೊಟೆಲ್ಲೊಂದು ಇರುವುದು ನೆನಪಿತ್ತು..
“ನೋಡಣಾ ತಾಳು..” ಎಂದು ಆ ಕಡೆ ಹೆಜ್ಜೆ ಹಾಕಿದ.
“ಒಂದ್ ಬ್ಯಾಲೆನ್ಸ್ ಇತ್ತಲ್ವಾ?” ಶ್ರಾವ್ಯಾ ಹಾರ್ನ್ ನಡುವೆಯೇ ಕೇಳಿದಳು..ಶತಭಿಷನ ಮನಸ್ಸು ಬ್ಯಾಲೆನ್ಸ್ ತಪ್ಪಿತ್ತು. ಹಾಲು ಒಡೆದು ಬಹುತೇಕ ಹಾಳಾಗಿದ್ದ ಕಾಫಿ ಕುಡಿದು ಇಬ್ಬರೂ ಬಸ್ ಹತ್ತಿದರು.  ಬನಶಂಕರಿಗೆ ಐದು ರೂಪಾಯಿಯ ಟಿಕೇಟು.
ನೆಟ್ ಆನ್ ಮಾಡಿ ವಾಟ್ಸಪ್ಪು, ಫೇಸ್‍ಬುಕ್ಕು ನೋಡುವಷ್ಟರಲ್ಲಿ ಬನಶಂಕರಿ ಬಂದಿತ್ತು. ಮೆಟ್ರೋ ಕಾಮಗಾರಿ ಪ್ರಗತಿಯಲ್ಲಿತ್ತು.
“ಬಾರೋ ಮನೆ ತನ್ಕಾ” ಆಕೆ ಕರೆದಿದ್ದಳು.
“ಇಬ್ಬರಿಗೂ ಸಾಕಷ್ಟು ಮಾತನಾಡುವುದಕ್ಕಿತ್ತು...” ಆದರೆ ಎಲ್ಲಿಂದ ಶುರುಮಾಡುವುದು ಗೊತ್ತಿರಲಿಲ್ಲ..
“ಇನ್ನೇನೇ ಸಮಾಚಾರ?”
“ಏನಿಲ್ವೋ ಹೇಳ್ಬೇಕು..”
“ಫ್ಯೂಚರ್ ಬಗ್ಗೆ ಏನ್ ಪ್ಲಾನ್ಸ್?”
“ಫ್ಯೂಚರ್ರಾ? ಆ ಥರ ಎಲ್ಲಾ ಏನಿಲ್ವೋ...ಯಾಕೆ?”
“ಹಂಗಲ್ಲ ನೆಕ್ಸ್ಟ್ ಬಿಗ್ ಥಿಂಗ್ ಏನು ಅಂತಾ?”
“ಏನಿಲ್ವೋ...ಸಧ್ಯಕ್ ಮನೆಲ್ ಹುಡ್ಗನ್ ನೋಡ್ತಿದಾರೆ..”
“ಆಹಾಂ”
“ಹೇಳಿರ್ಲಿಲ್ವಾ ನಾ ನಿಂಗೆ?”
“ಊಹೂಂ..”
“ಹಮ್..”
“ಈಗ್ ಹೇಳಿದ್ಯಲ್ಲ...”
“ಹೂಂ..ಈಗ್ ಹೇಳ್ದೆ..ಹೇಳ್‍ಬಾರ್ದಿತ್ತಾ??”
“ಗೊತ್ತಿಲ್ಲ...”
“ಕರ್ಮಾ..”
ಶತಭಿಷ ಏನನ್ನೋ ಹೇಳಲು ಬಾಯಿ ತೆರೆದಿದ್ದ...
ಅಷ್ಟರಲ್ಲಿ ಆಕೆ “ಸರಿ ಕಣೋ ನೀ ಹೋಗು ...ನೆಕ್ಸ್ಟ್ ಕ್ರಾಸ್ ಅಲ್ಲೇ ....ನಾ ಹೋಗ್ತಿನಿ..” ಎಂದಳು...
ಶತಭಿಷ ನಾಲ್ಕು ಹೆಜ್ಜೆ ನಡೆದು ನಿಧಾನಕ್ಕೆ ನಿಂತ. “ಹುಷಾರು ” ಎಂದು ಕೈ ಬೀಸಿದ...
“ಹೂಂ...ನೀನೂ...ಮೆಸ್ಸೇಜ್ ಮಾಡು ರೂಮಿಗ್ ಹೋದ್ಮೇಲೆ...” ಆಕೆ ಬಾಯ್ ಮಾಡಿದಳು..
ಶತಭಿಷ ವಾಪಸ್ ಹೊರಟಿದ್ದ...
ತಂಪಾದ ರಾತ್ರಿ, ಬಿಸಿಯಾದ ಮನಸ್ಸು , ಬೆಳಕು ನೀಡುತ್ತಿದ್ದ ಬೀದಿದೀಪ..ದಾರಿ ಕಾಣದ ಬದುಕು...ಇನ್ನೇನು ರೆಡಿ ಆಗಿದ್ದ ಮೆಟ್ರೋ ಟ್ರ್ಯಾಕು... ಹಳಿ ತಪ್ಪಿದ್ದ ಶತಭಿಷನ ಮನಸ್ಸು...
“ಹೇಳುವುದಾದರೆ ಹೇಳಬೇಕು; ಬಹುಷಃ ಇದೇ ಕೊನೆಯ ಬಾರಿ
ಒಪ್ಪಿತವಾದರೆ ಸರಿ; ಇಲ್ಲವಾದರೆ ಹುಡುಕಬೇಕು ಬದಲೀದಾರಿ
ಕನಸ ಹೊತ್ತು ಮುಂದೆ ಸಾಗಿದ ದಾರಿ; ವಾಪಸ್ಸಾಗುವಾಗ ಮಾತ್ರ ಒಬ್ಬಂಟಿಯೇ
ನಗು-ಖುಷಿ-ತಾತ್ಕಾಲಿಕ; ಕಣ್ಣೀರು ಮಾತ್ರ ಖಾಯಂ ಸಂಗಾತಿಯೇ?”

ಬರೆದಿಟ್ಟುಕೊಳ್ಳಬೇಕು ಅಂದುಕೊಂಡ...ನೀರುತುಂಬಿ ಮಂಜಾದ ಕಣ್ಣಲ್ಲಿ ಟೈಪ್ ಮಾಡಲಾಗಲಿಲ್ಲ..ಕಣ್ಣೊರಿಸಿಕೊಳ್ಳಲು ಮನಸ್ಸಿರಲಿಲ್ಲ...ಇಂದಿನ ಖುಷಿಗೋ. ಆತಂಕಕ್ಕೋ...ಕಾರಣ ಸ್ಪಷ್ಟವಿರಲಿಲ್ಲ...
ಅಷ್ಟರಲ್ಲಿ....
[ಹಿಂದಿನಿಂದ ಅಂಬುಲೆನ್ಸ್ ಸದ್ದು ಕೇಳಿಸುತ್ತಿತ್ತು]
-ಚಿನ್ಮಯ
23/9/2018

Sunday, August 5, 2018

ಫ್ಲೈ ಓವರಿನಲ್ಲಿ ಹಾರಿ ಹೋಗುವ ಮುನ್ನ

ಫ್ಲೈ ಓವರಿನಲ್ಲಿ ಹಾರಿ ಹೋಗುವ ಮುನ್ನ
ಡಾಂಬರು ಸರಿಸಿ ಮಣ್ಣನ್ನೊಮ್ಮೆ ನೋಡಬೇಕಿದೆ
ಶಟಲ್ಲಿನ ಏ.ಸಿ ಹವೆಯ ಬಿಟ್ಟು
ಬೆವರ ಹನಿಯ ನೆಲಕೆ ಬಸಿಯಬೇಕಿದೆ
ಹಾಡು ಹೇಳದೇ ವರುಷವಾಯಿತು
ಹಾಡಿನ ಪಟ್ಟಿ ಕಬೋರ್ಡಿನಲ್ಲೆಲ್ಲೋ ಬಿದ್ದಿದೆ
ಕುಂಚ ಕೈಗಿಡದೇ ಬಹುಷಃ ವರುಷವಾಯಿತು
ಬಣ್ಣವೆಲ್ಲ ಇಟ್ಟಲ್ಲೇ ಗಟ್ಟಿಯಾದಂತಿದೆ
ಅಮ್ಮ ತಂದುಕೊಟ್ಟ ಗೆಜ್ಜೆ ಊರಲ್ಲೇ ಇದೆ
ತಂದೇನು ಮಾಡಲಿ ?
ಕ್ರಿಕೆಟ್ಟು ವಾಲೀಬಾಲು ಗ್ರೌಂಡಿಗಿಳಿದದ್ದು ಯಾವಾಗ?
ಆನುವಲ್ ಡೇ ದಿನ ಮಾತ್ರ
ಪುರಸೊತ್ತೇ ಇಲ್ಲವೆಂದೇನಿಲ್ಲ,
ಶೇರ್ ಮಾರ್ಕೆಟ್ಟಿನ ಬಗ್ಗೆ ದಿನಾ ವಿಚಾರಿಸುವುದುಂಟು
ಈ ಕಂಪನಿ ಆ ಕಂಪನಿ, ಸ್ಕಿಲ್ ಸೆಟ್ಟಿನ ಲೀಸ್ಟು ಹಿಡಿದು
ಓಪನಿಂಗಿಗೆ ಹುಡುಕುವುದುಂಟು
ಇನ್ವೆಸ್ಟ್‍ಮೆಂಟಿಗಾಗಿ ಶನಿವಾರವೂ ತರಬೇತಿ ತರಗತಿ,
ಮೆಟ್ರೋದಲ್ಲೂ ಮ್ಯೂಚುವಲ್ಲ್ ಫಂಡಿನ ಸ್ಥಿತಿಗತಿ
ದುಡ್ಡು ಕೊಟ್ಟು ನಗಲು ಹೋಗುತ್ತೇವೆ,
ನಗುನಗುತ್ತಾ ಮಾತಾಡುವ ಅಮ್ಮನ ಫೋನ್ ಕಟ್ ಮಾಡುತ್ತೇವೆ
ತಡರಾತ್ರಿಯವರೆಗೂ ಸಿಸ್ಟಮ್ಮಿನ ಮುಂದೆ ಕೂರಲು ಪ್ರೇರಣೆಯೇನು?
ಬಾಸಿನ ಹುಸಿ ಶಭಾಷುಗಿರಿಯೇ?
ಇನ್‍ಕ್ರಿಮೆಂಟಿನ ಆಸೆಯೇ?
ಲೇ ಆಫಿನ ಭಯವೇ?
ದುಡಿ ದುಡಿ ದುಡಿ, ಜೋರಾಗಿ ನಡಿ, ಪ್ರಮೋಷನ್ ಪಡಿ
ಕಾರ್ಪೊರೇಟ್ ಗಲಾಟೆಯಲ್ಲಿ ನನ್ನತನಿಕೆಯ ನಾದ ಕೆಳದಾಗಿದೆ
ಗ್ರೋತ್ ಎನ್ನುವ ಹ್ಯಾಲೋಜನ್ ಬೆಳಕಿಗೆ ಕಣ್ಣು ಹೊಂದಿಕೊಂಡಿದೆ
ತಣ್ಣಗೆ ಮಿನುಗುವ ನೆಮ್ಮದಿಯ ತಾರೆಗಳು ಕಾಣಿಸದಾಗಿವೆ
ಅಪ್ಪನಂತೆ ಬೆನ್ನು ಬಗ್ಗಿಸಿ ಒಂದೇ ಕಂಪನಿ ಗೈಯ್ಯುವುದು
ಮಾರ್ಕೆಟಿಂಗ್ ತಿಳಿದ ಸ್ಮಾರ್ಟ್ ಜಗತ್ತಿಗೆ ಮೂರ್ಖತನವೆನಿಸಿದೆ
ನ್ಯಾಯ ನೀತಿ ಧರ್ಮ ಹರಿಕತೆಯಲ್ಲಷ್ಟೇ ಚಂದವೆನಿಸಿದೆ
ಟೋಪಿ ಹಾಕುವುದರಲ್ಲಿನ ಪರಿಣಿತಿಗೆ ಓಪನ್ ಹಾಲಿನಲ್ಲಿ ಶ್ಲಾಘನೆ ಪ್ರಾಪ್ತವಾಗುತ್ತಿದೆ
ದುಡಿಯುತ್ತಿರುವುದು ನಾವೇ ಮೊದಲಲ್ಲ;
ಅಪ್ಪ ಹೀರೋಪುಕ್ಕಿನಲ್ಲಿ ಹೋಗುವಾಗ ಊರವರು ನಮಸ್ತೆ ಮೇಷ್ಟ್ರೇ ಎನ್ನುತ್ತಿದ್ದರು
ಅಜ್ಜ ಪೇಟ ಕಟ್ಟಿ ಕೋಟು ಹಾಕಿದರೆ ಕಂಡವರು ಕೈ ಜೋಡಿಸಿ ನಿಲ್ಲುತ್ತಿದ್ದರು
ನಾನೂ ಹೋಗುತ್ತಿದ್ದೇನೆ ಪ್ಲೈ ಓವರ್ರಿನಲ್ಲಿ ಹಾರಿಕೊಂಡು
ಏ.ಸಿ ಹಾಕಿದ ಶಟಲ್ಲಿನಲ್ಲಿ ಎಫ್.ಎಮ್ ಹಾಡು ಹೇಳಿಕೊಂಡು
ಯಾರೂ ಮಾತಾಡುತ್ತಿಲ್ಲ; ನಿತ್ಯ ಕಂಡರೂ ಪರಿಚಯವಿಲ್ಲ
ಸೀಟಿನ ಕೆಳಗಿನ ಸೊಳ್ಳೆಯೂ ಕಡಿಯಲು ಬರುತ್ತಿಲ್ಲ
ಬಹುಷಃ ಅದೂ ಶಿಫ್ಟಿನ ಮೇಲೆ ಕೆಲಸ ಮಾಡುತ್ತಿರಬೇಕು
ಫ್ಲೈ ಓವರಿನಲ್ಲಿ ಹಾರಿ ಹೋಗುವ ಮುನ್ನ
ಡಾಂಬರು ಸರಿಸಿ ಮಣ್ಣನ್ನೊಮ್ಮೆ ನೋಡಬೇಕಿದೆ
ಶಟಲ್ಲಿನ ಏ.ಸಿ ಹವೆಯ ಬಿಟ್ಟು
ಬೆವರ ಹನಿಯ ನೆಲಕೆ ಬಸಿಯಬೇಕಿದೆ
ಐ.ಟಿ ಜೀವದ ಇನ್‍ಸ್ಟ್ರಕ್ಷನ್ನಿಗೆ ಸೆಮಿಕೋಲನ್ ಬೀಳುವ ಮುನ್ನ
ಬದುಕಿನ ಉದ್ದಗಲ ಕಂಡಷ್ಟು ಕಾಣಬೇಕಿದೆ
-ಚಿನ್ಮಯ
5/8/2018

Tuesday, June 26, 2018

ಗಡಿ

ನಾವು ಬಡವರಾ? ಶ್ರೀಮಂತರಾ?”
ಅಂದು ಪ್ರಶ್ನೆಯೊಂದಷ್ಟೇ ಇತ್ತು; ಉತ್ತರ ಸ್ಪಷ್ಟವಿರಲಿಲ್ಲ
ಅಪ್ಪನಿಗೆ ದುಂಬಾಲು ಬಿದ್ದು ಕೇಳಿದ್ದೆ ಚಾಲಿ ಕೆತ್ತುವಾಗ
ಮುಗುಳುನಗುತ್ತಾ ಹೇಳಿದ್ದ ಅಪ್ಪ “ಎರಡೂ ಅಲ್ಲ”
ನನಗೇನೋ ಅಚ್ಚರಿ, ಅನುಮಾನ; “ಇದು ನಿಜವಲ್ಲ”
ಆದರೆ ಯಾವುದನ್ನು ನಂಬುವುದು ತಿಳಿಯುತ್ತಿರಲಿಲ್ಲ
ನಿನ್ನೆ-ಮೊನ್ನೆಯಷ್ಟೇ ಸಹಪಾಠಿಯೊಬ್ಬ ಹೇಳಿದ್ದ
“ಸಾವ್ ಕಾರ್ರು ನೀವು..ನಿಂಗಿದೆಲ್ಲಾ ಗೊತ್ತಾಗೂದಿಲ್ಲ”
ಅಮ್ಮ ಮೊನ್ನೆಯಷ್ಟೇ ಎಲ್ಲೋ ಹೇಳುತ್ತಿದ್ದಳು
“ನಮ್ಮನೆಯಲ್ಲಿ ದುಡ್ಡಿನ ಮರವೇನೂ ನೆಟ್ಟಿಲ್ಲ”
ಯಾರೋ ಹಿಡಿಸಿ ಹೋಗಿದ್ದ ನೋಟೊಂದನ್ನು ಪುಟ್ಟ ತಂಗಿ
ಇನ್ನೇನು ಒಲೆಗೆಸೆಯುತ್ತಿದ್ದಳು;ಅವಳದೇ ಥೇರಿಯೊಂದಿರಬಹುದಾ?
ಹೊಟ್ಟೆ-ಬಟ್ಟೆಗೇನೂ ಕೊರತೆಯಿರಲಿಲ್ಲ
ಕಮ್ಮಿಯೆನಿಸಿದ್ದು ಹೆಗ್ಗನಸುಗಳಷ್ಟೇ
ಕಟ್ಟಿದೆ ಬಗೆಬಗೆಯ ಕನಸುಗಳ ತೋಟವನ್ನ
ಸಾಕಿದೆ, ಕಾಪಾಡಿದೆ, ಕೊಯ್ದು ಹದ ಮಾಡಿದೆ
ಅಂದು ಕಂಡ ಕನಸುಗಳಲ್ಲಿ ಕಾಲಕ್ರಮೇಣ ಬಹುತೇಕವು ಮುದುಡಿವೆ
ಕಾರಣ ಕೇಳಲು ನನಗಂತೂ ವ್ಯವಧಾನವಿರಲಿಲ್ಲ
ಉಳಿದವು ಆಗಲೂ ಈಗಲೋ ಅನ್ನುತ್ತಿವೆ
ಅವುಗಳ ಉಳಿಸಿಕೊಳ್ಳಲು ನನಗಂತೂ ಮನಸ್ಸಿಲ್ಲ
ಹೊಸ ಕನಸುಗಳು ಹುಟ್ಟುತ್ತಿಲ್ಲ;
ಎಲ್ಲದಕ್ಕೂ ಕಾರಣ ತಿಳಿಯಲೇಬೇಕೆಂದಿಲ್ಲ
ಬಹುಷಃ ನಾನು ಯಾವುದಕ್ಕೂ ಕಾರಣನಲ್ಲ;
ಆದರೆ ಅವುಗಳಿಲ್ಲದೇ ಬೆಂಗಳೂರು ತಲುಪಿ ಹೀಗೆ ಕುಟ್ಟುತ್ತಿರಲಿಲ್ಲ
ಅದೇನೋ ಬಡತನ-ಶ್ರೀಮಂತಿಕೆ
"ಹಣ"ದ ಗಡಿ ಮೀರಿದೆ
ಎರಡೂ ಒಂದೇ ಎನಿಸುತ್ತಿದೆ;
ಅಪ್ಪನ ಮುಗುಳುನಗೆ ಅರ್ಥವಾದಂತಿದೆ
ಪ್ರಮೋಷನ್ನು ಹೆಚ್ಚಿದಂತೆ ಹೆಚ್ಚುವ ಟೆನ್ಷನ್ನು;
ಕೊಟ್ಟಷ್ಟು ಕೆಲಸ ಮಾಡಿ ಹೊರಡುವ ಖುಷಿ
ಏಕ್ಸಟ್ರಾ ಮಾಡುವ ಕೆಲಸ; ಫ್ರೀ ಟೈಮಿನ ಸಂತಸ
ಏಫ್.ಡಿಯಲ್ಲಿನ ಜಡತ್ವ; ಶೇರ್ ಮಾರ್ಕೆಟ್ಟಿನ ಏರಿಳಿತ ಬ್ರಹ್ಮಗುಟ್ಟು
ಪ್ರೈವಸಿ ಎನ್ನುವ ಹುಸಿ ಏಕಾಂತ; ಎಲ್ಲರೊಂದಿಗೆ ಬೆರೆಯುವ ಸುಖ
ಹೊಗೆ ಕುಡಿಸುವ ಆಧುನೀಕತೆ; ಹಸಿರು ಪಸರಿಸುವ ಸಾಂಪ್ರದಾಯಿಕತೆ
ವೈಫೈ ಜೊತೆ ಅಂಗೈಯ್ಯಲ್ಲಿ ಜಗತ್ತು; ಹೊಲಕ್ಕಿಳಿದರೆ ಮರೆಯುವುದು ಜಗತ್ತು
“ನಾನು ಬಡವನಾ? ಶ್ರೀಮಂತನಾ?”
ಉತ್ತರಗಳು ಸಾಕಷ್ಟಿವೆ;
ಆದರೆ ಪ್ರಶ್ನೆ ಕೇಳಿಕೊಳ್ಳಲೇ ಧೈರ್ಯ ಸಾಲುತ್ತಿಲ್ಲ
-ಚಿನ್ಮಯ
(26/06/2018)

Friday, May 18, 2018

ಕ್ಲಾಥ್‍ವುಡ್ ಭಾಗ-2

ನಮಸ್ತೆ..ಹೇಗಿದೀರಾ?
ಇದು "ಯುವರ್ಸ್ ಕೋಟ್" ಮತ್ತು "ಕಹಳೆ" ಜಂಟಿಯಾಗಿ ಆಯೋಜಿಸಿದ್ದ ಜಗುಲಿಸಾಲು ಕಾರ್ಯಕ್ರಮದಲ್ಲಿ ವಾಚಿಸಿದ್ದ ಕವನ. ದಯವಿಟ್ಟು ಓದಿ/ನೋಡಿ, ತಪ್ಪು-ಒಪ್ಪು ತಿಳಿಸಿ...ಕಾಯ್ತಿರ್ತೀನಿ :)

-----------------
ಇನ್ನೇನು ಬೆಳಗಾಗುತ್ತಿತ್ತು;ದಿನಪತ್ರಿಕೆ ಹಾಲಿನ ವ್ಯಾನು ಹೊರಡುತ್ತಿತ್ತು
ಬಟ್ಟೆಗಳೆಲ್ಲ ರಾತ್ರಿಯ ಹರಟೆ-ಹಾಸ್ಯದ ಮೆಲುಕು ಹಾಕುತ್ತಿದ್ದವು
ನೆಂಟರ ಲುಂಗಿ ಮಾತ್ರ ಏಕಾಂಗಿಯಾಗಿ ಸುಮ್ಮನೇ ಕೂತಿತ್ತು

ಇದೇನು ಹೊಸದಲ್ಲ,ಇದೇನು ಮೊದಲಲ್ಲ, ಇದರಲ್ಲೇನೂ ವಿಶೇಷವಿಲ್ಲ
ಪರರ ನಗಿಸುವ ಹೃದಯದ ಹಿಂದೆ ನೋವಿರುವುದು ಗುಟ್ಟಾಗಿ ಉಳಿದಿಲ್ಲ
ಆದರೂ ತಿಳಿಯಬೇಕೆನಿಸಿದೆ ನೆಂಟರ ಲುಂಗಿಯ ಕತೆಯನ್ನ
ಠಾಟು-ಠೀಕಾಗಿ ಓಡಾಡಿಕೊಂಡಿದ್ದ ನೆಂಟರಲುಂಗಿ ಗಡ್ಡಬಿಡಲು ಕಾರಣವನ್ನ

ಹರೆಯದ ಹೊಸದರಲ್ಲಿ ನೆಂಟರಲುಂಗಿ ಮನೆಗೆ ಬಂತು
ಆಗೆಲ್ಲ ಅದು ನೆಂಟರಲುಂಗಿಯಾಗಿರಲಿಲ್ಲ;
ಅಸಲಿಗೆ ಅದಕ್ಕೆ ಡೆಸಿಗ್ನೇಷನ್ನೇ ಇರಲಿಲ್ಲ
ಮದುವೆಯ ಜವಳಿಗಂಟು ರೇಷ್ಮೆಸೀರೆಯ ಭರಾಟೆಯಲ್ಲಿ
ಇದನ್ನು ಯಾರೂ ಗಮನಿಸುವವರೇ ಇರಲಿಲ್ಲ
ಇದಕ್ಕೋ, ಊರೆಲ್ಲ ಮೆರೆಯಬೇಕೆಂಬ ಆಸೆ; 
ಆದರೆ ದಾರಿ ಮಾತ್ರ ತಿಳಿದಿರಲಿಲ್ಲ

ಪಕ್ಕದ ಕೋಣೆಯಲ್ಲಿ ಅತ್ತೆ ತನ್ನ ಮಗನಿಗೆ ಹೇಳುತ್ತಿದ್ದಳು
“ಈ ಬರ್ಮೂಡಾ ಎಲ್ಲ ಬೇಡ; ಇವತ್ತಾದ್ರೂ ಲಕ್ಷಣವಾಗಿ ಪಂಚೆ ಉಡು”
ನೆಂಟರಲುಂಗಿಗೆ ಖುಷಿಯೋ ಖುಷಿ; 
ಬಿಗಿದಪ್ಪಿಕೊಂಡಿತು ಅವನ ಸೊಂಟವನ್ನ
ನೋಡುವವರೆಂದರು,
“ಅರೆರೆ..ಇವತ್ತೇನು ಈ ಪಟ್ಟೆ ಪಟ್ಟೆ ಲುಂಗಿ.ಉಡು ಬಿಳಿ ಪಂಚೆಯನ್ನ”

ಬೆಂಗಳೂರಿನಿಂದ ಬಂದ ಅತ್ತೆಯ ಮಗ ಕಿತ್ತೆಸೆದ ಲುಂಗಿಯನ್ನ
ಇಸ್ತ್ರೀಮಾಡಿದ್ದ ಜೀನ್ಸ್ ಸಿಕ್ಕಿಸಿ, ತಿರುಗಿಸಿದ ಬೈಕಿನ ಕೀಲಿಯನ್ನ
ನೆಂಟರಲುಂಗಿ ಮಾತ್ರ ಅಲ್ಲೇ ಮುದುಡಿಬಿದ್ದಿತ್ತು
ತನ್ನ ಅದೃಷ್ಟವ ಹಳಿಯುತ್ತಿತ್ತು, ಮುಂದೇನು ಎಂದು ಯೋಚಿಸುತ್ತಿತ್ತು
ಏನಾದರೂ ಮಾಡಲೇಬೇಕೆಂದು ಹವಣಿಸುತ್ತಿತ್ತು

ಅಷ್ಟರಲ್ಲಿ ಅತ್ತೆ ಕೋಣೆಗೆ ಬಂದಳು;
ರೇಷ್ಮೆ ಸೀರೆ ಕುಪ್ಪಸ ಚಿಲ್ಲರೆ ಕಾಸು ಎಲ್ಲವನ್ನೂ ಮಂಚದ ಮೇಲಿಟ್ಟಳು
ನೆಂಟರಲುಂಗಿಯ ಕಣ್ಣು ಇನ್ನೂರಾ ಇಪ್ಪತ್ತು ಡಿಗ್ರಿ ತಿರುಗಿತು
ಸೀರೆ-ಕುಪ್ಪಸದ ಕಡೆಗಲ್ಲ, ಅದರ ಜೊತೆಗಿದ್ದ ರೇಷಿಮೆ ಶಾಲಿನ ಕಡೆಗೆ
ರಾತ್ರಿಯಾಯಿತು, ಎಲ್ಲರೂ ಮಲಗಿದ್ದರು
ನೆಂಟರಲುಂಗಿ ಮಾತ್ರ ಎಲ್ಲರಿಗಿಂತ ಬೇಗ ಎದ್ದಿತ್ತು

ಹಲೋ, ಮೈ ನೇಮ್ ಈಸ್ ----, 
ಹೌಡುಯು ಡೂ ಎಂದು ಮಾತನಾಡಿಸಿತು
ಹೈ ಹೌವ್ ಆರ್ ಯು ಎಂದು ಶಾಲು
ಪರಿಚಯಪೂರ್ವಕ ನಗೆಬೀರಿತು

ಅದೇ ಸಮಯದಲ್ಲಿ, ಪಕ್ಕದ ಕೋಣೆಯಲ್ಲಿ ವಾಟ್ಸಾಪ್ಪಿನ ಸ್ಮೈಲಿ ಹಾರಾಡುತ್ತಿತ್ತು
ಬೆಂಗಳೂರಿನ ಅತ್ತೆಯ ಮಗ -ಪಕ್ಕದೂರಿನ ಹುಡುಗಿಯ ವತಿಯಿಂದ
ಕರಕುಶಲ ಕೈಗಾರಿಕೆಯ ಪ್ರದರ್ಶನ ನಡೆಯುತ್ತಿತ್ತು
ಮತ್ತೆ ಬೆಳಗಾಯಿತು; ಕೆಲವರಿಗೆ ಬಹಳ ಬೇಜಾರಾಯಿತು
ರಾತ್ರಿಯ ಏಕಾಂತಕ್ಕಾಗಿ ಬಹಳೇ ಹೊತ್ತು ಕಾಯಬೇಕಾಯಿತು

ವಿಧಿಲಿಖಿತ, 
ಕೋಣೆಯಲ್ಲಿ ಹರಡಿದ್ದ ಲುಂಗಿಯಲ್ಲಿ ಸೀರೆಯ ರಾಶಿಯನ್ನ ಕಟ್ಟಿದರು
 ಕಳುವಾಗದಿರಲಿ ಎಂದು ಯಜಮಾನತಿ ಅದನ್ನು
ಜೋಪಾನವಾಗಿ ಕಪಾಟಿನಲ್ಲಿ ಬಚ್ಚಿಟ್ಟರು
ಆದರೆ ಕಳ್ಳತನ ಅದಾಗಲೇ ಆಗಿಹೋಗಿತ್ತು;
ನೆಂಟರಲುಂಗಿಯ ಹಾರ್ಟನ್ನ ರೇಷಿಮೆ ಶಾಲು ಅಪಹರಿಸಿತ್ತು

ವಿಧಿಲಿಖಿತ,
ಅತ್ತ ಜವಳಿಯಲ್ಲಿ ಚೂಡಿದಾರದ ಬಟ್ಟೆ ಕಮ್ಮಿಬಿತ್ತು
ಖರೀದಿಯ ಜವಾಬ್ದಾರಿ ಸುತ್ತಿ ಬಳಿಸಿ
ಬೈಕಿದ್ದ ಹುಡುಗ, ಪೇಟೆ ಗೊತ್ತಿದ್ದ ಹುಡುಗಿಯ ಮೇಲೆ ಬಿತ್ತು

ಜೊತೆಗೇ ಇದ್ದರೂ, ಇಬ್ಬರೂ ಇಲ್ಲಲ್ಲ ನಾಲ್ವರೂ ಅಂತರ ಕಾಯ್ದುಕೊಂಡಿದ್ದರು
ತಮಗೆ ಮಾತ್ರ ತಿಳಿಯುವಂತೆ ಕನಸಿನ ಅರಮನೆ ಕಟ್ಟುತ್ತಿದ್ದರು
ಮರುದಿನ ಮಧ್ಯಾನ್ಹದವರೆಗೂ ಅದು ಮುಂದುವರೆದಿತ್ತು
ಮುಂದಿನ ದಿಬ್ಬಣ ಪಕ್ಕದೂರಿಗೇ ಬರುವುದು ಬಹುತೇಕ ನಿಶ್ಚಿತವಾಗಿತ್ತು

ಮರುದಿನ, ಚಂದದ ಸೀರೆಯನುಟ್ಟು 
ಬಿತ್ತಕ್ಕಿಗಾಗಿ ಹುಡುಗಿ ಶಾಲುಹೊದ್ದಳು
ಅವನ ಡಿ.ಎಸ್.ಎಲ್.ಆರ್ ಕ್ಯಾಮರಾದಲ್ಲಿ 
ವಧು-ವರರಿಗಿಂತ ಅವಳ ಪೋಟೋಗಳೇ ಜಾಸ್ತಿ ಇದ್ದವು

ನೆಂಟರಲುಂಗಿ ಕೋಣೆಯಲ್ಲಿರಲಾಗದೇ 
ಯಾವುದೋ ಒಂದು ನೆಂಟರ ಸೊಂಟವನ್ನ ಅಪ್ಪಿಕೊಂಡಿತು
ಅಂದಿನಿಂದ ಅದಕ್ಕೆ ನೆಂಟರಲುಂಗಿಯ ಪಟ್ಟ ಪಕ್ಕಾ ಆಯಿತು

ಮದುವೆ ಮುಗಿದಮೇಲೆ ಹುಡುಗಿ ಬೈಕನ್ನೇರಿ ಹೊರಟಿದ್ದಳು
ಲುಂಗಿಗೆ ಬಾಯ್ ಹೇಳಲೆಂದು ಶಾಲು ನೆಲಕ್ಕೆ ಇಳಿದುಬಿತ್ತು

ಅದೇ ಘಳಿಗೆಯಲ್ಲಿ ಬೈಕಿನ ಚಕ್ರ ತಿರುಗಿತ್ತು
ಶಾಲು, ಶಾಲಿನ ಜೊತೆಗಿದ್ದ ಸೆರಗು, ಸೆರಗಿನ ಜೊತೆಗಿದ್ದ ಸೀರೆ
ಸೀರೆ ಉಟ್ಟಿದ್ದ ಹುಡುಗಿ ಅದಕ್ಕೆ ಬಲಿಯಾಗಿಯಾಗಿತ್ತು
ಶುಭ ಕಾರ್ಯ ಮುಗಿಸಿದ ಮನೆಯಲ್ಲಿ ಅಶುಭದ ಸುದ್ದಿ ಹರಡಿತು

ಚಿತೆಯು ಧಗಧಗ ದಹಿಸುವಾಗ ಎಲ್ಲರ ಕಣ್ಣಲ್ಲೂ ನೀರು
ಅಷ್ಟರಲ್ಲೇ ಯಾರೋ ಹುಡುಗಿಯ ಶಾಲನ್ನೂ ಬೆಂಕಿಗೆ ಬಿಸಾಡಿದರು
ಎಲ್ಲ ಮುಗಿದಿತ್ತು; ಹುಡುಗನಿಗಾಗಿ ಬೆಂಗಳೂರಿನ ಸ್ಲೀಪರ್ ಬಸ್ಸು ಕಾದಿತ್ತು
ಇತ್ತ ಪ್ರೇಯಸಿಯ ನೆನಪಲ್ಲಿ ಲುಂಗಿಯ ಗಡ್ಡಬೆಳೆದಿತ್ತು

ತಾನು ಶಾಲಿಗೆ ಪರಿಚಯವೇ ಆಗದಿದ್ದರೆ ಬಹುಷಃ ಹೀಗೆಲ್ಲ ಆಗುತ್ತಿರಲಿಲ್ಲ
ಶಾಲು ಬಗ್ಗೆ ತನಗೆ ಬಾಯ್ ಹೇಳುತ್ತಿರಲಿಲ್ಲ
ಇಬ್ಬರೂ ದೂರಾಗುತ್ತಿರಲಿಲ್ಲ
ನೆಂಟರ ಲುಂಗಿಯ ತಲೆಯಲ್ಲಿ ಬೇರೆ ಏನೇನೋ ಓಡುತ್ತಿತ್ತು
ಅಜನ್ಮ ಬ್ರಹ್ಮಚಾರಿಯಾಗುವ ಪಣತೊಟ್ಟಿತ್ತು

ಅತ್ತ ಬೆಂಗಳೂರಿನಲ್ಲಿ ಹುಡುಗನ ಬದುಕು 
ಎಂದಿನಂತೆ ಸಾಗಿತ್ತು

“ಈ ಮನುಷ್ಯರೇ ಹೀಗೆ” 
ನೆಂಟರಲುಂಗಿಗೆ ಮನುಕುಲದ ಬಗ್ಗೆ ಸಿಟ್ಟು ಬಂತು
ಉಟ್ಟವರು ಕೂರಲಿಕ್ಕಾಗದಂತೆ ಕಿರಿಕಿರಿಯಿಡಲು ಶುರುವಿಟ್ಟಿತು
ಮನೆಗೆ ಬಂದ ನೆಂಟರೆಲ್ಲ ಹೇಳಲಿಕ್ಕಾಗದ ವೇದನೆ ಅನುಭವಿಸಿದರು
ಮರೆಯಲ್ಲೆಲ್ಲೋ ನಿಂತು ಪರಪರ ಕೆರೆದು ಬಸ್ಸು ಹತ್ತಿದರು

ಕೆಲದಿನಗಳ ನಂತರ,
ನೆಂಟರ ಲುಂಗಿಯ ಕೋಪ ತಣ್ಣಗಾಯಿತು
ಯಜಮಾನ ಯಜಮಾನತಿಯ ಸ್ಥಿತಿ ನೋಡಿ
ಹೃದಯ ಆದ್ರ್ರವಾಯಿತು

ಅವತ್ತಿನಿಂದ ಮನೆಗೆ ಬಂದ ನೆಂಟರಿಗೆಲ್ಲ ಇದೇ ಲುಂಗಿಯೇ ಬೇಕು
ಅವರು ಹೊರಟ ದಿನ ರಾತ್ರಿ, 
ಕ್ಲಾತ್‍ವುಡ್‍ನಲ್ಲಿ ಅವರ ಬಗ್ಗೆ ಸಾಲು ಸಾಲು ಜೋಕು

ಇನ್ನೇನು ಬೆಳಗಾಗುತ್ತಿತ್ತು;ದಿನಪತ್ರಿಕೆ ಹಾಲಿನ ವ್ಯಾನು ಹೊರಡುತ್ತಿತ್ತು
ಬಟ್ಟೆಗಳೆಲ್ಲ ರಾತ್ರಿಯ ಹರಟೆ-ಹಾಸ್ಯದ ಮೆಲುಕು ಹಾಕುತ್ತಿದ್ದವು
ನೆಂಟರ ಲುಂಗಿ ಮಾತ್ರ ಏಕಾಂಗಿಯಾಗಿ ಸುಮ್ಮನೇ ಕೂತಿತ್ತು
-ಚಿನ್ಮಯ


Thursday, March 22, 2018

ಬದಲಾವಣೆ

ಊರೆಲ್ಲ ಖಾಲಿಯಾಗುತ್ತಿದೆ; ಆಟ ಮುಗಿದ ಅಂಗಳದಂತೆ
ಶಹರ ತುಂಬುತ್ತಲಿದೆ; ಇನ್ನೂ ಹೊರಡದ ಟೆಂಪೋವಿನಂತೆ
ನಾನೂ ಓಡುತ್ತಿದ್ದೇನೆ ಅದೇ ನಗರಿಯಲ್ಲಿ; ಸಿಟಿಯ ಸುಖದ ಅಮಲಿನಲ್ಲಿ
ಊರು-ತೋಟ-ನೆಮ್ಮದಿ ಕಾಡುತ್ತವೆ ತಡರಾತ್ರಿಯ ಕನವರಿಕೆಗಳಲ್ಲಿ

ಅಜ್ಜ-ಅಜ್ಜಿ-ದೊಡ್ಡಮ್ಮ-ದೊಡ್ಡಪ್ಪ ಇನ್ನು ಶ್ರಾದ್ಧಗಳಲ್ಲಷ್ಟೇ ಸಿಗುವುದು
ರಜೆ ಹಾಕಿ ಊರಿಗೆ ಹೋಗಿರಬೇಕು; ಕಾವ್ ಕಾವ್ ಎಂದು ಕರೆಯಬೇಕು
ಊಟ ಮಾಡಿ ಕೈ ತೊಳೆದು ಬೆಟ್ಟ ಹತ್ತಿ; ಮೇಲ್ ಚೆಕ್ ಮಾಡಬೇಕು
ಇನ್ಯಾವಗಲೋ ಬರುವೆನೆಂದು ಸಬೂಬು ಹೇಳಿ ಸ್ಲೀಪರ್ ಬಸ್ಸು ಹತ್ತಬೇಕು

ಅಶುಭಕ್ಕೊಂದೇ ಕಡ್ಡಾಯ ಪ್ರಯಾಣ; ಹಬ್ಬಗಳಲೆಲ್ಲ ಹೊಟೇಲಿನ ನಿರ್ಣಯ
ಹೆಸರಿಗೆ ಮಾತ್ರ ಅಲ್ಲಿಯವರು; ಆದರೆ ಎಲ್ಲಿಯೂ ನಿಲ್ಲದವರು
ಅವಕಾಶವನರಸಿ ಕೆಂಪು ಬಸ್ ಹತ್ತಿ ಬಂದದ್ದೇನೋ ನಿಜ. ಗುರಿ ಮುಟ್ಟಿದೆನಾ?
ಗುರಿಗಳಿಗೂ ಬಡ್ಡಿ-ಚಕ್ರಬಡ್ಡಿಯ ಹಾಕಿ, ಕೈ ಸಿಗದೆಡೆಯಲ್ಲಿ ಅಡಗಿಸಿಟ್ಟೆನಾ?

ತೊಂದರೆಯೇನಿಲ್ಲ ಈ ಪಟ್ಟಣದಲ್ಲಿ; ಬೆವರು ಬಸಿಯುವವರಿಗೆ ಬದುಕಲು
ಉಸಿರಾಡಲು ಶುದ್ಧ ಗಾಳಿ ಸ್ವಲ್ಪ ಕಷ್ಟ; ಟ್ರಾಫಿಕ್ಕಾಸುರನ ಲಹರಿ ನಿತ್ಯ ಅಸ್ಪಷ್ಟ
ಹೊರಡಲೇಬೇಕೆನ್ನುವುದಕ್ಕೆ ಸ್ಪಷ್ಟಕಾರಣವೇನೂ ಸಿಗುತ್ತಿಲ್ಲ
ಕಾರ್ಪರೇಟಿನಲ್ಲಿ ಮುಳುಗಿದ ಮೇಲೆ ಸತ್ಯ-ಪ್ರಾಮಾಣಿಕತೆಗಳೂ ಬದುಕಿಲ್ಲ

ಜೊತೆಗೆ ಊರೂ ಮೊದಲಿನಂತಿಲ್ಲ; ಬದಲಾವಣೆ ಜಗದ ನಿಯಮ
ಬೇಡಿಕೆ-ಪೂರೈಕೆ;ಬ್ಲಾಕ್ ಆಂಡ್ ವೈಟ್ ಬದುಕಿಗೆ ಬಣ್ಣದ ಆಯಾಮ
ಆದರೆ, ಮೊದಲಂತೆ ಅನ್ನದ ಚರಿಗೆ ಬಿಸಿಯಾಗುವುದಿಲ್ಲ; ಕಾರಣ ಅಷ್ಟೆಲ್ಲ ಉಣ್ಣುವವರಿಲ್ಲ
ಊರ ಪ್ರತಿಷ್ಠೆ: ಬೇಲಿ ಸಲುವಾಗಿ ನಂಬರವಿಲ್ಲ; ಕಾರಣ ಬೇಲಿ ಕಾಯಲೂ ಜನರಿಲ್ಲ

ಅಲ್ಲೂ ಇಲ್ಲೂ ನನ್ನಲ್ಲೂ ಎಲ್ಲ ಬದಲಾಗಿವೆ
ಆದರೆ ನಾ ಕಂಡಿದ್ದ ಊರು ನನ್ನಲ್ಲೇ ಭದ್ರವಾಗಿದೆ;
ನನ್ನನ್ನು ಇಂದಿಗೂ ಸಂತೈಸುತ್ತಿದೆ
ಎಲ್ಲ ಬಿಟ್ಟು ಬರಿಗೈಯ್ಯಲ್ಲಿ ಬಂದಾಗಲೂ
ಅಮ್ಮನಂತೆ ಬಿಗಿದಪ್ಪಿಕೊಳ್ಳುತ್ತದೆ,
ಅಪ್ಪನಂತೆ ಹೆಗಲುಕೊಡುತ್ತದೆ
-ಚಿನ್ಮಯ
22/03/2018

Thursday, February 15, 2018

ಮಹಾನಗರಿ

ಮಹಾನಗರಿಯಲಿ ಈಗೀಗ ಕನಸುಗಳೂ ದುಬಾರಿಯೆನಿಸುತ್ತಿವೆ
ಪೂರ್ತಿ ಆಯಸ್ಸಿನ ಬದುಕಿಲ್ಲಿ ಬಹುಷಃ ಸ್ಪಪ್ನಗಳಿಗೂ ಕಷ್ಟ
ಆರೆವಯಸ್ಸಿಗೇ ಸತ್ತು ಪ್ರೇತಗಳಾಗಿ; ಕಣ್ಣೀರು ಕುಡಿವ ದುಂಬಿಗಳಾಗಿ
ನಡುರಾತ್ರಿಯೆಲ್ಲ ಕಾಡುತ್ತವೆ; ಕಾರಣ ಮಾತ್ರ ತೀರ ಅಸ್ಪಷ್ಟ
ಅದೆಷ್ಟು ಪುಳಕಗಳ ಪುಟಿತವಿತ್ತು, ಊರಿಂದ ಬಸ್ಸು ಹತ್ತುವಾಗ
ಹೊಸ ಶುರುವಾತಿನ ಹುರುಪು, ಗೆಳೆತನದ ಮೆಲಕು, ನೌಕರಿಯ ಅಳುಕು
ಅದೆಷ್ಟು ಮೂಟೆ ಮೂಟೆ ನಿರೀಕ್ಷೆಗಳಿತ್ತು ಮೆಜೆಸ್ಟಿಕ್ಕಿನಲ್ಲಿ ಇಳಿಯುವಾಗ
ಅವಕಾಶಗಳ ಆಗರ, ಐದಾರಂಕಿಯ ಪಗಾರ, ಜನಜಂಗುಳಿ ಸಾಗರ
ಬರಬರುತ್ತಾ ಅದೇಕೋ ಎಲ್ಲವೂ ಬೋರಾಗಿದೆ; ನಾಲಿಗೆ ಹಾಳಾಗಿದೆ
ಕ್ಯೂ ನಿಂತು ತಿನ್ನುತಿದ್ದ ವೀಬೀ ದೋಸೆಯಲ್ಲೂ ಜಿಡ್ಡು ಕಾಣಿಸುತ್ತಿದೆ
ಹೊಸದೆನಿಸಿದ್ದೆಲ್ಲ ಬೇಕೆನಿಸಿ, ಹಿಂದೆ ಹಿಂದೆ ಹಿಂದೆ ಓಡಿ ಸುಸ್ತಾಗಿದೆ
ಮಾಯಾಮೃಗವೆಂಬುದು ಮೆಟ್ರೋ ಸಿಟಿಯ ರೂಪದಿ ಅವತಾರವೆತ್ತಂತಿದೆ
ಥುತ್ತೆಂದು ಎದುರಾಗುತ್ತವೆ, ಶುರುವಲ್ಲೆಲ್ಲೋ ಖುಷಿಕೊಟ್ಟ ಸುಂದರ ಸ್ಪಪ್ನಗಳು
ಮಂಕಾಗಿಸಿ, ಗೋಳಾಡಿಸಿ, ನಿದ್ದೆಗೆಡಿಸಿ ಜೀವಹಿಂಡುತ್ತಿವೆ ಆ ವಿಶೇಷಾತ್ಮಗಳು
ಆತ್ಮಹತ್ಯೆಯೋ ಕೊಲೆಯೋ ಸಹಜ ಸಾವೋ;ಅವೆಲ್ಲ ಸತ್ತಿರುವುದಂತೂ ನಿಜ
ಆಸೆ ಹೊತ್ತವರೇ ಮುಕ್ತಿ ಪಡೆಯರಂತೆ, ಇನ್ನು ಕನಸುಗಳು ಏನಾಗಬೇಡ ?
ಎಲ್ಲ ಸರಿಯಿದೆಯೆಂದು ಬೆಳಗೆದ್ದು ಇನ್‍ಶರ್ಟು ಮಾಡಿ ಹೊರಡುವುದು ಸರಿಯೇ
ಆದರೆ ತಡರಾತ್ರಿಯ ಏಕಾಂತ ಮಾತ್ರ ಕಷ್ಟವಾಗುತ್ತದೆ, ಪಾಪಪ್ರಜ್ಞೆ ಕಾಡುತ್ತದೆ
ಅದೃಷ್ಟಕ್ಕೆ, ಹೊಸ ಕನಸುಗಳ ಹುಚ್ಚು ಹೊಳೆಯಲ್ಲಿ ತೇಲಿ ಹೋಗದ್ದೂ ಕೆಲವಿದೆ
ಊರಿಂದ ಕರೆತಂದ ಹಳೆಯ ಕನಸುಗಳು ಮಾತ್ರ ಬ್ಯಾಗಿನಲ್ಲಿ ಭದ್ರವಾಗಿವೆ
ಎಲ್ಲ ಬಿಟ್ಟು ಹೊರಟೇ ಬಿಡುವ ಎನಿಸುತ್ತದೆ, ಊರ ಬಸ್ಸು ಕಣ್ಣೆದುರು ಕಂಡಾಗ
ಎರಡೇ ಹೆಜ್ಜೆ, ನಿಂತು ಬಿಡುತ್ತೇನೆ,ಅದೊಂದು ಇದೊಂದು, ಮುಗಿಸುವಾ ಆದಷ್ಟು ಬೇಗ
ಹುಡುಕಬೇಕಿದೆ ಕಾರಣ ನಾನು, ಊರಿಗೆ ಹೋಗದಂತೆ ತಡೆವ ಬಂಧಗಳಿಗೆ
ಪಡೆಯಬೇಕಿದೆ ಉತ್ತರ ನಾನು, ಅಂದು ಊರು ಬಿಡಿಸಿದ ಪ್ರಶ್ನೆಗಳಿಗೆ
ಅಲ್ಲಿಯವರೆಗೆ ಹೊಸ ಕನಸುಗಳ ಹುಟ್ಟಿಸುವಿಕೆಗೊಂದು ದೀರ್ಘವಿರಾಮ
ಅವಲಕ್ಕಿ ಮೊಸರಲ್ಲೂ ಬಾಳಜಗ್ಗಿದ ಕನಸುಗಳ ಸಾಕಾರಕ್ಕೆ ಪಡಬೇಕಿದೆ ನಿತ್ಯಶ್ರಮ
ಆದರೂ ಅದೇಕೋ, ಮಹಾನಗರಿಯಲಿ ಕನಸುಗಳೂ ದುಬಾರಿಯೆನಿಸುತ್ತಿವೆ
ಆರೆವಯಸ್ಸಿಗೇ ಸತ್ತು ಪ್ರೇತಗಳಾಗಿ; ನಡುರಾತ್ರಿಯೆಲ್ಲ ಕಾಡುತ್ತವೆ;
-ಚಿನ್ಮಯ
15/2/2018

Monday, January 22, 2018

ಹೇಳದ ಮಾತು

ಒಂದನೇ ಪ್ರೀತಿ ಬಗ್ಗೆ ಎರಡನೇ ಹುಡುಗಿಗೆ ಹೇಳಬಹುದೇ?
ಮೂರು ಬಾರಿ ಯೋಚಿಸಿದೆ; ನಾಲ್ಕಾರು ಬಾರಿ ತಲೆ ಕೆರೆದೆ

ಕಳೆದ ವಾರದಂತಿದೆ ಆಹಾ!, ಕಣ್ಣೆದುರು ಕನಸುಗಳ ತೋರಣವಿತ್ತು
ಹುಣ್ಣಿಮೆಯ ತಡರಾತ್ರಿಯಲ್ಲೆಲ್ಲ ಸಾಲುಗಳು ಮೂಡುತ್ತಿತ್ತು
ಭೂಕಂಪ-ಜ್ವಾಲಾಮುಖಿ ಭಾವಲಹರಿ ಸುನಾಮಿಯಾಗಿತ್ತು
ಸಾಂತ್ವನದ ನಶೆಯೇರಿ; ವಾರಗೆಯವರಿಗೆ ಬರಾಬರಿಯಾಗಿಸಿತ್ತು

ವಸಂತಗಳು ಬದಲಾದವು; ಪ್ರಿಯಾರಿಟಿಗಳು ಬೇರೆಯಾದವು
ಜಗಳ ಕಮ್ಮಿಯಾದಂತೆಲ್ಲ ಅಹಂನ ಕೋಟೆಗಳು ಗಟ್ಟಿಯಾದವು
ಬ್ರೇಕ್-ಅಪ್ ಎಂಬ ಸಮಾರಂಭವಿಲ್ಲದೇ ಸಂಬಂಧ ಮುರಿದಿತ್ತು
ಉಪೇಕ್ಷೆ-ಉಡಾಫೆ-ಸ್ವಾರ್ಥಗಳ ನಡುವೆ ನಂಬಿಕೆ ದಿವಾಳಿಯಾಗಿತ್ತು

ಹೀಗೆ ಒಂದು ದಿನ ಆಮಂತ್ರಣ ಪತ್ರಿಕೆ ಡೌನ್ಲೋಡಾಯಿತು
ಅಷ್ಟುದಿನ ಅಡಗಿದ್ದ ಕಣ್ಣೀರು ಟಪ್ ಎಂದು ಹನಿಯಿಟ್ಟಿತು
ಕ್ಷಣಕಾಲ ಕತ್ತಲಷ್ಟೇ; ಸಾವಕಾಶದಿ ನಿಟ್ಟುಸಿರು ಹೊರಟಿತು
ಬೇಡವೆಂದರೂ ಗಡ್ಡ ಬೆಳೆಯಿತು; ಕೆಲಸ ಬದಲುಮಾಡಲೇಬೇಕಾಯಿತು

ಬದುಕಿದ್ದೆ ಬದುಕ ನೋಡುವ ಆಸೆಗೆ; ಬೆನ್ನುಹಾಕಲಾಗದ ಹಠಕ್ಕೆ
ರಾತ್ರಿಗಳೆಲ್ಲ ಅಮಾವಾಸ್ಯೆ, ಏಕಾಂತವೂ ಹಿಂಸೆ, ಬೈಗುಳ ನಾಯಿ ಬೊಗಳಿದ್ದಕ್ಕೆ
ಮತ್ತೆ ಕ್ಯಾಲೆಂಡರು ಮಗ್ಗಲು ಬದಲಿಸಿತು; ಮನಸ್ಸೊಂದಿಷ್ಟು ತಿಳಿಯಾಯಿತು
ಅಡಿಕೆ ಮರ ಹತ್ತಿ ಬಿದ್ದರೇನಂತೆ, ಏಲಕ್ಕಿ ಬೆಳೆಯುವ ಮನಸ್ಸಾಯಿತು
ಸೂರ್ಯನಿಂದ ಹೊರಸಿಡಿದ ಭೂಮಿ ನಿಧಾನವಾಗಿ ತಂಪಾಗುತ್ತಿತ್ತು
ಸ್ವಯಂ-ನಿಯಂತ್ರಣವೆಂಬ ಪರದೇಸಿ ಪೊರೆ ಕಳಚಿ ಹೋಯಿತು
ಗಾಳಿ ಬಂದ ಕಡೆ ಖುಷಿಯಿಂದ ಸಾಗಿ; ಹಸಿವಾದಾಗ ತಿಂದು ತೇಗಿ
ಮತ್ತೊಮ್ಮೆ ರಾತ್ರಿಯೆಲ್ಲ ನಿದ್ದೆ ಬರಹತ್ತಿತ್ತು; ಆದರ್ಶ ಮಾತಾಡಿತ್ತು

ಆದರ್ಶದ ಭೂತ ನೆತ್ತಿಹತ್ತುವ ಮೊದಲೇ ಇದಾಯಿತು
ಕಾಣದ ನಾಳಿಗಿಂತ, ಕಣ್ಣೆದುರಿನ ಇಂದು ಹಾಯೆನಿಸುತ್ತಿತ್ತು
ಹಾಯ್-ಬಾಯ್ ಇಂದ ಶುರುವಾದಾಗ ಮಾಮೂಲಿಯೆನಿಸಿತ್ತು
ನನ್ನ ಬೇಲಿಗಳ ನಾನೇ ದಾಟಿದಾಗ ಇದೇನೋ ವಿಶೇಷವೆನಿಸಿತು

ಒಂದನೇ ಪ್ರೀತಿ ಬಗ್ಗೆ ಎರಡನೇ ಹುಡುಗಿಗೆ ಹೇಳಬಹುದೇ?
ಮೂರು ಬಾರಿ ಯೋಚಿಸಿದೆ; ನಾಲ್ಕಾರು ಬಾರಿ ತಲೆ ಕೆರೆದೆ
ಪ್ರಯೋಜನವೇನೂ ಆದಂತಿಲ್ಲ;ಉತ್ತರವೂ ಸಿಕ್ಕಿಲ್ಲ
ಬಹುಷಃ ನಂಬಿಕೆಯೊಂದಿದ್ದರೆ,
ಎಲ್ಲವನ್ನೂ ಬಾಯಿಬಿಟ್ಟು ಹೇಳಬೇಕೆಂದಿಲ್ಲ
ಎಲ್ಲವನ್ನೂ ಕಿವಿಯಿಂದಲೇ ಕೇಳಬೇಕೆಂದಿಲ್ಲ

-ಚಿನ್ಮಯ
22/1/2018