Tuesday, October 2, 2018

ಡೆತ್ ಬೈ ಚಾಕಲೇಟ್


"ನಾ ಸಾಯೋದಕ್ಕಿಂತ ಮುಂಚೆ ನನ್ನ್ ಸುಡೋವಷ್ಟಾದ್ರೂ ಬುಕ್ಸ್ ಕಲೆಕ್ಟ್ ಮಾಡ್ಬೇಕ್ ಕಣೇ.."..ಶತಭಿಷ ಪುಸ್ತಕಗಳ ಎಡತಾಕುತ್ತಾ ಹೇಳಿದ..

"ಏಯ್...ಸುಮ್ನಿರೋ...ಏನೇನೋ ಹೇಳ್ಬೇಡಾ..ಈಡಿಯಟ್" ಶ್ರಾವ್ಯಾ ಮೆಲ್ಲಗೆ ಎಡಗೈ ತಟ್ಟಿದಳು. ಶತಭಿಷ ಅವಳ ಮುಖವನ್ನೊಮ್ಮೆ ನೋಡಿದ. ಕಣ್ಣುಗಳಲ್ಲೇನೋ ತೀವ್ರತೆಯಿತ್ತು...ಅದು ಕೋಪವಾ, ಪ್ರೀತಿಯಾ, ಕಾಳಜಿಯಾ ಶತಭಿಷನಿಗೆ ಥಟ್ ಅಂತ ಹೇಳಲು ಸಾಧ್ಯವಾಗಲಿಲ್ಲ..ಪುಸ್ತಕಗಳ ಮಧ್ಯೆ ನಿಂತಿದ್ದ ಇಬ್ಬರ ನಡುವೆ ಅದೇನೋ ಚಂದದ ಏಕಾಂತವಿತ್ತು...ಅರೆಗಳಿಗೆ ಅಷ್ಟೆ..ಪಕ್ಕದಲ್ಲ್ಯಾರೋ ಓಡಾಡುತ್ತಿದ್ದು ಗಮನಕ್ಕೆ ಬಂದು "ಏನೋ?" ಎಂಬಂತೆ ಹುಬ್ಬು ಹಾರಿಸಿದಳು ಶ್ರಾವ್ಯಾ..ಆತ ಏನೂ ಇಲ್ಲ ಎಂಬಂತೆ ತಲೆ ಅಲ್ಲಾಡಿಸಿ ಪುಸ್ತಕಗಳನ್ನು ಹುಡುಕಲು ಹೊರಟ.
ಆಕೆ ಸಡನ್ನಾಗಿ ಕಾದಂಬರಿಯೊಂದನ್ನು ತೆಗೆದಳು. "ಹೇಳಿ ಹೋಗು ಕಾರಣ"
"ಚೆನಾಗಿದ್ಯೇನೋ?" ಎಂಬಂತೆ ಕೇಳಿದಳು.
"ಸೂಪರ್.." ಅಂದ ಶತಭಿಷ...
"ಓದಿದೀನಿ..ಸ್ಟಾರ್ಟಿಂಗ್ ಸಖತ್ ಇಷ್ಟ ಆಯ್ತು...ಒಳ್ಳೆ ಕತೆ... ರೊಮ್ಯಾಂಟಿಕ್ ....ಆದ್ರೆ ಕ್ಲೈಮಾಕ್ಸ್ ಯಾಕೋ ತೀರಾ ಫಿಕ್ಷನ್ ಅನಸ್ತು..ನೀನೂ ಓದು..ನಾನು ಬೆಂಗ್ಳೂರಿಂದ ಶಿಮೊಗ್ಗಾ, ದಾವಣಗೆರೆ ಇಂದ ಬೆಂಗಳೂರಿಗೆ ಬರೋವಾಗ ಓದಿದ್ದೆ...ಮಜಾ ಅಂದ್ರೆ ಆ ಕತೆ ನಡ್ಯೋದೂ ಅಲ್ಲೇ...ಒಂಥರಾ ಥ್ರಿಲ್ ಇತ್ತು " ಇನ್ನೂ ಏನೇನೋ ಹೇಳಬೇಕು ಅಂದುಕೊಂಡಿದ್ದ ಆದರೆ ನಾಲಿಗೆ ಹೊರಡಲೇ ಇಲ್ಲ.
ಶತಭಿಷ ತಡವರಿಸುತ್ತಿರುವಷ್ಟರಲ್ಲಿ ಆಕೆ ಅದರೊಂದಿಗೆ ಇನ್ನೆರಡು ಪುಸ್ತಕಗಳನ್ನು ತೆಗೆದುಕೊಂಡು "ಡನ್" ಎಂದಳು.
ಈತ ಐದಾರು ಪುಸ್ತಕಗಳನ್ನು ಹೆಕ್ಕಿ, ನಾಕೈದು ಪುಸ್ತಕಗಳನ್ನು ವಾಪಸ್ ಇಟ್ಟು, ಮತ್ತೆ ಎರಡನ್ನು ಎತ್ತಿ, ಪುನಃ ವಾಪಸ್ಸಿಟ್ಟು, ಮೂರ್ನಾಕು ಬಾರಿ ತಲೆ ಕೆರೆದು ಕೊನೆಗೆ ಎಲ್ಲ ವಾಪಸ್ಸಿಟ್ಟು ಪೂರ್ಣಚಂದ್ರ ತೇಜಸ್ವಿಯವರ ಪುಟ್ಟ ಪುಸ್ತಕವೊಂದನ್ನು ಎತ್ತಿಕೊಂಡು ಬಿಲ್ಲಿಂಗ್ ಕೌಂಟರ್‍ಗೆ ಬಂದ. 
"ಇದೊಂದೇನಾ?" ಆಕೆ ಮುಗುಳು ನಗುತ್ತಾ ಕೇಳಿದಳು. ಆ ನಗೆಯಲ್ಲೊಂದು ತುಂಟತನವಿತ್ತು. ಕಿಚಾಯಿಸುವಿಕೆಯ ಯೌವ್ವನ ತುಂಬಿತ್ತು. ಶತಭಿಷ "ಹೂಂ" ಎಂದು ಯಾವಾಗ ಹೇಳಿದನೋ ಆತನಿಗೇ ತಿಳಿಯಲಿಲ್ಲ.
ಬಿಲ್ಲಿಂಗ್ ಕೌಂಟರ್‍ನಿಂದ ಹೊರಡುವಾಗ ಕೊಟ್ಟ ಎರಡೂ ಬ್ಯಾಗ್‍ಗಳನ್ನು ಶತಭಿಷನೇ ಹಿಡಿದಿದ್ದ..
"ಕೊಡೋ" ಎಂದಳು ಶ್ರಾವ್ಯಾ.
"ಏಯ್...ಇರ್ಲಿ ಬಿಡೆ..ಇದೇನ್ ಭಾರ ಇಲ್ಲ" ಎಂದ ಶತಭಿಷ...
"ಅದ್ ಹಂಗಲ್ವೋ...ಕೊಡು" ಎಂದಳು ಶ್ರಾವ್ಯಾ...
"ಫಿಪ್ಟಿ-ಫಿಫ್ಟಿ ನಾ? ಸರಿ ಸರಿ.." ಎನ್ನುತ್ತಾ ಆತ ಒಂದು ಬ್ಯಾಗನ್ನು ಆಕೆಯ ಕೈಗಿಟ್ಟ. ಆಕೆ "ಹೂಂ" ಎಂಬಂತೆ ಹುಬ್ಬೇರಿಸಿದಳು...ಇಬ್ಬರೂ ಜಯನಗರದ ಫೋರ್ತ್ ಬ್ಲಾಕಿನ ರಸ್ತೆಯಲ್ಲಿ ಓಡಾಡುತ್ತಿದ್ದರು...ದಾರಿಯ ಸುತ್ತಲೂ ಅಂಗಡಿ..ಜನ...ಯುವಕರು,ಯುವತಿಯರು,ಹೆಂಗಸರು,ಮಕ್ಕಳು,ಮುದುಕರು..ರಸ್ತೆಯ ಎಡಬಲಕ್ಕೂ ಚಾಚಿರುವ ಮರಗಳು...ಅದರ ಕೆಳಗೆ ಅಲ್ಲಲ್ಲಿ ತಳ್ಳುಗಾಡಿ, ಸಣ್ಣಪುಟ್ಟ ಅಂಗಡಿ...ಹಾರ್ನ ಸದ್ದು...ಕವಿಯುತ್ತಿದ್ದ ಕತ್ತಲು...ಹೀಗೆ ಸುಮ್ಮನಿದ್ದರೆ ಆಕೆ ಹೊರಡುತ್ತಾಳೆ ಎನಿಸಿತು...ಆದರೆ ಶತಭಿಷನಿಗೆ ಆಕೆಯ ಜೊತೆಗೆ ಮಾತಾಡಬೇಕಿತ್ತು...ವಿಷಯವೇನು? ಸ್ಪಷ್ಟವಿರಲಿಲ್ಲ...
ಇದ್ದಕ್ಕಿದ್ದಂತೇ ಐಡಿಯಾವೊಂದು ಹೊಳೆದು ಶತಭಿಷ "ಕಾಫಿ?" ಎಂದು ಕೇಳಿದ..
ಕಾಫಿಗೆ ನೀನು "ಊಹೂಂ" ಅಂದ್ ದಿನ ಜೋರ್ ಮಳೆ ಬರತ್ತೆ ಕಣೆ ಎಂದು ಕಿಚಾಯಿಸುವ ಮಟ್ಟಿಗೆ ಆಕೆ ಕಾಫಿಯನ್ನು ಇಷ್ಟಪಡುತ್ತಿದ್ದಳು..ಬಹುಷಃ ಅವತ್ತು ಬೆಂಗಳೂರಿಗೆ ಮಳೆಭಾಗ್ಯವಿರಬೇಕು...ಆಕೆ ಊಹೂಂ ಎಂದಳು...ಶತಭಿಷ ಪೆಚ್ಚಾದ...
"ಐಸ್ ಕ್ರೀಮ್?" ಶತಭಿಷನಿಗೆ ಐಸ್ ಕ್ರೀಮ್ ತಿಂದಷ್ಟೇ ಖುಷಿ...
"ಎಲ್ಲಿ?" ಎಂದವನೇ ಮೊಬೈಲ್ ತೆಗೆದು ಅಂಗಡಿಯೊಂದನ್ನು ಹುಡುಕಿದ...
ಅಲ್ಲೇ ಹತ್ತಿರವಿದ್ದಿದ್ದರಿಂದ ಇಬ್ಬರೂ ನಡೆಯುತ್ತಲೆ ಹೊರಟರು...
ತಳ್ಳುಗಾಡಿಯೊಂದರಲ್ಲಿ ಫ್ಯಾನ್ಸೀ ಐಟಮ್‍ಗಳಿತ್ತು..."ಒಂದ್ ನಿಮ್ಷ ಕಣೋ" ಎಂದು ಆ ಕಡೆ ಹೊರಟಳು. ಟಕಟಕನೇ ನಾಲ್ಕು ಬಿಂದಿ ಶೀಟ್‍ಗಳನ್ನು ನೋಡಿ, ಒಂದನ್ನು ಆರಿಸಿಕೊಂಡು ವಾಪಸ್ ಬಂದು ಮತ್ತೆ ವಾಪಸ್ ಹೋಗಿ ಏನನ್ನೋ ಪ್ಯಾಕ್ ಮಾಡಿಸಿಕೊಂಡು ಬಂದಳು...
"ತಗೊಳೋ...ಗಿಫ್ಟ್ ನಿಂಗೆ..."
"ನಂಗ್ಯಾಕೆಲೇ..."
"ಇಟ್ಕೊಳೋ..."
"ಓಪನ್ ಮಾಡು..."
ಶತಭಿಷ ಕವರ್ ತೆಗೆದಾಗ ಅದರಲ್ಲೊಂದು ಚಂದದ ನಾಣ್ಯವಿತ್ತು..."ಥ್ಯಾಂಕ್ಯೂ" ಎಂದ ಶತಭಿಷ.
"ವೆಲ್‍ಕಮ್" ಎಂದವಳು..."ಯಾಕೆ ಅಂತಾ ಗೊತ್ತಾಯ್ತಾ?" ಎಂದಳು
"ಹೂಂ" ಎಂದ ಶತಭಿಷ.
"ಯಾಕೆ? ಇದನ್ನಾತ ನಿರೀಕ್ಷಿಸಿರಲಿಲ್ಲ. 
"ಅದು ಅದು..ಲಕ್ಷ್ಮಿ ಬರ್ಲಿ ಅಂತಾನಾ?"
"ಗೂಬೆ...ಲಕ್ಷ್ಮಿನೂ  ಅಲ್ಲಾ ಅನಂತ್‍ನಾಗೂ ಅಲ್ಲ...ನಿನ್ ತಲೆ ...ಆ ಕನ್‍ಫ್ಯೂಸ್ಡ್ ಮೈಂಡ್‍ಗೆ ಹೆಲ್ಪ್ ಆಗ್ಲಿ ಅಂತಾ"
"ಹಂಗಂದ್ರೆ"
"ಹಂಗಂದ್ರೆ....ಹೇಳ್ಳಾ ಬೇಡ್ವಾ? ಕೇಳ್ಳಾ ಬೇಡ್ವಾ.....ಸರಿನಾ ತಪ್ಪಾ? ಬೇಕಾ ಬೇಡ್ವಾ ಹಿಂಗೇ ಏನೇನೋ ತಲೆಕೆಡುಸ್ಕೋಂಡ್ ಇರ್ತಿಯಲ್ಲಾ ಅವಾಗೆಲ್ಲಾ ಟಾಸ್ ಹಾಕು ಅಂತಾ..." 
"ಆಹಾ..ಚೆನಾಗಿದೆ ಕಣೆ.. ..ಥ್ಯಾಂಕ್ಯೂ ಮೇಡಂ"
"ಆಶಿರ್ವಾದ..."
ಇಬ್ಬರೂ ಜೋರಾಗಿ ನಕ್ಕರು...
"ಲೇ ಇಲ್ಲೇ ಎಲ್ಲೋ ಫಿಫ್ಟೀ ಮೀಟರ್ ಒಳಗಡೆ ಇದೆ ಅಂತಾ ಮ್ಯಾಪ್ ಅಲ್ಲಿ ತೋರಸ್ತಿದೆ...ಎಲ್ಲಿ ನೋಡು..."
"ಎಲ್ಲೋ ಕಾಣಸ್ತಿಲ್ವಲ್ಲೋ...."
"ಮಿಸ್ ಮಾಡಿದ್ವಾ.."
"ಇಲ್ಲೇ ಇದೆ ಕಣೋ..."
"ಕರ್ಮಾ..."
ಇಬ್ಬರೂ ಪಾರ್ಲರಿನ ಒಳಹೊಕ್ಕರು...
"ಎಡಗಾಲಿಟ್ಟು ಬಂದೆನಾ?" ಶತಭಿಷ ನೆನಪುಮಾಡಿಕೊಳ್ಳುತ್ತಿದ್ದ...ಶ್ರಾವ್ಯಾ ಮೆನು ನೋಡುತ್ತಿದ್ದಳು..
"ಡಿ.ಬಿ.ಸಿ ಓ.ಕೆ ನಾ?"
"ನಂಗ್ ಏನೂ ಬೇಡ ಕಣೇ...ನೀ ತಗೋ"
"ಯಾಕೋ? ಸರಿ ಶೇರ್ ಮಾಡ್ಬೇಕು ಓ.ಕೇ?"
"ಹೂಂ..."
"ಆಕ್ಚುಲಿ ನಾನ್ ಡಿ.ಬಿ.ಸಿ ಶೇರ್ ಮಾಡಲ್ಲ...ವೆನಿಲ್ಲಾ ಓ.ಕೆನಾ?"
"ಏನೋ ಒಂದು"
ಆರ್ಡರ್ ಮಾಡಿ ಇಬ್ಬರೂ ಮೂಲೆಯೊಂದರಲ್ಲಿ ಕುಳಿತರು...ಅಲ್ಲೇ ರ್ಯಾಕೊಂದರಲ್ಲಿ ಕೆಲ ಇಂಗ್ಲೀಷ್ ನಾವೆಲ್‍ಗಳಿದ್ದವು...ಶತಭಿಷ ಅವನ್ನು ತೆಗೆದು ಓದಲೇ, ಇವಳೊಂದಿಗೆ ಮಾತಾಡಲೇ ಎನ್ನುವ ಗೊಂದಲದಲ್ಲಿದ್ದ...
"ಏನೋ?"
"ಏನಿಲ್ಲ..." ಎಂದವನೇ ಕಾಯಿನ್ ತೆಗೆದು ಟಾಸ್ ಹಾರಿಸಿದ...
ಆಕೆ ನಕ್ಕಳು...
ಈತ ರಿಸಲ್ಟ್ ನೋಡದೇ ಮಾತಿಗಿಳಿದ...
ಮಾತು ಮಾತು ಮಾತು...ಶುರು ಮಾಡಿದ್ದಷ್ಟೇ ಇವನು..ನಂತರ ಹೂಂ ಹಾಕಿದ್ದಷ್ಟೇ ಕೆಲಸ...ಆಕೆ ಪಟಪಟನೇ ಮಾತಾಡುತ್ತಿದ್ದಳು...ಐಸ್-ಕ್ರೀಮ್ ತಿಂದು ನಾಲಿಗೆ ದಪ್ಪವಾಗಿ ಕೊನೆಗೆ ಅವರ ಮಾತಿಗೆ ಅವರೇ ನಗುವಂತಾಯಿತು...ಅಷ್ಟರಲ್ಲಾಗಲೇ ಕೆಫೆಗೆ ಜನ ಸೇರುತ್ತಿದ್ದರು...ಚಿಕ್ಕದೊಂದು ಕಾರ್ಯಕ್ರಮವಿದ್ದಂತೆ ತೋರುತ್ತಿತ್ತು...ಯಾರೋ ಗಿಟಾರ್ ಹಿಡಿದಿದ್ದರು...ಇನ್ಯಾರೋ ಸ್ಕ್ರಿಪ್ಟ್ ಓದುತ್ತಿದ್ದರು...ಮತ್ಯಾರೋ ಹಾಡು ಗುನುಗುತ್ತಿದ್ದರು..ಬಿಲ್ ಕೊಟ್ಟು ಶತಭಿಷ ಮತ್ತು ಶ್ರಾವ್ಯಾ ವಾಪಸ್ ದಾರಿ ಹಿಡಿದರು...
"ಬಾಂಬೆಗ್ ಹೋಗ್ಲೇಬೇಕೇನೇ?" ಶತಭಿಷ ಕೊನೆಗೂ ಧೈರ್ಯಮಾಡಿ ಕೇಳಿಯೇ ಬಿಟ್ಟು...
"ಅದೇ ಬೆಸ್ಟ್ ಆಪ್ಷನ್ ಅನಸ್ತಿದೆ ಕಣೋ...ಆಫರ್ ಸಿಕ್ದಾಗ ಬಿಡ್ಬೇಡಾ ಅಂದ್ರು ಎಲ್ರೂ...ಸ್ಟಿಲ್ ಕನ್‍ಫ್ಯೂಷನ್ ಇದೆ.."
"ಮನೆಲ್ ಎಲ್ಲಾ ಮ್ಯಾನೇಜ್ ಮಾಡಿದಿಯಾ?"
"ಅಪ್ಪಾ ಓಕೆ ಅಂದ್ರು ಕಣೋ...ಬಟ್ ಸ್ಟಾರ್ಟಿಂಗ್ ಒಂದ್ ನಾಲಕ್ ತಿಂಗ್ಳು ಅತ್ತೆ ಮನೆಅಲ್ಲೇ ಇರಬೇಕು ಅನ್ನೋದ್ ಅವ್ರ್ ಕಂಡೀಷನ್..ಟ್ರಾವಲಿಂಗ್ ಸ್ವಲ್ಪ್ ಜಾಸ್ತಿ ಆಗತ್ತೆ..ಬಟ್ ಏನ್ ಮಾಡೋದು..."
"ಅಮ್ಮ?"
"ಅಮ್ಮಾ...ಕುಯ್ಯ್‍ಂ ಅಂತಿದಾಳೆ ಕಣೋ...ಏನ್ ಹೇಳದು ಗೊತ್ತಾಗ್ತಿಲ್ಲಾ...ಏನಾದ್ರೂ ಡ್ರಾಮಾ ಮಾಡಿ ಒಪ್ಪಸ್‍ಬೇಕು..."
"ಓ.ಕೆ...ಗುಡ್"
"ಯಾ...ಲೆಟ್ಸ್ ಸೀ...ಇಲ್ಲಿದ್ರೆ ಇಷ್ಟೇ ಕಣೋ...ಬಾಲಿವುಡ್‍ನಲ್ಲಾದ್ರೂ ಏನಾದ್ರೂ ಚಾನ್ಸ್ ಸಿಗ್‍ಬೋದಾ ಅಂತಾ...ವೆಬ್ ಸೀರಿಸ್, ಆಡ್ವರ್ಟೈಸ್‍ಮೆಂಟ್ ಅಂತಾ ಏನಾದ್ರೂ ಇರತ್ತೆ ಹೊಸದಾಗಿ...ಇಲ್ಲಿದ್ರೆ ಗೊತ್ತಲ್ಲ..."
"ಯಾ ಐ ನೋ...ಮನುಷ್ಯ ಹಕ್ಕಿ ಥರ, ಪ್ರಪಂಚ ಎಲ್ಲಾ ಹಾರ್ಬೇಕು.."
"ನೆಕ್ಸ್ಟ್‍ಡೈಲಾಗ್ ಏನೋ ಬೇರು ಅದು ಇದು ಸಮ್‍ಥಿಂಗ್ ಅಲಾ...ನಾನೂ ನೋಡಿದೀನಿ ಅಮೇರಿಕಾ ಅಮೇರಿಕಾ ಫಿಲಂ ನಾ"
"ಲೇಯ್...ಹಂಗಲ್ವೇ..."
"ಏನೋ...ಬಿಡು...ನಿಂದೇನ್ ಕತೆ? "
"ನಂದಾ...ಏನೂ ಇಲ್ವೇ..."
"ಹೇಳಕ್ ಇಷ್ಟ ಇಲ್ಲಾ ಅಂದ್ರೆ ನಾನೇನ್ ಫೋರ್ಸ್ ಮಾಡಲ್ಲಪ್ಪಾ..."
 "ಹಂಗಲ್ವೇ...ಆಕ್ಚುಲಿ ಅದೇನೋ ನಮ್ಮ್ ಊರಲ್ಲಿ ಇಂಜಿನಿಯರಿಂಗ್ ಕಾಲೇಜ್ ಓಪನ್ ಆಗ್ತಿದೆ ಅಂತೆ...ಅಲ್ಲೇ ಲೆಕ್ಚರಿಂಗ್ ಮಾಡ್ಕೊಂಡು ಅರಾಮಾಗ್ ಇರಣಾ ಅನಸ್ತಿದೆ..."
"ವಾವ್...ನೈಸ್ ಕಣೋ...ನಿಂಗ್ ಸೂಟ್ ಆಗತ್ತೆ ಬಿಡು.."
"ಯಾ..ನೋಡ್ಬೇಕು.."
"ಬಟ್ ಒಂದ್ ರಿಕ್ಸೆಸ್ಟ್.."
"ಏನೇ?"
"ಲೆಕ್ಚರರ್ ಆದ್ರೆ ತುಂಬಾ ಸ್ಟ್ರಿಕ್ಟ್ ಆಗ್ ಎಲ್ಲಾ ಇರ್ಬೇಡಾ ಕಣೋ..ಪಾಪಾ ಸ್ಟುಡೆಂಟ್ಸು...ಇಂಟರನಲ್ಲು ಅಟೆಂಡೆನ್ಸು ಎಲ್ಲಾ ಕೊಡು ಪಾಪಾ..."
"ಏಯ್ ಹೋಗೆ..ನಾನೇ ಡಿಸೈಡ್ ಆಗಿಲ್ಲ ಇನ್ನೂ...ಯಾಕೋ ಈ ಊರ್ ಬೋರ್ ಆಗಿದೆ ಅಷ್ಟೇ"
"ನಂಗೂ ಕಣೋ...ಯಾಕೋ ಬೆಂಗ್ಳೂರ್ ಸಹವಾಸ ಸಾಕಾಗೋಗಿದೆ...ಈ ಜನ ಈ ಪಾಲಿಟಿಕ್ಸ್...ಎಲ್ಲೋ ದೂರ ಹೋಗ್ಬೇಕು..ನನ್ ಟ್ಯಾಲೆಂಟ್‍ಗೆ ಬೆಲೆ ಇರೋ ಕಡೆ..."
"ಅಲ್ಲಿ ಇದೆಲ್ಲಾ ಇರಲ್ಲಾ ಅಂತಿಯಾ?"
"ಈ ಡೋಂಟ್ ನೋ...ಟ್ರೈ ಮಾಡೋದ್ರಲ್ ಏನ್ ತಪ್ಪಿಲ್ಲ ಅನ್ಸತ್ತೆ...ರೈಟ್?"
"ಯಾ...ಮೇ ಬಿ.."
"ಓ.ಕೆ ಕಣೋ...ಮತ್ತ್ ಯಾವಾಗ್ ಸಿಗ್ತಿನೋ ಗೊತ್ತಿಲ್ಲ...ಬಟ್ ಥ್ಯಾಂಕ್ಯು...ಥ್ಯಾಂಕ್ಸ್ ಫಾರ್‍ದ ಬುಕ್ಸ್...."
"ಥ್ಯಾಂಕ್ಸ್ ಫಾರ್ ದ ಚಾಕೋಲೇಟ್..ಸಾರಿ ಐಸ್‍ಕ್ರೀಮ್...ಐಸ್‍ಕ್ರೀಮ್ ಚಾಕಲೇಟ್..ಏನೋ ಒಂದು"
"ಡಿ.ಬಿ.ಸಿ ಕಣೋ..."
"ಯಾ...ಟಾಟಾ.."
ಹಸ್ತಲಾಘವ-ಕಿರುಅಪ್ಪುಗೆ ಶುಭವಿದಾಯ....ವಾಪಸ್ ರೂಮಿನ ಬಸ್ ಹತ್ತಲು ಶತಭಿಷನಿಗೇಕೋ ಮನಸ್ಸಿರಲಿಲ್ಲ...ತಲೆತಿರುಗಿದಂತಾಯಿತು...ಅಲ್ಲೇ ಬಸ್‍ಸ್ಟಾಂಡಿನ ಬೆಂಚಿಗೆ ಕೂತಿದ್ದ...ಪುಸ್ತಕ?
ಶ್ರಾವ್ಯಾಳನ್ನು ಊರಿಗೆ ಕರೆದೊಯ್ಯಲು ಕನ್ವಿನ್ಸ್ ಮಾಡುವ ಹಂಬಲಹೊತ್ತು ಹೊರಟಿದ್ದ ಶತಭಿಷ ಪುಸ್ತಕದ ಬ್ಯಾಗನ್ನು ಪಾರ್ಲರ್‍ನಲ್ಲೇ ಮರೆತಿದ್ದ....ಎಳನೀರು ಕುಡಿದು ಅರೆಗಳಿಗೆ ಸುಧಾರಿಸಿಕೊಂಡು ಆ ಕಡೆ ಹೆಜ್ಜೆ ಹಾಕಿದ... ತಲೆಯಲ್ಲೇನೋ ಧಿಮ್ ಅನ್ನುತ್ತಿತ್ತು..
ಪಾರ್ಲರ್ ಬಾಗಿಲಲ್ಲೇ ಹೈಸ್ಕೂಲು ಸ್ನೇಹಿತನೊಬ್ಬ ಸಿಕ್ಕ...ಆತನೇ ಓಪನ್ ಮೈಕು ಆಯೋಜಿಸಿದ್ದ...ಮಾತುಕತೆ ಉಭಯ ಕುಶಲೋಪರಿ ಮುಗಿದು "ಪರ್‍ಫಾರ್ಮ್ ಮಾಡೋ" ಎಂದ.."ಇಲ್ಲ" ಎನ್ನಲು ಬಾಯಿತೆಗೆದವನಿಗೆ ಏನೋ ಮೈಮೇಲೆ ಬಂದಂತಾಯಿತು...
ಬರೆದ..ಹರಿದ...ಬರೆದ...ಹರಿದ...
ಹರಿದ ಚೀಟಿಗಳನ್ನು ಒಂದು ಗೂಡಿಸಿ ಮತ್ತೆ ಬರೆದ...
ಬಾಂಬೆಯಲ್ಲಿದ್ದ ಶ್ರಾವ್ಯಾಳಿಗೆ ಆಕೆಯ ಬಾಸ್ "ಗೆಟ್ ದ ಡಿಟೇಲ್ಸ್.. ಟಾಕ್ ಟು ಹಿಮ್" ಎಂದು ಲಿಂಕ್ ಒಂದನ್ನು ಕಳುಹಿಸಿದ್ದರು.. ಇಂಟರ್‍ನೆಟ್ಟಿನಲ್ಲಿ  ಫೇಮಸ್ ಆಗುತ್ತಿದ್ದ ಪ್ಯಾಥೋ ಕವನ ವಾಚನವದು.. ಇಂಗ್ಲೀಷ್-ಹಿಂದಿ ಚೂರ್ ಚೂರು ಕನ್ನಡ ಮಿಶ್ರಿತವಾಗಿತ್ತು.. ವೀಡಿಯೋದ ಡಿಸ್ಕ್ರಿಪ್ಷನ್ "ಡೆತ್ ಬೈ ಚಾಕಲೇಟ್ ಬೈ ಶತಭಿಷ" ಎಂದು ತೋರಿಸುತ್ತಿತ್ತು...
-ಚಿನ್ಮಯ
02/10/2018


Sunday, September 30, 2018

ಲಟಕಿ-ಪಿಟಕಿ

ಲಟಕಿ-ಪಿಟಕಿ ಚೀನಾ ಮಾಲಿನಂತೆ ಜಗಮಗದ ಜೀವನ 
ಇಲ್ಲಿ ರಿಪೇರಿಯ ಮಾತೇ ಇಲ್ಲ; ಇದ್ದಷ್ಟು ದಿನ ನಡೆಯಬೇಕಷ್ಟೇ
ಅಲ್ಲಿ ಬದುಕು ಗೋಡೆ ಗಡಿಯಾರಂತೆ ಟಕ್ ಟಕ್ ಸಾಗುತ್ತದೆ
ಅದೇ ವೇಗ,ಅದೇ ರಾಗ, ಆಗಾಗ ಕೀಲಿ ಕೊಡುತ್ತಿರಬೇಕಷ್ಟೇ
ಏನೂ ಇಲ್ಲವೆಂದೇನಿಲ್ಲ, ಆದರೇನೋ ಅಂದುಕೊಂಡಂತಿಲ್ಲ
ಇಲ್ಲದೇ ಬದುಕು ಜೀಕಿದವರಿಗೆ ಇದೆಲ್ಲ ಅರ್ಥವಾದಂತಿಲ್ಲ
ಅಂದು ಟಿ.ವಿಯೊಂದ ತಂದರೆ ಆಯೂಷ್ಯಪೂರ್ತಿ ಬರಬೇಕೆಂಬ ಹಂಬಲ
ಇಂದು ಮೊಬೈಲು ತಂದು ಮೂರನೇ ತಿಂಗಳಲ್ಲೇ ಬದಲಾವಣೆಯ ತಳಮಳ
ಫೋನಿನಲ್ಲಿನ ಮಾತು, ಕ್ಷೇಮ-ಸಮಾಚಾರ ಕರೆಯೋಲೆ-ಆಮಂತ್ರಣ ಅವಶ್ಯಕತೆಗಷ್ಟೇ ಸೀಮಿತವಾ?
ಕಾಲೇಜು ಆಫೀಸು ಮನೆಯ ಕಷ್ಟ ಸುಖ ಹಂಚಿಕೊಳ್ಳುವ, ಹರಟಿ ಹಗುರಾಗುವ ಮಾಧ್ಯಮವಾ?
ಕೆಲಸವೊಂದು ಸಿಕ್ಕರೆ ತಲೆಬಗ್ಗಿಸಿ ಅರವತ್ತೂ ವರುಷ ಗೈಯ್ಯುವುದು ಧರ್ಮವಾ?
ವರುಷಕ್ಕೊಂದು ಕಂಪನಿ ಬದಲಾಯಿಸಿ, ಮೂವತ್ತು ಪರಸೆಂಟ್ ಹೈಕ್ ಗಳಿಸುವದು ಕ್ರಮವಾ?
ಪಕ್ಕದ ಮನೆಯೊಂದಿಗೆ ಬೇಲಿ ಗುಟ್ಟಕ್ಕೂ ಜಗಳವಾಡಿ ತಲೆ ಕೆಡಿಸಿಕೊಳ್ಳಲೇ ಬೇಕಾ?
ಫ್ಲಾಟಿನಲ್ಲಿ ತಮ್ಮಷ್ಟಕ್ಕೆ ತಾವಿದ್ದು, ಲಿಫ್ಟಿನಲ್ಲಿ ಸಿಕ್ಕಾಗ ಹಾಯ್ ಎಂದು ಸಾಗಿದರೆ ಸಾಕಾ?
ನೆಂಟರು ಬಂಧುಗಳು ಹಬ್ಬಗಳು ಸಮಾಜ; ಎಲ್ಲರ ಜೊತೆಗಿದ್ದು ಸಾಗಬೇಕು
ಕೆಲವೊಮ್ಮೆ ಮಿಂಚಬೇಕು, ಸುಮ್ಮನಿರಬೇಕು, ಹಲವು ಬಾರಿ ಬೈಯ್ಯಬೇಕು
ಇತ್ತ ಗುರುತು ಪರಿಚಯವಿಲ್ಲದ ಜಾಗಕ್ಕೆ ಹೋಗಿ, ಕುಡಿದು ಕುಣಿದು ತೂರಾಡಿ
ಸೋಮವಾರ ಬೆಳಿಗ್ಗೆಯೆದ್ದು ಆಫೀಸಿಗೆ ಹೊರಡಬೇಕು,ಶನಿವಾರಕ್ಕೆ ಕಾಯಬೇಕು
ಇಷ್ಟಕ್ಕೂ ಬದಲಾಗಿದ್ದು ಏನು? ಬರೀಕಾಲವಾ?
ಮನಸ್ಥಿತಿಯಾ?ಆರ್ಥಿಕ ಪರಿಸ್ಥಿತಿಯಾ?
ಒಂದಿಷ್ಟು ಹೌದು, ಒಂದಿಷ್ಟು ಅಲ್ಲ...
ಸ್ಪಷ್ಟ ಉತ್ತರ ಸಿಗುತ್ತಿಲ್ಲ...ಅಲ್ಲೂ ಅಲಿಪ್ತ ನೀತಿಯಾ?
ಏನೂ ಇಲ್ಲವೆಂದೇನಿಲ್ಲ, ಆದರೇನೋ ಅಂದುಕೊಂಡಂತಿಲ್ಲ
ಬಹುಷಃ ಇಲ್ಲದೇ ಬದುಕು ಜೀಕಿದವರಿಗೆ ಇದೆಲ್ಲ ಅರ್ಥವಾದಂತಿಲ್ಲ
-ಚಿನ್ಮಯ
30/09/2018

Sunday, September 23, 2018

ಹ್ಯಾಶ್‍ಟ್ಯಾಗ್ # ಪ್ರೀತಿ(ಭಾಗ-ಸರಿಯಾಗ್ ಗೊತ್ತಿಲ್ಲ)

“ನೀನೋ..ನಿನ್ ಮೂಡೋ...ಭಗವಂತಾ..ನೀನೇ ಕಾಪಾಡ್ಬೇಕು..”
“ಭಗವಂತಾ” .... “ತುಂಬಾ ಸ್ವೀಟ್ ಆಗ್ ಕೇಳ್ಸತ್ತೆ ಕಣೆ ನೀನ್ ಹೇಳದ್ರೆ..”
“ಏನೋ..ಸುಮ್ನೆ ಹೇಳ್ತಿಯಾ ಕಣೋ..”
“ನಿಜ್ಜಾ ಲೇಯ್...”
“ಅದ್ ಹೆಂಗೋ...ಎಲ್ರೂ ಹೇಳ್ತಾರೆ ಭಗವಂತಾ..ದೇವ್ರೇ..ರಾಮಾ ಅಂತಾ...ನಿಮ್ಮನೆಲ್ ಯಾರೂ ಹೇಳಲ್ವಾ?”
“ಹೇಳ್ತಾರೆ....ಆದ್ರೆ”
“ಏನ್ ಆದ್ರೆ?”
“ಏನೋ ನಿನ್ನಷ್ಟ್ ಚೆನಾಗ್ ಕೇಳ್ಸಲ್ಲ”
[ಆಕೆ ಜೋರಾಗಿ ನಕ್ಕಳು. ಅವಳ ಭಾಷೆಯಲ್ಲೇ ಹೇಳೋದಾದ್ರೆ ಕಿಸಿಯುತ್ತಿದ್ದಳು. ಶತಭಿಷ ಕಾಫಿ ಮುಗಿಸಿ ನೀರು ಕುಡಿಯಲು ಹೊರಟ]
“ಲೋ..ನೀರ್ ಕುಡಿಬಾರ್ದೋ...”
“ಏಯ್...ಹೋಗೇ...”
“ಆಯ್ಯಾ..ಬಿಡು...”
“ಲೇಯ್ ಯಾಕೇ ಕುಡಿಬಾರ್ದು?”
“ಕಾಫಿ ಕುಡದು ಅರ್ಧ ಗಂಟೆ ಏನೂ ತಿನ್ಬಾರ್ದು, ಕುಡಿಬಾರ್ದು ...ಕಾಫಿ ಘಮ ಹಂಗೆ ಬಾಯಲ್ಲೇ ಇರ್ಬೇಕು...”
“ಏನೋ..ನಾವ್ ಈಗೀಗ್ ಕಾಫಿ ಕುಡಿತಿರೋದು...ನಿಮ್ಮಷ್ಟ್ ಎಲ್ಲಾ ಚೆನಾಗ್ ಕುಡ್ಯಕ್ ಬರಲ್ಲ ಮೇಡ,..ಕಲಸ್ ಕೊಡಿ ಸ್ವಲ್ಪ...”
“ಇರ್ಲಿ ಇರ್ಲಿ..ಕಲಸ್ ಕೊಡಣಾ”
[ಅಷ್ಟರಲ್ಲಿ ಬಿಲ್ ಬಂತು..]
[ಶತಭಿಷ ವಾಡಿಕೆಯಂತೆ ಬಿಲ್ ಕಸಿದುಕೊಂಡು ಹಣ ಕೊಟ್ಟ]
“ಎಷ್ಟಾಯ್ತೋ?”
“ಎಷ್ಟೋ ಆಯ್ತು ...ಯಾಕೀಗ?”
“ಏಯ್..ಎಷ್ಟ್ ಆಯ್ತು ಹೇಳೋ..”
“ಹೇಳಲ್ಲ...”
“ಸರಿ...” [ಆಕೆ ಐನೂರರ ನೋಟನ್ನು ಅವನ ಕೈಗಿಡಲು ಬಂದಳು]
“ಲೇಯ್ ಇರ್ಲಿ ಬಿಡೆ...”
“ಊಹೂಂ..ಸರಿ ಆಗಲ್ಲ ಕಣೋ..”
“ಯಾಕೇ?”
“ಅದ್ ಹಂಗೆ...ಮುಚ್ಕೊಂಡ್ ಎಷ್ಟ್ ಆಯ್ತು ಹೇಳು”
“ಓಕೇ..ಓಕೇ...50-50 ಮಾಡೋ ತನ್ಕಾ ಬಿಡಲ್ಲಾ ಅಲ್ಲಾ ನೀ...100 ಕೊಡು ಹೋಗ್ಲಿ..”
“ಚೇಂಜ್ ಇಲ್ಲಾ..”
“ನನ್ ಹತ್ರ ಇದೆ ಕೊಡು...”
“ಕೊಡಲ್ಲ”
“ಲೇ..ಎಷ್ಟೇ ನಾಟಕಾ ಮಾಡ್ತಿಯಾ?..”
“ನಾಟಕಾ ನಾ? ನಾನಾ? ಇಲ್ಲಪ್ಪಾ...ನಾನ್ ನಾಟಕಾ ನೋಡಕ್ ಬಂದಿರದು..”
[ಕುಂತಲ್ಲಿಂದಲೇ ಕಣ್ಣು ಹೊಡೆದು ಹೊರಡಲು ಅನುವಾದಳು]
“ಕಥೆ...ಹೋಗಣಾ ಬಾ...” [ಶತಭಿಷನಿಗೆ ಅವರಿಬ್ಬರ ಮೊದಲ ಭೇಟಿಯ ನೆನಪಾಯಿತು]
ಕಾಲೇಜಿನಿಂದ ಇಬ್ಬರೂ ಒಂದು ಕಾನ್ಫರೆನ್ಸಿಗೆ ಹೋಗಿದ್ದರು. ಲಂಚ್‍ಗೆ ಆರ್ಡರ್ ಮಾಡಿದ್ದು ಪಲಾವ್ ಮತ್ತು ಒಂದು ನಾರ್ಥ್ ಇಂಡಿಯನ್ ಥಾಲಿ. ಈತ ಸೂಪ್ ಮುಗಿಸುವಷ್ಟರಲ್ಲಿ ಆಕೆ ಹಪ್ಪಳಕ್ಕೆ ಕೈ ಹಾಕಿದ್ದಳು. ಈ ಚಂಪಾಕಲಿ ಇಷ್ಟವೆಂದು ಹೇಳಿದ್ದಕ್ಕೆ ಪಾಯಸಕ್ಕೆ ಸಕ್ಕರೆ ಹಾಕಿ ತಿನ್ನುವಷ್ಟು ಸಿಹಿಯ ಹುಚ್ಚಿರುವ ಆತ ಅದನ್ನು ಬಿಟ್ಟು ಕೊಟ್ಟಿದ್ದ. ಆಕೆ ಊಟವಾದ ಕೂಡಲೇ ಹೇಳಿಬಿಟ್ಟಿದ್ದಳು...
”50-50”
ಅಂದೂ ಆಕೆಯ ಬಳಿ ಚಿಲ್ಲರೆ ಇರಲಿಲ್ಲ. ಮರುದಿನ ಹುಡುಕಿಕೊಂಡು ಬಂದು ಕೊಟ್ಟಿದ್ದಳು.
“ಥ್ಯಾಂಕ್ಸ್ ಫಾರ್ ಅ ನೈಸ್ ಡೇ ಔಟ್” ಎನ್ನುವ ಕಾಂಪ್ಲಿಮೆಂಟ್ ಜೊತೆ. ಶತಭಿಷನಿಗೆ ಚಂಪಾಕಲಿ ತಿಂದಷ್ಟೇ ಖುಷಿಯಾಗಿತ್ತು...
ಆದರೆ ಇವತ್ತೇಕೋ ಕಾಫಿಯ ಕಹಿ ಬಾಯಿಗಂಟಿತ್ತು. ಆದರೆ ಅದರಲ್ಲೇನೋ ಮಜವಿತ್ತು..
50-50, 100-0 ಕ್ಕೆ ಬದಲಾಗುವ ಎಲ್ಲಾ ಸಾಧ್ಯತೆಯಿತ್ತು. ಆದರೆ ಆ ಕಡೆಗೋ ಈ ಕಡೆಗೋ ಶತಭಿಷನ ತಲೆತುಂಬಾ ಗೊಂದಲ ಗುಯ್ಯ್‍ಗುಡುತ್ತಿತ್ತು...
ನಾಟಕ ಶುರುವಾಗಲು ಹದಿನೈದು ಇಪ್ಪತ್ತು ನಿಮಿಷ ಇರುವಂತೆಯೇ ಎಲ್ಲರೂ ಕ್ಯೂನಲ್ಲಿ ನಿಂತರು. ಅಚಾನಕ್ಕಾಗಿ ಶ್ರಾವ್ಯಾಳ ಆಂಟಿಯೊಬ್ಬರು ಕ್ಯೂನಲ್ಲಿ ಕಾಣಿಸಿಕೊಂಡರು. ಮಾತಾಡಿಸಿದರು. ಶ್ರಾವ್ಯಾ ನಗುನಗುತ್ತಲೇ ಮಾತಾಡಿದ್ದರೂ ಸ್ವಲ್ಪ ಪೆಚ್ಚಾದಂತೆ ಕಂಡಿತು.
ನಂತರ ಶತಭಿಷನ ಕಡೆ ತಿರುಗಿದವಳು “ಸುಮ್ನೆ ಕುಯ್ಯಂ ಅಂತಾರೆ ಕಣೋ” ಎಂದಳು.
ಆಕೆ ಶತಭಿಷನನ್ನು ಆ ಆಂಟಿಗೆ ಪರಿಚಯಿಸಲಿಲ್ಲ..
“ಪರಿಚಯಿಸಿದ್ದರೆ ಏನೆಂದು ಹೇಳಿಯಾಳು?” ಶತಭಿಷ ಹುಳಬಿಟ್ಟುಕೊಂಡ.
“ಫ್ರೆಂಡ್...?” “ತುಂಬಾ ಸಿಂಪಲ್”
“ಕಾಲೇಜ್ ಫ್ರೆಂಡ್?”, “ಊಹೂಂ”
“ಸೀನಿಯರ್?”, “ನಾಟ್ ಹಿಯರ್. ಔಟ್ ಸೈಡ್ ದ ಕಾಲೇಜ್”
“ಏನಾಯ್ತೋ?” ಭುಜ ತಿವಿದಳು.
“ಏನಿಲ್ವೇ” ಗೋಣು ಅಲ್ಲಾಡಿಸಿದ.
“ಏಯ್ ಅರುಂಧತಿ ಮೇಡಂ ಅಲ್ವಾ?”
“ಹೂಂ”
“ಬಾರೋ ಮಾತಾಡ್ಸಣಾ”
“ಊಹೂಂ”
“ಸರಿ ...ಇರು ಬಂದೆ”
[ಆಕೆ ಅವರಿಗೊಂದು ವಿಷ್ ಮಾಡಿ ಫೋಟೋ ತೆಗೆಸಿಕೊಂಡು ಬಂದಳು]
“ಯಾಕೋ ಬರ್ಲಿಲ್ಲ?”
“ಮೂಡ್ ಇಲ್ಲ”
“ಸರಿ” ಎಂದು ಫೋನ್‍ನಲ್ಲಿ ಫೋಟೋವನ್ನು ಮತ್ತೆ ನೋಡಿದಳು. ಅಷ್ಟರಲ್ಲಾಗಲೇ ಕ್ಯೂ ನಿಧಾನವಾಗಿ ಕರಗತೊಡಗಿತ್ತು. ಶತಭಿಷ ಆಚೀಚೆ ನೋಡುತ್ತಿರುವಂತೇ ಕಲೀಗ್ ಒಬ್ಬರನ್ನು ನೋಡಿದಂತಾಯಿತು. ಶ್ರಾವ್ಯಾಳ ಜೊತೆ ನಿಂತಿದ್ದ ಇವನಿಗೆ ಏನೋ ಮುಜುಗರ..ತಿಣುಕಾಡುತ್ತಲೇ “ಹಾಯ್ ” ಅಂದ.
ಸಾಲು ಕರಗುತ್ತಾ ಇನ್ನೇನು ಮೆಟ್ಟಿಲ ಬಳಿ ಹೋಗುವಷ್ಟರಲ್ಲಿ ಸೆಕ್ಯುರಿಟಿ ಹಗ್ಗವನ್ನು ಅಡ್ಡ ಹಾಕಿದ. ಕಲೀಗ್ ಮೆಸ್ಸೇಜ್ ಮಾಡಿದ್ದರು.
“ಗರ್ಲ್ ಫ್ರೆಂಡ್ ಅಹ್? ಎಂಜಾಯ್”
ಶತಭಿಷನ ಹಾರ್ಟ್‍ಬಿಟ್ ಇದ್ದಕ್ಕಿದ್ದಂತೇ ಜಾಸ್ತಿಯಾಯಿತು. ಅವರೆಡೆ ನೋಡಿದ. ಏನೋ ಹೇಳಬೇಕೆನ್ನುವಷ್ಟರಲ್ಲೇ ಸೆಕ್ಯುರಿಟಿ ಹಗ್ಗವನ್ನು ಬಿಟ್ಟ.  ರಿಪ್ಲೈ ಮೆಸ್ಸೇಜು ಬರೆಯಲು ತಿಣಕಾಡುತ್ತಾ ಶತಭಿಷ ಮೆಟ್ಟಿಲು ಹತ್ತಿದ್ದ.
“ಏನೋ?” ಶ್ರಾವ್ಯಾ ಅವನಿಗಾಗಿ ಕಾಯುತ್ತಿದ್ದಳು.
ಶತಭಿಷ ಕಲೀಗ್ ಕಡೆ ನೋಡಿದ ...ಅವರು ನಗುತ್ತಿದ್ದರು...
“ಸೆಲ್‍ಫೋನ್ ಸ್ವಿಚ್ ಆಫ್ ಮಾಡಿ ಸರ್...” ಟಿಕೇಟ್ ಹರಿಯಲು ನಿಂತಿದ್ದ ಟೀ ಶರ್ಟ್ ಹಾಕಿದ ಹುಡುಗಿ ಮೆಲ್ಲಗೆ ಹೇಳಿದಳು. ಶತಭಿಷ ಡು ನಾಟ್ ಡಿಸ್ಟರ್ಬ್ ಮೋಡಿನಲ್ಲಿಟ್ಟ. ಅದಾಗಲೇ ಡಿಸ್ಟರ್ಬ್ ಆಗಿದ್ದ ಮನಸ್ಸನ್ನ ನಿಯಂತ್ರಿಸಲು ಕಷ್ಟಪಡುತ್ತಿದ್ದ.
“ರಂಗಶಂಕರದಲ್ಲಿ ನಿಮಗೆಲ್ಲಾ ಸ್ವಾಗತ...ದಯವಿಟ್ಟು ನಿಮ್ಮ ಮೊಬೈಲ್ ಫೋನ್‍ಗಳನ್ನು ಸ್ವಿಚ್ ಆಫ್ ಮಾಡಿ... ವೆಲ್ ಕಮ್ ಟು ...”
“ಲೇ ಅದು ರಂಗಶಂಕರಕ್ಕೆ ಆಗ್ಬೇಕಲ್ವಾ?”
“ರಂಗಶಂಕರದಲ್ಲಿ ಅಂದ್ರೆ ತಪ್ಪಾ?”
“ತಪ್ಪು ಅಂತಾ ಅಲ್ಲ...ಆದ್ರೆ ಯಾಕೋ ಸರಿ ಅನಸ್ತಾ ಇಲ್ಲ”
“ತಪ್ಪು ಅಂತಾ ಕರೆಕ್ಟಾಗ್ ಗೊತ್ತಾಗೋವರ್ಗೂ ಅದ್ ಸರಿನೇ ಕಣೋ..”
“ಹೌದಾ...ಸರಿ...” ಶತಭಿಷ ಸುಮ್ಮನಾದ.
ಶ್ರಾವ್ಯಾ ಎಫ್.ಬಿಯಲ್ಲಿ ಪೋಸ್ಟ್ ಮಾಡುವುದಕ್ಕಾಗಿ ಫೋಟೋವೊಂದನ್ನು ಕ್ಲಿಕ್ಕಿಸಿದಳು. ಶತಭಿಷನನ್ನು ಟ್ಯಾಗ್ ಮಾಡುವುದಾ ಬಿಡುವುದಾ ಎಂಬ ಗೊಂದಲ ಹೊಕ್ಕಿ ಪೋಸ್ಟಿನ ಯೋಚನೆಯನ್ನೇ ಕೈಬಿಟ್ಟಳು.
ನಾಟಕ ಶುರುವಾಯಿತು.
“ತಲೆದಂಡ”
ಕಲಚೂರಿಯ ಬಿಜ್ಜಳ ಮತ್ತು ಬಸವಣ್ಣನವರ ನಡುವಿನ ಸೈದ್ಧಾಂತಿಕ ಭಿನ್ನಾಭಿಪ್ರಾಯ. ಆದರೆ ಆಂತರ್ಯದಲ್ಲಿ ಗಟ್ಟಿಯಾಗಿರುವ ಸ್ನೇಹ. ಯಾರಿಗೂ ಏನನ್ನೂ ಆದೇಶಿಸದ ಘನತೆ, ಮಗನ ಬಗೆಗಿನ ಅಸಹಾಯಕತೆ....ಶತಭಿಷ ಹನ್ನೆರಡನೇ ಶತಮಾನಕ್ಕೇ ಹೋಗಿದ್ದ.
ವಾಸ್ತವದ ಕೂಪದಿಂದ ಹೊರಗೇಳಿಸುವ ಆದರ್ಶ
ಆದರ್ಶದ ಅಮಲಿನಿಂದ ನೆಲಕ್ಕಿಳಿಸುವ ಹಸಿವು
ಇಂದಿನ ಉಳಿವೋ, ನಾಳಿನ ಏಳ್ಗೆಯೋ ಎಲ್ಲ ಅಸ್ಪಷ್ಟ
ಹಳೆ ಸಲುಗೆ ಹೊಸ ಫಾರ್ಮಾಲಿಟಿ ಚೂಸ್ ಮಾಡುವುದು ತೀರ ಕಷ್ಟ

ಎಲ್ಲಾದರೂ ಬರೆದಿಡಬೇಕು ಅನಿಸಿತು. ಪೆನ್ನು-ಪೇಪರ್ರು ಕೈ ಸಿಗಲಿಲ್ಲ. ಮೊಬೈಲು ತೆಗೆಯಲು ಹೊರಟ.
“ಚೆನಾಗಿತ್ತು ಅಲ್ವೇನೋ” ರಂಗತಂಡದ ಜೊತೆ ಫೋಟೋ ತೆಗೆಯುತ್ತಾ ಶ್ರಾವ್ಯಾ ಕೇಳಿದಳು. ಎದ್ದು ನಿಂತು ಎಲ್ಲರೂ ಚಪ್ಪಾಳೆ ಹೊಡೆಯುತ್ತಿದ್ದರು.  ಆ ಸದ್ದಿನ ನಡುವೆ ಅವಳ ಮಾತು ಪೂರ್ತಿ ಕೇಳಿಸಿರಲಿಲ್ಲ.
“ಆಂ?” ಎಂದು ಅವಳತ್ತ ನೋಡಿದ..
ಕತ್ತಲಿಗೆ ಕಣ್ಣುಗಳು ಅರಳಿದ್ದವು. ಆಗಷ್ಟೇ ಆಡಿಯನ್ಸ್ ಲೈಟ್ ಆನ್ ಆಗಿತ್ತು. ಮೆಲು ಹಳದಿ ಬಣ್ಣದ ಲೈಟಿಗೆ ಶ್ರಾವ್ಯಾಳ ಕೂದಲು ಮಿನುಗುತ್ತಿತ್ತು. ಆಕೆ ಕೂದಲು ಹರಡಿಕೊಂಡಾಗಲೆಲ್ಲಾ ಶತಭಿಷನಿಗೆ ಕೂದಲ ನೇವರಿಸುವ ಮನಸ್ಸಾಗುತ್ತಿತ್ತು.  ಪ್ರೊಫೈಲಿನಲ್ಲಿ ಕಾರಣವಿಲ್ಲದೇ ತುಟಿಗಳು ಮಿನುಗಿತ್ತಿದ್ದವು. ಲಿಪ್‍ಸ್ಟಿಕ್ ಜಾಸ್ತಿಯಾಯಿತಾ? ಅವಳನ್ನೇ ನೋಡುತ್ತಾ ಶತಭಿಷ ಹಾಗೇ ನಿಂತಿದ್ದ. ಪಕ್ಕದಲ್ಲಿದ್ದವರೆಲ್ಲಾ ಹೊರಡಲು ರೆಡಿಯಾದರು.
“ಏನೋ? ನಡಿ” ಎಂಬಂತೆ ಶ್ರಾವ್ಯಾ ಇಶಾರೆಯಿತ್ತಳು. ಶತಭಿಷನಿಗೆ ಸೀನನ್ನು ಕಟ್ ಮಾಡಲು ಇಷ್ಟವೇ ಇರಲಿಲ್ಲ.
“ಇಷ್ಟ ಆಯ್ತೇನೋ?”
“ಸಖತ್ ಇಷ್ಟ....” ಶತಭಿಷ ಯಾವ ಕಡೆ ಗುರಿಯಿಟ್ಟಿದ್ದ ಸ್ಪಷ್ಟವಿರಲಿಲ್ಲ.
ನಿಧಾನವಾಗಿ ಬೆಳಕಿಗೆ ಬಂದರು.  ಶ್ರಾವ್ಯಾ ಒಮ್ಮೆ ದುರುಗುಟ್ಟಿ ನೋಡಿದಳು.
“ವಾಟ್” ಎಂಬಂತೆ ಶತಭಿಷ ಕೈತಿರುಗಿಸಿದ. ಆಕೆ ದವಡೆಯ ಮೇಲಿದ್ದ ಎಡಕೋರೆಹಲ್ಲು ಕಾಣಿಸುವಂತೆ ನಕ್ಕಳು. ಶತಭಿಷ ಸುಮ್ಮನೆ ಹೊರನಡೆದ.
ಸುಮಾರು ದೂರ ಹೋದಮೇಲೆ, “ಕಾಫಿ ಕುಡಿಬೇಕು ಅನಸ್ತಿದೆ ಕಣೋ” ಎಂದಳು..
“ಇಷ್ಟೊತ್ನಲ್ಲಾ?” ಶತಭಿಷ ಮತ್ತೆ ಕೇಳಿದ..
“ಹೂಂ”..
“ಲೇಯ್ ಇಷ್ಟೊತ್ನಲ್ ಯಾರೇ ಕಾಫಿ ಕುಡಿತಾರೆ?”
“ನಾನು...”
“ಅದ್ ಗೊತ್ತು..ಈಗ್ ಯಾಕೆ? ಒಂಬತ್ತೂವರೆಗೆ?”
“ಗೊತ್ತಿಲ್ಲ....ಯಾಕ್ ಕುಡಿಬಾರ್ದು?”
“ಯಾಕೆ ಅಂದ್ರೆ?”
“ಕಾಫಿ ತಾನೆ ಕುಡಿತೀನಿ ಅಂದಿದ್ದು....” ಎಂದು ಕಣ್ಣು ಹೊಡೆದಳು...ಶತಭಿಷ ಪೆಚ್ಚಾದ...ಅಲ್ಲೇ ಎಲ್ಲೋ ಉಡುಪಿ ಹೊಟೆಲ್ಲೊಂದು ಇರುವುದು ನೆನಪಿತ್ತು..
“ನೋಡಣಾ ತಾಳು..” ಎಂದು ಆ ಕಡೆ ಹೆಜ್ಜೆ ಹಾಕಿದ.
“ಒಂದ್ ಬ್ಯಾಲೆನ್ಸ್ ಇತ್ತಲ್ವಾ?” ಶ್ರಾವ್ಯಾ ಹಾರ್ನ್ ನಡುವೆಯೇ ಕೇಳಿದಳು..ಶತಭಿಷನ ಮನಸ್ಸು ಬ್ಯಾಲೆನ್ಸ್ ತಪ್ಪಿತ್ತು. ಹಾಲು ಒಡೆದು ಬಹುತೇಕ ಹಾಳಾಗಿದ್ದ ಕಾಫಿ ಕುಡಿದು ಇಬ್ಬರೂ ಬಸ್ ಹತ್ತಿದರು.  ಬನಶಂಕರಿಗೆ ಐದು ರೂಪಾಯಿಯ ಟಿಕೇಟು.
ನೆಟ್ ಆನ್ ಮಾಡಿ ವಾಟ್ಸಪ್ಪು, ಫೇಸ್‍ಬುಕ್ಕು ನೋಡುವಷ್ಟರಲ್ಲಿ ಬನಶಂಕರಿ ಬಂದಿತ್ತು. ಮೆಟ್ರೋ ಕಾಮಗಾರಿ ಪ್ರಗತಿಯಲ್ಲಿತ್ತು.
“ಬಾರೋ ಮನೆ ತನ್ಕಾ” ಆಕೆ ಕರೆದಿದ್ದಳು.
“ಇಬ್ಬರಿಗೂ ಸಾಕಷ್ಟು ಮಾತನಾಡುವುದಕ್ಕಿತ್ತು...” ಆದರೆ ಎಲ್ಲಿಂದ ಶುರುಮಾಡುವುದು ಗೊತ್ತಿರಲಿಲ್ಲ..
“ಇನ್ನೇನೇ ಸಮಾಚಾರ?”
“ಏನಿಲ್ವೋ ಹೇಳ್ಬೇಕು..”
“ಫ್ಯೂಚರ್ ಬಗ್ಗೆ ಏನ್ ಪ್ಲಾನ್ಸ್?”
“ಫ್ಯೂಚರ್ರಾ? ಆ ಥರ ಎಲ್ಲಾ ಏನಿಲ್ವೋ...ಯಾಕೆ?”
“ಹಂಗಲ್ಲ ನೆಕ್ಸ್ಟ್ ಬಿಗ್ ಥಿಂಗ್ ಏನು ಅಂತಾ?”
“ಏನಿಲ್ವೋ...ಸಧ್ಯಕ್ ಮನೆಲ್ ಹುಡ್ಗನ್ ನೋಡ್ತಿದಾರೆ..”
“ಆಹಾಂ”
“ಹೇಳಿರ್ಲಿಲ್ವಾ ನಾ ನಿಂಗೆ?”
“ಊಹೂಂ..”
“ಹಮ್..”
“ಈಗ್ ಹೇಳಿದ್ಯಲ್ಲ...”
“ಹೂಂ..ಈಗ್ ಹೇಳ್ದೆ..ಹೇಳ್‍ಬಾರ್ದಿತ್ತಾ??”
“ಗೊತ್ತಿಲ್ಲ...”
“ಕರ್ಮಾ..”
ಶತಭಿಷ ಏನನ್ನೋ ಹೇಳಲು ಬಾಯಿ ತೆರೆದಿದ್ದ...
ಅಷ್ಟರಲ್ಲಿ ಆಕೆ “ಸರಿ ಕಣೋ ನೀ ಹೋಗು ...ನೆಕ್ಸ್ಟ್ ಕ್ರಾಸ್ ಅಲ್ಲೇ ....ನಾ ಹೋಗ್ತಿನಿ..” ಎಂದಳು...
ಶತಭಿಷ ನಾಲ್ಕು ಹೆಜ್ಜೆ ನಡೆದು ನಿಧಾನಕ್ಕೆ ನಿಂತ. “ಹುಷಾರು ” ಎಂದು ಕೈ ಬೀಸಿದ...
“ಹೂಂ...ನೀನೂ...ಮೆಸ್ಸೇಜ್ ಮಾಡು ರೂಮಿಗ್ ಹೋದ್ಮೇಲೆ...” ಆಕೆ ಬಾಯ್ ಮಾಡಿದಳು..
ಶತಭಿಷ ವಾಪಸ್ ಹೊರಟಿದ್ದ...
ತಂಪಾದ ರಾತ್ರಿ, ಬಿಸಿಯಾದ ಮನಸ್ಸು , ಬೆಳಕು ನೀಡುತ್ತಿದ್ದ ಬೀದಿದೀಪ..ದಾರಿ ಕಾಣದ ಬದುಕು...ಇನ್ನೇನು ರೆಡಿ ಆಗಿದ್ದ ಮೆಟ್ರೋ ಟ್ರ್ಯಾಕು... ಹಳಿ ತಪ್ಪಿದ್ದ ಶತಭಿಷನ ಮನಸ್ಸು...
“ಹೇಳುವುದಾದರೆ ಹೇಳಬೇಕು; ಬಹುಷಃ ಇದೇ ಕೊನೆಯ ಬಾರಿ
ಒಪ್ಪಿತವಾದರೆ ಸರಿ; ಇಲ್ಲವಾದರೆ ಹುಡುಕಬೇಕು ಬದಲೀದಾರಿ
ಕನಸ ಹೊತ್ತು ಮುಂದೆ ಸಾಗಿದ ದಾರಿ; ವಾಪಸ್ಸಾಗುವಾಗ ಮಾತ್ರ ಒಬ್ಬಂಟಿಯೇ
ನಗು-ಖುಷಿ-ತಾತ್ಕಾಲಿಕ; ಕಣ್ಣೀರು ಮಾತ್ರ ಖಾಯಂ ಸಂಗಾತಿಯೇ?”

ಬರೆದಿಟ್ಟುಕೊಳ್ಳಬೇಕು ಅಂದುಕೊಂಡ...ನೀರುತುಂಬಿ ಮಂಜಾದ ಕಣ್ಣಲ್ಲಿ ಟೈಪ್ ಮಾಡಲಾಗಲಿಲ್ಲ..ಕಣ್ಣೊರಿಸಿಕೊಳ್ಳಲು ಮನಸ್ಸಿರಲಿಲ್ಲ...ಇಂದಿನ ಖುಷಿಗೋ. ಆತಂಕಕ್ಕೋ...ಕಾರಣ ಸ್ಪಷ್ಟವಿರಲಿಲ್ಲ...
ಅಷ್ಟರಲ್ಲಿ....
[ಹಿಂದಿನಿಂದ ಅಂಬುಲೆನ್ಸ್ ಸದ್ದು ಕೇಳಿಸುತ್ತಿತ್ತು]
-ಚಿನ್ಮಯ
23/9/2018

Sunday, August 5, 2018

ಫ್ಲೈ ಓವರಿನಲ್ಲಿ ಹಾರಿ ಹೋಗುವ ಮುನ್ನ

ಫ್ಲೈ ಓವರಿನಲ್ಲಿ ಹಾರಿ ಹೋಗುವ ಮುನ್ನ
ಡಾಂಬರು ಸರಿಸಿ ಮಣ್ಣನ್ನೊಮ್ಮೆ ನೋಡಬೇಕಿದೆ
ಶಟಲ್ಲಿನ ಏ.ಸಿ ಹವೆಯ ಬಿಟ್ಟು
ಬೆವರ ಹನಿಯ ನೆಲಕೆ ಬಸಿಯಬೇಕಿದೆ
ಹಾಡು ಹೇಳದೇ ವರುಷವಾಯಿತು
ಹಾಡಿನ ಪಟ್ಟಿ ಕಬೋರ್ಡಿನಲ್ಲೆಲ್ಲೋ ಬಿದ್ದಿದೆ
ಕುಂಚ ಕೈಗಿಡದೇ ಬಹುಷಃ ವರುಷವಾಯಿತು
ಬಣ್ಣವೆಲ್ಲ ಇಟ್ಟಲ್ಲೇ ಗಟ್ಟಿಯಾದಂತಿದೆ
ಅಮ್ಮ ತಂದುಕೊಟ್ಟ ಗೆಜ್ಜೆ ಊರಲ್ಲೇ ಇದೆ
ತಂದೇನು ಮಾಡಲಿ ?
ಕ್ರಿಕೆಟ್ಟು ವಾಲೀಬಾಲು ಗ್ರೌಂಡಿಗಿಳಿದದ್ದು ಯಾವಾಗ?
ಆನುವಲ್ ಡೇ ದಿನ ಮಾತ್ರ
ಪುರಸೊತ್ತೇ ಇಲ್ಲವೆಂದೇನಿಲ್ಲ,
ಶೇರ್ ಮಾರ್ಕೆಟ್ಟಿನ ಬಗ್ಗೆ ದಿನಾ ವಿಚಾರಿಸುವುದುಂಟು
ಈ ಕಂಪನಿ ಆ ಕಂಪನಿ, ಸ್ಕಿಲ್ ಸೆಟ್ಟಿನ ಲೀಸ್ಟು ಹಿಡಿದು
ಓಪನಿಂಗಿಗೆ ಹುಡುಕುವುದುಂಟು
ಇನ್ವೆಸ್ಟ್‍ಮೆಂಟಿಗಾಗಿ ಶನಿವಾರವೂ ತರಬೇತಿ ತರಗತಿ,
ಮೆಟ್ರೋದಲ್ಲೂ ಮ್ಯೂಚುವಲ್ಲ್ ಫಂಡಿನ ಸ್ಥಿತಿಗತಿ
ದುಡ್ಡು ಕೊಟ್ಟು ನಗಲು ಹೋಗುತ್ತೇವೆ,
ನಗುನಗುತ್ತಾ ಮಾತಾಡುವ ಅಮ್ಮನ ಫೋನ್ ಕಟ್ ಮಾಡುತ್ತೇವೆ
ತಡರಾತ್ರಿಯವರೆಗೂ ಸಿಸ್ಟಮ್ಮಿನ ಮುಂದೆ ಕೂರಲು ಪ್ರೇರಣೆಯೇನು?
ಬಾಸಿನ ಹುಸಿ ಶಭಾಷುಗಿರಿಯೇ?
ಇನ್‍ಕ್ರಿಮೆಂಟಿನ ಆಸೆಯೇ?
ಲೇ ಆಫಿನ ಭಯವೇ?
ದುಡಿ ದುಡಿ ದುಡಿ, ಜೋರಾಗಿ ನಡಿ, ಪ್ರಮೋಷನ್ ಪಡಿ
ಕಾರ್ಪೊರೇಟ್ ಗಲಾಟೆಯಲ್ಲಿ ನನ್ನತನಿಕೆಯ ನಾದ ಕೆಳದಾಗಿದೆ
ಗ್ರೋತ್ ಎನ್ನುವ ಹ್ಯಾಲೋಜನ್ ಬೆಳಕಿಗೆ ಕಣ್ಣು ಹೊಂದಿಕೊಂಡಿದೆ
ತಣ್ಣಗೆ ಮಿನುಗುವ ನೆಮ್ಮದಿಯ ತಾರೆಗಳು ಕಾಣಿಸದಾಗಿವೆ
ಅಪ್ಪನಂತೆ ಬೆನ್ನು ಬಗ್ಗಿಸಿ ಒಂದೇ ಕಂಪನಿ ಗೈಯ್ಯುವುದು
ಮಾರ್ಕೆಟಿಂಗ್ ತಿಳಿದ ಸ್ಮಾರ್ಟ್ ಜಗತ್ತಿಗೆ ಮೂರ್ಖತನವೆನಿಸಿದೆ
ನ್ಯಾಯ ನೀತಿ ಧರ್ಮ ಹರಿಕತೆಯಲ್ಲಷ್ಟೇ ಚಂದವೆನಿಸಿದೆ
ಟೋಪಿ ಹಾಕುವುದರಲ್ಲಿನ ಪರಿಣಿತಿಗೆ ಓಪನ್ ಹಾಲಿನಲ್ಲಿ ಶ್ಲಾಘನೆ ಪ್ರಾಪ್ತವಾಗುತ್ತಿದೆ
ದುಡಿಯುತ್ತಿರುವುದು ನಾವೇ ಮೊದಲಲ್ಲ;
ಅಪ್ಪ ಹೀರೋಪುಕ್ಕಿನಲ್ಲಿ ಹೋಗುವಾಗ ಊರವರು ನಮಸ್ತೆ ಮೇಷ್ಟ್ರೇ ಎನ್ನುತ್ತಿದ್ದರು
ಅಜ್ಜ ಪೇಟ ಕಟ್ಟಿ ಕೋಟು ಹಾಕಿದರೆ ಕಂಡವರು ಕೈ ಜೋಡಿಸಿ ನಿಲ್ಲುತ್ತಿದ್ದರು
ನಾನೂ ಹೋಗುತ್ತಿದ್ದೇನೆ ಪ್ಲೈ ಓವರ್ರಿನಲ್ಲಿ ಹಾರಿಕೊಂಡು
ಏ.ಸಿ ಹಾಕಿದ ಶಟಲ್ಲಿನಲ್ಲಿ ಎಫ್.ಎಮ್ ಹಾಡು ಹೇಳಿಕೊಂಡು
ಯಾರೂ ಮಾತಾಡುತ್ತಿಲ್ಲ; ನಿತ್ಯ ಕಂಡರೂ ಪರಿಚಯವಿಲ್ಲ
ಸೀಟಿನ ಕೆಳಗಿನ ಸೊಳ್ಳೆಯೂ ಕಡಿಯಲು ಬರುತ್ತಿಲ್ಲ
ಬಹುಷಃ ಅದೂ ಶಿಫ್ಟಿನ ಮೇಲೆ ಕೆಲಸ ಮಾಡುತ್ತಿರಬೇಕು
ಫ್ಲೈ ಓವರಿನಲ್ಲಿ ಹಾರಿ ಹೋಗುವ ಮುನ್ನ
ಡಾಂಬರು ಸರಿಸಿ ಮಣ್ಣನ್ನೊಮ್ಮೆ ನೋಡಬೇಕಿದೆ
ಶಟಲ್ಲಿನ ಏ.ಸಿ ಹವೆಯ ಬಿಟ್ಟು
ಬೆವರ ಹನಿಯ ನೆಲಕೆ ಬಸಿಯಬೇಕಿದೆ
ಐ.ಟಿ ಜೀವದ ಇನ್‍ಸ್ಟ್ರಕ್ಷನ್ನಿಗೆ ಸೆಮಿಕೋಲನ್ ಬೀಳುವ ಮುನ್ನ
ಬದುಕಿನ ಉದ್ದಗಲ ಕಂಡಷ್ಟು ಕಾಣಬೇಕಿದೆ
-ಚಿನ್ಮಯ
5/8/2018

Tuesday, June 26, 2018

ಗಡಿ

ನಾವು ಬಡವರಾ? ಶ್ರೀಮಂತರಾ?”
ಅಂದು ಪ್ರಶ್ನೆಯೊಂದಷ್ಟೇ ಇತ್ತು; ಉತ್ತರ ಸ್ಪಷ್ಟವಿರಲಿಲ್ಲ
ಅಪ್ಪನಿಗೆ ದುಂಬಾಲು ಬಿದ್ದು ಕೇಳಿದ್ದೆ ಚಾಲಿ ಕೆತ್ತುವಾಗ
ಮುಗುಳುನಗುತ್ತಾ ಹೇಳಿದ್ದ ಅಪ್ಪ “ಎರಡೂ ಅಲ್ಲ”
ನನಗೇನೋ ಅಚ್ಚರಿ, ಅನುಮಾನ; “ಇದು ನಿಜವಲ್ಲ”
ಆದರೆ ಯಾವುದನ್ನು ನಂಬುವುದು ತಿಳಿಯುತ್ತಿರಲಿಲ್ಲ
ನಿನ್ನೆ-ಮೊನ್ನೆಯಷ್ಟೇ ಸಹಪಾಠಿಯೊಬ್ಬ ಹೇಳಿದ್ದ
“ಸಾವ್ ಕಾರ್ರು ನೀವು..ನಿಂಗಿದೆಲ್ಲಾ ಗೊತ್ತಾಗೂದಿಲ್ಲ”
ಅಮ್ಮ ಮೊನ್ನೆಯಷ್ಟೇ ಎಲ್ಲೋ ಹೇಳುತ್ತಿದ್ದಳು
“ನಮ್ಮನೆಯಲ್ಲಿ ದುಡ್ಡಿನ ಮರವೇನೂ ನೆಟ್ಟಿಲ್ಲ”
ಯಾರೋ ಹಿಡಿಸಿ ಹೋಗಿದ್ದ ನೋಟೊಂದನ್ನು ಪುಟ್ಟ ತಂಗಿ
ಇನ್ನೇನು ಒಲೆಗೆಸೆಯುತ್ತಿದ್ದಳು;ಅವಳದೇ ಥೇರಿಯೊಂದಿರಬಹುದಾ?
ಹೊಟ್ಟೆ-ಬಟ್ಟೆಗೇನೂ ಕೊರತೆಯಿರಲಿಲ್ಲ
ಕಮ್ಮಿಯೆನಿಸಿದ್ದು ಹೆಗ್ಗನಸುಗಳಷ್ಟೇ
ಕಟ್ಟಿದೆ ಬಗೆಬಗೆಯ ಕನಸುಗಳ ತೋಟವನ್ನ
ಸಾಕಿದೆ, ಕಾಪಾಡಿದೆ, ಕೊಯ್ದು ಹದ ಮಾಡಿದೆ
ಅಂದು ಕಂಡ ಕನಸುಗಳಲ್ಲಿ ಕಾಲಕ್ರಮೇಣ ಬಹುತೇಕವು ಮುದುಡಿವೆ
ಕಾರಣ ಕೇಳಲು ನನಗಂತೂ ವ್ಯವಧಾನವಿರಲಿಲ್ಲ
ಉಳಿದವು ಆಗಲೂ ಈಗಲೋ ಅನ್ನುತ್ತಿವೆ
ಅವುಗಳ ಉಳಿಸಿಕೊಳ್ಳಲು ನನಗಂತೂ ಮನಸ್ಸಿಲ್ಲ
ಹೊಸ ಕನಸುಗಳು ಹುಟ್ಟುತ್ತಿಲ್ಲ;
ಎಲ್ಲದಕ್ಕೂ ಕಾರಣ ತಿಳಿಯಲೇಬೇಕೆಂದಿಲ್ಲ
ಬಹುಷಃ ನಾನು ಯಾವುದಕ್ಕೂ ಕಾರಣನಲ್ಲ;
ಆದರೆ ಅವುಗಳಿಲ್ಲದೇ ಬೆಂಗಳೂರು ತಲುಪಿ ಹೀಗೆ ಕುಟ್ಟುತ್ತಿರಲಿಲ್ಲ
ಅದೇನೋ ಬಡತನ-ಶ್ರೀಮಂತಿಕೆ
"ಹಣ"ದ ಗಡಿ ಮೀರಿದೆ
ಎರಡೂ ಒಂದೇ ಎನಿಸುತ್ತಿದೆ;
ಅಪ್ಪನ ಮುಗುಳುನಗೆ ಅರ್ಥವಾದಂತಿದೆ
ಪ್ರಮೋಷನ್ನು ಹೆಚ್ಚಿದಂತೆ ಹೆಚ್ಚುವ ಟೆನ್ಷನ್ನು;
ಕೊಟ್ಟಷ್ಟು ಕೆಲಸ ಮಾಡಿ ಹೊರಡುವ ಖುಷಿ
ಏಕ್ಸಟ್ರಾ ಮಾಡುವ ಕೆಲಸ; ಫ್ರೀ ಟೈಮಿನ ಸಂತಸ
ಏಫ್.ಡಿಯಲ್ಲಿನ ಜಡತ್ವ; ಶೇರ್ ಮಾರ್ಕೆಟ್ಟಿನ ಏರಿಳಿತ ಬ್ರಹ್ಮಗುಟ್ಟು
ಪ್ರೈವಸಿ ಎನ್ನುವ ಹುಸಿ ಏಕಾಂತ; ಎಲ್ಲರೊಂದಿಗೆ ಬೆರೆಯುವ ಸುಖ
ಹೊಗೆ ಕುಡಿಸುವ ಆಧುನೀಕತೆ; ಹಸಿರು ಪಸರಿಸುವ ಸಾಂಪ್ರದಾಯಿಕತೆ
ವೈಫೈ ಜೊತೆ ಅಂಗೈಯ್ಯಲ್ಲಿ ಜಗತ್ತು; ಹೊಲಕ್ಕಿಳಿದರೆ ಮರೆಯುವುದು ಜಗತ್ತು
“ನಾನು ಬಡವನಾ? ಶ್ರೀಮಂತನಾ?”
ಉತ್ತರಗಳು ಸಾಕಷ್ಟಿವೆ;
ಆದರೆ ಪ್ರಶ್ನೆ ಕೇಳಿಕೊಳ್ಳಲೇ ಧೈರ್ಯ ಸಾಲುತ್ತಿಲ್ಲ
-ಚಿನ್ಮಯ
(26/06/2018)

Friday, May 18, 2018

ಕ್ಲಾಥ್‍ವುಡ್ ಭಾಗ-2

ನಮಸ್ತೆ..ಹೇಗಿದೀರಾ?
ಇದು "ಯುವರ್ಸ್ ಕೋಟ್" ಮತ್ತು "ಕಹಳೆ" ಜಂಟಿಯಾಗಿ ಆಯೋಜಿಸಿದ್ದ ಜಗುಲಿಸಾಲು ಕಾರ್ಯಕ್ರಮದಲ್ಲಿ ವಾಚಿಸಿದ್ದ ಕವನ. ದಯವಿಟ್ಟು ಓದಿ/ನೋಡಿ, ತಪ್ಪು-ಒಪ್ಪು ತಿಳಿಸಿ...ಕಾಯ್ತಿರ್ತೀನಿ :)

-----------------
ಇನ್ನೇನು ಬೆಳಗಾಗುತ್ತಿತ್ತು;ದಿನಪತ್ರಿಕೆ ಹಾಲಿನ ವ್ಯಾನು ಹೊರಡುತ್ತಿತ್ತು
ಬಟ್ಟೆಗಳೆಲ್ಲ ರಾತ್ರಿಯ ಹರಟೆ-ಹಾಸ್ಯದ ಮೆಲುಕು ಹಾಕುತ್ತಿದ್ದವು
ನೆಂಟರ ಲುಂಗಿ ಮಾತ್ರ ಏಕಾಂಗಿಯಾಗಿ ಸುಮ್ಮನೇ ಕೂತಿತ್ತು

ಇದೇನು ಹೊಸದಲ್ಲ,ಇದೇನು ಮೊದಲಲ್ಲ, ಇದರಲ್ಲೇನೂ ವಿಶೇಷವಿಲ್ಲ
ಪರರ ನಗಿಸುವ ಹೃದಯದ ಹಿಂದೆ ನೋವಿರುವುದು ಗುಟ್ಟಾಗಿ ಉಳಿದಿಲ್ಲ
ಆದರೂ ತಿಳಿಯಬೇಕೆನಿಸಿದೆ ನೆಂಟರ ಲುಂಗಿಯ ಕತೆಯನ್ನ
ಠಾಟು-ಠೀಕಾಗಿ ಓಡಾಡಿಕೊಂಡಿದ್ದ ನೆಂಟರಲುಂಗಿ ಗಡ್ಡಬಿಡಲು ಕಾರಣವನ್ನ

ಹರೆಯದ ಹೊಸದರಲ್ಲಿ ನೆಂಟರಲುಂಗಿ ಮನೆಗೆ ಬಂತು
ಆಗೆಲ್ಲ ಅದು ನೆಂಟರಲುಂಗಿಯಾಗಿರಲಿಲ್ಲ;
ಅಸಲಿಗೆ ಅದಕ್ಕೆ ಡೆಸಿಗ್ನೇಷನ್ನೇ ಇರಲಿಲ್ಲ
ಮದುವೆಯ ಜವಳಿಗಂಟು ರೇಷ್ಮೆಸೀರೆಯ ಭರಾಟೆಯಲ್ಲಿ
ಇದನ್ನು ಯಾರೂ ಗಮನಿಸುವವರೇ ಇರಲಿಲ್ಲ
ಇದಕ್ಕೋ, ಊರೆಲ್ಲ ಮೆರೆಯಬೇಕೆಂಬ ಆಸೆ; 
ಆದರೆ ದಾರಿ ಮಾತ್ರ ತಿಳಿದಿರಲಿಲ್ಲ

ಪಕ್ಕದ ಕೋಣೆಯಲ್ಲಿ ಅತ್ತೆ ತನ್ನ ಮಗನಿಗೆ ಹೇಳುತ್ತಿದ್ದಳು
“ಈ ಬರ್ಮೂಡಾ ಎಲ್ಲ ಬೇಡ; ಇವತ್ತಾದ್ರೂ ಲಕ್ಷಣವಾಗಿ ಪಂಚೆ ಉಡು”
ನೆಂಟರಲುಂಗಿಗೆ ಖುಷಿಯೋ ಖುಷಿ; 
ಬಿಗಿದಪ್ಪಿಕೊಂಡಿತು ಅವನ ಸೊಂಟವನ್ನ
ನೋಡುವವರೆಂದರು,
“ಅರೆರೆ..ಇವತ್ತೇನು ಈ ಪಟ್ಟೆ ಪಟ್ಟೆ ಲುಂಗಿ.ಉಡು ಬಿಳಿ ಪಂಚೆಯನ್ನ”

ಬೆಂಗಳೂರಿನಿಂದ ಬಂದ ಅತ್ತೆಯ ಮಗ ಕಿತ್ತೆಸೆದ ಲುಂಗಿಯನ್ನ
ಇಸ್ತ್ರೀಮಾಡಿದ್ದ ಜೀನ್ಸ್ ಸಿಕ್ಕಿಸಿ, ತಿರುಗಿಸಿದ ಬೈಕಿನ ಕೀಲಿಯನ್ನ
ನೆಂಟರಲುಂಗಿ ಮಾತ್ರ ಅಲ್ಲೇ ಮುದುಡಿಬಿದ್ದಿತ್ತು
ತನ್ನ ಅದೃಷ್ಟವ ಹಳಿಯುತ್ತಿತ್ತು, ಮುಂದೇನು ಎಂದು ಯೋಚಿಸುತ್ತಿತ್ತು
ಏನಾದರೂ ಮಾಡಲೇಬೇಕೆಂದು ಹವಣಿಸುತ್ತಿತ್ತು

ಅಷ್ಟರಲ್ಲಿ ಅತ್ತೆ ಕೋಣೆಗೆ ಬಂದಳು;
ರೇಷ್ಮೆ ಸೀರೆ ಕುಪ್ಪಸ ಚಿಲ್ಲರೆ ಕಾಸು ಎಲ್ಲವನ್ನೂ ಮಂಚದ ಮೇಲಿಟ್ಟಳು
ನೆಂಟರಲುಂಗಿಯ ಕಣ್ಣು ಇನ್ನೂರಾ ಇಪ್ಪತ್ತು ಡಿಗ್ರಿ ತಿರುಗಿತು
ಸೀರೆ-ಕುಪ್ಪಸದ ಕಡೆಗಲ್ಲ, ಅದರ ಜೊತೆಗಿದ್ದ ರೇಷಿಮೆ ಶಾಲಿನ ಕಡೆಗೆ
ರಾತ್ರಿಯಾಯಿತು, ಎಲ್ಲರೂ ಮಲಗಿದ್ದರು
ನೆಂಟರಲುಂಗಿ ಮಾತ್ರ ಎಲ್ಲರಿಗಿಂತ ಬೇಗ ಎದ್ದಿತ್ತು

ಹಲೋ, ಮೈ ನೇಮ್ ಈಸ್ ----, 
ಹೌಡುಯು ಡೂ ಎಂದು ಮಾತನಾಡಿಸಿತು
ಹೈ ಹೌವ್ ಆರ್ ಯು ಎಂದು ಶಾಲು
ಪರಿಚಯಪೂರ್ವಕ ನಗೆಬೀರಿತು

ಅದೇ ಸಮಯದಲ್ಲಿ, ಪಕ್ಕದ ಕೋಣೆಯಲ್ಲಿ ವಾಟ್ಸಾಪ್ಪಿನ ಸ್ಮೈಲಿ ಹಾರಾಡುತ್ತಿತ್ತು
ಬೆಂಗಳೂರಿನ ಅತ್ತೆಯ ಮಗ -ಪಕ್ಕದೂರಿನ ಹುಡುಗಿಯ ವತಿಯಿಂದ
ಕರಕುಶಲ ಕೈಗಾರಿಕೆಯ ಪ್ರದರ್ಶನ ನಡೆಯುತ್ತಿತ್ತು
ಮತ್ತೆ ಬೆಳಗಾಯಿತು; ಕೆಲವರಿಗೆ ಬಹಳ ಬೇಜಾರಾಯಿತು
ರಾತ್ರಿಯ ಏಕಾಂತಕ್ಕಾಗಿ ಬಹಳೇ ಹೊತ್ತು ಕಾಯಬೇಕಾಯಿತು

ವಿಧಿಲಿಖಿತ, 
ಕೋಣೆಯಲ್ಲಿ ಹರಡಿದ್ದ ಲುಂಗಿಯಲ್ಲಿ ಸೀರೆಯ ರಾಶಿಯನ್ನ ಕಟ್ಟಿದರು
 ಕಳುವಾಗದಿರಲಿ ಎಂದು ಯಜಮಾನತಿ ಅದನ್ನು
ಜೋಪಾನವಾಗಿ ಕಪಾಟಿನಲ್ಲಿ ಬಚ್ಚಿಟ್ಟರು
ಆದರೆ ಕಳ್ಳತನ ಅದಾಗಲೇ ಆಗಿಹೋಗಿತ್ತು;
ನೆಂಟರಲುಂಗಿಯ ಹಾರ್ಟನ್ನ ರೇಷಿಮೆ ಶಾಲು ಅಪಹರಿಸಿತ್ತು

ವಿಧಿಲಿಖಿತ,
ಅತ್ತ ಜವಳಿಯಲ್ಲಿ ಚೂಡಿದಾರದ ಬಟ್ಟೆ ಕಮ್ಮಿಬಿತ್ತು
ಖರೀದಿಯ ಜವಾಬ್ದಾರಿ ಸುತ್ತಿ ಬಳಿಸಿ
ಬೈಕಿದ್ದ ಹುಡುಗ, ಪೇಟೆ ಗೊತ್ತಿದ್ದ ಹುಡುಗಿಯ ಮೇಲೆ ಬಿತ್ತು

ಜೊತೆಗೇ ಇದ್ದರೂ, ಇಬ್ಬರೂ ಇಲ್ಲಲ್ಲ ನಾಲ್ವರೂ ಅಂತರ ಕಾಯ್ದುಕೊಂಡಿದ್ದರು
ತಮಗೆ ಮಾತ್ರ ತಿಳಿಯುವಂತೆ ಕನಸಿನ ಅರಮನೆ ಕಟ್ಟುತ್ತಿದ್ದರು
ಮರುದಿನ ಮಧ್ಯಾನ್ಹದವರೆಗೂ ಅದು ಮುಂದುವರೆದಿತ್ತು
ಮುಂದಿನ ದಿಬ್ಬಣ ಪಕ್ಕದೂರಿಗೇ ಬರುವುದು ಬಹುತೇಕ ನಿಶ್ಚಿತವಾಗಿತ್ತು

ಮರುದಿನ, ಚಂದದ ಸೀರೆಯನುಟ್ಟು 
ಬಿತ್ತಕ್ಕಿಗಾಗಿ ಹುಡುಗಿ ಶಾಲುಹೊದ್ದಳು
ಅವನ ಡಿ.ಎಸ್.ಎಲ್.ಆರ್ ಕ್ಯಾಮರಾದಲ್ಲಿ 
ವಧು-ವರರಿಗಿಂತ ಅವಳ ಪೋಟೋಗಳೇ ಜಾಸ್ತಿ ಇದ್ದವು

ನೆಂಟರಲುಂಗಿ ಕೋಣೆಯಲ್ಲಿರಲಾಗದೇ 
ಯಾವುದೋ ಒಂದು ನೆಂಟರ ಸೊಂಟವನ್ನ ಅಪ್ಪಿಕೊಂಡಿತು
ಅಂದಿನಿಂದ ಅದಕ್ಕೆ ನೆಂಟರಲುಂಗಿಯ ಪಟ್ಟ ಪಕ್ಕಾ ಆಯಿತು

ಮದುವೆ ಮುಗಿದಮೇಲೆ ಹುಡುಗಿ ಬೈಕನ್ನೇರಿ ಹೊರಟಿದ್ದಳು
ಲುಂಗಿಗೆ ಬಾಯ್ ಹೇಳಲೆಂದು ಶಾಲು ನೆಲಕ್ಕೆ ಇಳಿದುಬಿತ್ತು

ಅದೇ ಘಳಿಗೆಯಲ್ಲಿ ಬೈಕಿನ ಚಕ್ರ ತಿರುಗಿತ್ತು
ಶಾಲು, ಶಾಲಿನ ಜೊತೆಗಿದ್ದ ಸೆರಗು, ಸೆರಗಿನ ಜೊತೆಗಿದ್ದ ಸೀರೆ
ಸೀರೆ ಉಟ್ಟಿದ್ದ ಹುಡುಗಿ ಅದಕ್ಕೆ ಬಲಿಯಾಗಿಯಾಗಿತ್ತು
ಶುಭ ಕಾರ್ಯ ಮುಗಿಸಿದ ಮನೆಯಲ್ಲಿ ಅಶುಭದ ಸುದ್ದಿ ಹರಡಿತು

ಚಿತೆಯು ಧಗಧಗ ದಹಿಸುವಾಗ ಎಲ್ಲರ ಕಣ್ಣಲ್ಲೂ ನೀರು
ಅಷ್ಟರಲ್ಲೇ ಯಾರೋ ಹುಡುಗಿಯ ಶಾಲನ್ನೂ ಬೆಂಕಿಗೆ ಬಿಸಾಡಿದರು
ಎಲ್ಲ ಮುಗಿದಿತ್ತು; ಹುಡುಗನಿಗಾಗಿ ಬೆಂಗಳೂರಿನ ಸ್ಲೀಪರ್ ಬಸ್ಸು ಕಾದಿತ್ತು
ಇತ್ತ ಪ್ರೇಯಸಿಯ ನೆನಪಲ್ಲಿ ಲುಂಗಿಯ ಗಡ್ಡಬೆಳೆದಿತ್ತು

ತಾನು ಶಾಲಿಗೆ ಪರಿಚಯವೇ ಆಗದಿದ್ದರೆ ಬಹುಷಃ ಹೀಗೆಲ್ಲ ಆಗುತ್ತಿರಲಿಲ್ಲ
ಶಾಲು ಬಗ್ಗೆ ತನಗೆ ಬಾಯ್ ಹೇಳುತ್ತಿರಲಿಲ್ಲ
ಇಬ್ಬರೂ ದೂರಾಗುತ್ತಿರಲಿಲ್ಲ
ನೆಂಟರ ಲುಂಗಿಯ ತಲೆಯಲ್ಲಿ ಬೇರೆ ಏನೇನೋ ಓಡುತ್ತಿತ್ತು
ಅಜನ್ಮ ಬ್ರಹ್ಮಚಾರಿಯಾಗುವ ಪಣತೊಟ್ಟಿತ್ತು

ಅತ್ತ ಬೆಂಗಳೂರಿನಲ್ಲಿ ಹುಡುಗನ ಬದುಕು 
ಎಂದಿನಂತೆ ಸಾಗಿತ್ತು

“ಈ ಮನುಷ್ಯರೇ ಹೀಗೆ” 
ನೆಂಟರಲುಂಗಿಗೆ ಮನುಕುಲದ ಬಗ್ಗೆ ಸಿಟ್ಟು ಬಂತು
ಉಟ್ಟವರು ಕೂರಲಿಕ್ಕಾಗದಂತೆ ಕಿರಿಕಿರಿಯಿಡಲು ಶುರುವಿಟ್ಟಿತು
ಮನೆಗೆ ಬಂದ ನೆಂಟರೆಲ್ಲ ಹೇಳಲಿಕ್ಕಾಗದ ವೇದನೆ ಅನುಭವಿಸಿದರು
ಮರೆಯಲ್ಲೆಲ್ಲೋ ನಿಂತು ಪರಪರ ಕೆರೆದು ಬಸ್ಸು ಹತ್ತಿದರು

ಕೆಲದಿನಗಳ ನಂತರ,
ನೆಂಟರ ಲುಂಗಿಯ ಕೋಪ ತಣ್ಣಗಾಯಿತು
ಯಜಮಾನ ಯಜಮಾನತಿಯ ಸ್ಥಿತಿ ನೋಡಿ
ಹೃದಯ ಆದ್ರ್ರವಾಯಿತು

ಅವತ್ತಿನಿಂದ ಮನೆಗೆ ಬಂದ ನೆಂಟರಿಗೆಲ್ಲ ಇದೇ ಲುಂಗಿಯೇ ಬೇಕು
ಅವರು ಹೊರಟ ದಿನ ರಾತ್ರಿ, 
ಕ್ಲಾತ್‍ವುಡ್‍ನಲ್ಲಿ ಅವರ ಬಗ್ಗೆ ಸಾಲು ಸಾಲು ಜೋಕು

ಇನ್ನೇನು ಬೆಳಗಾಗುತ್ತಿತ್ತು;ದಿನಪತ್ರಿಕೆ ಹಾಲಿನ ವ್ಯಾನು ಹೊರಡುತ್ತಿತ್ತು
ಬಟ್ಟೆಗಳೆಲ್ಲ ರಾತ್ರಿಯ ಹರಟೆ-ಹಾಸ್ಯದ ಮೆಲುಕು ಹಾಕುತ್ತಿದ್ದವು
ನೆಂಟರ ಲುಂಗಿ ಮಾತ್ರ ಏಕಾಂಗಿಯಾಗಿ ಸುಮ್ಮನೇ ಕೂತಿತ್ತು
-ಚಿನ್ಮಯ


Thursday, March 22, 2018

ಬದಲಾವಣೆ

ಊರೆಲ್ಲ ಖಾಲಿಯಾಗುತ್ತಿದೆ; ಆಟ ಮುಗಿದ ಅಂಗಳದಂತೆ
ಶಹರ ತುಂಬುತ್ತಲಿದೆ; ಇನ್ನೂ ಹೊರಡದ ಟೆಂಪೋವಿನಂತೆ
ನಾನೂ ಓಡುತ್ತಿದ್ದೇನೆ ಅದೇ ನಗರಿಯಲ್ಲಿ; ಸಿಟಿಯ ಸುಖದ ಅಮಲಿನಲ್ಲಿ
ಊರು-ತೋಟ-ನೆಮ್ಮದಿ ಕಾಡುತ್ತವೆ ತಡರಾತ್ರಿಯ ಕನವರಿಕೆಗಳಲ್ಲಿ

ಅಜ್ಜ-ಅಜ್ಜಿ-ದೊಡ್ಡಮ್ಮ-ದೊಡ್ಡಪ್ಪ ಇನ್ನು ಶ್ರಾದ್ಧಗಳಲ್ಲಷ್ಟೇ ಸಿಗುವುದು
ರಜೆ ಹಾಕಿ ಊರಿಗೆ ಹೋಗಿರಬೇಕು; ಕಾವ್ ಕಾವ್ ಎಂದು ಕರೆಯಬೇಕು
ಊಟ ಮಾಡಿ ಕೈ ತೊಳೆದು ಬೆಟ್ಟ ಹತ್ತಿ; ಮೇಲ್ ಚೆಕ್ ಮಾಡಬೇಕು
ಇನ್ಯಾವಗಲೋ ಬರುವೆನೆಂದು ಸಬೂಬು ಹೇಳಿ ಸ್ಲೀಪರ್ ಬಸ್ಸು ಹತ್ತಬೇಕು

ಅಶುಭಕ್ಕೊಂದೇ ಕಡ್ಡಾಯ ಪ್ರಯಾಣ; ಹಬ್ಬಗಳಲೆಲ್ಲ ಹೊಟೇಲಿನ ನಿರ್ಣಯ
ಹೆಸರಿಗೆ ಮಾತ್ರ ಅಲ್ಲಿಯವರು; ಆದರೆ ಎಲ್ಲಿಯೂ ನಿಲ್ಲದವರು
ಅವಕಾಶವನರಸಿ ಕೆಂಪು ಬಸ್ ಹತ್ತಿ ಬಂದದ್ದೇನೋ ನಿಜ. ಗುರಿ ಮುಟ್ಟಿದೆನಾ?
ಗುರಿಗಳಿಗೂ ಬಡ್ಡಿ-ಚಕ್ರಬಡ್ಡಿಯ ಹಾಕಿ, ಕೈ ಸಿಗದೆಡೆಯಲ್ಲಿ ಅಡಗಿಸಿಟ್ಟೆನಾ?

ತೊಂದರೆಯೇನಿಲ್ಲ ಈ ಪಟ್ಟಣದಲ್ಲಿ; ಬೆವರು ಬಸಿಯುವವರಿಗೆ ಬದುಕಲು
ಉಸಿರಾಡಲು ಶುದ್ಧ ಗಾಳಿ ಸ್ವಲ್ಪ ಕಷ್ಟ; ಟ್ರಾಫಿಕ್ಕಾಸುರನ ಲಹರಿ ನಿತ್ಯ ಅಸ್ಪಷ್ಟ
ಹೊರಡಲೇಬೇಕೆನ್ನುವುದಕ್ಕೆ ಸ್ಪಷ್ಟಕಾರಣವೇನೂ ಸಿಗುತ್ತಿಲ್ಲ
ಕಾರ್ಪರೇಟಿನಲ್ಲಿ ಮುಳುಗಿದ ಮೇಲೆ ಸತ್ಯ-ಪ್ರಾಮಾಣಿಕತೆಗಳೂ ಬದುಕಿಲ್ಲ

ಜೊತೆಗೆ ಊರೂ ಮೊದಲಿನಂತಿಲ್ಲ; ಬದಲಾವಣೆ ಜಗದ ನಿಯಮ
ಬೇಡಿಕೆ-ಪೂರೈಕೆ;ಬ್ಲಾಕ್ ಆಂಡ್ ವೈಟ್ ಬದುಕಿಗೆ ಬಣ್ಣದ ಆಯಾಮ
ಆದರೆ, ಮೊದಲಂತೆ ಅನ್ನದ ಚರಿಗೆ ಬಿಸಿಯಾಗುವುದಿಲ್ಲ; ಕಾರಣ ಅಷ್ಟೆಲ್ಲ ಉಣ್ಣುವವರಿಲ್ಲ
ಊರ ಪ್ರತಿಷ್ಠೆ: ಬೇಲಿ ಸಲುವಾಗಿ ನಂಬರವಿಲ್ಲ; ಕಾರಣ ಬೇಲಿ ಕಾಯಲೂ ಜನರಿಲ್ಲ

ಅಲ್ಲೂ ಇಲ್ಲೂ ನನ್ನಲ್ಲೂ ಎಲ್ಲ ಬದಲಾಗಿವೆ
ಆದರೆ ನಾ ಕಂಡಿದ್ದ ಊರು ನನ್ನಲ್ಲೇ ಭದ್ರವಾಗಿದೆ;
ನನ್ನನ್ನು ಇಂದಿಗೂ ಸಂತೈಸುತ್ತಿದೆ
ಎಲ್ಲ ಬಿಟ್ಟು ಬರಿಗೈಯ್ಯಲ್ಲಿ ಬಂದಾಗಲೂ
ಅಮ್ಮನಂತೆ ಬಿಗಿದಪ್ಪಿಕೊಳ್ಳುತ್ತದೆ,
ಅಪ್ಪನಂತೆ ಹೆಗಲುಕೊಡುತ್ತದೆ
-ಚಿನ್ಮಯ
22/03/2018