Friday, February 22, 2019

ಸ್ಥಿರೆ, ಶತಭಿಷ ಮತ್ತು ಚಲನಾ (ಭಾಗ-7)

"ವಾಟ್ ರಬ್ಬಿಶ್? ವಾಟ್ ಈಸ್ ದಿಸ್ ನಾನ್ ಸೆನ್ಸ್...." ಸ್ಥಿರೆ ಮುಖಕ್ಕೆ ಹೊಡೆದಂತೇ ಹೇಳಿದ್ದಳು... ಬೇರೇನೋ ರಿಪ್ಲೈ ನಿರೀಕ್ಷಿಸುತ್ತಿದ್ದ ವಿನಯ್‍ಗೆ ಉರಿಹತ್ತಿತ್ತು...
"ಹೀ ವಿಲ್ ಕಂಟಿನ್ಯೂ ಹಿಸ್ ಕೃಷ್ಣ ಲೀಲಾ...ಯು ಕಂಟಿನ್ಯು ಟು ಬಿ ಸೀತಾ ದೇವಿ..." ಮೆಸ್ಸೇಜನ್ನು ಟೈಪ್ ಮಾಡಿದ್ದವನು ಅದೇಕೋ ಅಳಿಸಿ ಹಾಕಿದ...ಫೋಟೋಗಳನ್ನು ಡಿಲೀಟ್ ಮಾಡಿ, ಆಕೆಯನ್ನು ಬ್ಲಾಕ್ ಮಾಡಿದ.
ಸ್ಥಿರೆ ಮೆಸ್ಸೇಜ್ ಓದಿದ ತಕ್ಷಣಕ್ಕೆ ಶತಭಿಷನನ್ನು ಸಮರ್ಥಿಸಿಕೊಂಡಿದ್ದಳು. ಆಕೆಗೆ ವಿನಯ್ ಬಗ್ಗೆ ಸ್ಪಷ್ಟವಾಗಿ ಗೊತ್ತಿತ್ತು.. ಯಾರಾದರೂ ಖುಷಿಯಾಗಿದ್ದರೆ ಆತನಿಗೇನೋ ಮೈಯಲ್ಲಿ ಮುಳ್ಳು ಏಳುತ್ತಿತ್ತು..ಆತನನ್ನು ಇಗ್ನೋರ್ ಮಾಡುವುದೇ ಸೂಕ್ತ ಎಂದು ಮೆಸ್ಸೇಜ್‍ಅನ್ನು ಡಿಲೀಟ್ ಮಾಡಿದಳು. ಆತನನ್ನು ಬ್ಲಾಕ್ ಮಾಡಲಾ ಎಂದು ಯೋಚಿಸಿದಳು.
"ನಿಜವಿರಬಹುದಾ?" ಮತ್ತೊಂದು ಹುಳ ತಲೆ ಹೊಕ್ಕಿತ್ತು...
ತಕ್ಷಣವೇ ಶತಭಿಷನಿಗೆ ಕಾಲ್ ಮಾಡಿದಳು. ಆತ ರಿಸೀವ್ ಮಾಡಲಿಲ್ಲ. ಅರ್ಧಗಂಟೆಯ ನಂತರ ಆತನೇ ವಾಪಸ್ ಕಾಲ್ ಮಾಡಿದ. ಈಕೆ ಮಗುವಿಗೆ ಊಟ ಮಾಡಿಸುತ್ತಿದ್ದಳು. ಮಗು ದೊಡ್ಡ ಮನೆಯ ತುಂಬಾ ಓಡಾಡುತ್ತಾ ಆಗಾಗ ಒಂದೊಂದು ತುತ್ತು ತಿನ್ನುತ್ತಿತ್ತು...ಜಾಸ್ತಿ ಮಾತಾಡಲೇನೂ ಆಗಲೇ ಇಲ್ಲ...ನಂತರ ಕಾಲ್ ಮಾಡುವೆನೆಂದು ಹೇಳಿ, ಫೋನ್ ಇಟ್ಟಳು. ರಾತ್ರಿ ಊಟವಾಗಿ, ಮಗು ಮಲಗಿದ ಮೇಲೆ ಮತ್ತೆ ಫೋನಾಯಿಸಿದಳು. ಶತಭಿಷ ಫೋನ್ ಕಟ್ ಮಾಡಿದ.
"ಇನ್ ಪಿ.ವಿ.ರ್..ವಿಲ್ ಟೆಕ್ಸ್ಟ್ ಯು ಲೇಟರ್..." ಶತಭಿಷ ಮೆಸ್ಸೇಜ್ ಮಾಡಿದ್ದ...ಮಾಡಬಾರದಿತ್ತೇನೋ...
ಸ್ಥಿರೆಯ ತಲೆಯಲ್ಲಿ ಮತ್ತೇನೇನೋ ಯೋಚನೆಗಳು ಓಡಾಡಿದವು...ಶತಭಿಷ ನೈಟ್ ಷೋಗೆ ಹೋಗುವುದು ಹೊಸದೇನಲ್ಲ...ಆದರೆ ಒಬ್ಬನೇ ಹೋಗಬೇಕಿತ್ತಾ? ತಾನಿಲ್ಲದ ಹೊತ್ತಿನಲ್ಲಾ? ಬೇಜಾರಲ್ಲಿದ್ದಾನಾ? ಕೆಲಸದ ಟೆನ್ಷನ್ ಕಡಿಮೆ ಮಾಡಿಕೊಳ್ಳಲಾ? ಅಸಲಿಗೆ ಒಬ್ಬನೇ ಇದ್ದಾನಾ? ಜೊತೆಗೆ ಚಲನಾ ಏನಾದರೂ?? ಟೈಂ ಪಾಸಿಗೆಂದು ನೆಟ್ ಆನ್ ಮಾಡಿದಳು...ಇನ್ನೇನು ಮಲಗಬೇಕು ಎನ್ನುವಾಗ ಸುಮ್ಮನೇ ಸ್ಟೇಟಸ್‍ಗಳ ಕಡೆ ಕಣ್ಣಾಡಿಸಿದಳು...
ತುಂಬಾ ದಿನಗಳ ನಂತರ ಚಲನಾಳ ಸ್ಟೇಟಸ್ ಅಪ್‍ಡೇಟ್ ಆಗಿತ್ತು....
"ಇಟ್ಸ್ ಮೂವಿ ಟೈಂ......"
ಶತಭಿಷ ಮೂವಿ ಮುಗಿದ ಕೂಡಲೇ ಮೆಸ್ಸೇಜ್ ಮಾಡುವುದನ್ನು ಮರೆತಿದ್ದ...ತಡರಾತ್ರಿಯಲ್ಲೆಲ್ಲೋ "ಗುಡ್‍ನೈಟ್" ಎಂಬ ಮೆಸ್ಸೇಜು ಕುಟ್ಟಿ ಮಲಗಿದ್ದ...ಆ ದಿನ ಅಪರೂಪಕ್ಕೆ ಮಗು ಮಧ್ಯದಲ್ಲಿ ಎಳದೇ ಬೆಳಗಿನವರೆಗೂ ಮಲಗಿತ್ತು...ಆದರೆ ತಾಯಿಗೆ ಮಾತ್ರ ನಿದ್ದೆ ಹತ್ತಲೇ ಇಲ್ಲ..
**
ಅವತ್ತು ಶುಕ್ರವಾರ. ಸ್ಥಿರೆ ಬೆಳಬೆಳಿಗ್ಗೆಯೇ ಎದ್ದು ತಲೆಸ್ನಾನ ಮಾಡಿ ಊರದೇವಸ್ಥಾನಕ್ಕೆ ಹೋಗಿದ್ದಳು...ದೇವರ ಮುಂದೆ ತುಂಬಾ ಹೊತ್ತು ಕೂತಿದ್ದಳು. ಪ್ರಾರ್ಥಿಸಿದ್ದಳಾ? ....ವಾಪಸ್ ಬರುವಷ್ಟರಲ್ಲಿ ಶತಭಿಷನ ಮಿಸ್ ಕಾಲ್ ಇತ್ತು.....
"ಐ ಆಮ್ ಸಾರಿ...ತಲೆ ಚಿಟ್ಟ್ ಹಿಡದು ನಿನ್ನೆ ಫಿಲಂಗೆ ಹೋಗಿದ್ದೆ..ಅದೇನಾಯ್ತು ಅಂದ್ರೆ....." ವಾಪಸ್ ಕಾಲ್ ಮಾಡಿದಾಗ ಶತಭಿಷ ಮಾತಾಡಲು ಶುರುಮಾಡಿದ.
"ಯಾವ್ ಫಿಲ್ಮು? ಚೆನಾಗಿತ್ತಾ? ಒಬ್ನೇ ಹೋಗಿದ್ಯಾ?" ಸ್ಥಿರೆ ಸಹಜವಾಗಿಯೇ ಮಾತಾಡುತ್ತಾ ಪ್ರಶ್ನೆ ಹಾಕುತ್ತಾ ಹೋದಳು...ಶತಭಿಷನ ಎಲ್ಲದಕ್ಕೂ ಖುಷಿಯಿಂದಲೇ ಉತ್ತರಿಸಿದ್ದ...ಆಕೆ ಈ ರೀತಿ ಇನ್ವೆಸ್ಟಿಗೇಟ್ ಮಾಡುವುದು ಆತನಿಗೇನೂ ಹೊಸತಾಗಿರಲಿಲ್ಲ...ಆತನ ಮಾತಿನಲ್ಲಿ ಸ್ಥಿರೆಗೆ ಎಲ್ಲೂ ಅನುಮಾನ ಬರಲಿಲ್ಲ...ಶತಭಿಷನೂ ಉತ್ಸಾಹದಲ್ಲಿದ್ದ.. ಆದರೆ ಬಿಸಿನೆಸ್ ವಿಚಾರದಲ್ಲಿ ಆತ ಮತ್ತೂ ಡೆಸ್ಪರೇಟ್ ಆಗಿರುವುದು ಆಕೆಯ ಗಮನಕ್ಕೆ ಬಂದಿತ್ತು....ಕೈಯ್ಯಲ್ಲಿ ಪ್ರಸಾದವಿತ್ತು... ನೇರವಾಗಿ ವಿನಯ್ ವಿಷಯ ಹೇಳಲು ಮನಸ್ಸು ಬರಲಿಲ್ಲ...ಚಲನಾಳ ಬಗ್ಗೆಯೂ ಕೇಳಲಿಲ್ಲ...
"ಯಾವಾಗ್ ಬರ್ತಿಯಾ ಊರಿಗೆ?" ಮುಖತಃ ಮಾತುಕತೆಯೇ ಒಳ್ಳೆಯದೆಂದುಕೊಂಡಳು.
"ಅದು...ಇಲ್ಲ್ ಸ್ವಲ್ಪ್ ಕೆಲ್ಸಾ ಇದೆ...." ಆತನಿಗೆ ಬರಲು ಇಷ್ಟವಿದ್ದಂತಿರಲಿಲ್ಲ....
"ಇಲ್ಲೇನೋ ಪೂಜೆ ಇದ್ಯಂತೆ...ಅಮ್ಮ ನೀನ್ ಬರ್ಲೇ ಬೇಕು ಅಂತಿದಾಳೆ...." ಸ್ಥಿರೆ ಸುಳ್ಳಂತಿದ್ದರೂ ಸತ್ಯವನ್ನೇ ಹೇಳಿದ್ದಳು....ಆತ ಅದು ಇದು ಕಾರಣ ಹೇಳಿದನಾದರೂ ಈಕೆ ಪಟ್ಟು ಸಡಿಲಿಸಲಿಲ್ಲ....
"ಓ.ಕೆ...ನೋಡ್ತೀನಿ...ನಾಳೆ ಆಗಲ್ಲ...ನಾಡಿದ್ದ್ ಬರ್ತಿನಿ ಮೋಸ್ಟ್‍ಲೀ" ಆತ ಕೊನೆಗೂ ಒಪ್ಪಿದ್ದ.
ಸ್ಥಿರೆ ತಾಯಿಯ ಬಳಿ ಹೋಗಿ, ಎಂದೋ ಮಾಡಬೇಕು ಎಂದಿದ್ದ ಪೂಜೆಯ ಬಗ್ಗೆ ನೆನಪಿಸಿದಳು...ಶತಭಿಷ ಊರಿಗೆ ಬರುವನೆಂದೂ, ಆಗಲೇ ಮಾಡೋಣವೆಂದೂ ಸಲಹೆ ಮಾಡಿದಳು....ಆಕೆಯ ತಾಯಿ, ಪೂಜೆಯ ಕೆಲಸಗಳ ಬಗ್ಗೆ ತಯಾರಿ ನಡೆಸತೊಡಗಿದರು...
**
"ಎಲ್ಲಿದಾರೆ ಕೇಳೇ...." ಸ್ಥಿರೆಗೆ ಆಕೆಯ ತಾಯಿಯೇ ನೆನಪಿಸಿದ್ದಳು...ಸ್ಥಿರೆಗೆ ಶತಭಿಷನ ಬಗ್ಗೆ ಗೊತ್ತೇ ಇತ್ತು...ಪಕ್ಕದ ರೂಮಿಗೆ ಬೆಂಕಿ ಬಿದ್ದರೂ ಭಾನುವಾರ ಬೆಳಿಗ್ಗೆ ಒಂಭತ್ತರ ಕಡಿಮೆ ಶತಭಿಷ ಏಳುವವನೇ ಆಗಿರಲಿಲ್ಲ...ಅಷ್ಟೊತ್ತಿಗೆ ಎದ್ದು, ತಿಂಡಿ ತಿಂದು ಬರುವುದೆಂದರೆ ಎರಡು ಗಂಟೆಯಾದರೂ ಆಗೇ ಆಗುತ್ತಿತ್ತು. ಆದರೂ ತಾಯಿಯ ಮಾತಿನ ಸಲುವಾಗಿ ಮೆಸ್ಸೆಜೊಂದು ಹಾಕಿದ್ದಳು...
ಆತ "ಜಸ್ಟ್ ಲೆಫ್ಟ್ ಬ್ಯಾಂಗಲೋರ್" ಎಂದು ಮೆಸ್ಸೇಜ್ ಹಾಕಿದ್ದ....
ಆಕೆ "ವೈ ಸೊ ಲೇಟ್?" ಎಂದಾಗ "ವೇಟ್ ಫಾರ್ ಅ ಸರ್‍ಪ್ರೈಸ್..." ಎಂದಿದ್ದ....ಆಕೆಗೆ ಸರ್‍ಪ್ರೈಸ್ ಏನೆಂದು ಗೆಸ್ ಮಾಡಲು ಸಾಧ್ಯವಾಗಲಿಲ್ಲ....ಆತ ಹೇಳಲಿಲ್ಲ...
ಸಮಯ ಎರಡಾಗಿ, ಸ್ಥಿರೆ ಮತ್ತೊಮ್ಮೆ ಕಾಲ್ ಮಾಡಿದಾಗ "ಲೇಟಾಗತ್ತೆ...ನೀವ್ ಊಟ ಮಾಡಿರಿ" ಎಂದ....ಅದನ್ನೇ ತಾಯಿಗೆ ಹೇಳಿದರೆ, ಆಕೆ ಎಲ್ಲರೂ ಕಾಯೋಣವೆಂದಳು....
ಮಗು ಹಠ ಮಾಡುತ್ತಿದ್ದುದರಿಂದ ಸ್ಥಿರೆ ಊಟ ಮಾಡಿಸಿದಳು...ಸ್ಥಿರೆಯ ತಂದೆ ಗೇಟಿನ ಸುತ್ತಲೇ ಓಡಾಡಹತ್ತಿದ್ದರು....ಸ್ಥಿರೆಗೆ ಶತಭಿಷನ ಮೇಲೆ ಸಿಟ್ಟು ಬರುತ್ತಿತ್ತು...ಸರ್‍ಪ್ರೈಸ್ ಏನಿರಬಹುದೆಂದು ಹೇಳದಿದ್ದಕ್ಕೋ ಏನೋ ಗೊತ್ತಿರಲಿಲ್ಲ....ಜಗಳ ಆಡಬೇಕೆನಿಸಿತ್ತು... ಬಹಳ ದಿನವಾಗಿದ್ದಕ್ಕೋ ಏನೋ ಅರ್ಥವಾಗಲಿಲ್ಲ.... ಬೆಳಿಗ್ಗೆಯಿಂದ ಏನೂ ಸರಿಯಾಗಿ ತಿಂದಿಲ್ಲ...ಬಹುಷಃ ಆಸಿಡಿಟಿ ಆಯಿತೇನೋ ಎಂದುಕೊಂಡಳು...
ಕೊನೆಗೂ ಆತ ಬಂದಿದ್ದ...
ಮಗು ಹಠ ಮಾಡಿದ್ದರಿಂದ ಸ್ಥಿರೆಗೂ ಗೇಟಿನ ಬಳಿಯೇ ಬಂದಿದ್ದಳು...ಸರ್‍ಪ್ರೈಸ್ ಎಲ್ಲಿ ಎಂದು ಕೇಳೋಣವೆಂದುಕೊಂಡಳು...ಅಷ್ಟರಲ್ಲೇ ಕಾರಿನಲ್ಲಿ ಇನ್ಯಾರೋ ಇದ್ದಂತಿತ್ತು...ಯಾರಿರಬಹುದು? ಸ್ಥಿರೆಯ ತಂದೆಗೆ ಗುರುತುಹತ್ತಲಿಲ್ಲ...ಸ್ಥಿರೆಗೆ ಮಾತ್ರ ಸ್ಪಷ್ಟವಾಗಿ ಗುರುತು ಹತ್ತಿತ್ತು....
"ಸರ್‍ಪ್ರೈಸ್" ಎನ್ನುತ್ತಲೇ ಕಾರಿನಿಂದ ಇಳಿದು ಸ್ಥಿರೆಯನ್ನು ಹಗ್ ಮಾಡಿದ್ದಳು ಚಲನಾ!
**
"ನನ್ ಕಲೀಗ್...ಚಲನಾ ಅಂತಾ.... ಸ್ಥಿರಾ ಫ್ರೆಂಡ್ ಕೂಡಾ..." ಶತಭಿಷ ಸ್ಥಿರೆಯ ಮನೆಯವರಿಗೆ ಚಲನಾಳನ್ನು ಪರಿಚಯಿಸಿದ್ದ.... ಚಲನಾ ಮಾತ್ರ ಸ್ಥಿರೆಯ ಜೊತೆ ಮಾತನಾಡುತ್ತಲೇ ಇದ್ದಳು...
"ಯು ನೌ ವಾಟ್....ಐ ವಾಸ್ ಫೀಲಿಂಗ್ ಲೈಕ್ ಗೋಯಿಂಗ್ ಆನ್ ಅ ಶಾರ್ಟ್ ಟ್ರಿಪ್....ಭಿಷ್ ಇಲ್ಲಿಗ್ ಹೊರ್ಟಿದೀನಿ ಅಂದಾ....ಐ ಥಾಟ್ ಹೋಗ್‍ಬರಣಾ ಅಂತಾ....ನಾನ್ ಈ ಕಡೆ ಎಲ್ಲಾ ನೋಡೇ ಇಲ್ಲಾ... ನೋ ಪ್ರಾಬ್ಲಂ ಫಾರ್ ಯು ರೈಟ್?" ಮಾತು ಚಟಪಟ ಸಾಗಿತ್ತು....
ಶತಭಿಷ ಭಿಷ್ ಆಗಿದ್ದನ್ನು ಸ್ಥಿರೆ ಗಮನಿಸಿದ್ದಳು...
"ಪ್ರಾಬ್ಲಂ ಆಹ್? ಏನಿಲ್ಲ...ಖುಷಿ ಆಯ್ತು...ಪ್ಲೀಸ್ ಬನ್ನಿ...." ಸ್ಥಿರೆ ಮನೆಗೆ ಬಂದ ಅತಿಥಿಯನ್ನು ಸ್ವಾಗತಿಸಿದ್ದಳು...ಆರೇಳು ತಿಂಗಳ ಹಿಂದೆ ಶಾಂತಿ-ಅಹಿಂಸೆ ಅಂತೆಲ್ಲಾ ಮಾತಾಡುತ್ತಿದ್ದ ಚಲನಾ ಇವಳೇನಾ ಎಂದು ಸ್ಥಿರೆಗೆ ಅನ್ನಿಸುತ್ತಿತ್ತು...ಮೂವಿ ಬಗ್ಗೆ ಕಾಫಿ ಡೇ ಬಗ್ಗೆ ಬಹಳಷ್ಟು ಮಾತಾಡುವುದಕ್ಕಿತ್ತು... ಆದರೆ ಅದಾಗಲೇ ಊಟಕ್ಕೆ ತಡವಾಗಿದ್ದರಿಂದ ಜಾಸ್ತಿ ಮಾತುಕತೆ ಸಾಧ್ಯವಾಗಲಿಲ್ಲ...
ಊಟವಾದ ಮೇಲೆ ಮಗುವಿನ ಜೊತೆ ಚಲನಾ ಆಟವಾಡತೊಡಗಿದ್ದಳು. ಆಕೆ ತಂದ ಹೊಸ ಆಟಿಕೆ ಮಗುವಿಗೆ ಬಹಳೇ ಇಷ್ಟವಾಗಿತ್ತು. ಶತಭಿಷನೂ ಕೂಡ ಆಟದಲ್ಲಿ ತೊಡಗಿದ್ದ....ಅಂಗಳದಲ್ಲಿ ಶತಭಿಷ-ಚಲನಾ-ಮಗುವಿನ ಗದ್ದಲ ಜೋರಾಗಿತ್ತು....ಒಳಮನೆಯಲ್ಲಿ ಮಲಗಿದ್ದ ಸ್ಥಿರೆಯ ತಂದೆ ಕೋಣೆಯ ಬಾಗಿಲು ಹಾಕಿ ಮಲಗಿದರು...
"ಯಾರೇ ಅವಳು? ಮುಂಚೆ ಯಾವತ್ತು ನೀನ್ ಹೇಳ್ಳೇ ಇಲ್ಲಾ....." ಪಾತ್ರೆ ಜೋಡಿಸಿ ಇಡುತ್ತಿದ್ದ ಸ್ಥಿರೆಯನ್ನು ಆಕೆಯ ತಾಯಿ ಪ್ರಶ್ನಿಸಿದ್ದಳು...
"ಅವಳಾ...ಮುಂಚೆ ನಮ್ಮ್ ಅಪಾರ್ಟ್‍ಮೆಂಟ್‍ನಲ್ಲೇ ಇದ್ಲು...ನಮ್ಮ್ ಪಕ್ಕದ್ ಮನೆನೇ....ಅವಾಗ್ ಅವಾಗ್ ಬರ್ತಾ ಇದ್ಲು...ಈಗ್ ಒಂದ್ ಮೂರ್ ತಿಂಗ್ಳಿಂದಾ ಪತ್ತೆನೇ ಇರ್ಲಿಲ್ಲ...." ಸ್ಥಿರೆ ತನ್ನ ಅನುಮಾನಗಳನ್ನು ಚಲನಾಳ ಮೇಲೆ ಹೊರಿಸಲಿಲ್ಲ....
"ಮದ್ವೆ ಗಿದ್ವೆ ಏನ್ ಆದಂಗಿಲ್ಲ ಅನ್ಸತ್ತೆ...ಯಾವ್ ಜನಾ?" ಸ್ಥಿರೆಯ ತಾಯಿ ವಾಡಿಕೆಯ ಮಾತಾಡಿದ್ದರು...
"ಏಯ್...ಹೋಗಮ್ಮಾ....ಅವಳಿಗ್ ಮದ್ವೆ ಆಗಿ ಡೈವೊರ್ಸೂ ಆಗಿದೆ...ನೀನ್ ಏನ್ ಗಂಡ್ ಹುಡ್ಕದ್ ಬೇಕಾಗಿಲ್ಲ ಆಕೆಗೆ...." ಪಾತ್ರೆಯೊಂದು ಕೈತಪ್ಪಿ ನೆಲಕ್ಕೆ ಬಿದ್ದಿತ್ತು...ಬಗ್ಗಿ ಎತ್ತಿಡಲು ಹೋದಾಗ ಹಣೆಗೆ ತಗುಲಿತು..."ಹಾಯ್" ಎಂದಳು...
"ಹುಷಾರು ಕಣೆ...ಏಟಾಯ್ತಾ?" ಎಂದು ತಾಯಿ ಕೇಳಿದಾಗ,ಏನಿಲ್ಲ ಎಂದು ಹಣೆ ತಿಕ್ಕಿಕೊಂಡಳು...
"ಏನೋ ಅವಳ್ ಒಂಥರಾ ವಿಚಿತ್ರ ಅನ್ಸತ್ತೆ....ಯಾಕ್ ಹಂಗಿದಾಳೆ?" ಬಹುಷಃ ಆಕೆಯ ಬಟ್ಟೆ, ಮಾತುಕತೆ ಗಮನಿಸಿ ಸ್ಥಿರೆಯ ತಾಯಿ ಕೇಳಿದ್ದರು...
"ಏನೋ ಗೊತ್ತಿಲ್ಲ...ಅವಳೊಂಥರ ಹಂಗೇ...ಬಿಡು..ಅವರವರ ಹಣೆಬರಹ...." ಸ್ಥಿರೆ ಲೋಟವೊಂದನ್ನು ಕುಟ್ಟಿದ್ದಳು...ಅಲ್ಲಿಗೆ ಪಾತ್ರೆ ಜೋಡಿಸಿ ಮುಗಿದಿತ್ತು....
"ಬೇರೆಯವ್ರ್ ಮನೆಗ್ ಬಂದಿದೀವಿ ಅಂದ್ರೆ ಸ್ವಲ್ಪ ಇತಿ-ಮಿತಿಯಲ್ಲ್ ಇರ್ಬೇಕಪ್ಪಾ....ಅದೇನ್ ಹುಡಗೀರೋ? ನಮ್ಮ್ ಊರ್ ಹುಡುಗೀರೇ ಜೋರ್ ಅಂದ್ಕೊಂಡ್ರೆ ಇವ್ಳ್ ಇನ್ನೂ ಜೋರು....ನಮ್ಮ್ ಲಕ್ಷ್ಮೀನೂ ಹಂಗೇ...ಅದೇನ್ ಯೋಚನೇನೋ..." ಆಕೆಯ ತಾಯಿ ಗೊಣಗುತ್ತಿದ್ದಳು...
ಸ್ಥಿರೆಗೆ ಅಲ್ಲಿರಲಾಗಲಿಲ್ಲ...ಅಂಗಳದ ಕಡೆ ಹೊರಟಳು...ಶತಭಿಷ ಮತ್ತು ಚಲನಾ ಜೋರಾಗಿ ನಗುತ್ತಿದ್ದರು...ಅದೇಕೋ ಹೆಜ್ಜೆ ಮುಂದಿಡುವ ಮನಸ್ಸಾಗಲಿಲ್ಲ....ಅಲ್ಲಿಯೇ ನಿಂತಳು...
"ಏನಾದ್ರೂ ಹೆಲ್ಪ್ ಬೇಕಾ ಸ್ಥಿರಾ?" ಚಲನಾ ಅಂಗಳದಿಂದಲೇ ಅರಚಿದ್ದಳು....ಸ್ಥಿರೆ ಅಂಗಳಕ್ಕೆ ಬರಲೇಬೇಕಾಯಿತು....
**
"ಎಲ್ಲಾದ್ರೂ ಹೋಗಣ್ವೇನೋ?" ಚಲನಾ ಮಗುವನ್ನು ಕೇಳಿದ್ದಳು. ಸ್ಥಿರೆ-ಶತಭಿಷನೂ ಜೊತೆಗೂಡಿದರು. ಸಂಜೆ ಸೂರ್ಯ ಮುಳುಗುವ ಹೊತ್ತು...ಕ್ರಿಕೆಟ್ ಆಡುವ ಪೋರರು ಬೇಗ ಬೇಗ ಮತ್ತೊಂದು ಮ್ಯಾಚು ಆಡುವ ಆತುರದಲ್ಲಿದ್ದರು. ದನಗಳು ಅದಾಗಲೇ ಕೊಟ್ಟಿಗೆ ಸೇರಿದ್ದವು. ಭತ್ತದ ಗದ್ದೆ ಕಟಾವು ಮುಗಿಸಿ ಖಾಲಿಯಾಗಿತ್ತು. ಕಬ್ಬು ತಲೆಯೆತ್ತಿ ನಿಂತಿದ್ದು, ಆಲೆಮನೆಯ ತಯಾರಿಗಳು ಶುರುವಾಗಿದ್ದವು. ಹೊಳೆಗೆ ಅಡ್ಡಲಾಗಿ ಕಟ್ಟಿದ್ದ ಕಾಂಕ್ರೀಟ್ ಸೇತುವೆ ಅಂಚಿನಲ್ಲಿ ನಾಲ್ವರೂ ಕೂತಿದ್ದರು. ಅಷ್ಟರಲ್ಲೇ ದಾಯಾದಿಗಳ್ಯಾರೋ ಬಂದು ಮಗುವನ್ನು ಆಡಿಸತೊಡಗಿದರು. ಶತಭಿಷ ಸಿಗರೇಟಿನ ಸಲುವಾಗಿ ಎದ್ದು ಹೋದ. ಅಲ್ಲಿದ್ದುದು ಚಲನಾ-ಸ್ಥಿರೆ ಇಬ್ಬರೇ.
"ಹೌ ಈಸ್ ಲೈಫ್?" ಸ್ಥಿರೆ ಮಾತು ಶುರುಮಾಡಿದಳು.
"ನೈಸ್...ಏನೋ ಮಜಾ ಬರ್ತಿದೆ...ಹ್ಯಾಂಗಿಂಗ್ ಅರೌಂಡ್..." ಚಲನಾ ಚುಟುಕಾಗಿ ಉತ್ತರಿಸಿದ್ದಳು...
"ವಾಟ್ಸ್ ನೆಕ್ಸ್ಟ್?" ಸ್ಥಿರೆಯ ಪ್ರಶ್ನೆ ಶುರುವಾಯಿತು..
"ಐ ಡೋಂಟ್ ನೋ...ಟ್ರಾವೆಲ್ ಮಾಡ್ತಾ ಇದ್ರೆ ಟೈಂ ಪಾಸ್ ಆಗತ್ತೆ...ಅದ್ ಬಿಟ್ಟು ಬ್ಯಾಂಗಲೋರ್ ಬಂದ್ರೆ ಯಾಕೋ ಒಬ್ಳೇ ಒಬ್ಳೇ ಅನಸ್ತಿದೆ..." ಚಲನಾ ನಿಧಾನವಾಗಿ ಮಾತನಾಡಹತ್ತಿದ್ದಳು.
ಇನ್ನೊಂದಿಷ್ಟು ಪ್ರಶ್ನೆ ಮತ್ತೊಂದಿಷ್ಟು ಉತ್ತರ. ತಿರುಳೆಲ್ಲ ಒಂದೇ!
"ಐ ಥಿಂಕ್ ಯು ನೀಡ್ ಅ ಕಂಪಾನಿಯನ್..." ಸ್ಥಿರೆ ಅಳೆದೂ ತೂಗಿ ಸಲಹೆ ಕೊಟ್ಟಳು..
"ಐ ವಾಸ್ ಥಿಂಕಿಂಗ್ ಅಬೌಟ್ ದ ಸೇಮ್...ಬಟ್ ನನ್ನ ಅರ್ಥ ಮಾಡ್ಕೊಳ್ಳೋರ್ ಬೇಕು...ಐ ಡೋಂಟ್ ನೋ ಆ ಥರ ಯಾರಾದ್ರೂ ಇದಾರಾ ಅಂತಾ......" ಚಲನಾ ಒಪ್ಪಿದ್ದಳು. ತನ್ನ ಅನುಮಾನಗಳನ್ನೂ ಹೇಳಿದ್ದಳು..
"ನೈಸ್...ಯು ವಿಲ್ ಫೈಂಡ್ ಸಮ್‍ವನ್ ಡೋಂಟ್ ವರಿ..." ಸ್ಥಿರೆಯ ಮುಖದಲ್ಲಿ ನಗುವಿತ್ತು...
"ಇನ್ ಫ್ಯಾಕ್ಟ್ ಹೌ ಲಾಂಗ್ ಭಿಷ್ ಕಾನ್ ಹ್ಯಾಂಡಲ್ ಮಿ...." ಸ್ಥಿರೆಗೆ ಆಕೆಯ ಮಾತು ಅರ್ಥವಾಗಲಿಲ್ಲ..
..
"ವಾಟ್" ಎಂದಳು...ಕೇಳಬೇಕೆನಿಸಿದ ಸಾವಿರ ಪ್ರಶ್ನೆಗಳಿದ್ದವು...
"ಜಸ್ಟ್ ಕಿಡಿಂಗ್....ಅವನ್ ನನ್ ಫ್ರೆಂಡ್ ಅಷ್ಟೇ...." ಆಕೆಯ ತುಂಟಾಟ ಮುಂದುವರೆದಿತ್ತು....
ಸ್ಥಿರೆಗೆ ತುಂಬಾ ದಿನದಿಂದ ಕೇಳಬೇಕೆನಿಸಿತ್ತು. "ಇಫ್ ಯು ಡೋಂಟ್ ಮೈಂಡ್...ನಾನ್ ಏನೋ ಕೇಳ್‍ಬಹುದಾ?"
"ಶ್ಯುರ್...ಗೋ ಅಹೆಡ್" ಚಲನಾ ಸಿಗರೇಟ್ ತೆಗೆದಳು...ಆದರೆ ಲೈಟರ್ ಇರಲಿಲ್ಲ...ಶತಭಿಷ ಫೋನಿನಲ್ಲಿದ್ದ....ಸ್ಥಿರೆ ಕಾಫಿ ಡೇ, ಪಿ.ವಿ.ಆರ್ ವಿಚಾರಗಳನ್ನೆಲ್ಲಾ ಕೇಳಿದಳು....ಉತ್ತರ ಪಡೆದಳು...
"ನೀವಿಬ್ರೂ ಯಾಕ್ ಹಿಂಗ್ ಇರ್ತೀರಾ? ಅರ್ಥ ಮಾಡ್ಕೊಳೋದ್ ತುಂಬಾ ಕಷ್ಟ....." ಹುಸಿಕೋಪದಿಂದ ಕೇಳಿದ್ದಳು....
ಚಲನಾ ಮಾತಾಡಲು ಶುರುಮಾಡಿದಳು..."ಅದು ಏನ್ ಅಂದ್ರೆ...." ಮಾತು ಮುಗಿಸುವ ಮೊದಲೇ ನಗುತ್ತಿದ್ದಳು...ಸ್ಥಿರೆ ನಗಲಿಲ್ಲ...
"ನೆವರ್ ಮೈಂಡ್....ಪಾಸ್ಟ್ ಈ ಪಾಸ್ಟ್....ಮಿ ಆಂಡ್ ಶತಭಿಷ...ವಿ ಆರ್ ಜಸ್ಟ್ ಫ್ರೆಂಡ್ಸ್ ಈಗಾ...ಅವನ್ ಫರ್ಮ್ ಏನೋ ಲಾಕ್ ಆಗಿದೆ ಅಂತಲ್ಲ...ಈ ಥಿಂಕ್ ಹಿ ಈಸ್ ಡಿಪ್ರೆಸ್ಡ್....ಏನೋ ಹೆಲ್ಪ್ ಮಾಡ್ತಾ ಇದ್ದೆ...ಟು ಜಸ್ಟ್ ಚಿಲ್ಲ್ ಹಿಮ್...." ಚಲನಾ ಬಿಡಿಸಿ ಹೇಳಿದ್ದಳು...
"ಡಿಪ್ರೆಷನ್ನಾ? ಉಫ್..." ಸ್ಥಿರೆಗೆ ಶತಭಿಷನ ಜೊತೆ ಮಾತಾಡಬೇಕೆನಿಸಿತ್ತು....ಅವರಿಬ್ಬರೂ ವಿರಾಮವಾಗಿ ಸಮಯ ಕಳೆದು ಬಹಳೇ ದಿನಗಳಾಗಿತ್ತು....ಅಷ್ಟರಲ್ಲಿ ಶತಭಿಷ ವಾಪಸ್ ಬಂದ....ಖುಷಿಯಲ್ಲಿದ್ದ...ಸ್ವಲ್ಪ ಹೊತ್ತು ಅಲ್ಲಿಯೇ ಕಾಲ ಕಳೆದು ಕತ್ತಲಾದ ಮೇಲೆ ಎಲ್ಲರೂ ಮನೆಗೆ ಹೋದರು...
ಆ ದಿನ ರಾತ್ರಿಯೇ ಚಲನಾ ಹೊರಡುವೆನೆಂದಳು...ಅದೇನೇನೋ ಟ್ರಿಪ್ ಯೋಜನೆ ಹಾಕಿಕೊಂಡಿದ್ದಳು...ಹೊಸ ಗೋ ಪ್ರೋ ಕ್ಯಾಮರಾ ತೋರಿಸಿದಳು...ಟ್ರಾವೆಲ್ ವ್ಲಾಗ್ ಶುರುಮಾಡುವೆ ಎಂದಳು... ಹೊರಡುವ ಮುನ್ನ ಮನೆಯ ವೀಡಿಯೋ ಮಾಡಿ, ಸ್ಥಿರೆಯ ತಾಯಿಯ ಬಳಿಯಿದ್ದ ಸೀರೆಯೊಂದನ್ನು ಕೇಳಿ ಪಡೆದಿದ್ದಳು.
ಆಕೆಯನ್ನು ಬಸ್ ಹತ್ತಿಸಿ ಬಂದ ಶತಭಿಷ ಸ್ಥಿರೆಯ ಜೊತೆ ಅಪರೂಪದ ಸಮಾಧಾನದಿಂದ ಮಾತಾಡಿದ್ದ...ಉತ್ಸಾಹದಲ್ಲಿದ್ದ....ಆತನಿಗೆ ಹೊಸ ಪ್ರಾಜೆಕ್ಟ್‍ವೊಂದು ಸಿಕ್ಕಿತ್ತು. ಸ್ಟಾರ್ಟ್‍ಪ್‍ವೊಂದು ಸ್ಟಾಕ್‍ಗಳ ಪ್ರಿಡಿಕ್ಷನ್‍ಗೆ ಸಾಫ್ಟ್‍ವೇರ್ ತಯಾರಿಸುತ್ತಿತ್ತು. ಸ್ಟಾಕ್‍ಗಳ ಬಗ್ಗೆ ಅದಾಗಲೇ ಸಾಕಷ್ಟು ಗೊತ್ತಿದ್ದ ಶತಭಿಷನನ್ನೂ ರಿಸೋರ್ಸ್ ಆಗಿ ಪರಿಗಣಿಸಲಾಗಿತ್ತು. ಆದರದು ಕನ್ಸಲ್ಟಂಟ್ ಕೆಲಸ. ಆದದ್ದಾಗಲಿ ಎಂದು ಹೂಂ ಎಂದಿದ್ದ...ಸ್ಥಿರೆ ಕೂಡಾ ನೆಮ್ಮದಿಯಿಂದ ಮಲಗಿದಳು...ಪೂಜೆ ಮುಗಿಸಿ ಎಲ್ಲರೂ ಬೆಂಗಳೂರಿಗೆ ವಾಪಸ್ಸಾದರು....
**
ಒಂದು ವಾರದಿಂದ ಸ್ಥಿರೆ ಟೆನ್ಷನ್‍ನಲ್ಲಿ ಇದ್ದಂತೆ ಕಂಡಳು...ಕೊನೆಗೊಂದು ದಿನ ಶತಭಿಷ ಊಟವೆಲ್ಲ ಮುಗಿದ ಮೇಲೆ ರಮಿಸಿ ಕೊನೆಗೂ ಆಕೆಯ ಬಾಯಿ ಬಿಡಿಸಿದ...
"ಫುಲ್ ಟೀಂನಾ ಆನ್ ಸೈಟ್ ಶಿಫ್ಟ್ ಆಗಕ್ ಹೇಳ್ತಿದಾರೆ... ಬಟ್ ಐ ಕಾಂಟ್ ಗೋ... " ಸ್ಥಿರೆ ತನ್ನ ಪರಿಸ್ಥಿತಿ ವಿವರಿಸಿದ್ದಳು...
ಮಗುವಿನಿಂದ ದೂರವಿರುವುದು ಆಕೆಗೆ ಇಷ್ಟವಿರಲಿಲ್ಲ...ಜೊತೆಗೆ ಕರೆದುಕೊಂಡು ಹೋಗುವುದು ಸಾಧ್ಯವಿರಲಿಲ್ಲ...
ಅದಾಗಲೇ ಕಂಪನಿ ರೀ-ಆರ್ಗ್ ಆಗುತ್ತಿದ್ದುದರಿಂದ ಕೆಲಸ ಉಳಿಸಿಕೊಳ್ಳುವುದು ಕಷ್ಟವಿತ್ತು.....
ಶತಭಿಷ ಬಹಳ ಹೊತ್ತು ಯೋಚನೆ ಮಾಡಿ ಇನ್ನೇನು ಉತ್ತರ ನೀಡುವವನಿದ್ದ...
ಅಷ್ಟರಲ್ಲಿ ಮನೆಯ ಬೆಲ್ ರಿಂಗಣಿಸಿತ್ತು....
ಚಲನಾ ಮತ್ತು ವಿನಯ್ ಮನೆಬಾಗಿಲ ಮುಂದಿದ್ದರು...
-ಚಿನ್ಮಯ
17/2/2019

No comments: