Tuesday, February 5, 2019

ಫ್ಲಾಷ್ ಬ್ಯಾಕ್

"ಸಾರಿ...ಐ ಡಿಂಟ್ ಮೀನ್ ಟು ಹಿಟ್ ಆನ್ ಯುವರ್ ಬಮ್..." ಚಲನಾ ಶತಭಿಷನ ಹತ್ತಿರ ಅಪಾಲಜಿ ಕೇಳುತ್ತಿದ್ದಳು. ಪೇಂಟ್ ಬಾಲ್ ಆಟದಲ್ಲಿ ಹೊಟ್ಟೆಗಿಂತ ಕೆಳಗಡೆ ಶೂಟ್ ಮಾಡುವಂತಿರಲಿಲ್ಲ. ಆಕೆ ಆಟದ ಭರದಲ್ಲಿ ಮರೆತಿದ್ದಳು. ಅವಳು ಶೂಟ್ ಮಾಡುತ್ತಿರುವುದನ್ನು ಕೋರೆಗಣ್ಣಿನಲ್ಲಿ ನೋಡಿದ ಆತ ಬೆನ್ನು ಕೊಟ್ಟಿದ್ದ. ಗುರಿ ತಪ್ಪಿತ್ತು. ಹೊಡೆತ ಸ್ವಲ್ಪ ಕೆಳಗೆ ಬಿದ್ದಿತ್ತು. ಪೇಂಟ್ ಬಾಲ್ ಒಡೆದು ವಾಟರ್ ಗೇಮ್ಸ್‍ಗೆಂದೇ ತಂದಿದ್ದ ನೀಲೀ ಶಾಟ್ರ್ಸ್ ಕೆಂಪು ಕೆಂಪಾಗಿತ್ತು... ಎಲ್ಲರೆದು ಏನಾಗಿಲ್ಲ ಎಂದನಾದರೂ, ವಾಷ್‍ರೂಮಿಗೆ ಹೋದವನು ಸುಹಾಸ್ ಹತ್ತಿರ ಐಸ್‍ಕ್ಯೂಬ್ ಹುಡ್ಕೋ ಮಗಾ ಎಂದಿದ್ದ. ಐಸ್ ಕ್ಯೂಬ್ ಇಟ್ಟು ಸುಧಾರಿಸಿಕೊಳ್ಳುತ್ತಾ, "ಏನೋ ನಿನ್ ಫ್ರೆಂಡು ಲೇ...ಎಲ್ ಬೋರ್ಡು" ಎಂದು ಅಸಮಾಧಾನ ತೊಡಿಕೊಂಡಿದ್ದ. "ಜೀನ್ಸ್ ಹಾಕ್ಕೋಂಡೇ ಆಡ್ಬೇಕ್ ಕಣೋ ನೆಕ್ಸ್ಟ್ ಟೈಂ ಇಂದಾ" ಎಂದು ಗೊಣಗಿದ್ದ. ಶತಭಿಷ ಸುಧಾರಿಸಿಕೊಂಡು ಬರುವಷ್ಟರಲ್ಲಿ ಎರಡೂ ಟೀಮಿನವರೂ ಹೊರಡಲು ಅನುವಾಗಿದ್ದರು. ಆಟ ಗೆದ್ದ ಖುಷಿಯಲ್ಲಿ ಅಕೌಂಟ್ಸ್ ಟೀಂನವರು ಕೂಗುತ್ತಿದ್ದರು. ಆರ್ ಆಂಡ್ ಡಿಯವರು ಶತಭಿಷ ನಿಧಾನವಾಗಿ ಕುಂಟುತ್ತಾ ಬರುವುದನ್ನು ನೋಡಿ ಮುಸಿಮುಸಿ ನಗುತ್ತಿದ್ದರು. ಶತಭಿಷ ಎಲ್ಲರೂ ಹೋದಮೇಲೆ ನಿಧಾನವಾಗಿ ಬಸ್ಸನ್ನೇರಿದ. ಮುಂದಿನ ಸೀಟಿನಲ್ಲೇ ಸೀಟು ಖಾಲಿಯಿದ್ದಿದ್ದು ನೋಡಿ ಕಲೀಗ್ಸ್‍ಗಳ ಸಂಗ ಬಿಟ್ಟು ಅಲ್ಲಿಯೇ ಕೂತ. ಬಸ್ಸ್ ಹೊರಟು ಗೇಟ್ ತಲುಪುವಷ್ಟರಲ್ಲಿ ಸುಹಾಸ್ ಡ್ರೈವರ್ ಬಳಿ ಹೋಗಿ ಬಸ್ ನಿಲ್ಲಿಸಲು ಹೇಳಿದ. ಚಲನಾ ಓಡೋಡಿ ಬಂದು ಬಸ್ ಹತ್ತಿದ್ದಳು. ಬೇರೆಲ್ಲೂ ಸೀಟು ಕಾಣದಾಗಿ ಶತಭಿಷನ ಪಕ್ಕದಲ್ಲೇ ಕೂತಳು..ಶತಭಿಷನಿಗೆ ಕೂತಲ್ಲಿಯೇ ಇರಿಸು-ಮುರಿಸಾಗುತ್ತಿತ್ತು. "ಆರ್ ಯು ಕಂಫರ್ಟೆಬಲ್? ಶುಡ್ ಐ ಮೂವ್ ಸಮ್‍ವೇರ್?" ಆಕೆ ಸಹಜವೆಂಬಂತೆ ಕೇಳಿದ್ದಳು. "ನೋ ನೋ ಇಟ್ಸ್ ಫೈನ್..ಬೀ ಸೀಟೆಡ್..." ಆತ ಹಲ್ಲು ಕಿಸಿಯುತ್ತಾ ಹೇಳಿದ್ದ. ಪಕ್ಕದಲ್ಲಿದ್ದ ಸುಹಾಸ ಬೇರೆ ಉತ್ತರವನ್ನೇ ಬಯಸಿದ್ದನೇನೋ...ಸುಹಾಸ್, ಐದು ನಿಮಿಷದ ನಂತರ ಲೈಟ್ ಕಣ್ಣಿಗೇ ಹೊಡೆಯುತ್ತಿದೆ ಎಂಬ ನೆಪ ಹೇಳಿ ಯಾರೂ ಇಲ್ಲದ ಕೊನೆಯ ಸೀಟಿನೆಡೆ ಆಕೆಯನ್ನು ಕರೆದೊಯ್ದ. ** ಶತಭಿಷ-ಸುಹಾಸ-ಚಲನಾ ತುಂಬಾ ಚೆನ್ನಾಗಿ ಜೆಲ್ ಆಗುತ್ತಿದ್ದರು. ಸುಹಾಸ ತುಂಬಾ ಚೆನ್ನಾಗಿ ಹಾಡುತ್ತಿದ್ದ. ಬೀಟ್ ಬಾಕ್ಸಿಂಗ್ ಮಾಡುವುದರಲ್ಲಿ ವಿಶೇಷ ಆಸಕ್ತಿಯಿತ್ತು. ರ್ಯಾಪ್ ಹಾಡುತ್ತಿದ್ದ. ಅದಕ್ಕೆ ಶತಭಿಷನೂ ಚೂರು ಪಾರು ಪದ ಸೇರಿಸುತ್ತಿದ್ದ. ಆದರೆ ಶತಭಿಷ ಮಾತ್ರ ಸುಹಾಸನಿಗೆ ತದ್ವಿರುದ್ಧ. ತಿಳಿ ಸಂಜೆಯಲ್ಲಿ ಭಾವಗೀತೆಗಳು, ಮಧ್ಯರಾತ್ರಿಯಲ್ಲಿ ಗಝಲ್‍ಗಳು ಅವನಿಗೆ ಬಹಳೇ ಇಷ್ಟವಾಗುತ್ತಿದ್ದವು. ಶತಭಿಷ ಎಲ್ಲವನ್ನೂ ಅಳೆದೂ ತೂಗಿ ಮಾಡಿದರೆ, ಸುಹಾಸನಿಗೆ ಭಯಂಕರ ಅರ್ಜೆಂಟು. ಸುಹಾಸ ಒಮ್ಮೆ ಆಕಾಶದಲ್ಲಿದ್ದರೆ ಮತ್ತೊಮ್ಮೆ ಪಾತಾಳದಲ್ಲಿರುತ್ತಿದ್ದ. ತಲೆ ಕೆಟ್ಟಾಗಲೆಲ್ಲಾ ಜೋರಾಗಿ ಗಾಡಿ ಓಡಿಸಿಕೊಂಡು ನಗರ ಪ್ರದಕ್ಷಿಣೆ ಹಾಕುತ್ತಿದ್ದ. ನಾಲ್ಕುಗಂಟೆಗೇ ನಂದಿಬೆಟ್ಟಕ್ಕೆ ಹೋಗಿರುತ್ತಿದ್ದ. ಚಲನಾಳಿಗೆ ಚಿತ್ರ ಬಿಡಿಸುವುದರಲ್ಲಿ ಅಭಿರುಚಿಯಿತ್ತು. ಕುಸುರಿ ಹಾಕುತ್ತಿದ್ದಳು. ಕಥಕ್ ಕಲಿತಿದ್ದಳು..ಫ್ಲೋರ್‍ಗೆ ಇಳಿದಾಗಲೆಲ್ಲಾ ಎಂಥವರ ಬಾಯಲ್ಲೂ ವಾ ವಾ ಎನ್ನಿಸಿಕೊಳ್ಳುವಷ್ಟು ಚೆನ್ನಾಗಿ ಮೂವ್ಸ್ ಮಾಡುತ್ತಿದ್ದಳು.. ಹೀಗಾಗಿ ವೀಕೆಂಡುಗಳಲ್ಲಿ ಪಾನಗೋಷ್ಠಿ-ಗಾನಗೋಷ್ಠಿಗಳು ಮಜವಾಗಿಯೇ ನಡೆಯುತ್ತಿದ್ದವು. ಸುಹಾಸನಿಗೆ ಚಲನಾ ತೀರಾ ಇಷ್ಟವಾಗಿದ್ದಳು. ಶತಭಿಷ ಆಕೆ ಸುಹಾಸನ ಹುಡುಗಿ ಎಂದುಕೊಂಡು ಸುಮ್ಮನಾಗಿದ್ದ. ಚಲನಾಳ ಜೊತೆಯೇ ಇದ್ದ ಹುಡುಗಿಯರಿಗೆ ಕಾಳು ಹಾಕುತ್ತಿದ್ದ. ಸುಹಾಸನಿಗೆ ರೇಸಿಂಗ್ ಬಗ್ಗೆ ದಿನೇ ದಿನೇ ಹುಚ್ಚು ಜಾಸ್ತಿಯಾಗುತ್ತಿತ್ತು. ಹಳೆಯ ಕಾರೊಂದನ್ನು ಕೊಂಡು ಅಲ್ಟರೇಷನ್ನ್ ಮಾಡಿಸಿದ್ದ. ಪ್ರತೀ ವರ್ಷ ರೇಸ್ ನೋಡಲು ಚಿಕ್ಕಮಗಳೂರಿಗೆ ಹೋಗಿ ಬರುತ್ತಿದ್ದ. ಹೀಗೆ ಒಂದು ಬಾರಿ ಶತಭಿಷ ಕಂಪನಿ ಕೆಲಸದ ಮೇಲೆ ಪಾಲ್ ಆಲ್ಟೋಗೆ ಹೋಗಿದ್ದ. ಮೂರು ತಿಂಗಳ ಕೆಲಸ. "ಇವತ್ತ್ ಅವಳಿಗೆ ಪ್ರಪೋಸ್ ಮಾಡಣಾ ಅಂತಿದೀನಿ ಮಗಾ..." ಸುಹಾಸ ಮೆಸ್ಸೇಜು ಹಾಕಿದ್ದ. "ಆಲ್ ದ ಬೆಸ್ಟ್" ಎಂದು ಕಳಿಸಿದ ಸಂದೇಶಕ್ಕೆ ಎರಡು ಮೂರು ದಿನವಾದರೂ ಉತ್ತರ ಬಂದಿರಲಿಲ್ಲ. ಪ್ರಾಜೆಕ್ಟ್ ಡಿಲೆವರಿಯ ಗಡಿಬಿಡಿಯಲ್ಲಿ ಶತಭಿಷನೂ ಅವರ ಬಗ್ಗೆ ಅಷ್ಟಾಗಿ ಗಮನಹರಿಸಿರಲಿಲ್ಲ. ಬಹುಷಃ ಒಂದ್ಚೂರು ಗಮನ ಹರಿಸಬೇಕಿತ್ತೇನೋ... ** "ಸುಹಾಸ್ ಮೆಟ್ ವಿತ್ ಆನ್ ಆಕ್ಸಿಡೆಂಟ್...ಕಂಡೀಷನ್ ಈಸ್ ಸೀರಿಯಸ್" ಕಲೀಗ್ ಒಬ್ಬರು ಮೆಸ್ಸೇಜ್ ಮಾಡಿದ್ದರು. ಚಲನಾಳ ಕಡೆಯಿಂದ ಉತ್ತರವಿರಲಿಲ್ಲ. ನಿಗದಿತ ಪ್ಲಾನ್‍ಗಿಂತ ನಾಲ್ಕು ದಿನ ಮುಂಚೆಯೇ ಶತಭಿಷ ಬೆಂಗಳೂರಿಗೆ ಲ್ಯಾಂಡ್ ಆಗಿದ್ದ. ದುರದೃಷ್ಟವಶಾತ್ ಸುಹಾಸ ಅದಾಗಲೆ ತೀರಿಕೊಂಡಿದ್ದ. ಆತನ ಕಾರ್ಯಕ್ಕೆ ಹೋದಾಗ ಯಾರೋ ಹೇಳುತ್ತಿದ್ದರು...ಆಕ್ಸಿಡೆಂಟ್ ಆದ ಕಾರಿನಲ್ಲಿ ರಿಂಗ್ ಒಂದು ಸಿಕ್ಕಿತ್ತಂತೆ. ತುಂಬಾ ಕುಡಿದಿದ್ದನಂತೆ. ಬ್ಯಾಲೆನ್ಸ್ ತಪ್ಪಿ ಡಿವೈಡರ್‍ಗೆ ಡಿಕ್ಕಿಯಾಗಿತ್ತಂತೆ...ಇನ್ನೂ ಏನೇನೋ...ಶತಭಿಷನಿಗೆ ಬಹುತೇಕ ಉತ್ತರ ಸಿಕ್ಕಂತಿತ್ತು...ಆದರೆ ಇನ್ನೊಂದು ಅನಾಹುತ ತಪ್ಪಿಸಬೇಕೆನ್ನುವುದೂ ನೆನಪಾಗಿತ್ತು. ** "ಏನೇ ಹಿಂಗ್ ಆಗಿದೀಯಾ ನೀನು? ಸತ್ತೋಗ್ತಿಯಾ ಕಣೆ ಹಿಂಗಾದ್ರೆ..." ಶತಭಿಷ ಚಲನಾಳ ಫ್ಲಾಟ್ ಹೋಗಿದ್ದ. ಆಕೆ ಏನೇನೋ ಮಾತಾಡುತ್ತಿದ್ದಳು...ಮಾತು ಮುಗಿಸುವುದರೊಳಗಾಗೇ ಅಳುತ್ತಿದ್ದಳು...ಕಣ್ಣಾಲಿಗಳು ತೇಲುತ್ತಿದ್ದವು... "ನೀನ್ ಕರೆಕ್ಟಾಗ್ ಊಟ-ನಿದ್ದೆ ಮಾಡ್ ಎಷ್ಟ್ ದಿನಾ ಆಯ್ತು?" ಶತಭಿಷ ಸಲುಗೆಯಿಂದಲೇ ಗದರಿಸಿದ. ಆಕೆ ಗೊತ್ತಿಲ್ಲ ಎಂಬಂತೇ ಕೈ ತಿರುಗಿಸಿ ಸೋಫಾದ ಮೇಲೆ ಬಿದ್ದುಕೊಂಡಳು. ಆಕೆಯನ್ನು ಒತ್ತಾಯದಿಂದ ತನ್ನ ಫ್ಲಾಟ್‍ಗೆ ಕರೆದೊಯ್ದ ಶತಭಿಷ, ಮರುದಿನ ವರ್ಕ್ ಫ್ರಾಂ ಹೋಮ್ ಮಾಡಿ, ಆಕೆಯನ್ನು ನಾರ್ಮಲ್ ಮೋಡ್‍ಗೆ ತಂದಿದ್ದ. ನಿಧಾನವಾಗಿ ಆ ದಿನ ಸಂಜೆ ಚಲನಾಳೇ ವಿಷಯ ತಿಳಿಸಿದ್ದಳು. ಸುಹಾಸ ಪ್ರಪೋಸ್ ಮಾಡಿದ್ದಾಗಿಯೂ, ತಾನು ಸಧ್ಯಕ್ಕೆ ಕಮಿಟ್ ಆಗುವ ಯೋಚನೆಯಲ್ಲಿ ಇಲ್ಲವೆಂದು ಹೇಳಿದ್ದಾಗಿಯೂ ತಿಳಿಸಿದಳು. ಅದಕ್ಕಾತ ಮರುದಿನ ಸಂಜೆ ಆಕೆಯ ಜೊತೆ ಜಗಳವಾಡಿದ್ದನಂತೆ... ಆಕೆ ಆತನನ್ನು ಚೀಪ್ ಎಂದೇನೋ ಬೈದಿದ್ದಳಂತೆ...ಅಷ್ಟೇ.....ಬಾರಿಗೆ ಹೋಗಿ ಚಿತ್ತ್ ಆದ ಸುಹಾಸ, ಎಣ್ಣೆಯೇಟಿನಲ್ಲಿ ಗಾಡಿ ಗುದ್ದಿದ್ದ....ಆಕೆಗೆ ವಿಷಯ ಗೊತ್ತಾಗಿದ್ದು ಎರಡು ದಿನದ ನಂತರವೇ....ಅಂದಿನಿಂದ ಅದೇನೋ ಗಿಲ್ಟ್ ಕಾಡಲು ಶುರುವಾಗಿ, ಫ್ಲಾಟ್ ಬಿಟ್ಟು ಆಕೆ ಹೋಗಿರಲಿಲ್ಲ... ಆ ದಿನ ರಾತ್ರಿ ಶತಭಿಷನೇ ಅಡಿಗೆ ಮಾಡಿದ್ದ. ಊಟ ಮುಗಿಸಿದ ಆಕೆ, ಪೆನ್ಸಿಲ್ ಇದ್ಯಾ ಎಂದು ಕೇಳಿದ್ದಳು....ತಡರಾತ್ರಿಯವರೆಗೂ ಚಿತ್ರವೊಂದನ್ನು ಗೀಚಿದ್ದಳು...ಪುಟ್ಟದೊಂದು ಮಗು...ಸುತ್ತಮುತ್ತಲೆಲ್ಲ ಬಗೆ-ಬಗೆ ಆಟಿಗೆ, ಸಿಹಿ ತಿಂಡಿ...ಆಕೆಯ ಕಣ್ಣಲ್ಲಿ ಮಾತ್ರ ನೀರಿತ್ತು.... "ದಿಸ್ ಈಸ್ ಮಾಸ್ಟರ್ ಪೀಸ್....." ಶತಭಿಷ ಉದ್ಘರಿಸಿದ್ದ... "ದಿಸ್ ವನ್ ಈಸ್ ಸ್ಪೆಷಲ್...." ಚಲನಾ ನಿಟ್ಟುಸಿರು ಬಿಟ್ಟು ಹೇಳಿದ್ದಳು... ** ಇಷ್ಟೆಲ್ಲ ಆದಬಳಿಕ ಚಲನಾ ಮೊದಲಿನ ಚಲನಾ ಆಗಿರಲಿಲ್ಲ. ಅಲ್ಲಿಯವರೆಗೆ ಎಲ್ಲರೊಳಗೊಬ್ಬಳು ಎಂಬಂತಿದ್ದ ಆಕೆ ಎಲ್ಲರೆದು ಮಿಂಚಲು ಪ್ರಯತ್ನಿಸುತ್ತಿದ್ದಳು. ದುಬಾರಿ ಬಟ್ಟೆ ಹಾಕುವುದು, ಐಶಾರಾಮಿ ರೆಸಾರ್ಟ್‍ಗಳಿಗೆ ತೆರಳುವುದು ಸಾಮಾನ್ಯವಾಯಿತು. ಜೊತೆಗೆ ನಿಧಾನವಾಗಿ ಟ್ರಾವೆಲಿಂಗ್ ಹುಚ್ಚೂ ಶುರುವಾಯಿತು. ವೀಕೆಂಡ್ ಬಂತೆಂದರೆ ಒಂದೋ ಪಾರ್ಟಿಯಲ್ಲಿರುತ್ತಿದ್ದಳು ಅಥವಾ ಟ್ರಾವೆಲ್ ಮಾಡುತ್ತಿದ್ದಳು. ಅಪರೂಪಕ್ಕೆಂಬಂತೆ ದಿನಗಟ್ಟಲೇ ಬಾಗಿಲು ಹಾಕಿಕೊಂಡು ಪೇಂಟ್-ಬ್ರಶ್ ಹಿಡಿದಿರುತ್ತಿದ್ದಳು. ಆರ್ಟ್ ಗ್ಯಾಲರಿಯಿಂದ ಕಲಾಕೃತಿಗಳನ್ನು ಕೊಂಡು ತರುತ್ತಿದ್ದಳು. ಇಷ್ಟವಾದವರ ಜೊತೆ ಓಡಾಡುತ್ತಿದ್ದಳು...ಕೆಲಸದ ಕಡೆ ಶ್ರದ್ಧೆ ಮೊದಲಿಗಿಂತ ಕಡಿಮೆಯಾಗಿತ್ತು...ಆದರೆ ಪ್ರೊಡಕ್ಟಿವಿಟಿಯಲ್ಲ...ಪರಿಣಾಮ ಪ್ರಮೋಷನ್ ಮಾತ್ರ ಪ್ರತೀ ವರುಷವೂ ತಪ್ಪದಂತೆ ಸಿಗುತ್ತಲಿತ್ತು. ಶತಭಿಷ ಇನ್ನೊಂದು ಟ್ರ್ಯಾಕ್‍ಗೆ ಹೋಗಿದ್ದ. ಸಾಫ್ಟ್‍ವೇರ್‍ನಲ್ಲಿ ದುಡಿದು ಕಲಿಯಲಿಕ್ಕೆಂದು ಮಾಡಿದ ಸಾಲವೆಲ್ಲ ತೀರಿದ ಮೇಲೆ, ಮತ್ತೆ ಸಾಲ ಮಾಡಲು ಮನಸ್ಸಾಗಲಿಲ್ಲ. ಐ.ಏ.ಎಸ್ ಮಾಡುತ್ತೇನೆಂದು ಕೋಚಿಂಗ್ ಹೋಗಲು ಶುರುಮಾಡಿದ್ದ. ಪ್ರಿಲಿಮ್ಸ್ ಕ್ಲಿಯರ್ ಆದ ಮೇಲೆ ಐ.ಟಿ ಕೆಲಸಕ್ಕೆ ಪೂರ್ಣವಾಗಿ ರಾಜೀನಾಮೆಯಿತ್ತಿದ್ದ. ** ಐ.ಟಿ ಕೆಲಸ ಬಿಟ್ಟು ರಗಳೆ, ಸಮಾಸ, ಷಟ್ಪದಿ ಓದುತ್ತಲಿದ್ದ ಶತಭಿಷ ಚಲನಾಳ ಡಬಲ್ ಬೆಡ್‍ರೂಮ್ ಫ್ಲಾಟ್‍ನಲ್ಲಿಯೇ ಇರತೊಡಗಿದ್ದ. ಆಕೆ ವಾರದಲ್ಲಿ ಐದು ದಿನ ಆಫೀಸಿಗೆ ಹೋಗುತ್ತಿದ್ದಳು. ಆಫೀಸ್ ಮುಗಿಸಿ ಪಾರ್ಟಿಗೋ, ಫಂಕ್ಷನ್‍ಗೋ ಅಥವಾ ಸುತ್ತಾಡಲೋ ಹೋಗಿರುತ್ತಿದ್ದಳು. ವೀಕೆಂಡ್ ಬಂತೆಂದರೆ ಬ್ಯಾಗ್ ಪ್ಯಾಕ್ ಮಾಡಿ ಊರೂರು ಸುತ್ತುತ್ತಿದ್ದಳು. ಶತಭಿಷ ಬೆಳಿಗ್ಗೆ ಐದಕ್ಕೆ ಎದ್ದಿರುತ್ತಿದ್ದ. ರಾತ್ರಿ ಹತ್ತಕ್ಕೆ ಸರಿಯಾಗಿ ಮಲಗುತ್ತಿದ್ದ. ರವಿವಾರ ಮನೆ ಕ್ಲೀನ್ ಮಾಡುತ್ತಿದ್ದ. ಅವರಿಬ್ಬರೂ ಮುಖಕ್ಕೆ ಮುಖ ಕೊಟ್ಟು ಮಾತನಾಡುವುದು ಬಹಳೇ ಅಪರೂಪವಾಗಿತ್ತು. ಆದರೆ ವಿರಾಮದಲ್ಲಿ ಸಿಕ್ಕಾಗ ತುಂಬಾ ಮಾತನಾಡುತ್ತಿದ್ದರು. ಶತಭಿಷನ ಖರ್ಚುಗಳನ್ನೆಲ್ಲ ಬಹುತೇಕ ಆಕೆಯೇ ನೋಡಿಕೊಳ್ಳುತ್ತಿದ್ದಳು. ಶತಭಿಷ ತಾನು ಆಕೆಯನ್ನು ನೋಡಿಕೊಳ್ಳುತ್ತಿದ್ದೇನೆಂಬ ಭ್ರಮೆಯಲ್ಲಿದ್ದ! ** ಒಮ್ಮೆ ಹೀಗಾಯಿತು....ಚಲನಾ ವೀಕೆಂಡಿನಲ್ಲಿ ಟ್ರಿಪ್‍ಗೆಂದು ಹೋದವಳು, ವಾರವಾದರೂ ವಾಪಸ್ ಬರಲಿಲ್ಲ. ಫೋನ್ ಮಾಡಿದರೆ ಸ್ವಿಚ್ ಆಫ್ ಆಗಿತ್ತು. ಶತಭಿಷನಿಗೆ ಗಾಬರಿಯಾಗಿತ್ತು.. ಆಕೆಯನ್ನು ಸಂಪರ್ಕಿಸುವುದಕ್ಕೆ ಏನೇನೋ ಸರ್ಕಸ್ ಮಾಡಿದ. ಆಫೀಸಿಗೆ ಕಾಲ್ ಮಾಡಿದಾಗ ಆಕೆ ವೆಕೇಷನ್ ತೆಗೆದುಕೊಂಡಿದ್ದಾಗಿ ತಿಳಿಯಿತು... ಮಧ್ಯರಾತ್ರಿ ಐಡಿಯಾವೊಂದು ನೆನಪಾಗಿ ಆಫೀಸ್ ಮೇಲ್ ಗೆ, ಮೆಸ್ಸೇಜ್ ಕಳುಹಿಸಿದ್ದ. "ಹಿಮಾಲಯದಲ್ಲಿದೀನಿ ಕಣೋ....ಫೋನ್ ಯೂಸ್ ಮಾಡ್ತಿಲ್ಲಾ...ಇನ್ನೊಂದ್ ಎರಡ್ ವೀಕ್ ಆಗಬಹುದು..." ಎರಡು ದಿನಗಳ ನಂತರ ಆಕೆ ರಿಪ್ಲೈ ಮಾಡಿದ್ದಳು. ಆತನಿಗೇಕೋ ತೀರಾ ಸಿಟ್ಟು ಬಂದಿತ್ತು... ** "ಯಾಕ್ ನಂಗ್ ಹೇಳ್ ಹೋಗಿಲ್ಲಾ ನೀ?" ಆತ ಆಕೆ ಬರುಬರುತ್ತಲೇ ಪ್ರಶ್ನಿಸಿದ್ದ. ಆಕೆಗೆ ಕೆಂಡದಂಥಾ ಜ್ವರ ಬಂದಿತ್ತು... "ನಾನ್ ಯಾಕ್ ನಿಂಗ್ ಹೇಳ್ಬೇಕು?" ಆಕೆ ವಾಪಸ್ ಪ್ರಶ್ನಿಸಿದ್ದಳು. "ಯಾಕಂದ್ರೆ?" ಆತ ಗಟ್ಟಿಯಾಗೇ ಕೇಳಿದ "ಯಾಕೇ? ಹೇಳು..." ಆಕೆ ಬಳಲಿದ್ದಳಷ್ಟೇ. ಸೋಲುವವಳಾಗಿರಲಿಲ್ಲ.. "ಏನಿಲ್ಲ..." ಅತ ಕೈಲಿದ್ದ ಕಪ್ ಅನ್ನು ಬಿಸಾಡಿದ್ದ. ಆಕೆಯೇ ಬಿಡಿಸಿದ್ದ ಚಿತ್ರವಿದ್ದ ಆ ಪಿಂಗಾಣಿಯ ಕಪ್ಪ್ ಚೂರು ಚೂರಾಗಿತ್ತು. ಅವರ ರಿಲೇಷನ್‍ನಂತೆಯೇ.... ** "ಐ ಆಮ್ ನಾಟ್ ಯುವರ್ ಗರ್ಲ್‍ಫ್ರೆಂಡ್.." ಆಕೆ ಮೀಟಿಂಗ್‍ನಲ್ಲಿ ಸ್ಪಷ್ಟವಾಗಿ ಹೇಳಿದ್ದಳು. "ಸೋ? ನಾನ್ ಏನೂ ಅಲ್ವಾ ನಿಂಗೇ?" ಆತ ಕೊನೆಯ ಅಸ್ತ್ರವೆಂಬಂತೇ ಕೇಳಿದ್ದ "ನೀನ್ ನನ್ ಫ್ರೆಂಡು...ತುಂಬಾ ಒಳ್ಳೇ ಫ್ರೆಂಡು...ಇಲ್ಲೇ ಇರು...ಓದು...ಮಲ್ಕೋ...ನಂಗೇನೂ ಪ್ರಾಬ್ಲಂ ಇಲ್ಲ...ಬಟ್ ನಾನ್ ಏನ್ ಮಾಡಬೇಕು ಮಾಡಬಾರದು ಅನ್ನೋದನ್ನ ಕಂಟ್ರೋಲ್ ಮಾಡ್ಬೇಡಾ..." ಆಕೆ ನೇರವಾಗೇ ಹೇಳಿದ್ದಳು... "ಫೈನ್...ಐ ವಿಲ್ ಲೀವ್ ಯು ಆಂಡ್ ಯುವರ್ ಹೌಸ್ ದೆನ್...." ಆತ ಸಿಟ್ಟಿನಿಂದಲೇ ಹೇಳಿದ್ದ... "ಓನ್ಲೀ ದಿಸ್ ಫ್ಲಾಟ್..." ಆಕೆ ಸರಿ ಮಾಡಿದ್ದಳು.... "ವೈ ನಾಟ್ ಯು?" ಆತನ ಕಣ್ಣಲ್ಲಿ ಮುಂಚು ಮೂಡಿತ್ತು. "ಐ ಆಮ್ ನಾಟ್ ಯುವರ್ಸ್....ಐ ನೆವರ್ ವಾಸ್.." ಆಕೆ ನಗುತ್ತಲೇ ಹೇಳಿದ್ದಳು... ಆತ ಅದೇಕೋ ಜೋರಾಗಿ ನಕ್ಕಿದ್ದ.... "ಬೈ ದ ಬೈ ವೇರ್ ವಿಲ್ ಯು ಗೊ? ಹೌ ಡು ಯು ಮ್ಯಾನೇಜ್ ?" ಆಕೆ ಸಹಜವಾಗೇ ಕೇಳಿದ್ದರೂ, ಈತನಿಗೇನೋ ಕುಹಕವೆನ್ನಿಸಿತ್ತು.... "ಅಂದ್ರೆ? ನನ್ ಹತ್ರ ದುಡ್ಡಿಲ್ಲಾ ಅಂತಾ ನಾ?" "ಎಕ್ಸಾಟ್ಲೀ...." "ವಿಲ್ ಸಿ...." "ಓ.ಕೆ...ಫೈನ್...ಟೇಕ್ ಕೇರ್..." ಆಕೆ ಅಲ್ಲಿಂದ ಎದ್ದಿದ್ದಳು. ** ಶತಭಿಷ ಚಲನೆಯ ಫ್ಲಾಟ್ ಖಾಲಿ ಮಾಡಿ ಊರಿಗೆ ಹೊರಟಿದ್ದ. ಅಲ್ಲಿಯೇ ಇದ್ದು ಮೇನ್ಸ್‍ಗೆ ಓದುವ ನಿರ್ಧಾರ ಮಾಡಿದ್ದ. ಆತ ಬೇಡವೆಂದರೂ ಚಲನಾಳೇ ಏ.ಸಿ ಟೆಕೇಟ್ ಬುಕ್ ಮಾಡಿದ್ದಳು. ಪ್ಯಾಕಿಂಗ್‍ಗೆ ಸಹಕರಿಸಿದಳು. ಅವನಿಷ್ಟದ ಅವರೇಕಾಳಿನ ಉಪ್ಪಿಟ್ಟು ಮಾಡಿ ಬಡಿಸಿದಳು. "ಇರೋ ಇಲ್ಲೇ " ಎನ್ನುತ್ತಾಳೇನೋ ಎಂದು ಈತ ನಿರೀಕ್ಷಿಸುತ್ತಿರುವಾಗಲೇ "ಎಲ್ಲಾ ತಗೊಂಡ್ಯಾ " ಎಂದು ಕೇಳಿದಳು...."ಯಾಹ್..." ಎಂದು ಆತ ಲಿವಿಂಗ್ ರೂಮಿಗೆ ಬಂದ.... "ಯಾಕೋ ಅಳು ಬರ್ತಿದೆ ಕಣೋ....ವಾಸ್ ಐ ರೂಡ್?" ಆಕೆಯ ಮುಖ ಸಣ್ಣಗಾಗಿತ್ತು... "ಹಂಗೇನಿಲ್ವೇ..." ಆತ ಆಕೆಯ ಭುಜದ ಮೇಲೆ ಕೈಯ್ಯಿಟ್ಟು ಸಮಾಧಾನ ಹೇಳಿದ್ದ. "ಇಲ್ಲೇ ಇದ್ದು ಬಿಡೋಣವಾ?" ಶತಭಿಷ ಮತ್ತೊಮ್ಮೆ ಯೋಚಿಸುತ್ತಿದ್ದ. "ಅಣ್ಣಾ..ಅಲ್ಲೇ ಇರಿ..ಬರ್ತಿವಿ" ಎಂದ ಚಲನಾ ಬ್ಯಾಗ್ ತೆಗೆದುಕೊಂಡು ಕೆಳಗಿಳಿದಳು. ಓಲಾ ಕ್ಯಾಬ್‍ನಲ್ಲೇ ಸ್ಟೇಷನ್‍ವರೆಗೂ ಬಂದಳು. ಇನ್ನೇನು ಟ್ರೇನ್ ಹೊರಡಲಿದೆ ಎನ್ನುವಾಗ ಆತ್ಮೀಯವಾಗಿ ಅಪ್ಪಿಕೊಂಡು, "ಬಾಯ್" ಎಂದಳು. ಆಕೆಯ ಕಣ್ಣಲ್ಲಿ ನೀರಿತ್ತು. ಶತಭಿಷನ ಮುಖದಲ್ಲಿ ಮಂದಹಾಸ. ಕಾರಣ ಇಬ್ಬರಿಗೂ ಗೊತ್ತಿರಲಿಲ್ಲ. ** ಊರಿಗೆ ಬಂದ ಶತಭಿಷನಿಗೆ ಒಂದು ವಿಷಯವನ್ನೂ ಪೂರ್ತಿಯಾಗಿ ಓದಲಾಗಲಿಲ್ಲ. ಕೂಡುಕುಟುಂಬವಾಗಿದ್ದ ಅವರ ಮನೆ ದಾಯಾದಿಗಳ ಭಿನ್ನಾಭಿಪ್ರಾಯಗಳಿಂದ ನಿತ್ಯ ರಣರಂಗವಾಗಿತ್ತು. ಕೆಲಸ ಬಿಟ್ಟು ಬಂದವನು ಎನ್ನುವ ಮೂದಲಿಕೆಯೂ ಆಗಾಗ ಈತನಿಗೆ ಸಲ್ಲುತ್ತಿತ್ತು. ಆ ವಾತಾವರಣದಲ್ಲಿ ಆತನಿಗೆ ಓದಿನ ಕಡೆ ಗಮನಹರಿಸಲಾಗಲಿಲ್ಲ. ಅಲ್ಲಿಯೇ ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಊಟ ತಿಂಡಿ ಮಾಡಿಕೊಂಡು ಇದ್ದವನಿಗೆ ಬುರುಡೆಯ ಮೇಲೆ ಕೊಟ್ಟಂತಾಗಿದ್ದು ಮೇನ್ಸ್ ಎಕ್ಸಾಮ್ ಬಂದಾಗಲೇ. ಎರಡನೇ ಬಾರಿಯೂ ಎಕ್ಸಾಂ ಕ್ಲಿಯರ್ ಮಾಡಲಾಗದ ಮೇಲೆ ಆತನಿಗೆ ಐ.ಏ.ಎಸ್ ಬಗ್ಗೆ ಆಸಕ್ತಿಯೇ ಹೊರಟು ಹೋಗಿತ್ತು. ಊರಿನಿಂದ ಹೊರ ಹೋಗಬೇಕು ಅನ್ನಿಸತೊಡಗಿತ್ತು. ಮತ್ತೆ ಐ.ಟಿಗೆ ಹೋಗಲು ಖಂಡಿತಾ ಮನಸ್ಸಿರಲಿಲ್ಲ. ಆಗೆಲ್ಲ ಖುಷಿ ಕೊಡುತ್ತಿದ್ದ ವಿಚಾರ ಒಂದೇ ಟ್ರೇಡಿಂಗ್...ಹವ್ಯಾಸವಾಗಿ ಶುರುವಾದ ಷೇರ್ ಮಾರ್ಕೇಟ್ ವ್ಯವಹಾರ, ಆತನಿಗೆ ಹುಚ್ಚು ಹಿಡಿಸಿತ್ತು...ಕೆಲಸ ಎನ್ನುವುದಕ್ಕಿಂತ ಹೆಚ್ಚಾಗಿ ಹುಚ್ಚಾಗಿತ್ತು...ಊರಿನಿಂದ ಒಂದಿಷ್ಟು ಹಣ ಪಡೆದು ಮತ್ತೆ ಬೆಂಗಳೂರಿನ ಬಸ್ಸು ಹತ್ತಿದ್ದ...ಹಣ ಹಾಕಿ, ಹಣ ಕಳೆದು, ಹಣ ಪಡೆದು, ನಿದ್ದೆಗೆಟ್ಟು ಹೇಗೋ ಒಂದು ಹಂತಕ್ಕೆ ಬಂದಿದ್ದ. ** "ನಿಂಗೂ ಅವಳಿಗೂ ಏನ್ ಸಂಬಂಧಾ?" ಸ್ಥಿರೆ ಕೇಳಿದಾಗ ಇದನ್ನೆಲ್ಲಾ ಹೇಳಬೇಕು ಎಂದು ಅವನಿಗೆ ಅನ್ನಿಸಿತ್ತು. ಆದರೆ ಇದು ಸರಿಯಾದ ಸಮಯವಲ್ಲ. ಆಕೆ ಮತ್ತು ಮಗುವಿನ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದುಕೊಂಡು, ಸಾಗ ಹಾಕಲೆಂದು ಏನೋ ಹಾರಿಕೆಯ ಉತ್ತರ ನೀಡಿದ. ನನ್ನನ್ನು ನಂಬು ಎಂದು ಸ್ಥಿರೆಯ ಕೈ ಹಿಡಿದು ಕೇಳಿಕೊಂಡ... ಅಷ್ಟರಲ್ಲಾಗಲೇ ಜೋರು ಮಾತು ನಡೆಯತ್ತಿರುವುದನ್ನು ಕೇಳಿ ಸ್ಥಿರೆಯ ತಾಯಿ ಅಡ್ಡ ಬಂದರು. ಆ ಬಗೆಗಿನ ಮಾತುಕತೆ ಅಲ್ಲಿಗೇ ನಿಂತಿತ್ತು. ಹೊರಡುವ ಮುನ್ನ ಸ್ಥಿರೆಗೆ ಶತಭಿಷ ಪ್ರಾಮಿಸ್ ಮಾಡಿದ್ದ. "ಆಫೀಸ್ ವಿಷಯ ಬಿಟ್ಟು ಚಲನಾ ಹತ್ರ ಏನೂ ಮಾತಾಡಲ್ಲ".... ಸ್ಥಿರೆ ಒಲ್ಲದ ಮನಸ್ಸಿನಿಂದ ಒಪ್ಪಿ, ಅವನನ್ನು ಕಳುಹಿಸಿಕೊಟ್ಟಿದ್ದಳು. ಆದರೆ ಆ ಪ್ರಾಮಿಸ್ ಬ್ರೇಕ್ ಆಗುವ ಸಂದರ್ಭ ಹತ್ತಿರ ಬಂದಿತ್ತು. ** ಎಂದಿನಂತೆ ರಾತ್ರಿ ಸ್ಥಿರೆ ಶತಭಿಷನಿಗೆ ವೀಡಿಯೋ ಕಾಲ್ ಮಾಡಿದ್ದಳು. ಶತಭಿಷ ಲಿವಿಂಗ್ ರೂಮಿನಿಂದ ಮಾತನಾಡುತ್ತಿದ್ದ. ಗುಡ್‍ನೈಟ್ ಹೇಳಿ ಫೋನ್ ಇಡಬೇಕು ಎನ್ನುವಷ್ಟರಲ್ಲಿ ಬೆಡ್‍ರೂಮ್ ಕಡೆ ಯಾರೋ ಓಡಾಡಿದಂತಾಯಿತು..."ಯಾರಾದ್ರೂ ಬಂದಿದಾರಾ?" ಸ್ಥಿರೆ ಕೇಳಿದ್ದಳು. "ಯಾರಿಲ್ಲ" ಎಂದು ಶತಭಿಷ ಹೇಳಿ ಮುಗಿಸುವಷ್ಟರಲ್ಲಿಯೇ, "ಹಾಯ್ ಸ್ಥಿರಾ" ಎಂಬ ಧ್ವನಿ ಮೊಳಗಿತ್ತು... ಶತಭಿಷ ಶಾಕ್‍ನಲ್ಲಿರುವಾಗಲೇ, ಆಕೆ ಫೋನ್ ಕಿತ್ತುಕೊಂಡು "ಹಾಯ್ ಸ್ಥಿರಾ? ಹೌ ಈಸ್ ಇಟ್ ಗೋಯಿಂಗ್ ಆನ್? ಆಲ್ ಗುಡ್" ಎಂದಿದ್ದಳು... ಸ್ಥಿರೆ ಮೂವತ್ತು ಸೆಕೆಂಡಿನ ನಂತರ ಫೋನ್ ಕಟ್ ಮಾಡಿದ್ದಳು. ಶತಭಿಷ ಸಿಟ್ಟಿನಿಂದ ಅರಚಿದ್ದ "ವಾಟ್ ಈಸ್ ದಿಸ್ ಚಲನಾ? ಹೇಳಿದ್ನಲ್ವಾ?" (ಮುಂದುವರೆಯುವುದು) -ಚಿನ್ಮಯ 5/2/2019

2 comments:

Srikanth Manjunath said...

ಮಕ್ಕಳಿಗೆ ಚಿತ್ರ ಜೋಡಿಸುವ ಆಟಿಕೆ ಇರುತ್ತದೆ
ಹಿಂದೆ ಒಂದು ಚಿತ್ರವಿದ್ದರೆ..ಮುಂದೆ ಒಂದು ಚಿತ್ರ...ಮಕ್ಕಳಿಗೆ ಯಾವ ಚಿತ್ರದ ಬಗ್ಗೆ ಗೊತ್ತಿರುತ್ತದೆ.. ಮಕ್ಕಳು..ತುಂಡು ತುಂಡಾದ ಚಿತ್ರಗಳ ಚೂರನ್ನು ಸೇರಿಸುತ್ತಾ ಹೋದ ಹಾಗೆ..ಒಂದು ರೂಪ ಮೂಡುತ್ತಾ ಹೋಗುತ್ತದೆ..

ಅದೇ ರೀತಿ ಪ್ರತಿ ಕಂತಿನಲ್ಲಿಯೂ ಕಥೆ ತೆರೆದುಕೊಳ್ಳುತ್ತಾ ಹೋಗುತ್ತಿದೆ..ತೆಗೆದುಕೊಳ್ಳುತ್ತಿರುವ ಆಯಾಮ ಕುತೂಹಲಕಾರಿಯಾಗಿದೆ...ಗುಟ್ಟು ಬಿಟ್ಟುಕೊಡದೆ..ಕತೆಯ ಓಟಕ್ಕೂ ಧಕ್ಕೆ ಬಾರದ ಹಾಗೆ ಇತಿಮಿತಿಯಲ್ಲೇ ಕತೆ ಬೆಳೆಸುವುದು ಸವಾಲಿನಕೆಲಸ...ಅದರಲ್ಲಿ ನೀವು ಗೆದ್ದಿದ್ದೀರಾ...ಸೊಗಸಾದ ತಿರುವಿನಲ್ಲಿ ಕಾರು ನಿಲ್ಲಿಸಿದ ಹಾಗೆ ಕತೆ ನಿಂತಿದೆ...ಮುಂದುವರೆಯಲಿ ಚಿನ್ಮಯ್...

ಚಿನ್ಮಯ ಭಟ್ said...

ಪ್ರೀತಿಯ ಶ್ರೀಕಾಂತಣ್ಣಾ...ನಿಮ್ಮ ಕಮೆಂಟುಗಳನ್ನು ಓದುವುದೇ ಒಂದು ಖುಶಿ..ನಿಮ್ಮ ಪ್ರೋತ್ಸಾಹ ಹಿಂಗೇ ಇರ್ಲಿ