Monday, February 4, 2019

ಸೆಕೆಂಡ್ ರೌಂಡ್

ಒಂದ್ ಮಗು ಮಾಡ್ಕೋ. ಜವಾಬ್ದಾರಿ ಬರತ್ತೆ. ಎಲ್ಲಾ ಸರಿ ಆಗತ್ತೆ".
ಸ್ಥಿರೆಗೇಕೋ ತಾಯಿಯ ಸಲಹೆ ಕನ್ವಿನ್ಸಿಂಗ್ ಅನ್ನಿಸಲಿಲ್ಲ. ರಾತ್ರಿ ಊರಿನಿಂದ ವಾಪಸ್ಸ್ ಹೊರಡಬೇಕು ಎನ್ನುವಾಗ ಸ್ಥಿರೆ ತಾಯಿಯ ಬಳಿ ಚಲನಾಳ ವಿಚಾರವನ್ನು ಮತ್ತೆ ಹೇಳಿದ್ದಳು. ಅವತ್ತಿನವರೆಗೂ ತಾಯಿ ಏನನ್ನೂ ಗಟ್ಟಿಯಾಗಿ ಹೇಳಿರಲಿಲ್ಲ. ಅವತ್ತು ಹೇಳಿದ್ದಳು.
ಹಬ್ಬಕ್ಕೆಂದು ಊರಿಗೆ ಹೋದಾಗ ಇದರ ಜೊತೆಗೆ ಇನ್ನೆರಡು ವಿಶಿಷ್ಟ ಘಟನೆಗಳು ನಡೆದವು. ಮೊದಲನೇಯದು, ಶತಭಿಷನ ಸಾಹಿತ್ಯಿಕ-ಆಧ್ಯಾತ್ಮಿಕ ಪ್ರಪಂಚದ ಪರಿಚಯ ಸ್ಥಿರೆಯ ಮನೆಯವರಿಗಾದದ್ದು. ಕಾರಂತರ ಕಾದಂಬರಿ, ಮಾಸ್ತಿ-ಅನಂತಮೂರ್ತಿಗಳ ಕತೆಗಳು, ಮೈಸೂರು ಮಲ್ಲಿಗೆ, ನಾಕುತಂತಿ, ರತ್ನನ್ ಪದಗಳು, ಗದುಗಿನ ಭಾರತ, ಮಂಕುತಿಮ್ಮನ ಕಗ್ಗದ ಹಾಡುವಿಕೆ, ಭಜಗೋವಿಂದಂ, ಭಗವದ್ಗೀತೆಯಲ್ಲಿನ ಜಿಜ್ಞಾಸೆ, ಹೀಗೆ ಸ್ಥಿರೆಗೆ ಶತಭಿಷನ ಇನ್ನೊಂದು ಪ್ರಪಂಚದ ಪರಿಚಯವಾಗಿತ್ತು. ಸ್ಥಿರೆಯ ತಂದೆ ತಾಯಿಗಂತೂ ಅಳಿಯನ ಬಗ್ಗೆ ವಿಶೇಷ ಅಭಿಮಾನ ಮೂಡಿತ್ತು.
ಎರಡನೇಯದ್ದು, ಸ್ಥಿರೆಯ ತಂದೆ ಹೇಳಿದ ವಿಚಾರ. "ಲೆಕ್ಚರಿಂಗ್ ಮಾಡೋ ಹಂಗಿದ್ರೆ ನಮ್ಮೂರ್ ಇಂಜಿನಿಯರಿಂಗ್ ಕಾಲೇಜ್‍ನಲ್ಲೇ ಮಾಡ್ಬೋದಲ್ಲಾ?" ಮಗ ವಿದೇಶಕ್ಕೆ ಹೋದಾಗಿನಿಂದ ಸ್ಥಿರೆಯ ತಂದೆಗೆ ಮಗಳ ಮೇಲೆ ಪ್ರೀತಿ ದುಪ್ಪಟ್ಟಾಗಿತ್ತು. ಖಾಸಾ ದೋಸ್ತ್‍ಗಳಾಗಿದ್ದ ಬೋರ್ಡ್ ಮೆಂಬರ್‍ಗಳ ಇನ್‍ಫ್ಲುಯೆನ್ಸ್ ಬಳಸಿ, ಅಳಿಯನಿಗೊಂದು ಕೆಲಸ ಕೊಡಿಸಿ ಮಗಳ ಸಂಸಾರವನ್ನು ಕಾಲಬುಡದಲ್ಲೇ ಇಟ್ಟುಕೊಳ್ಳುವ ಆಸೆ ಅವರದ್ದಾಗಿತ್ತು. ಶತಭಿಷ ಆ ಆಫರ್‍ಅನ್ನು ವಿನಯಪೂರ್ವಕವಾಗಿ ತಿರಸ್ಕರಿಸಿದ್ದ. ಶತಭಿಷನ ಈ ನಿರ್ಧಾರಕ್ಕೆ ಸ್ಥಿರೆಯ ಸಮ್ಮತಿಯಿತ್ತು.
ಅಂತೂ ಹಿರಿಯರಿಗೆ ನಮಸ್ಕರಿಸಿ, ರಾತ್ರಿಯ ಸ್ಲೀಪರ್ ಬಸ್ಸಿನಲ್ಲಿ ಗಂಡ-ಹೆಂಡತಿ ಬೆಂಗಳೂರಿಗೆ ಬಂದಿಳಿದಿದ್ದರು. ಸ್ನಾನ ಮಾಡದೇ ಆಫೀಸಿಗೆ ಹೋಗಿದ್ದರು.
**
ಸಂಜೆ ಲಿಫ್ಟಿನಲ್ಲಿ ಚಲನಾ ಎದುರಾದಳು. ಮತ್ತದೇ ಚಿತ್ರ-ವಿಚಿತ್ರ ವೇಷ. ಆದರೆ ಆತ್ಮೀಯವಾದ ನಗು. "ಹಾಯ್" ಎಂದು ಮಾತನಾಡಿಸಿದಳು. ಸ್ಥಿರೆ "ಹಾಯ್ " ಎಂದು ನಕ್ಕಳಷ್ಟೇ. ಮಾತುಕತೆಯೇನೂ ನಡೆಯಲಿಲ್ಲ. ಲಿಫ್ಟ ದಾಟಿ ತಮ್ಮ ತಮ್ಮ ಮನೆಯ ಕಡೆ ಹೋಗುವಾಗ ಅಳೆದೂ ತೂಗಿ ಸ್ಥಿರೆಯೇ ಮಾತನಾಡಿದಳು. "ಊರಿಂದ ಪ್ರಸಾದ ತಂದಿದೀನಿ. ತಗೊಂಡ್ ಹೋಗಿ ಪ್ಲೀಸ್..." ಅದು ಬರೀ ಪ್ರಸಾದ ಕೊಡಲೆಂದಷ್ಟೇ ಕೊಟ್ಟ ಆಮಂತ್ರಣವಾಗಿರಲಿಲ್ಲ.
"ಅಹ್...ಬಿಟ್ ಬಿಸಿ ಟುಡೇ.. ಮೇ ಬಿ ಟುಮಾರ್ರೋ?" ಚಲನಾ ಸಿಗರೇಟ್ ಹಚ್ಚುತ್ತಾ ಕೇಳಿದ್ದಳು.
ಸ್ಥಿರೆ "ಓ.ಕೆ ..ಶ್ಯುರ್ " ಎಂದಳಾದರೂ ಗಾಂಚಾಲಿ ಎಂದು ಬೈದುಕೊಂಡು ಮನೆಯ ಬಾಗಿಲು ಹಾಕಿದಳು.
ಶತಭಿಷ ಅದಾಗಲೇ ಮನೆಯಲ್ಲಿದ್ದ. ಬಾಲಿಂಜರ್ ಬ್ಯಾಂಡ್‍ಅನ್ನು ಅನಲೈಸ್ ಮಾಡುತ್ತಾ ಶೇರಿನ ರೇಟು ಇದಕ್ಕಿಂತ ಕಡಿಮೆ ಹೋಗಲಾರದು ಎಂದು ಲೆಕ್ಕ ಹಾಕುತ್ತಿದ್ದ. ಕಿಚನ್‍ಗೆ ಹೋದ ಸ್ಥಿರೆ, ಅದಾಗಲೇ ಹಾಲು ಕಾಯಿಸಿಟ್ಟಿದ್ದನ್ನು ನೋಡಿ ಖುಷಿಯಾದಳು. "ಕಾಫಿ?" ಎಂದಳಾದರೂ ಶತಭಿಷ "ನೋ" ಎಂದು ಮತ್ತೆ ಗ್ರಾಫುಗಳಲ್ಲಿ ಮುಳುಗಿಹೋದ. ಸ್ಥಿರೆಯ ಗಮನ ಲಿವಿಂಗ್ ರೂಮ್‍ನಲ್ಲಿಟ್ಟ ಚಿತ್ರದ ಕಡೆ ಹೋಯಿತು. ಚಲನಾಳಿಂದ ಕೊಂಡು ತಂದ ಚಿತ್ರವಾ? ತಲೆ ಗಿರ್ರ್ ಎಂದಿತು. "ಇದ್ಯಾಕ್ ಇಲ್ಲ್ ಇಟ್ಟಿದಿಯಾ?" ಜೋರಾಗಿ ಅರಚಬೇಕೆನ್ನಿಸಿತು. ಶತಭಿಷ ಟ್ರೆಂಡ್ ಅನಲೈಸ್ ಮಾಡುವಾಗ ಸಣ್ಣ ಡಿಸ್ಟರ್ಬನ್ಸ್‍ಗೂ ತೀವ್ರವಾಗಿ ಸಿಟ್ಟಾಗುತ್ತಿದ್ದ. ಅಲ್ಲಿರಲು ಸಾಧ್ಯವಾಗದೇ ಆಕೆ ಬಾಲ್ಕನಿಗೆ ಹೋಗಿ ಊರಿಗೆ ಫೋನು ಮಾಡಿದಳು. ಅಪ್ಪನ ಆರೋಗ್ಯ ವಿಚಾರಿಸಿದಳು.
**
"ಊಟಕ್ಕೇನೂ ಮಾಡ್ಬೇಡಾ...ಜೋಳದ್ ರೊಟ್ಟಿ ಪಲ್ಯಾ ಪಾರ್ಸೆಲ್ ತರ್ತೀನಿ.." ಶತಭಿಷ ಏಳೂವರೆಗೇ ಫೋನ್ ಮಾಡಿ ಹೇಳಿದ್ದ. ಸ್ಥಿರೆ ಹಾಗೇ ವಿರಾಮವಾಗಿ ಕುಳಿತಿದ್ದಳು.
"ಐ ಆಮ್ ನಾಟ್ ಡಿಸ್ಟರ್ಬಿಂಗ್ ಯು ಪೀಪಲ್ ರೈಟ್?" ಚಲನಾ ಕರೆ ಮಾಡಿದ್ದಳು. ಸ್ಥಿರೆಯ ಆಮಂತ್ರಣ ಮನ್ನಿಸಿ ಮನೆಗೂ ಬಂದಳು. ಅವತ್ತು ಸೀರೆಯನ್ನುಟ್ಟಿದ್ದಳು. ಸ್ಥಿರೆಗೆ ಅವಳನ್ನು ಅರ್ಥ ಮಾಡಿಕೊಳ್ಳುವುದು ಸಾಧ್ಯವೇ ಇಲ್ಲ ಅನ್ನಿಸಿತು. ವಾಡಿಕೆಯ ಮಾತುಕತೆ ಚಹಾ ಎಲ್ಲ ಆದ ಮೇಲೆ ಸ್ಥಿರೆಗೆ ಕೇಳಲೇಬೇಕೆನ್ನಿಸಿತು "ಹೌ ಡು ಯು ನೌ ಮೈ ಹಸ್ಬಂಡ್?"
ಚಲನಾ ಆ ಪ್ರಶ್ನೆಯನ್ನೇ ನಿರೀಕ್ಷಿಸುತ್ತಿದ್ದಂತೆ ಮುಗುಳು ನಕ್ಕಳು.
"ಐ ಥಿಂಕ್ ಬೆಟರ್ ಕ್ವಶ್ಚನ್ ವುಡ್ ಬಿ ಹೌ ಬೆಟರ್ ಐ ನೌ ಹಿಮ್. ಅಲ್ವಾ?" ಸ್ಥಿರೆಯ ಕಡೆ ದಿಟ್ಟಿಸಿದಳು.
ಸ್ಥಿರೆಗೆ ಸಿಟ್ಟು-ಗೊಂದಲ-ಪಾಪಪ್ರಜ್ಞೆ ಒಟ್ಟೊಟ್ಟಿಗೆ ಅನುಭವಕ್ಕೆ ಬಂದವು. ರಿಪ್ಲೈ ಮಾಡಲು ಗೊತ್ತಾಗಲಿಲ್ಲ.
"ಡೋಂಟ್ ವರಿ. ಐ ಆಮ್ ಲಿವಿಂಗ್ ದಿಸ್ ಸ್ಟುಪಿಡ್ ಸಿಟಿ. ಯು ವೋಂಟ್ ಸೀ ಮಿ ಅಗೇನ್" ಸ್ಥಿರೆಯ ಭುಜದ ಮೇಲೆ ಕೈಯ್ಯಿಟ್ಟು ಚಲನಾ ಹೊರಟು ಹೋದಳು.
ಶತಭಿಷ ತಂದಿದ್ದ ರೊಟ್ಟಿ ಪಲ್ಯ ಅವತ್ತೇಕೋ ಸ್ಥಿರೆಗೆ ಬಹಳೇ ಇಷ್ಟವಾಯಿತು. ಲಿವಿಂಗ್ ರೂಮಿನಲ್ಲಿದ್ದ ಫೋಟೋ ವಿಚಾರ ಕೇಳಲು ಮನಸ್ಸಾಗಲೇ ಇಲ್ಲ.
**
ಅವತ್ತು ಬೆಳಿಗ್ಗೆಯಿಂದ ಚಲನಾಳ ಮನೆ ಆಕ್ಟಿವ್ ಆಗಿತ್ತು. ಪ್ಯಾಕಿಂಗ್‍ನವರು, ಓ.ಎಲ್.ಎಕ್ಸ್‍ನವರು, ಆಕೆಯ ಗಂಡ-ತಾಯಿ ಮತ್ತವರ ನೆಂಟರು ಹೀಗೆ ಹಲವಾರು ಜನ ಬಂದು ಹೋಗುತ್ತಿದ್ದರು. ಎಲ್ಲಾ ಪ್ಯಾಕ್ ಆದಮೇಲೆ ಚಲನಾ ಸ್ಥಿರೆಯ ಮನೆಯ ಬೆಲ್ ರಿಂಗ್ ಮಾಡಿದಳು. ಶತಭಿಷ ಬಾಗಿಲು ತೆರೆದ.
ಚಲನಾ ನೇರವಾಗಿ ಕಿಚನ್‍ಗೆ ಹೋಗಿ, "ಕ್ಯಾನ್ ಐ ಗೆಟ್ ಅ ಬಾಟಲ್ ವಾಟರ್?" ಎಂದಳು.
ಸ್ಥಿರಾ ಅಲ್ಲಿರಲಿಲ್ಲ. ಸ್ನಾನಕ್ಕೆ ಹೋಗಿದ್ದಳು.
"ತಗೋ" ಶತಭಿಷ ಕುಳಿತಲ್ಲಿಂದಲೇ ಹೇಳಿದ್ದ.
"ಡ್ರಾಯಿಂಗ್ ಬೇಡ್ವಾ?" ಶತಭಿಷ ಆಶ್ವರ್ಯವೆಂಬಂತೆ ಮಾತನಾಡಿದ್ದ. "ಕೊಟ್ರೆ ತಗೊಂಡ್ ಹೋಗ್ತಿನಿ. ಬಟ್ ನನ್ ಹತ್ರಾ ದುಡ್ಡಿಲ್ಲಾ.." ಚಲನಾ ಮುಖಕ್ಕೆ ಮುಖ ಕೊಟ್ಟು ಮಾತನಾಡಿದ್ದಳು.
ಶತಭಿಷ ಆಕೆಯನ್ನು ಮುಖವಿಟ್ಟು ನೋಡಲೇ ಇಲ್ಲ.
ಎದ್ದು ಫೋಟೋ ಫ್ರೇಮನ್ನು ಪ್ಯಾಕ್ ಮಾಡಿ, ಕುರ್ಚಿಯ ಮೇಲಿಟ್ಟ.
ಚಲನಾ ಬಾತ್‍ರೂಮ್ ಬಳಿ ಬಂದು, ಸ್ಥಿರೆಗೆ ಕೂಗಿ ಹೇಳಿದಳು. "ಐ ಆಮ್ ಲೀವಿಂಗ್. ಬಾಯ್...". ಸ್ಥಿರೆ ಒಂದೈದು ನಿಮಿಷ ಕಾಯಲು ಹೇಳಿದಳಾದರೂ "ಗೆಟ್ಟಿಂಗ್ ಲೇಟ್...ಟೇಕ್ ಕೇರ್" ಎಂದು ಚಲನಾ ಹೊರಟು ಹೋದಳು.
ಶತಭಿಷ ಆಕೆ ಪ್ಯಾಕಿಂಗ್ ಟ್ರಕ್‍ನಲ್ಲಿಯೇ ಕೂತು ಒಂಟಿಯಾಗಿ ಹೊರಡುವುದನ್ನು ಬಾಲ್ಕನಿಯಿಂದ ನೋಡುತ್ತಿದ್ದ. ಅಪರೂಪಕ್ಕೆ ಸೇದಿದ್ದ ಆತನ ಸಿಗರೇಟಿನ ಹೊಗೆ ಬಾತ್‍ರೂಮ್ ತಲುಪಿತ್ತು. "ಹೊರ್ಟೊದ್ಲಾ?" ಸ್ಥಿರೆ ಹೊರಬಂದು ಕೇಳಿದಳು. ಶತಭಿಷ "ಹಾಂ" ಎಂದ. ಇನ್ನೊಂದು ಸಿಗರೇಟು ಹಚ್ಚಿದ. "ಫೋಟೋ ಫ್ರೇಮ್ ಎಲ್ಲೋಯ್ತು?" ಸ್ಥಿರೆ ಟಕ್ಕನೆ ಗಮನಿಸಿದ್ದಳು. "ಹೋಯ್ತಲ್ಲ...ಬಿಡು ಈಗ" ಶತಭಿಷ ಮುಖ ತಿರುಗಿಸಿಯೇ ಉತ್ತರಿಸಿದ್ದ. ಸ್ಥಿರೆಗೇಕೋ ಸಿಟ್ಟು ಬಂದಂತಿತ್ತು.
**
ಶತಭಿಷ ಯಾವುದೋ ಕಂಪನಿಯ ಬ್ಯಾಲೆನ್ಸ್ ಶೀಟ್ ನೋಡುತ್ತಿದ್ದ. "ನಿಂಗೂ ಅವಳಿಗೂ ಏನ್ ಸಂಬಂಧ?" ಸ್ಥಿರೆ ಚಹಾ ಕುಡಿಯುತ್ತಾ ಕೇಳಿದ್ದಳು.
"ಏಯ್..ನಾಟ್ ನೌ..ವಿ ವಿಲ್ ಟಾಕ್ ಸಮ್ ಡೇ" ಶತಭಿಷ ಕನ್ನಡಕ ಹಾಕಿಕೊಳ್ಳುತ್ತಾ ಹೇಳಿದ್ದ.
"ಆಗಲ್ಲ...ಇಷ್ಟ್ ದಿನ ತಡ್ಕೊಂಡಿದೀನಿ...ಹೇಳು" ಆಕೆ ಜಗಳವಾಡಲು ಸಿದ್ಧವಾಗಿದ್ದಳು.
"ನಿಂಗೂ ವಿನಯ್‍ಗೂ ಏನ್ ಸಂಬಂಧ ಅಂತಾ ನಾನ್ ಕೇಳಿದೀನಾ?" ಶತಭಿಷ ಉಡಾಫೆಯಿಂದ ಕೇಳಿದ.
"ಅದ್ ಬೇರೆ ಇದ್ ಬೇರೆ...ನಿಂಗೆಲ್ಲಾ ಹೇಳಿದೀನಿ ನಾನು... ಅದ್ ಏನಾಯ್ತ್ ಅಂದ್ರೆ...." ಆಕೆ ಒಂದೈದು ನಿಮಿಷ ಹಳೆಯ ಟೇಪನ್ನೇ ಮತ್ತೆ ಓಡಿಸಿದ್ದಳು.
"ಹೂಂ..." ಎನ್ನುತ್ತಾ ಆತ ಕಂಪನಿಯ ಷೇರ್ ವ್ಯಾಲ್ಯು ಬಿದ್ದಿದ್ದೇಕೆ ಎಂದು ತಲೆ ಕೆಡಿಸಿಕೊಳ್ಳುತ್ತಿದ್ದ.
"ನಂದ್ ಮುಗೀತು...ಹೇಳು..ನೀನ್ ಈಗ" ಆಕೆ ಮತ್ತೆ ಕೇಳತೊಡಗಿದ್ದಳು.
"ನನ್ ಪಾಸ್ಟ್ ಬಗ್ಗೆ ತಿಳ್ಕೋಳ್ಳೋದ್ ಮುಖ್ಯನಾ? ಅಥವಾ ಸಧ್ಯ ನಾನ್ ಫ್ರೆಸೆಂಟ್ ಹೆಂಗಿದೀನೋ ಹಂಗೆ ಒಪ್ಕೊಳ್ಳೋದ್ ಮುಖ್ಯನಾ?" ಶತಭಿಷ ಚಲನಾಳ ವಿಚಾರ ಮಾತಾಡಲು ನಿರಾಕರಿಸಿದ್ದ.
"ಅರ್ಥ ಆಗಿಲ್ಲ" ಆಕೆ ತನ್ನ ಪ್ರಯತ್ನ ಬಿಡಲಿಲ್ಲ.
"ನಾನ್ ಏನೇನ್ ಮಾಡಿದೀನಿ ಅನ್ನೋದ್ ಇಂಪಾರ್ಟೆಂಟ್ ಅಲ್ಲಾ ಕಣೆ. ಪಾಸ್ಟ್ ಈಸ್ ಪಾಸ್ಟ್. ಅದನ್ನಾ ಕೆದ್ಕೋದ್ರಿಂದ ಏನೂ ಯೂಸ್ ಇಲ್ಲ. ಪ್ರೆಸೆಂಟ್ ನಾನ್ ಇರೋದ್ರಲ್ಲಿ ನಿಂಗ್ ಏನಾದ್ರೂ ಪ್ರಾಬ್ಲಂ ಇದ್ರೆ ಹೇಳು...ಈ ಮನೆ ಚಿಕ್ಕದಾಯ್ತಾ? ನಾನ್ ಸರಿ ಇಲ್ವಾ? ನಿಂಗ್ ಟೈಮ್ ಕೊಡ್ತಿಲ್ವಾ? ದುಡ್ಡ್ ಕಳ್ಕೊಂಡಿದೀನಿ ನಿಜಾ...ಬಟ್ ಅದೊಂದ್ ಬ್ಯಾಡ್ ಪ್ಯಾಚ್ ಅಷ್ಟೆ...ಆಸ್ ಫರ್ ದಿಸ್ ಕಂಪನಿ ಪ್ರೊಫೈಲ್ .." ಆತ ಷೇರ್ ಮಾರ್ಕೆಟ್ ಮತ್ತು ಟ್ರೆಂಡಿಂಗ್ ಬಗ್ಗೆ ಪ್ರೆಡಿಕ್ಷನ್ ಶುರು ಮಾಡಿದ್ದ.
ಆತನ ಲೆಕ್ಚರ್ ಶುರುವಾದರೆ ಅರ್ಧ ತಾಸಿನ ಕಡಿಮೆ ನಿಲ್ಲುತ್ತಿರಲಿಲ್ಲ. ಸ್ಥಿರೆಗೆ ಅಮ್ಮನ ಕಾಲ್ ಬಂದಿತ್ತು.
"ನಾನ್ ಹೇಳಿದ್ ವಿಚಾರ ಯೋಚ್ನೆ ಮಾಡಿದ್ರಾ? ಇನ್ನೂ ಎಸ್ಟ್ ದಿನ ಅಂತಾ? ನಿಂಗೂ ಮೂವತ್ತ್ ಆಗ್ತಾ ಬಂತು..." ತಾಯಿಯ ಧ್ವನಿ ಗಟ್ಟಿಯಾಗುತ್ತಲೇ ಇತ್ತು. ಸ್ಥಿರೆಯ ಬಳಿ ಉತ್ತರವಿರಲಿಲ್ಲ.
**
"ಐ ವಾಂಟ್ ಯು ಇನ್ ಮೈ ಟೀಮ್..." ಶತಭಿಷನ ಹಳೆಯ ಬಾಸ್ ಒಬ್ಬರು ಕರೆ ಮಾಡಿ ಒತ್ತಾಯಿಸುತ್ತಿದ್ದರು. ಅವರು ಫಂಡ್ ಮ್ಯಾನೇಜರ್ ಆಗಿ ನೇಮಕಗೊಂಡಿದ್ದು ಮತ್ತು ಶತಭಿಷನಿಗೆ ಆಯಕಟ್ಟಿನ ಸೀನಿಯರ್ ಪೋಸ್ಟ್‍ವೊಂದನ್ನು ಆಫರ್ ಮಾಡಿದ್ದರು. ಶತಭಿಷ ಒಪ್ಪಿಕೊಳ್ಳಲೋ ಬಿಡಲೋ ಎಂಬ ಗೊಂದಲದಲ್ಲಿದ್ದ.
"ನಿಂಗ್ ಆ ಕೆಲ್ಸಾನೇ ಮಾಡ್ಬೇಕು ಅನ್ಸಿದ್ರೆ ಮಾಡು" ಸ್ಥಿರೆ ಸಹಜವೆಂಬಂತೆ ಹೇಳಿದ್ದಳು.
"ಡಿಸೆಂಬರ್‍ಗೆ ಇನ್ನ್ ಮೂರ್ ತಿಂಗ್ಳ್ ಮಾತ್ರ ಇದೆ. ದೆನ್ ಡಿಲೆವರಿ. ಓಡಾಟ. ಮಗು ನೋಡ್ಕೊಳೋದು....ಎಷ್ಟ್ ಟೈಂ ಕೊಡಕ್ ಆಗತ್ತೆ ಗೊತ್ತಿಲ್ಲಾ" ಆತ ಗೊಂದಲದಲ್ಲಿದ್ದ. "ಹೆಂಗೋ ಮ್ಯಾನೇಜ್ ಆಗತ್ತೆ ಕಣೋ...ಅಮ್ಮ ಹೆಲ್ಪ್ ಮಾಡ್ತಾಳೆ... ಐ ನೌ ಯು ಕ್ಯಾನ್ ಮ್ಯಾನೇಜ್ ಇಟ್..." ಆಕೆಗೆ ಆತನ ಬಗ್ಗೆ ನಂಬಿಕೆಯಿತ್ತು. ಚಲನಾ ಎಂಬ ಕಾರ್ಮೋಡ ದೂರವಾಗಿ , ಅವಳ ಬಾಳಲ್ಲಿ ಆನಂದದ ಮೊಳಕೆ ಮೂಡುವ ಸಮಯ ಒದಗಿಬಂದಿತ್ತು. ಆಕೆಯ ತಾಯಿ ಅದಾಗಲೇ ಮಗಳ ಬಾಣಂತನದ ಸಿದ್ಧತೆ ಶುರುವಿಟ್ಟುಕೊಂಡಿದ್ದರು.
**
ಶತಭಿಷ ಮತ್ತೆ ಷೇರ್ ಮಾರ್ಕೆಟ್ ಪ್ರಪಂಚಕ್ಕೆ ಎಂಟ್ರಿ ಕೊಟ್ಟಿದ್ದ. ಬಹುತೇಕ ಎರಡು ವರುಷಗಳ ಕಾಲ ಅಜ್ಞಾತವಾಸದಲ್ಲಿದ್ದವನನ್ನು ಕೆಲವರು ಹೊಸಬ ಎಂದೇ ಭಾವಿಸಿದ್ದರು. ಇನ್ನೂ ಕೆಲವರು, ಈತ ಮುಳುಗಿಯೇ ಹೋದ ಎಂದ ನಂಬಿದ್ದರು. ಆತನ ಕೈಕೆಳಗೆ ಕೆಲಸ ಮಾಡಿದ್ದ ಒಬ್ಬಿಬ್ಬರು ಆಗ ಸಮಕ್ಕೆ ಬಂದಿದ್ದರು. ಏನೋ ಸಾಧಿಸಿದವರಂತೆ ಪೋಸು ಕೊಡುತ್ತಿದ್ದರು. ಶತಭಿಷನಿಗೂ ಟಚ್ ತಪ್ಪಿದಂತಾಗಿತ್ತು. ಒಂದಿಷ್ಟು ಅವಮಾನ, ಮೂದಲಿಕೆ, ಹಿಯಾಳಿಸುವುದು, ಮತ್ತೆ ಬಂದ್ನಾ ಎಂದು ಅಣಕಿಸುವುದು ಸಾಮಾನ್ಯವಾಗಿತ್ತು. ಜೊತೆಗೆ ಶತಭಿಷ ಮೀಟಿಂಗ್‍ಗಳಲ್ಲಿ ತುಂಬಾನೇ ಹಠಮಾರಿಯಂತೆ ತೋರುತ್ತಿದ್ದುದರಿಂದ ಆತನ ಬಗ್ಗೆ ಗಾಳಿ ಸುದ್ದಿಗಳಿಗೇನೂ ಕೊರತೆ ಇರಲಿಲ್ಲ. ಇವುಗಳಿಗೆಲ್ಲಾ ಬ್ರೇಕ್ ಬಿದ್ದಿದ್ದು ಶತಭಿಷನ ಸಲಹೆಯ ಅನುಸಾರ ಷೇರಿನ ಮೌಲ್ಯವೊಂದು ಒಂದೇ ದಿನಕ್ಕೆ 14% ಜಿಗಿದು ಜಾಕ್‍ಪಾಟ್ ಹೊಡೆದಾಗ. ಅಂದಿನಿಂದ ಶತಭಿಷನ ಗೋಲ್ಡನ್ ರನ್ ಮತ್ತೆ ಶುರುವಾಗಿತ್ತು. ರಾತ್ರಿಯಿಡೀ ನಿದ್ದೆಗೆಟ್ಟು ಕಂಪನಿಯ ವ್ಯಾಲ್ಯು ಎಸ್ಟಿಮೇಟ್ ಮಾಡುವುದು ಸಾಮಾನ್ಯವಾಗತೊಡಗಿತ್ತು.
ಸ್ಥಿರೆ ಕೆಲಸ ಬಿಟ್ಟಿದ್ದಳು. ಅಮ್ಮನ ಸಲಹೆಯ ಅನುಸಾರ ತವರು ಮನೆಯಲ್ಲಿ ಸಣ್ಣ-ಪುಟ್ಟ ಕೆಲಸ ಮಾಡುತ್ತಿದ್ದಳು. ಶತಭಿಷ ವೀಕೆಂಡಿನಲ್ಲೆಲ್ಲ ಬಹುತೇಕ ಅಲ್ಲಿಗೆ ಬರುತ್ತಿದ್ದ. ದಿನಾ ರಾತ್ರಿ ಸ್ಥಿರೆಗೆ ಕರೆ ಮಾಡುತ್ತಿದ್ದ. ಆಕೆಗೆ ಅರ್ಥವಾಗುತ್ತದೆಯೋ ಇಲ್ಲವೋ ಎಂಬುದನ್ನೂ ಯೋಚಿಸದೇ ಆಫೀಸಿನ ಆಗು-ಹೋಗುಗಳನ್ನು ಹೇಳುತ್ತಿದ್ದ. ಆರೋಗ್ಯ ವಿಚಾರಿಸುತ್ತಿದ್ದ. ಕನಸುಗಳನ್ನು ಹಂಚಿಕೊಳ್ಳುತ್ತಿದ್ದ. ದಿನಾ ರಾತ್ರಿ ಆತನ ಜೊತೆ ಮಾತನಾಡಿದ ಮೇಲೆ ಸ್ಥಿರೆಗೆ ಏನೋ ಒಂದು ರೀತಿಯ ನೆಮ್ಮದಿ ಸಿಗುತ್ತಿತ್ತು. ದುರದೃಷ್ಟವಶಾತ್ ಆ ನೆಮ್ಮದಿ ಕೆಡುವ ಸಮಯ ಹತ್ತಿರವಾಗಿತ್ತು.!
**
ಅಂದು ಸೋಮವಾರ...ಶತಭಿಷ ಆಫೀಸಿನಲ್ಲಿ ವಿರಾಮವಾಗಿ ಚಹಾ ಕುಡಿಯುತ್ತಲಿದ್ದ. ಗಂಟೇ ಅದಾಗಲೇ ಎಂಟೂವರೆಯಾಗಿತ್ತು. ಆತನ ಬಾಸ್ ಕರೆ ಮಾಡಿ ಕ್ಯಾಬಿನ್‍ಗೆ ಬರಹೇಳಿದರು. ಆತ ಇನ್ನೇನು ಮನೆಗೆ ಹೊರಡುವವನಿದ್ದ. ಏನಿರಬಹುದು ಎಂದು ಯೋಚನೆ ಮಾಡುತ್ತಾ ಆತ ಕ್ಯಾಬಿನ್ ಬಾಗಿಲು ತೆರೆದಾಗ ಅಲ್ಲೊಂದು ಅಚ್ಚರಿ ಕಾದಿತ್ತು. ಚಲನಾ!
"ಮೀಟ್ ಅವರ್ ನ್ಯೂ ಸಿ.ಏ" ಎಂದು ಬಾಸ್ ಪರಿಚಯ ಮಾಡಿಸಿದರು. ವಾಡಿಕೆಗೆಂದು ಕೈ ಕುಲುಕುತ್ತಾ ಇಬ್ಬರೂ ಅಪರಿಚಿತರಂತೇ ಪರಿಚಯ ಮಾಡಿಕೊಂಡು. ನಂತರ ರೋಲ್‍ಗಳ ಬಗ್ಗೆ ಚಿಕ್ಕದೊಂದು ಬ್ರೀಫ್ ಕೊಟ್ಟು ಇಬ್ಬರೂ ಅಲ್ಲಿಂದ ಹೊರಬಿದ್ದರು.
"ಹೌ ಈಸ್ ಸ್ಥಿರಾ?" ಆಕೆ ಮಾತು ಶುರುಮಾಡಿದ್ದಳು.
"ಗುಡ್ ಗುಡ್..ಎಕ್ಸ್‍ಪೆಕ್ಟಿಂಗ್ ಅ ಬೇಬಿ ಇನ್ ಡಿಸೆಂಬರ್ " ಆತ ನಿರ್ಲಿಪ್ತನಾಗಿ ಉತ್ತರಿಸಿದ್ದ.
"ಏಯ್...ನೈಸ್...ಕಂಗ್ರಾಟ್ಸ್...ಯಾಕ್ ಅದನ್ನಾ ಅಷ್ಟ್ ಸೀರಿಯಸ್ ಹೇಳ್ತಿದೀಯಾ? ಅಪ್ಪ ಆಗಕ್ ಇಷ್ಟ ಇಲ್ವಾ?" ಆಕೆ ಎಂದಿನಂತೆ ಚುಡಾಯಿಸಿದ್ದಳು...
"ಹಂಗೆನಿಲ್ವೇ..." ಆತ ಒತ್ತಾಯದಿಂದ ನಕ್ಕಿದ್ದ.
"ನೀನ್ ಮತ್ತೆ ಆಫೀಸ್ ಜಾಯಿನ್ ಆಗ್ತಿಯಾ ಅಂತಾ ಅಂದ್ಕೊಂಡಿರ್ಲಿಲ್ಲ..." ಶತಭಿಷನೇ ಮಾತು ಮುಂದುವರೆಸಿದ.
"ಯಾ..ಏನೋ ..ಒನ್ಸ್ ಯು ಆರ್ ಬ್ಯಾಂಗಳೂರಿಯನ್...ಯು ಆರ್ ಅಲ್ವೇಸ್ ಬ್ಯಾಂಗಳೂರಿಯನ್.." ಆಕೆ ತನ್ನ ಮಾತಿಗೆ ತಾನೇ ನಕ್ಕಿದ್ದಳು.
"ಓ.ಕೆ ...ವೆಲ್ ಕಮ್ ಆನ್ ಬೋರ್ಡ್...ಸೀಯು" ಎಂದೆನ್ನುತ್ತಾ ಆತ ಹೊರಡಲು ಅನುವಾದ...
"ಮನೆಗ್ ಕರ್ಯಲ್ವೇನೋ?" ಆಕೆ ಕಾಲೇಜು ಹುಡುಗಿಯಂತೆ ಹಲ್ಲು ಕಿಸಿದಿದ್ದಳು..
"ಸ್ವಲ್ಪ ಆದ್ರೂ ಮಾನ ಮರ್ಯಾದೆ ಇಟ್ಕೋ...ಮದ್ವೆ ಆಗಿದೆ ಇಬ್ರಿಗೂ...." ಆತನ ಮುಖ ಕೆಂಪಾಗಿತ್ತು.. ಕಾರಿನ ವೇಗ ಮಿತಿ ಮೀರಿತ್ತು..ಕಾರು ನಿಯಂತ್ರಣ ತಪ್ಪಿ ಡಿವೈಡರ್ ಒಂದಕ್ಕೆ ಗುದ್ದಿತ್ತು.. ಆತ ಸುಧಾರಿಸಿಕೊಂಡು ನಾಳೆ ಟೋ ಮಾಡಿಸಿದರಾಯ್ತು ಎಂದುಕೊಂಡು ಹಾಗೇಯೇ ಮನೆಗೆ ಬಂದು ಬಿದ್ದುಕೊಂಡ. ಇಷ್ಟರ ಮಧ್ಯೆ ಸ್ಥಿರೆಯ ಕಾಲ್‍ಅನ್ನು ಕಟ್ ಮಾಡಲಾಗಿತ್ತು. ಮತ್ತೆ ಕಾಲ್ ಮಾಡಿದಾಗ, ಆತ ಕಾರ್ ಗುದ್ದಿದ ವಿಷಯವನ್ನಷ್ಟೇ ಹೇಳಿದ. ಅಷ್ಟಕ್ಕೇ ಆಕೆ ಗಾಬರಿಯಾದದ್ದನ್ನು ನೋಡಿ, ಚಲನಾಳ ವಿಚಾರವನ್ನು ಇನ್ಯಾವತ್ತಾದರೂ ಹೇಳೋಣವೆಂದು ಸುಮ್ಮನಾದ. ಹೇಳಿದ್ದರೇ ಒಳ್ಳೆಯದಿತ್ತೇನೋ!
***
ಆ ವೀಕೆಂಡಿನಲ್ಲಿ ಶತಭಿಷ ಮಾವನ ಮನೆಗೆ ಹೋಗಿದ್ದ. ಹೊಸ ಕೆಲಸದ ಸಂಬಳದಲ್ಲಿ ಸ್ವೀಟು-ಬಟ್ಟೆ ಖರೀದಿಸಿ ತಂದಿದ್ದ. ಹಳೆಯ ಕಾರನ್ನು ಬದಲಾಯಿಸಿ ಹೊಸ ಕಾರೊಂದನ್ನು ತಂದಿದ್ದ. ಬೇಬೀ ಸೀಟ್ ಅನ್ನು ಹಾಕಿಸುವಾ ಎಂದನಾದರೂ, ತಡ್ಯೋ ಇನ್ನೂ ಟೈಂ ಇದೆ ಎಂದು ಸ್ಥಿರೆ ಹೇಳಿದ ಮೇಲೆ ಸುಮ್ಮನಾಗಿದ್ದ. ಆದರೆ ಚಲನಾಳ ವಿಚಾರ ಮಾತ್ರ ಸ್ಥಿರೆಯ ಬಳಿ ಹೇಳಲು ಮನಸ್ಸಾಗಲಿಲ್ಲ.
ಅತ್ತೆ-ಹೆಂಡತಿಯ ಒತ್ತಾಯದ ಮೇರೆಗೆ ಅದ್ಯಾವುದೋ ಪೂಜೆಯ ಕಾರಣದಿಂದ ಸೋಮವಾರವೂ ರಜೆ ಹಾಕಬೇಕಾಗಿ ಬಂತು. ಆತ ಹಿತ್ತಿಲಿನಲ್ಲೆಲ್ಲೋ ಮಾವನ ಜೊತೆ ಮಾತನಾಡುತ್ತಿರುವಾಗ ಫೋನು ರಿಂಗಣಿಸಿತು. ಸಾಮಾನ್ಯವಾಗಿ ಸ್ಥಿರೆ ಆತನ ಫೋನ್‍ಕಾಲ್‍ಅನ್ನು ರಿಸೀವ್ ಮಾಡುತ್ತಿರಲಿಲ್ಲ. ಅವತ್ತೇಕೋ ಫೋನ್ ತೆಗೆದುಕೊಂಡಳು. ಫೋನ್ ಸ್ಕ್ರೀನಿನಲ್ಲಿ ಚಲನಾ ಆಫೀಸ್ ಎಂದು ತೋರಿಸುತ್ತಿತ್ತು...
ಆಕೆ ಗಾಬರಿಯಾದರೂ ತೋರಿಸಿಕೊಳ್ಳದೇ, ಶತಭಿಷನನ್ನು ಕೂಗಿ ಕರೆದಳು. ಆತ ಫೋನ್ ನೋಡಿ ಅವಾಕ್ಕಾದ. ಆಕೆ ಮಾತನಾಡು ಎಂಬಂತೆ ಇಷಾರೆಯಿತ್ತಳು. ಆತ ಲೌಡ್ ಸ್ಪೀಕರ್ ಆನ್ ಮಾಡಿ ಮಾತನಾಡಿದ.
ಆಕೆ ಆಫೀಸಿನ ವಿಚಾರ ಬಿಟ್ಟು ಒಂದಕ್ಷರವನ್ನೂ ಎಕ್ಸ್‍ಟ್ರಾ ಕೇಳಲಿಲ್ಲ. ಈತನೂ ಎಷ್ಟಕ್ಕೆ ಬೇಕೋ ಅಷ್ಟಕ್ಕೇ ಉತ್ತರಿಸಿದ್ದ.
ಆದರೆ ಸ್ಥಿರೆಯನ್ನು ಸಂಭಾಳಿಸುವುದು ಮಾತ್ರ ಶತಭಿಷನಿಗೆ ಅಂದು ಕಷ್ಟವಾಗಿತ್ತು.
ಆಕೆ ಪೂರ್ತಿ ಕತೆ ಹೇಳಲೇಬೇಕೆಂದು ಒತ್ತಾಯಿಸುತ್ತಿದ್ದಳು.
(ನಿಮ್ಮ ಅನಿಸಿಕೆಗಳನ್ನು ಆಧರಿಸಿ, ಕತೆ ಮುಂದುವರೆಯಬಹುದು)
-ಚಿನ್ಮಯ
04/02/2019

3 comments:

Srikanth Manjunath said...

ಸರ ಪಟಾಕಿ ಹಚ್ಚಿದಂತೆ.. ಒಂದು ಪಟಾಕಿಗೆ ಕಿಡಿ ತಗುಲಿದರೆ ಸಾಕು.. ಇಡೀ ಸರ ಹತ್ತಿಉರಿವಂತೆ . .ಸಾಗುತ್ತಿದೆ ಕಥೆ.. ಒಳ್ಳೆಯ ವೇಗವಿದೆ.. ಒಳ್ಳೆಯ ತಿರುವಿದೆ.. ಬಂಧಗಳನ್ನು ಹೆಣೆದು ಮಾಲೆ ಮಾಡುವ ಕಸುಬುದಾರಿಕೆ ನಿಮ್ಮ ಬರಹದಲ್ಲಿದೆ..

ಇಷ್ಟವಾಯಿತು ಚಿನ್ಮಯ್.. ಮುಂದುವರೆಸಿ.. ಓದುವ

ಚಿನ್ಮಯ ಭಟ್ said...

ಧನ್ಯವಾದ ಶ್ರೀಕಾಂತಣ್ಣಾ...ನಿಮ್ಮ ಅನಿಸಿಕೆಗಳನ್ನು ಓದುವುದೇ ಒಂದು ಖುಷಿ...ಬರೆಯುವೆ...ಧನ್ಯವಾದ ಎಂದಿನಂತೆ ಪ್ರೋತ್ಸಾಹಿಸಿದ್ದಕ್ಕಾಗಿ ;)

prashasti said...

ಎರಡನೇ ಭಾಗವೂ ಸೂಪರ್ರು.. ಈಗ ಕಥಾನಾಯಕ ನೀನಲ್ಲ ಅನ್ನೋ ಭರವಸೆ ಬತ್ತಾ ಇದ್ದು. ಮೂರನೆ ಭಾಗದಲ್ಲಿ ಅದು ಸುಳ್ಳಾಗ್ತಾ ನೋಡನ ;-)