ಅಂದು ಸಂಜೆ ಮಗು ಮಲಗಿತ್ತು. ಸ್ಥಿರೆ ಆಫೀಸಿನಲ್ಲಿದ್ದಳು. ಮನೆಯಲ್ಲಿದ್ದು ಶತಭಿಷನೊಬ್ಬನೇ..ಚಲನಾ ಮನೆಗೆ ಬಂದಳು. ಆದರೆ ಒಬ್ಬಳೇ ಬಂದಿರಲಿಲ್ಲ. ಜೊತೆಗೆ ಒಬ್ಬ ಅಪರಿಚಿತನೂ ಬಂದಿದ್ದ.
"ಬನ್ನಿ...ಒಳಗೆ...ಕೂತ್ಕೊಳಿ..." ಶತಭಿಷ ಆತ್ಮೀಯವಾಗಿ ಆಮಂತ್ರಿಸಿದ..
"ವಿನಯ್ ಅಂತಾ...ನಮ್ಮ್ ಓನರ್‍ಗೆ ತುಂಬಾ ಬೇಕಾದೋರು...ನಿಮ್ಮ್ ಜೊತೆ ಏನೋ ಮಾತಾಡ್ಬೇಕು ಅಂತಿದ್ರು " ಎಂದು ಚಲನಾ ಪರಿಚಯಿಸಿದಳು...
"ಓಹ್...ಐ ಸಿ...ಹಲ್ಲೋ ವಿನಯ್" ಹಸ್ತಲಾಘವ ನಡೆದಿತ್ತು. ಶತಭಿಷನಿಗೆ ಆತನನ್ನು ಎಲ್ಲೋ ನೋಡಿದ ಹಾಗಿತ್ತು...ಎಲ್ಲಿ ಎಂದು ನೆನಪಾಗಲಿಲ್ಲ...
"ನಿಮ್ಮ್ ಬಗ್ಗೆ ತುಂಬಾ ಕೇಳಿದೀನಿ...ತುಂಬಾ ಅಭಿಮಾನ ನಿಮ್ಮ್ ಕಂಡ್ರೆ" ವಿನಯ್ ಸುಳ್ಳುನಗೆಯಾಡಿದ್ದ.
"ಥ್ಯಾಂಕ್ಯೂ..." ಶತಭಿಷನಿಗೆಲ್ಲೋ ಅಪಾಯದ ಕರೆಗಂಟೆ ಕೇಳಿಸುತ್ತಿತ್ತು.....
"ಏನ್ ಮಾಡ್ತಿದಾನೆ ಚಿಂಟು?ಮಲಗಿದಾನಾ?" ಚಲನಾ ಪ್ರಶ್ನಿಸಿದ್ದಳು...
"ಹಾಂ ರೂಮ್‍ನಲ್ಲ್ ಇದಾನೆ..." ಎಂದವನೇ, ಅತಿಥಿಗಳ ಉಪಚಾರಕ್ಕೆಂದು ಫ್ರಿಡ್ಜ್ ಬಾಗಿಲು ತೆರೆದ. ಚಲನಾ ಜ್ಯೂಸ್ ಕುಡಿದರೆ, ಅವರಿಬ್ಬರೂ ಸ್ಕಾಚ್ ಹೀರಿದರು. ವಿನಯ್ ಷೋಕೇಸಿನಲ್ಲಿ ಫೋಟೋ ನೋಡುತ್ತಾ ನಿಂತಿದ್ದ. ಶತಭಿಷನ ಬಳಿ ಏನೋ ಹೇಳಬೇಕೆನ್ನುವಷ್ಟರಲ್ಲಿ ಮಗು ಎದ್ದು ಹಠ ಮಾಡ ತೊಡಗಿತ್ತು. ಶತಭಿಷ ಮಗುವನ್ನು ಸುಧಾರಿಸಿ "ಚಲನಾ ಆಂಟಿ ಬಂದಿದಾರೆ ನೋಡು " ಎಂದು ನೆನಪಿಸಿದ. ಚಲನಾ, ಬ್ಯಾಗಿನಿಂದ ಚಾಕಲೇಟ್ ತೆಗೆದಳು. ಮಗುವಿನ ಜೊತೆ ಬಾಲ್ಕನಿಯಲ್ಲಿ ಆಟವಾಡಲು ಹೋದಳು. ಶತಭಿಷ ವಿನಯ್ ಜೊತೆ ಮಾತುಕತೆ ಆರಂಭಿಸಿದ.
"ಐ ವರ್ಕ್ ಫಾರ್ ಗವರ್ನ್‍ಮೆಂಟ್....ನಿಮ್ಮ್ ಕೇಸ್ ಹೆಲ್ಡ್‍ಅಪ್ ಆಗಿರೋದ್ ಗೊತ್ತಾಯ್ತು.. ಹೆಲ್ಪ್ ಮಾಡಣಾ ಅಂತಾ ಬಂದೆ...." ವಿನಯ್ ಗಂಭೀರವಾಗಿಯೇ ಹೇಳಿದ್ದ.
"ಓಹ್ ಐ.ಸಿ.. ಯು ವರ್ಕ್ ಫಾರ್?" ಎಂದು ಶತಭಿಷ ಪ್ರಶ್ನಿಸಿದ.
"ಎಲ್ಲಾ ಕಡೆ ಲಿಂಕ್ ಇದೆ...ಏನ್ ಕೆಲ್ಸಾ ಬೇಕಾದ್ರೂ ಮಾಡಸ್ಕೊಡ್ತೀವಿ...ಏನೋ ನಮ್ಮೋರು...ಚೂರ್ ಹೆಲ್ಪ್ ಮಾಡಣಾ ಅಂತಾ ಬಂದ್ವಿ...." ಸ್ವಲ್ಪ ದರ್ಪದಿಂದಲೇ ಹೇಳಿದ್ದ.
"ಓಹ್...ಗಾಟ್...ಇಟ್...ಬಟ್, ಥ್ಯಾಂಕ್ಯು ಫಾರ್ ದ ಆಫರ್...ನಂಗ್ ಆ ಥರ ವ್ಯವಹಾರ ಮಾಡಕ್ ಇಷ್ಟ ಇಲ್ಲ...." ಶತಭಿಷ ಖಂಡತುಂಡವಾಗಿ ಹೇಳಿದ್ದ.
"ಅಯ್ಯೋ...ನಾನೆಲ್ಲಿ ವ್ಯವಹಾರದ ವಿಷ್ಯ ಮಾತಾಡ್ದೆ...ಏನೋ...ನಿಮ್ಮ್ ಫರ್ಮ್ ಫೈಲ್ ಕ್ಲಿಯರ್ ಮಾಡಿಸ್ಕೊಡಣಾ ಅಂತಾ ಬಂದೆ ಅಷ್ಟೇ....ನಿಮಗ್ ಬ್ಯಾಡಾ ಬಿಡಿ...ನಮ್ಗೇನು..." ಆತ ಮತ್ತೊಂದು ರೀತಿಯ ಬ್ಲಾಕ್‍ಮೇಲ್ ಶುರುಮಾಡಿದ್ದ...
"ಐ ಆಮ್ ನಾಟ್ ಇಂಟರೆಸ್ಟೆಡ್...." ಶತಭಿಷ ಗ್ಲಾಸುಗಳನ್ನು ಎತ್ತಿಕೊಳ್ಳಲು ಹೊರಟ
"ಅನುಭವಿಸ್ತೀನಿ ಅಂದ್ರೆ ಅನುಭವಿಸಿ....ಆಫರ್ ಇರತ್ತೆ ನಮ್ಮ್ ಕಡೆಯಿಂದ ಯಾವಾಗ್ಲೂ..ಯಾಕಂದ್ರೆ ನೀವು ನಮಗ್ ತುಂಬಾ ಬೇಕಾದೋರಿಗೆ ಬೇಕಾದೋರು..ನಿಮಗ್ ಹೆಲ್ಪ್ ಮಾಡಿದ್ರೆ ಅವರಿಗ್ ಹೆಲ್ಪ್ ಮಾಡಿದಂಗೆ...." ಆತನ ಮಾತು ಮುಂದುವರೆದಿತ್ತು....ಶತಭಿಷ ಮನೆಯ ಬಾಗಿಲು ತೆರೆದ....ಅರ್ಥವಾಯಿತು ಎಂಬಂತೇ ಆಗಂತುಕ ಹೊರಡುವ ತಯಾರಿ ನಡೆಸಿದ..
"ಚಲನಾ ಅವ್ರೇ...ಚೂರ್ ಕೆಲ್ಸಾ ಇದೆ...ಥ್ಯಾಂಕ್ಸ್ ಫಾರ್ ದ ಕನೆಕ್ಟ್...." ಚಲನೆಗೆ ಬಾಯ್ ಹೇಳಿ ಆತ ಹೊರಡುವುದರಲ್ಲಿದ್ದ....ಚಲನಾ ತಾನೂ ಬರುವುದಾಗಿ ಹೇಳಿದಳು...ಆತ ಕೆಳಗಡೆ ಕಾರ್ ಸಮೀಪ ಕಾಯುವುದಾಗಿ ಹೇಳಿ ಹೊರಟು ಹೋದ..
ಸ್ಥಿರೆ ಕೆಲಸ ಮುಗಿಸಿ ಹಿಂದಿರುಗುತ್ತಿದ್ದಳು. ದೇಹದಲ್ಲಿ ಆಹಾಸವಿತ್ತು...ತಲೆ ಧಿಮಿಧಿಮಿ ಎನ್ನುತ್ತಿತ್ತು...ಎಡಗಾಲು ಎಡವಿತ್ತು... ಹುಬ್ಬು ಹಾರುತ್ತಿತ್ತು...ಒಳ್ಳೆಯದಾ ಕೆಟ್ಟದಾ? ಅಕೆಗೂ ಸ್ವಷ್ಟವಿರಲಿಲ್ಲ...ಮಗು ಎದ್ಬಿಡ್ತೇನೋ ಎಂದು ಗಡಿಬಿಡಿಯಿಂದ ಲಿಫ್ಟ್ ಕಡೆ ಹೆಜ್ಜೆ ಹಾಕುತ್ತಿದ್ದಳು. ಲಿಫ್ಟಿನ ಬಟನ್ ಒತ್ತಿ ಕಾಯುತ್ತಿರುವಾಗಲೇ ಹಿಂದುಗಡೆಯಿಂದ ಧ್ವನಿಯೊಂದು ಕೇಳಿಸಿತ್ತು...
"ಹಲೋ ಮೇಡಮ್...ಚೆನಾಗಿದೀರಾ?" ಸ್ಥಿರೆ ಅದನ್ನು ನಿರೀಕ್ಷಿಸಿರಲಿಲ್ಲ...
"ಏಯ್...ವಿನಯ್...ಹೆಂಗಿದಿಯೋ ? ಅಪ್ಪ ಅಮ್ಮಾ ಎಲ್ಲಾ?" ಸ್ಥಿರೆ ಎಂದಿನ ಸಲಿಗೆಯಲ್ಲಿ ಕೇಳಿದ್ದಳು..ಬಹುಷಃ ಇಬ್ಬರೂ ಹಿಂದಿನ ಕಹಿ ಮರೆತಿದ್ದರು..
"ನಂಗೇನೇ...ಚೆನಾಗೇ ಇದೀನಿ...ಅಪ್ಪ-ಅಮ್ಮನೂ ಅರಾಮು....ನೀ ಹೆಂಗಿದೀಯಾ?" ಆತ ಸ್ವಲ್ಪ ಗತ್ತಿನಿಂದಲೇ ಪ್ರಶ್ನಿಸಿದ್ದ.
"ನಾನ್ ಸೂಪರ್...ಬಾ ಮನೆಗ್ ಹೋಗ್ ಮಾತಾಡಣಾ..." ಆಕೆ ಆಮಂತ್ರಣ ಕೊಟ್ಟಿದ್ದಳು....
"ಇಲ್ಲಾ ಚೂರ್ ಕೆಲ್ಸಾ ಇದೆ...ಇಲ್ಲೇ ಕ್ಲೈಂಟ್ ಒಬ್ರ್ ಮನೆಗ್ ಬಂದಿದ್ದೆ...ಹೊರಟೆ..." ಆತ ಅರೆಬರೆ ಸತ್ಯ ಹೇಳಿದ್ದ.
"ಓಹ್ ಹೌದಾ... ಸರಿ ಸರಿ...ಬಾ ನೆಕ್ಸ್ಟ್ ಟೈಂ ಬಂದಾಗ... ನಮ್ಮನೆ ಇಲ್ಲೇ ಇರೋದು" ಎಂದು ಮನೆ ನಂಬರ್ ಹೇಳಿದ್ದಳು.
"ಓಹ್ ...ಮಿಸ್ಟರ್ ಶತಭಿಷ...ನನ್ ಕ್ಲೈಂಟು..." ಆತ ಉತ್ತರಿಸಿದ್ದ.
"ಅರೇ..ನನ್ ಹಸ್ಬಂಡ್ ಕಣೋ....ಹೇಳ್ಳಿಲ್ವಾ? ಬಾ ಮತ್ತೆ ಮನೆಗೆ..." ಆಕೆ ಒತ್ತಾಯಿಸತೊಡಗಿದ್ದಳು...
"ಇಲ್ಲಾ..ಇನ್ನೊಂದ್ ದಿನ ಬರ್ತಿನಿ...ಇವತ್ತು ನಿಮ್ಮ್ ಹಸ್ಬಂಡ್ ಬೇರೆ ಯಾವದೋ ಮೂಡ್ ಅಲ್ ಇದ್ದಂಗಿದೆ..." ಆತ ಕುಹಕದ ನಗೆಯಾಡಿದ್ದ...
"ಹಂಗಂದ್ರೆ?" ಆಕೆ ಅನುಮಾನದಿಂದ ಕೇಳಿದ್ದಳು..
"ಏನಿಲ್ವೆ...ಆಫೀಸ್ ವಿಚಾರ... ಅವ್ರ್ ಫೈಲ್ ಕ್ಲಿಯರ್ ಆಗೋದ್ ಕಷ್ಟ ಇದೆ...ಆಫೀಸಲ್ಲ್ ಮಾತಾಡ್ಕೋತೀವಿ ಬಿಡು...." ಆತ ಮಾತು ಮುಗಿಸುವಷ್ಟರಲ್ಲಿ, ಲಿಫ್ಟ್ ಕೆಳಗೆ ಬಂದಿತ್ತು...
ಲಿಫ್ಟಿನಿಂದ ಚಲನಾ ಹೊರಬಂದಳು....ಸ್ಥಿರೆಗೊಂದು ಹಾಯ್ ಹೇಳಿ, ವಿನಯ್ ಜೊತೆ ಹೊರಟಳು. ಸ್ಥಿರೆಯ ತಲೆನೋವು ಜಾಸ್ತಿಯಾಯಿತು.
**
ವಿನಯ್‍ಗೆ ಲಂಚ ಕೊಡದ ಕಾರಣ, ಶತಭಿಷನಿಗೆ ಇನ್ನೂ ಕ್ಲಿಯರೆನ್ಸ್ ಸಿಕ್ಕಿರಲಿಲ್ಲ...ಆತನ ಹತಾಶೆ ಜಾಸ್ತಿಯಾಗುತ್ತಿತ್ತು...ಕುಡಿತ ಹೆಚ್ಚಿತ್ತು...ಮಾತು ಮಾತಿಗೂ ರೇಗುತ್ತಿದ್ದ.... ಸ್ಥಿರೆಗೆ ಆಫೀಸು-ಮನೆ-ಮಗು ಎಲ್ಲವನ್ನೂ ಮ್ಯಾನೇಜ್ ಮಾಡುವುದು ಕಷ್ಟವಾಗುತ್ತಿತ್ತು....ಆಕೆಯ ಸಹನೆಯೂ ಆಗಾಗ ತಪ್ಪುತ್ತಿತ್ತು....ಹೀಗೇ ಒಂದು ಜಗಳ. ಆದರೆ ಅಂತ್ಯ ಮಾತ್ರ ಎಂದಿನಂತೆ ಆಗಲಿಲ್ಲ...ಆತ ಅದ್ಯಾವುದೋ ಆವೇಶದಲ್ಲಿ ಕೈ ಎತ್ತಿದ್ದ...ಅರೆ ಕ್ಷಣವಷ್ಟೇ, ತನ್ನ ಮೇಲೆ ತನಗೆ ಹೇಸಿಗೆಯಾಗಿ ಗಾರ್ಡನ್‍ಗೆ ಧಾವಿಸಿದ್ದ.... ಬೆಳಕಿರದ ಜಾಗದಲ್ಲಿ ಬೆಂಚೊಂದರ ಮೇಲೆ ಕೂತಿದ್ದ......ಸಿಗರೇಟಿನ ಪ್ಯಾಕ್ ಮಾತ್ರ ಖರ್ಚಾಗುತ್ತಲೇ ಇತ್ತು...ಆಕೆ ಮಾತನಾಡುವವರೆಗೆ....
"ಪುಳಿಯೊಗರೆ ಬಾಕ್ಸ್‍ನಲ್ಲಿದೆ...." ಅಡಿಗೆ ಮನೆಯಿಂದ ಸ್ಥಿರೆ ವಾಟ್ಸಪ್ಪ್ ಮಾಡಿದ್ದಳು...ಆಕೆಯ ಕಣ್ಣಲ್ಲಿ ನೀರಿನ್ನೂ ಇಂಗಿರಲಿಲ್ಲ....ಶತಭಿಷ ಮೊಬೈಲ್ ನೋಡಿರಲಿಲ್ಲ....ನಂತರ ಅದನ್ನೇ ಕಾಪೀ ಪೇಸ್ಟ್ ಮಾಡಿ ನಾರ್ಮಲ್ ಮೆಸ್ಸೇಜ್ ಆಗಿಸಿ ಕಳಿಸಿದ್ದಳು...ಮಗುವಿಗೆ ಊಟ ಮಾಡಿಸಿ ಮಲಗಿಸ ಹತ್ತಿದ್ದಳು...
"ಐ ಆಮ್ ಸಾರಿ....ಫೀಲಿಂಗ್ ಗಿಲ್ಟೀ..." ಆತ ಅರ್ಧ ಗಂಟೆಯ ನಂತರ ರಿಪ್ಲೈ ಮಾಡಿದ್ದ...
"ಇಟ್ಸ್ ಓ.ಕೆ...ಬಟ್ ವಿ ನೀಡ್ ಟು ಟಾಕ್..." ಆಕೆ ಅಳೆದೂ ತೂಗಿ ಕೊನೆಗೂ ಮೆಸ್ಸೇಜು ಮಾಡಿದಳು..
ಆತ ಕೊನೆಗೂ ತನ್ನ ಅಹಂ ಬಿಟ್ಟು ಮಾತನಾಡಲು ಶುರುಮಾಡಿದ್ದ.
"ಹಿಂಗಾಂದ್ರೆ ಹೆಂಗೆ?" ಆಕೆ ಸುತ್ತಿಬಳಸಿ ಹೋಗಲಿಲ್ಲ...
"ಐ ಡೋಂಟ್ ನೋ...ಈ ಥಿಂಕ್ ಐ ಆಮ್ ಲಾಸ್ಟ್...ಯಾವ್ದೂ ಸರಿ ಹೋಗ್ತಿಲ್ಲಾ..." ಆತ ಅಲವತ್ತುಕೊಂಡಿದ್ದ...
"ಎಲ್ಲಾ ಸರಿ ಆಗತ್ತೆ...ಡೋಂಟ್ ವರಿ...ಸ್ವಲ್ಪ ಟೈಂ ತಗೊಳತ್ತೆ..." ಆಕೆ ಸಮಾಧಾನದ ಮಾತಾಡಿದಳು..
"ಹಮ್..ನೋಡಣಾ..." ಆತನಿಗೆ ಮಾತು ಮುಂದುವರೆಸಲು ತಿಳಿಯಲಿಲ್ಲ...
"ವಿನಯ್ ಯಾಕ್ ಬಂದಿದ್ದ?" ಆಕೆಯ ಪ್ರಶ್ನೆ ಆತನಿಗೆ ಅನಿರೀಕ್ಷಿತವಾಗಿತ್ತು...
"ಅವರ್ ನಿಂಗ್ ಗೊತ್ತಾ?" ಆತ ಆಶ್ಚರ್ಯದಿಂದಲೇ ಮರುಪ್ರಶ್ನೆ ಹಾಕಿದ್ದ.
"ಹೂಂ...ಎಂಗೇಜ್‍ಮೆಂಟ್ ಟೈಂನಲ್ಲಿ ಹೇಳಿರ್ಲಿಲ್ವಾ ನಿಂಗೆ...ವಿನಯ್ ಅಂತಾ?" ಸ್ಥಿರೆ ನೆನಪಿಸಿದಳು..
"ಓಹ್...ಓ.ಕೇ..ಓ.ಕೇ...ಗೊತ್ತಾಯ್ತ್ ...ಗೊತ್ತಾಯ್ತು....ಆ ವಿನಯ್ ಅಹ್" ಆತ ನೆನಪಿಸಿಕೊಂಡ...
"ಹಾಂ...ಅದೇ ವಿನಯ್..." ಆಕೆ ಮುಗುಳ್ನಕ್ಕಳು...
"ಅವ್ರ್ ಅದೇನೋ ಏಜೆಂಟ್ ಥರ ಕೆಲ್ಸಾ ಮಾಡ್ತಿದಾರೆ ಸೆಬಿ ಆಫೀಸರ್‍ಗಳಿಗೆ ಅನ್ಸತ್ತೆ.." ಆತನಿಗೆ ಕೆಟ್ಟದ್ದೇನೂ ಹೇಳಲು ಮನಸ್ಸಾಗಲಿಲ್ಲ...
"ಓಹ್...ಹೆಲ್ಪ್ ತಗೋಬೋದಲ್ಲಾ ಹಂಗಿದ್ರೆ" ಆಕೆ ತುಂಬಾ ಇನ್ನೊಸೆಂಟ್ ಅನಿಸಿದ್ದಳು...
"ಹೆಲ್ಪ್? ಬ್ಲಡೀ ಕರಪ್ಟ್ ಪೀಪಲ್....ಐ ವೋಂಟ್ ಬ್ರೈಬ್ ಎನಿವನ್..." ಆತ ಸ್ವಲ್ಪ ಗಡಸಾಗಿಯೇ ಹೇಳಿದ್ದ...
"ಓಹ್...ಹಂಗಾ...ಸರಿ ಸರಿ...ಸಾರಿ" ಆಕೆ ಬೇಕಿತ್ತಾ ಎಂದುಕೊಂಡಳು...
"ಮೊದ್ಲೂ ಇದೇ ಕೆಲ್ಸಾ ಮಾಡ್ತಿದ್ರಾ?" ಶತಭಿಷ ಕುತೂಹಲದಿಂದ ಪ್ರಶ್ನಿಸಿದ್ದ...
"ಇಲ್ಲಪ್ಪಾ..ಮುಂಚೆ ಈ ಆಂಡ್ ವೈ ಅಲ್ ಇದ್ರು...ಅದೇನೇನೋ ಕಲ್ಚರ್, ಮಾರಲ್ಸ್, ಎಥಿಕ್ಸ್, ಸೋಷಿಯಲ್ ಸರ್ವೀಸ್ ಅಂತೆಲ್ಲಾ ಓಡಾಡ್ತಿದ್ರು...ಈಗೇನಾಯ್ತೋ ಗೊತ್ತಿಲ್ಲ..." ಆಕೆ ಮಾತು ಮುಗಿಸಿದ್ದಳು...ಮೀಟಿಂಗ್ ಕೂಡಾ ಎಂದಿನಂದೇ ಸ್ವಲ್ಪ ಹೊತ್ತಿಗೆ ಮುಕ್ತಾಯವಾಯಿತು...ಆದರೆ ತಡರಾತ್ರಿ ನಿದ್ದೆ ಬಾರದೇ ಹೊರಳಾಡುತ್ತಿದ್ದ ಸ್ಥಿರೆಗೆ ಹಳೆಯದೆಲ್ಲಾ ಮತ್ತೆ ನೆನಪಾಯಿತು...
**
ಸ್ಥಿರೆ ಅಂದು ವಿನಯ್‍ಗಾಗಿ ಕಾಯುತ್ತಿದ್ದಳು. ಸಾಕಷ್ಟು ಮಾತನಾಡಬೇಕೆನ್ನುವ ತವಕವಿತ್ತು. ಜೊತೆಗೆ ಅರ್ಥವಾಗದ ಆತಂಕವೂ ಕೂಡಾ...ಅಂತೂ ಹತ್ತು ನಿಮಿಷ ಹತ್ತು ನಿಮಷವೆಂದು ನಾಲ್ಕು ಬಾರಿ ಹೇಳಿ ಅಂತೂ ಸಾಹೇಬರು ಬಂದಿದ್ದರು. ಬರೋಬ್ಬರಿ ನಲವತ್ತೈದು ನಿಮಿಷ ತಡವಾಗಿತ್ತು. ಆಕೆ ಅದಾಗಲೇ ಪುಟ್ಟದೊಂದು ರಿಹರ್ಸಲ್ ಕೂಡಾ ನಡೆಸಿದ್ದಳು. ಬಂದವನೇ ಸೀದಾ ತನಗೊಂದು ಕ್ಯಾಪಚೀನೋ ಆರ್ಡರ್ ಮಾಡಿದ. ನಿನಗೇನು ಎಂದು ಕೇಳಲೂ ಇಲ್ಲ.
ಆರ್ಡರ್ ಸರ್ವ್ ಮಾಡಿದ ಮೇಲೆ, "ನಿಂಗೆ?" ಎಂದನಾದರೂ ಅದಾಗಲೇ ಆತ ಕಾಫಿಯನ್ನು ಸುರ್ರ್ ಎಂದು ಬಾಯಿಗೆ ಹೊಯ್ದುಕೊಳ್ಳುತ್ತಿದ್ದ. ಈಕೆ ಏನೂ ಆರ್ಥವಾಗದೇ ಸುಮ್ಮನೇ ಕೂತಿದ್ದಳು.
"ಯಾಕ್ ಲೇಟು?" ಕೊನೆಗೂ ಕೇಳಿಯೇ ಬಿಟ್ಟಳು..
"ಯಾಕ್ ಲೇಟು ಅಂದ್ರೆ? ಕೆಲಸಾ ಇರತ್ತಪ್ಪಾ? ನಾನೇನ್ ಬೇಕಂತಾ ಲೇಟ್ ಮಾಡಿದೀನಾ? ಈಗ್ಲಿಂದನೇ ನಿಂಗ್ ಎಲ್ಲಾ ಡಿಟೇಲ್ ಕೊಡ್ಬೇಕಾ?" ಆತ ಬೇರೆಯದೇ ಟ್ರ್ಯಾಕ್‍ಗೆ ಹೊರಟು ಹೋಗಿದ್ದ.
ಆಕೆಗೆ ಇನ್ನೂ ಒಂದಿಷ್ಟು ಪ್ರಶ್ನೆ ಕೇಳುವುದಿತ್ತು...ಚರ್ಚೆ ಮಾಡುವುದಿತ್ತು...ಇಷ್ಟ-ಕಷ್ಟಗಳನ್ನು ತಿಳಿದುಕೊಳ್ಳುವುದಿತ್ತು... ಆದರೆ ಅದಕ್ಕಾತ ಅವಕಾಶವನ್ನೇ ಕೊಡುತ್ತಿರಲಿಲ್ಲ...ದಾರಿಯಲ್ಲಿ ನಡೆಯುತ್ತಾ ಹೋಗುವಾಗ ಆತನದ್ದೇ ಮಾತು. ಆಕೆ ಹೂಂ ಹಾಕುತ್ತಿದ್ದಳು ಅಷ್ಟೇ!.
ಮತ್ತೊಮ್ಮೆ ಸಿಕ್ಕಾಗ ಪಿಚ್ಚರ್ ಹೋಗೋಣವಾ ಎಂದ...ಆಕೆ ಹೂಂ ಎಂದಳು. ಆತ ಯಾವುದು ಎಂದ. "ಯಾವುದಾದ್ರೂ" ಎಂದಳು.... ಆತ ಎದುರಿಗಿದ್ದಾಗ ಆಕೆಗೆ ಮಾತನಾಡುವುದೇ ಮರೆತಂತಿತ್ತು...
**
ಅವತ್ತು ಅಮಾವಾಸ್ಯೆ. ತಾಯಿ ""ಬೇಡ ಕಣೇ" ಎಂದರೂ ಹಠ ಮಾಡಿ ಸ್ಥಿರೆ ವಿನಯ್ ಜೊತೆ ಬ್ರಂಚ್‍ಗೆ ಹೋಗಿದ್ದಳು. ಆಕೆಯ ಇಂಟರ್‍ನೆಟ್ಟಿನಲ್ಲಿ ಹುಡುಕಿ ಫೈನಲ್ ಮಾಡಿದ ಜಾಗವದು. ಭಾನುವಾರದ ಬೆಳಗ್ಗಿನ ಡ್ರೈವ್ ಆಕೆ ಉಲ್ಲಾಸ ಕೊಟ್ಟಿತ್ತು... ಸ್ಥಿರೆಗೆ ಜೋರಾಗಿ ಹೋಗುವ ಕಾರಿನ ಕಿಟಕಿಯಿಂದ ಆಚೆ ಇಣುಕುವ ಮನಸ್ಸಾಗುತ್ತಿತ್ತು. ಆದರೆ ವಿನಯ್‍ಗೆ ಆತನ ಸೋಷಿಯಲ್ ವರ್ಕ್ ಟೀಂನಿಂದ ಕರೆಗಳು ಬರುತ್ತಿದ್ದವು. ಆತ ಕರೆ ಬಂದಾಗಲೆಲ್ಲಾ ಕಾರನ್ನು ಎಡಕ್ಕೆ ಹಾಕಿ ಮಾತಾಡಿ, ಸೀಟ್ ಬೆಲ್ಟ್ ಧರಿಸಿ ನಿಧಾನವಾಗಿ ಕಾರು ಚಲಾಯಿಸುತ್ತಿದ್ದ. ಈಕೆ ಆಗೆಲ್ಲ ಮುಗುಳುನಗುತ್ತಿದ್ದಳು.
ಅಂತೂ ಪ್ಲೇಸ್ ತಲುಪಿ, ತರಹೇವಾರಿ ಖಾದ್ಯಗಳನ್ನು ಸೇವಿಸುವವರೆಗೂ ಎಲ್ಲವೂ ಚೆನ್ನಾಗಿತ್ತು...ಅವತ್ತು ವಿನಯ್ ಕೂಡ ಭೂಮಿಗಿಳಿದು ಮಾತನಾಡಿದ್ದ....ಸ್ಥಿರೆಯೂ ಒಂದೆರಡು ಅನಿಸಿಕೆ ಹಂಚಿಕೊಂಡಿದ್ದಳು....ಹಿನ್ನೆಲೆ ಸಂಗೀತ ಹಿತವಾಗಿತ್ತು...ಪಾನಿ ಪುರಿ ಖಾರವಾಗಿದ್ದರೂ, ಮಾತು ಸಿಹಿಯಾಗಿತ್ತು....ಹೀಗೆ ಎಲ್ಲ ಚೆನಾಗಿದ್ದಿದ್ದು, ಬಿಲ್ಲ್ ಬರುವವರೆಗೆ.... ಬಿಲ್ಲ್ ಬರುವ ಸಮಯದಲ್ಲಿ ವಿನಯ್ ಫೋನ್‍ನಲ್ಲಿ ಮಾತಾಡುತ್ತಿದ್ದ. ಆಕೆಯೇ ಬಿಲ್ ಕೊಟ್ಟು ಹೊರಬಂದಳು....
"ಬಿಲ್ ನೀನ್ ಯಾಕ್ ಕೊಟ್ಟೆ" ಆತನ ಮಾತು ಆಕೆಗೆ ಆಶ್ವರ್ಯವೇನೂ ತರಲಿಲ್ಲ...
"ಏಯ್ ಇರ್ಲಿ ಬಿಡೋ..." ಆಕೆ ಭುಜಕ್ಕೆ ಭುಜ ತಾಗಿಸಿ ನಿಂತಿದ್ದಳು....
"ಎಷ್ಟಾಯ್ತು? ಹೇಳಿಲ್ಲಾ ಅಂದ್ರೆ ಅಷ್ಟೇ ಈಗ..." ಆತನ ಮುಖದಲ್ಲಿ ಹುಸಿಕೋಪವಿತ್ತು...ಜೊತೆಗೆ ವ್ಯಾಲೆಟ್ ತೆಗೆದಿದ್ದ.
"ಏಯ್ ಬ್ಯಾಡ ಬಿಡೋ..." ಆಕೆ ಭುಜ ಸವರಿದ್ದಳು.
"ಅದೆಂಗ್ ಆಗತ್ತೆ...ನಾನ್ ಕೊಡ್ಲೇ ಬೇಕು ಇವತ್ತು...ಎಷ್ಟು?" ಆತ ಹಠ ಬಿಡುವವನಾಗಿರಲಿಲ್ಲ...
"ಕೊಡ್ಲೇ ಬೇಕಂದ್ರೆ.....ದುಡ್ಡೇ ಕೊಡ್ಬೇಕಂತೇನಿಲ್ಲ...." ಆಕೆಯ ಮಾತಿನಲ್ಲಿ ತುಂಟತನವಿತ್ತು....
"ಅಂದ್ರೆ?" ಆತ ಹುಬ್ಬು ಹಾರಿಸಿದ್ದ...
" ಯೋಚ್ನೆ ಮಾಡು" ಆಕೆಯ ಮುಖ ಕೆಂಪೇರಿತ್ತು...
"ಓ.ಕೆ.." ಆತ ಯೋಚನೆ ಮಾಡಿ ಕೊನೆಗೂ ಒಂದು ನಿರ್ಧಾರಕ್ಕೆ ಬಂದ....
"ಫಿಫ್ಟಿ-ಫಿಫ್ಟಿ..." ಹಲ್ಲುಕಿರಿಯುತ್ತಾ ಆತ ಐನೂರರ ನೋಟನ್ನು ಆಕೆಯ ಕೈಗಿಟ್ಟಿದ್ದ....ಆಕೆಗೆ ನಿರಾಸೆಯಾದಂತಿತ್ತು.....ಆದರೂ ನಕ್ಕಳು...ದುಡ್ಡನ್ನು ಮಡಿಸಿ ಕೈಯ್ಯಲ್ಲಿ ಹಿಡಿದುಕೊಂಡಳು...
"ನಿಮ್ಮಂಥೋರಿಂದನೇ ಕಣೇ ನೋಟೆಲ್ಲಾ ಹಾಳಾಗೋದು...ಕರೆಕ್ಟಾಗ್ ಇಟ್ಕೋ ಅದನ್ನಾ...." ಆತ ತಮಾಷೆಗೆ ಹೇಳಿದ್ದೋ ಸೀರಿಯಸ್ಸಾಗಿದ್ದನೋ ಸ್ಥಿರೆಗೆ ತಿಳಿಯಲಿಲ್ಲ...
"ನನ್ ದುಡ್ಡು...ಹೆಂಗಾದ್ರೂ ಇಟ್ಕೋತೀನಿ...ಏನೀಗಾ?" ಆಕೆಯೂ ತನ್ನ ವರಸೆ ತೆಗೆದಳು...
"ಈಡಿಯಟ್ಸ್...ನಿಂಗ್ ಹೇಳ್ತಿದೀನಲ್ಲಾ...ಯು ಆರ್ ಡಂಬ್..." ಆತನ ಮಾತಿಗೆ ಅರ್ಥವಿರಲಿಲ್ಲ...
"ವಾಟ್ ರಬ್ಬಿಷ್"..ಆಕೆಗೆ ಹರ್ಟ್ ಆಗಿತ್ತು...
ಮಾತಿಗೆ ಮಾತು ಬೆಳೆಯಿತು...ಸ್ಥಿರೆಯೂ ಗಟ್ಟಿಯಾಗಿಯೇ ಆತ ಮುಖಕ್ಕೆ ಉಗಿದಿದ್ದಳು...ಹೊಂದಾಣಿಕೆಯ ಅವಶ್ಯಕತೆಯ ಬಗ್ಗೆ ತಿಳಿಸಹೊರಟಿದ್ದಳು...ಆದರೆ ಆತನಿಗೆ ವ್ಯವಧಾನವಿರಲಿಲ್ಲ...ಅಷ್ಟರಲ್ಲಿ ಮತ್ತೆ ಯಾವುದೋ ಕರೆ ಬಂದಿತ್ತು... ಈಗೆ ಸುಮ್ಮನೆ ಕಾರು ಹತ್ತಿ ಕುಳಿದ್ದಳು.....ಸ್ವಲ್ಪ ಹೊತ್ತಿನ ನಂತರ ಅಳುತ್ತಿದ್ದಳು...
ಶತಭಿಷ ವಾಪಸ್ಸ್ ಬಂದಾಗ ಆಕೆ ಐನೂರರ ನೋಟನ್ನು ಆತನಿಗೇ ಹಿಂದಿರುಗಿಸಿದ್ದಳು...ಆತ ಕಾರಣ ಕೇಳಲಿಲ್ಲ...ಅವತ್ತು ಕಾರು ಜೋರಾಗಿ ಓಡಿತ್ತು...ಕಾರಿನಲ್ಲಿ ಕೇಳುತ್ತಿದ್ದ ಮಾತೆಂದರೆ ಎಫ್.ಎಮ್ ಆರ್.ಜೇಯದ್ದೊಂದೇ....
**
ಕೊನೆಗೂ ಸಂಬಂಧ ಮುರಿದುಬಿದ್ದಿತ್ತು....ಸ್ಥಿರೆಯ ಮಾವ ನಡೆಸಿದ ಸಂಧಾನವೂ ಯಶಸ್ವಿಯಾಗಲಿಲ್ಲ...
"ಹುಡುಗಿ ಆಟಿಟ್ಯೂಡ್ ಸರಿ ಅನಸ್ತಿಲ್ವಂತೆ ಹುಡುಗಂಗೇ...."ಕೊನೆಗೂ ಸಬೂಬು ಸಿಕ್ಕಿತ್ತು...
ಸ್ಥಿರೆಗೆ ಮೊದಮೊದಲು ಬೇಜಾರಾದರೂ, ಆಗುವುದೆಲ್ಲಾ ಒಳ್ಳೆಯದಕ್ಕೇ ಎಂದುಕೊಂಡು ಸುಮ್ಮನಾಗಿದ್ದಳು...ಆಕೆಯ ತಾಯಿ ಮಾತ್ರ ಮುಂದೆ ಮದುವೆ ಆಗುವವರೆಗೂ ಈ ಬಗ್ಗೆ ಎಚ್ಚರಿಸುವುದನ್ನು ಬಿಡಲಿಲ್ಲ...
**
ಅವತ್ತು ಶತಭಿಷ ಬೆಳಿಗ್ಗೆ ಬೇಗ ಎದ್ದಿದ್ದ. ಸ್ಥಿರೆಗೆ ಇಷ್ಟವೆಂದು ಅಕ್ಕಿರೊಟ್ಟಿ ಮಾಡ ಹೊರಟಿದ್ದ. ಅದೇನೋ ಸರಿಯಾಗಲಿಲ್ಲ... ಹದ ಹೆಚ್ಚು ಕಡಿಮೆಯಾಗಿ ಚೂರು ಚೂರಾಗುತ್ತಿತ್ತು. ಸ್ಥಿರೆ ನಗುನಗುತ್ತಲೇ ತಿಂದಿದ್ದಳು. ಮಗುವಿಗೆ ಜ್ವರ ಬಂದಂತಿತ್ತು. ಸ್ಥಿರೆ ಆಫೀಸಿಗೆ ರಜಾ ಹಾಕಲೇನೋ ಎಂದು ಯೋಚಿಸಿದಳು. ಆದರೆ ಮೀಟಿಂಗ್ ಒಂದನ್ನು ಆಟೆಂಡ್ ಮಾಡಲೇಬೇಕಿತ್ತು. ಬೇಗ ಬರುವೆನೆಂದು ಹೇಳಿ ಆಫೀಸಿಗೆ ಹೊರಟಿದ್ದಳು. ಅದಾಗಲೇ ಲೇಟಾಗಿತ್ತು. ದಿನಕ್ಕಿಂತ ಚೂರು ಅರ್ಜಂಟಿನಲ್ಲಿ ಕಾರ್ ಓಡಿಸುತ್ತಿದ್ದಳು. ಇಂಟರ್‍ಸೆಕ್ಷನ್‍ನಲ್ಲಿ ಯಾರೋ ಗುದ್ದಿದರು. ಕಾರಿಳಿದು ನೋಡಿದಾಗ, ಅಲ್ಲಿದ್ದುದು ವಿನಯ್ ಮತ್ತು
ಚಲನಾ.
-ಚಿನ್ಮಯ
10/02/2019
No comments:
Post a Comment