Friday, February 22, 2019

ಸ್ಥಿರೆ, ಶತಭಿಷ ಮತ್ತು ಚಲನಾ (ಭಾಗ-೮)

ಐ ಥಿಂಕ್ ಐ ವಿಲ್ ಡೈ ಟು ಡೇ...." ಚಲನಾ ನಶೆಯಲ್ಲಿ ಮಾತಾಡಿದಂತಿತ್ತು.
"ನೋ...ಯು ಆರ್ ಜಸ್ಟ್ ಡ್ರಂಕ್....."
ಶತಭಿಷ ಚಲನಾಗೆ ಹೆಗಲು ಕೊಟ್ಟು ಒಳ ಕರೆದುಕೊಂಡು ಬಂದ...
ಆಕೆಗೆ ಓಡಾಡುವಷ್ಟೂ ತ್ರಾಣವಿರಲಿಲ್ಲ....
ಪೂರ್ತಿಯಾಗಿ ಕುಡಿದಂತಿತ್ತು....ಸೋಫಾದ ಮೇಲೆಯೇ ಬಿದ್ದುಕೊಂಡಳು....
"ಲವ್ ಯು ಡಿಯರ್....." ಆಕೆ ಗೊಣಗುತ್ತಲೇ ಹೇಳಿದಂತಿತ್ತು....
"ಜಸ್ಟ್ ಶಟಪ್ ಆಯ್ತಾ?..." ಶತಭಿಷ ಬಾಯಿ ಮುಚ್ಚಿಸಿದ್ದ....
ಆಕೆ ಹೀಗೆ ಕುಡಿದುಬರುವುದು ಶತಭಿಷನಿಗೆ ಹೊಸದೇನೂ ಆಗಿರಲಿಲ್ಲ...ಆದರೆ ಈಚೆಗೆ ನಾಕೈದು ವರ್ಷದಿಂದ ನಡೆದಿರಲಿಲ್ಲ ಅಷ್ಟೇ....
ಸ್ಥಿರೆ ಒಮ್ಮೆ ಶತಭಿಷನನ್ನು ಗುರಾಯಿಸಿ ನೋಡಿದಳು....
ಶತಭಿಷ ಚಲನೆಗೆ ಬ್ಲಾಂಕೆಟ್ ತರಲೆಂದು ರೂಮಿಗೆ ಹೋದ...
ಚಲನಾ ಇನ್ನೇನೋ ಮಾತಾಡುತ್ತಲೇ ಇದ್ದಳು....
"ಅಲ್ಯಾಕ್ ಕೂತಿದೀಯೋ.....ಬಾ ಒಳಗೆ...." ಸ್ಥಿರೆ ವಿನಯ್‍ನನ್ನು ಕರೆದಳು....
"ನಾ ಒಳಗ್ ಬರೋದಿಲ್ಲಾ....ನಾ ಒಳಗ್ ಬರೋದಿಲ್ಲ....ಓ ಇಲ್ಲಾ ಇಲ್ಲಾ ಇಲ್ಲಾ....." ವಿನಯ್ ಕೆಟ್ಟದಾಗಿ ಹಾಡಲು ಶುರುಮಾಡಿದ್ದ...
"ಬತ್ರ್ಯೋ ಇಲ್ವೋ ಈಗಾ?" ಸ್ಥಿರೆ ಗದರಿಸಿಯೇ ಬಿಟ್ಟಳು...
"ಬೈಬೇಡಾ ...ಬೈ ಬೇಡಾ....ಬೈದ್ರೆ ನನ್ ಹೆಂಡ್ತಿ ನೀನು ಅನಸ್‍ಬಿಡತ್ತೆ...." ವಿನಯ್ ಕೂಡಾ ಹಿಡಿತ ತಪ್ಪಿದ್ದ....
"ಏನಾಯ್ತು ನಿಮಗಿಬ್ರಿಗೂ?ಯಾಕ್ ಹಿಂಗ್ ಸಾಯ್ತಿದೀರಾ?" ಸ್ಥಿರೆ ಅಲವರಿಕೆಯಿಂದ ಕೇಳಿದಳು....
"ಅದೇನಾಯ್ತು ಅಂದ್ರೆ...." ವಿನಯ್ ಚಲನಾಳ ಜೊತೆ ಬಾರ್‍ಗೆ ಹೋಗಿದ್ದನ್ನೂ...ಅಲ್ಲಿ ಚಲನಾ ಚಾಲೆಂಜ್ ಮಾಡಿದಳೆಂದು ಏನೇನೋ ಮಿಕ್ಸ್ ಮಾಡಿ ಕುಡಿದಿದ್ದನ್ನೂ ಹೇಳಿದ...
ಚಲನಾ ಹಠ ಮಾಡಿದ್ದರಿಂದ ಅವಳನ್ನು ಇಲ್ಲಿಗೇ ಕರೆತಂದೆ ಎಂದೂ, ಜೊತೆಗೆ ತಾನು ಸ್ಟೇಬಲ್ ಆಗಿದ್ದೇನೆಂದೂ ಹೇಳಿ ಎದ್ದು ನಿಂತ..ಅಷ್ಟರಲ್ಲಿ ಶತಭಿಷ ಬಂದಿದ್ದ...
"ಮಿಸ್ಟರ್ ಶತಭಿಷ....ನಾನೂ ನೀವು ಇವತ್ತಿಂದಾ ಫ್ರೆಂಡ್ಸ್...." ವಿನಯ್ ಶೇಕ್‍ಹ್ಯಾಂಡ್ ಮಾಡಲು ಬಂದ....ಶತಭಿಷ ಅಲ್ಲಿಯೇ ನಿಂತಿದ್ದ...ವಿನಯ್ ಬಲವಂತದಿಂದ ಕೈಕುಲುಕಿ ಆಲಂಗಿಸಿಕೊಂಡ....
"ಯು ಸೀ ಮಿಸ್ಟರ್....ನಾನ್ ನಿಮ್ಮನ್ನ ತಪ್ಪ್ ತಿಳ್ಕೊಂಡಿದ್ದೆ....ಬಟ್ ನಿಮ್ಮ್ ಬಗ್ಗೆ ಚಲನಾ ತುಂಬಾ ಹೇಳಿದಾಳೆ.....ಸೋ ಐ ಆಮ್ ಸಾರಿ....ಓಕೆ?" ವಿನಯ್ ಕೈ ಮುಗಿದು ನಿಂತಿದ್ದ....ಶತಭಿಷ ಮಾತಾಡಲಿಲ್ಲ...
"ನಾಟ್ ಓ.ಕೆ?...ಓ.ಕೆ...ಇಟ್ಸ್ ಓ.ಕೆ...." ವಿನಯ್ ಮಾತನಾಡುತ್ತಲೇ ಇದ್ದ...ಅಷ್ಟರಲ್ಲಿ ಆತನಿಗೆ ಕರೆ ಬಂದಿತ್ತು...ಆತನ ಕಸಿನ್‍ದು....ಬಹುಷಃ ಸ್ಥಿರೆಯೇ ಹೇಳಿರಬೇಕು...ಆತ ಒಂದರ್ಧ ಗಂಟೆ ಅಲ್ಲಿಯೇ ಕೂತಿದ್ದು ನಂತರ ಹೊರಟ. ಶತಭಿಷ ಅವನನ್ನು ಅರ್ಧ ದಾರಿಯ ತನಕ ಬಿಡಲು ಹೋಗಿದ್ದ...
ಚಲನಾ ಮಾತ್ರ ಸೋಫಾ ಮೇಲೆಯೇ ಮಲಗಿದ್ದಳು. ತೀರಾ ಕ್ಯಾಷುಅಲ್ ಎನಿಸುವಂತಹ ಉಡುಗೆ...ಸ್ಪೋಟ್ರ್ಸ್ ಷೂ...ಅರೆ ಬರೆ ಹರಡಿದ್ದ ಕೂದಲು...ಅರ್ಧಂಬರ್ಧ ಮೈ ಮುಚ್ಚಿದ್ದ ಬ್ಲಾಂಕೆಟ್...ತೀರ ಎಚ್ಚರವೂ ಇಲ್ಲದ...ಪೂರ್ತಿ ನಿದ್ದೆಯೂ ಬಾರದ ಮಂಪರು.... ಸ್ಥಿರೆಗೆ ಚಲನಾಳ ಮೇಲೆ ಅದೇಕೋ ಪಾಪ ಎನಿಸಿತ್ತು....
"ಕಾಲ್ ಮಿ ಇಫ್ ಯು ನೀಡ್ ಎನಿಥಿಂಗ್...." ಸ್ಥಿರೆ ಅನುಕಂಪದಿಂದ ಹೇಳಿ, ಇನ್ನೇನು ಬೆಡ್‍ರೂಮಿಗೆ ಹೋಗುವವಳಿದ್ದಳು...
"ಐ ನೀಡ್ ಟು ಟೆಲ್ ಯು ಸಮ್ ಥಿಂಗ್...." ಚಲನಾಳಿಗೆ ಮಾತಾಡಲೇ ಬೇಕೆನಿಸಿತ್ತು...
"ಬೆಳಿಗ್ಗೆ ಮಾತಾಡಣಾ...ಈಗ ಮಲಗು" ಸ್ಥಿರೆ ಗುಡ್ ನೈಟ್ ಹೇಳಿದಳು....
"ಪ್ಲೀಸ್....." ಚಲನಾ ಸ್ಥಿರೆಯ ಕೈ ಹಿಡಿದು ಜಗ್ಗಿದಳು...ಇಲ್ಲವೆನ್ನಲಾಗಲಿಲ್ಲ....
"ಹೇಳು..." ಸ್ಥಿರೆ ಚಲನಾಳ ಬಳಿಯೇ ಕೂತಳು...
ಶಾಂತವಾಗಿಯೇ ಶುರುವಾದ ಮಾತುಕತೆ ನಿಧಾನವಾಗಿ ಇಂಟೆನ್ಸ್ ಆಗುವುದರಲ್ಲಿತ್ತು...ಅನಿರೀಕ್ಷಿತ ಅನಾಲೆಸಿಸ್ಸ್...ಕಾಕತಾಳೀಯ ಎನಿಸುವ ಘಟನೆಗಳು...ಅಲ್ಲಿಯವರೆಗೆ ಸ್ಥಿರೆಗೆ ಗೊತ್ತಿರದಿದ್ದ ಸಂಗತಿಗಳನ್ನು ಚಲನಾ ಹೇಳುತ್ತಲಿದ್ದಳು...
**
"ಬ್ರದರ್....ನೀವ್ ಒಂಥರಾ ಗ್ರೇಟ್ ಬಿಡಿ....ಈಗಿನ್ ಕಾಲದಲ್ಲಿ ನಿಮ್ಮಷ್ಟ್ ಗಾಂಧಿ ತರ ಇರೋರನ್ನಾ ನಾನ್ ನೋಡಿಲ್ಲ...." ವಿನಯ್ ಕಾರಿನಲ್ಲಿ ಮಾತುಕತೆ ಶುರುಮಾಡಿದ್ದ...ಶತಭಿಷ ಸುಮ್ಮನೇ ಕಾರು ಚಲಾಯಿಸುತ್ತಿದ್ದ...
"ಎಲ್ಲ್ ಸಿಕಾಕ್ಕೊಂಡಿದೆ ಈಗಾ?" ವಿನಯ್ ಕೆಲಸದ ವಿಷಯವನ್ನೇ ಮಾತಾಡುತ್ತಿದ್ದ.....ಶತಭಿಷ ಅದಾಗಲೇ ಕನ್ಸಲ್ಟಂಟ್ ಕೆಲಸ ಮಾಡುತ್ತಿದ್ದ...ಇನ್ನೇನು ಎರಡು ಮೂರು ತಿಂಗಳಲ್ಲಿ ಎಲ್ಲ ಸರಿ ಆಗಬಹುದು ಎಂಬ ನಿರೀಕ್ಷೆಯಲ್ಲಿದ್ದ....
"ಇನ್ನೇನೇ ಟೂ ಥ್ರೀ ಮಂಥ್ಸ್ ಅನ್ಸತ್ತೆ" ಶತಭಿಷನಿಗೆ ಶಾರ್ಟ್‍ಕಟ್‍ನಲ್ಲಿ ಹೋಗಲು ಇಷ್ಟಪಡಲಿಲ್ಲ....ಮೇನ್‍ರೋಡ್‍ನಲ್ಲಿಯೇ ಗಾಡಿ ಚಲಾಯಿಸಿದ....
"ಬ್ರದರ್...ನೀವ್ ಸುಮ್ನೆ ಆಫೀಸಿಗ್ ಅನ್ನಿ ಬ್ರದರ್...ನಾನೇ ಮಾಡಸ್‍ಕೊಡ್ತೀನಿ....ನನ್ನ್ ಕಡೆಯಿಂದ್ ಎಷ್ಟಾಗತ್ತೋ ಅಷ್ಟ್ ಬೇಗ...ಪ್ರಾಮಿಸ್ ಬ್ರದರ್...ಬನ್ನಿ ಯಾವತ್ತಾದ್ರೂ..." ವಿನಯ್ ಮಾತಾಡುತ್ತಲೇ ಇದ್ದ....ಶತಭಿಷನಿಗೆ ಯು ಟರ್ನ್ ತೆಗೆದುಕೊಳ್ಳುವುದಕ್ಕಿತ್ತು....
ಗಕ್ಕನೇ ಕಾರು ನಿಲ್ಲಿಸಿದ...
ಮಧ್ಯರಾತ್ರಿ...ಅದ್ಯಾವುದೋ ಸಿಗ್ನಲ್ಲು....ನಾಕೂ ಕಡೆ ರಸ್ತೆ ಬಹುತೇಕ ಖಾಲಿ ಖಾಲಿ...ಆಗಾಗ ರೊಯ್ಯ್ ಎಂದು ಬರುವ ವಾಹನಗಳು...ವಿನಯ್ ಪ್ರಾಮಾಣಿಕತೆಯ ಬಗ್ಗೆ ಶತಭಿಷನಿಗೆ ಅನುಮಾನವಿತ್ತು...
"ಶ್ಯುರ್...ನೋಡಣಾ...." ಕೊನೆಗೂ ಗ್ರೀನ್ ಸಿಗ್ನಲ್ಲು ಬಿದ್ದಿತ್ತು...
"ಬ್ರದರ್...ನಿಮ್ಮ್ ಬಗ್ಗೆ ಅವಳ್ ತುಂಬಾ ಮಾತಾಡ್ತಿರ್ತಾಳೆ....." ವಿನಯ್ ಚಲನಾಳ ಬಗ್ಗೆ ಮಾತಾಡಹೊರಟಿದ್ದ.....ಶತಭಿಷ ಹೂಂ ಹಾಕುತ್ತಿದ್ದ....
"ನಾವಿಬ್ರೂ ಹೆಂಗ್ ಇಷ್ಟ್ ಕ್ಲೋಸ್ ಆದ್ವಿ ಅಂತಾ ಕೇಳಲ್ವಾ?" ವಿನಯ್ ಪ್ರಶ್ನೆ ಹಾಕಿದ್ದ...ಶತಭಿಷ ಉತ್ತರಿಸಲಿಲ್ಲ...
"ಬ್ರದರ್..ಕೇಳಿ ಬ್ರದರ್..." ವಿನಯ್ ಸುಲಭಕ್ಕೆ ಬಿಡುವಂತೇ ಕಾಣಿಸಲಿಲ್ಲ...
ಶತಭಿಷ "ಹೇಳಿ" ಎಂದ...
ವಿನಯ್ ಚಲನಾಳ ಬಗ್ಗೆ ಮಾತಾಡಲು ಶುರುಮಾಡಿದ...
"ಬ್ರದರ್...ನಂಗ್ ಅವಳ್ ಜೊತೆ ಕಮಿಟ್ ಆಗ್ಬೇಕು ಅನಸ್ತಿದೆ..." ವಿನಯ್ ಕೊನೆಗೊ ಅಸಲಿ ವಿಷಯ ಹೇಳಿಯೇ ಬಿಟ್ಟಿದ್ದ....
ಶತಭಿಷ ಕಾರು ನಿಲ್ಲಿಸಿದ..
ವಿನಯ್‍ನ ಕಸಿನ್ ಹೇಳಿದ ಜಾಗ ಬಂದಿತ್ತು......ಅವರ ಕಾರ್‍ನ ಪಾರ್ಕಿಂಗ್ ಲೈಟ್ ಆನ್ ಆಗಿತ್ತು....
"ಮಾತಾಡಣಾ ಅದರ್ ಬಗ್ಗೆ ಯಾವತ್ತಾದ್ರು....ಇವತ್ತ್ ರೆಸ್ಟ್ ಮಾಡಿ.... " ಶತಭಿಷ ಮಾತು ಕಟ್ ಮಾಡಿದ....
"ಸೆಟ್ ಮಾಡ್‍ಕೊಡ್ತೀರಾ ಅಲ್ವಾ ಬ್ರದರ್?" ವಿನಯ್ ಸೀಟ್‍ಬೆಲ್ಟ್ ತೆಗೆಯಲು ತಡಕಾಡುತ್ತಿದ್ದ....
ಶತಭಿಷ ಪ್ರಶ್ನೆ ಕೇಳಿದರೂ ಕೇಳದಂತೇ ನಟಿಸಿದ್ದ.. ಅಷ್ಟರಲ್ಲಿ ಕಸಿನ್ ಬಂದು ತನ್ನ ಗೆಳೆಯರ ಜೊತೆ ವಿನಯ್‍ನನ್ನು ಕಾರಿಗೆ ತುಂಬಿಕೊಂಡು ಹೊರಟಿದ್ದ...
ಶತಭಿಷ ಮೊಬೈಲಿನ ವಾಲ್ ಪೇಪರ್ ನೋಡಿದ....ಸ್ಥಿರೆ ಮತ್ತು ಮಗುವಿನ ಫೋಟೋ ಇತ್ತು....ಮನೆಯ ಕಡೆ ಕಾರು ಚಲಾಯಿಸಿದ...
ಮಳೆ ಬರುವಂತಿತ್ತು.. ಗಾಳಿ ಬೀಸಿತ್ತು....ಆಗಾಗ ಮಿಂಚುತ್ತಿತ್ತು....ಇಂಥಹುದೇ ಒಂದು ರಾತ್ರಿ ಶತಭಿಷನ ಬದುಕು ಬದಲಿಸಿತ್ತು....ಊರಿನಲ್ಲಿ ಒಂಟಿ ಪಿಶಾಚಿಯಂತೇ ಓಡಾಡುತ್ತಿದ್ದ ಶತಭಿಷ ಷೇರ್ ಮಾರ್ಕೇಟ್‍ಗೆ ಎಂಟ್ರಿ ಕೊಡಲು ನಿರ್ಧರಿಸಿದ್ದ...ಅದೇ ರೀತಿಯ ಒಂಟಿತನ ಇದೀಗ ಮತ್ತೆ ಶತಭಿಷನನ್ನು ಕಾಡತೊಡಗಿತ್ತು.... ಪಕ್ಕದಲ್ಲೆಲ್ಲೋ ಕಂಡ ಮಿಂಚು, ಹಿಂದೆಲ್ಲೋ ಚಲನಾ ಬಿಡಿಸಿದ ಚಿತ್ರವನ್ನು ನೆನಪಿಸಿತ್ತು.....
**
"ನನ್ ಜೊತೆ ಕಮಿಟ್ ಆಗ್ಬೇಕು ಅಂತಿರೋ ಹುಡುಗ್ರು ಸತ್ತೋಗ್ತಾರೆ...." ಚಲನಾ ನಿರ್ಧಾರಕ್ಕೆ ಬಂದಂತೇ ಹೇಳಿದ್ದಳು...
ಆ ಮಾತು ಸ್ಥಿರೆಗೇನೋ ಸರಿ ಅನಿಸಲಿಲ್ಲ....
"ಹಂಗೇನಿಲ್ಲಾ....ಏನೇನೋ ಅಂದ್ಕೋಬೇಡಾ..." ಸ್ಥಿರೆ ಸಮಾಧಾನಿಸಲು ಪ್ರಯತ್ನಿಸಿದಳು....
"ಫಸ್ಟು ಸುಹಾಸ್...ಆಮೇಲೆ ಗಂಡ ಅನ್ಸ್‍ಕೊಂಡಿದ್ ಅರ್ಜುನ್... ಆಮೇಲೇ ಆ ಆಶ್ರಮದ ಮಾರ್ಕಂಡೇಯ..." ಚಲನಾಳ ಹತ್ತಿರ ಒಂದಲ್ಲ ಎರಡಲ್ಲ ಮೂರು ಉದಾಹರಣೆಗಳಿದ್ದವು......
ಸುಹಾಸ್ ಆಕ್ಸಿಡೆಂಟಿನಲ್ಲಿ ತೀರಿಕೊಂಡಿದ್ದ...ಅರ್ಜುನ್ ಹುಚ್ಚು ಹಿಡಿದು ತೀರಿಕೊಂಡ. ನಲವತ್ತು ದಾಟಿದ್ದ ಮಾರ್ಕಂಡೇಯ ಹಿಮಾಲಯಕ್ಕೆ ಹೋದಾಗ ತೀರಿಕೊಂಡಿದ್ದರು...
ತನ್ನ ಹಣೆಬರಹವೇ ಸರಿಯಿಲ್ಲ ಎಂದುಕೊಂಡು ಮತ್ತೆ ಅತ್ತಳು...
ತಾನೊಬ್ಬ ಕೊಲೆಗೆಡುಕಿ ಎಂದು ಹಳಿದುಕೊಂಡಳು..
ಬಹಳೇ ಬಹಳ ಗೊಂದಲ, ಚೂರ್ ಚೂರು ಬೈಗುಳ, ಕೊಂಚ ಹತಾಶೆ, ಒದ್ದೆಯಾಗಿ ಮುದ್ದೆಯಾದ ಟಿಷ್ಯೂ ಪೇಪರ್ರು...
ಸ್ಥಿರೆ ಚಲನಾಳನ್ನು ಹೇಗೋ ಸಮಾಧಾನಿಸಿ ಮಲಗಿಸಿದಳು...
ಶತಭಿಷ ಮನೆಗೆ ಬಂದವನು ಚಲನಾಳ ಬಗ್ಗೆ ವಿಚಾರಿಸಿದ....ವಿನಯ್ ಬಗ್ಗೆ ನಾಳೆ ಮಾತಾಡಬೇಕಿದೆ ಎಂದ...ಸ್ಥಿರೆಯ ಕೆಲಸದ ವಿಚಾರ ನಾಳೆ ಮಾತಾಡೋಣವೆಂದು ನಿರ್ಧರಿಸಿ ಇಬ್ಬರೂ ಮಲಗಿದರು...
ವಿನಯ್‍ನ ಕಸಿನ್ ಸ್ಥಿರೆಗೆ ಮೆಸ್ಸೇಜು ಮಾಡಿದ್ದ... "ಥ್ಯಾಂಕ್ಸ್...ಹಿ ಈಸ್ ಆಲ್‍ರೈಟ್..."
ಸ್ಥಿರೆಗೆ ಮಾತ್ರ ಅಂದು ಬಹಳ ಹೊತ್ತು ನಿದ್ರೆ ಬರಲಿಲ್ಲ...
"ವಿನಯ್ ಚಲನಾಳನ್ನು ಮದುವೆಯಾಗಲು ಹೊರಟನಾ?"
ಕರೆಂಟ್ ಹೋಯಿತು....ಶಕುನದ ಫಲ ಸ್ಥಿರೆಗೆ ತಿಳಿಯಲು ಇನ್ನೂ ಸಮಯವಿತ್ತು....
**
"ಕಂಗ್ರಾಟ್ಸ್ ...ಕೀಪ್ ಗೋಯಿಂಗ್...ವೇಯ್ ಟು ಗೋ....ವೆಲ್ ಕಮ್ ಬ್ಯಾಕ್ ಚಾಂಪಿಯನ್...ಬಿಷ್ ಈಸ್ ಬ್ಯಾಕ್ ವಿಥ್ ಅ ಬ್ಯಾಂಗ್....."
ವಾಟ್ಸಪ್ಪು, ಫೇಸ್‍ಬುಕ್, ಲಿಂಕಡಿನ್, ಟ್ವಿಟರ್....ಎಲ್ಲಾ ಕಡೆ ಶತಭಿಷನದೇ ಹವಾ ಕ್ರಿಯೇಟ್ ಆಗಿತ್ತು...
ಆತ ಏಂಜೆಲ್ ಇನ್ವೆಸ್ಟರ್ ಆಗಿ ಹಣ ಹೂಡಿದ್ದ ಕಂಪನಿಯೊಂದನ್ನು ಬಹುದೊಡ್ಡ ಕಂಪನಿ ಅಕ್ವೈರ್ ಮಾಡ ಹೊರಟಿತ್ತು....
ಶತಭಿಷನ ಎದುರು ಹೊಗಳಿಕೆಗಳ ದೊಡ್ಡ ರಾಶಿಯಿತ್ತು....ಬ್ಯಾಂಕ್ ಅಕೌಂಟಿನಲ್ಲಿ ಸಾಕಷ್ಟು ಹಣವೂ ತುಂಬುವುದಕ್ಕಿತ್ತು... ಐದು ವರುಷಗಳ ನಂತರ ಮತ್ತೆ ಬಿಸಿನೆಲ್ ವೀಕ್ಲಿಯೊಂದರ ಮುಖಪುಟದಲ್ಲಿ ಆತನ ಫೋಟೋ ಹಾಕಲಾಗಿತ್ತು....ಶತಭಿಷನ ಇನ್ವೆಸ್ಟ್‍ಮೆಂಟ್ ಜಗತ್ತಿನಲ್ಲಿ ಮೂರನೇ ಅಧ್ಯಾಯ ಶುರುವಾಗಿತ್ತು....
ಆದರೆ ಆತನ ಸಂಸಾರ ಮಾತ್ರ ಎಳೆಯ ಮೇಲೆ ನಿಂತಿತ್ತು...ಕಂಪನಿ ವಾಪಸ್ ಶುರುವಾದ ಮೇಲೆ ಶತಭಿಷ ಮನೆಯ ಕಡೆ ಮರೆತೇ ಬಿಟ್ಟಿದ್ದ...ಶುರು ಶುರುವಿನಲ್ಲಿ ಸಹಜವೆಂದುಕೊಂಡು ಸ್ಥಿರೆಯೂ ಸುಮ್ಮನಾಗಿದ್ದಳು....ಆದರೆ ಕ್ರಮೇಣ ಅವಳಿಗೂ ಶತಭಿಷನ ವರ್ತನೆ ಸರಿ ಬರುತ್ತಿರಲಿಲ್ಲ....ಮೊದಲಿದ್ದ ಶತಭಿಷ ಈಗ ಸಂಪೂರ್ಣ ಬದಲಾಗಿದ್ದ...
ಸ್ಥಿರೆಗೆ ಅಷ್ಟೇನೂ ಇಷ್ಟವಿಲ್ಲದಿದ್ದರೂ ಶತಭಿಷ ಆಕೆಯ ಕೆಲಸ ಬಿಡಿಸಿದ್ದ....ಬುಸಿನೆಸ್ ಟ್ರಿಪ್ ಹೆಸರಿನಲ್ಲಿ ತಿಂಗಳಿಗೆ ಎರಡು ವಾರ ಊರು ಬಿಟ್ಟು ಹೊರಗೇ ಇರುತ್ತಿದ್ದ...ಸ್ಥಿರೆಯ ತಂದೆಗೆ ಹುಷಾರು ತಪ್ಪಿದಾಗ ಸಹಕರಿಸುವುದಿರಲಿ, ಆಸ್ಪತ್ರೆಗೂ ಬರಲಿಲ್ಲ....ಹದಿನಾಲ್ಕನೇ ದಿನಕ್ಕೆ ಅತ್ತೂ-ಕರೆದು ಸ್ಥಿರೆ ಆತನನ್ನು ಕರೆಸಿದ್ದಳು...
ಸ್ಥಿರೆ ಶತಭಿಷನ ಜೊತೆ ಜಗಳವಾಡಿಯೂ ಇದ್ದಳು....ಆತನಿಗೆ ಸಂಸಾರದ ಬಗ್ಗೆ ವಿಶೇಷ ಆಸ್ಥೆ ಉಳಿದಂತಿರಲಿಲ್ಲ....ಆದರೆ ಮಗುವಿಗೆ ಮಾತ್ರ ಅಪ್ಪನ ಬಗ್ಗೆ ವಿಶೇಷ ಅಕ್ಕರೆ....ಅದೊಂದೇ ಕಾರಣಕ್ಕೆ ಸ್ಥಿರೆ ತಡೆದುಕೊಂಡಿದ್ದಳು...ಆದರೆ .....
**
ಚಲನಾ ನ್ಯೂಯಾರ್ಕಿನಲ್ಲಿದ್ದಳು. ಪ್ರತಿಷ್ಠಿತ ಆರ್ಟ್ ಎಕ್ಷಿಬೀಷನ್ ಒಂದರಲ್ಲಿ ಆಕೆಯ ವರ್ಣಚಿತ್ರಗಳು ಪ್ರದರ್ಶನಕ್ಕಿದ್ದವು. ಬ್ಯುಸಿನೆಸ್ ವಿಚಾರವಾಗಿ ಸ್ಟೇಟ್ಸಿಗೆ ಹೋಗಿದ್ದ ಶತಭಿಷ ಆಕೆಯ ಆಹ್ವಾನದ ಮೇರೆಗೆ ಅಲ್ಲಿಗೆ ಹೋಗಿದ್ದ...
"ವಾಟ್ ಡಸ್ ಇಟ್ ಮೀನ್ ಫಾರ್ ಯು...." ಚಿತ್ರಪಟವೊಂದರ ಕುರಿತು ಚಲನಾಳನ್ನು ಕಲಾರಸಿಕರೊಬ್ಬರು ಪ್ರಶ್ನಿಸಿದ್ದರು....
"ನಾನ್ ಹೇಳಿದ್ರೆ ಚೆನಾಗಿರಲ್ಲ....ಅದು ನಿಮಗ್ ಹೆಂಗ್ ಅನ್ಸತ್ತೋ ಹಂಗ್ ಇರ್ಲಿ.." ಚಲನಾ ಎಂದಿನ ಸ್ಮೈಲ್ ಕೊಟ್ಟಿದ್ದಳು...
.
"ಇದು ಸೂರ್ಯ....ಅದಕ್ಕೆ ಅಪೋಸಿಟ್ ಆಗಿ ಚಂದ್ರ....ಕೆಳಗಡೆ ಭೂಮಿ...ಪಕ್ಕದಲ್ಲಿ ನೀರು...ಎದುರುಗಡೆ ಒಂದು ಮೊಳಕೆ...ಮೊಳಕೆ ಅಂದ್ರೆ...." ಆತ ತನ್ನ ವರ್ಷನ್ ಹೇಳಿದ....
ಚಲನಾ ಅಲ್ಲಿಯೇ ಇದ್ದ ಶತಭಿಷನನ್ನು ಕೇಳಿದಳು....
"ನಿಂಗೇನ್ ಅನ್ಸತ್ತೋ?" ಶತಭಿಷ ಅದನ್ನು ನಿರೀಕ್ಷಿಸಿರಲಿಲ್ಲ....
"ಮೊಳಕೆ ಅಂದ್ರೆ ಪ್ರೊಗ್ರೆಸ್...ಭೂಮಿಗೆ ನೀರು-ಗೊಬ್ಬರ ಹಾಕಿದ್ರೆ ಫಲ ಸಿಗತ್ತೆ ..ಆದ್ರೆ ಭೂಮಿಗೆ ಸೂರ್ಯ ಚಂದ್ರ ಇದ್ರೆ ಮಾತ್ರ ಜೀವ...ಅವೆರಡೂ ಇಲ್ಲಾ ಅಂದ್ರೆ ಏನೂ ಇಲ್ಲ..." ಶತಭಿಷ ತನಗನ್ನಿಸಿದ್ದನ್ನು ಹೇಳಿದ...
"ಯಾ ವೆರಿ ಟ್ರೂ...." ಆತ ಹ್ಯಾಂಡ್‍ಶೇಕ್ ಮಾಡಿ ಹೊರಟು ಹೋಗಿದ್ದ....
"ವೆರಿ ನೈಸ್...." ಚಲನಾ ಚಪ್ಪಾಳೆ ತಟ್ಟುತ್ತಾ ಮೋಹಕವಾಗಿ ನಕ್ಕಿದ್ದಳು....ಅಪರೂಪಕ್ಕೆ ವಿಶೇಷವಾಗಿ ರೆಡಿಯಾಗಿದ್ದಳು...ವಜ್ರದ್ದೊಂದು ನೆಕ್‍ಲೆಸ್ ಧರಿಸಿದ್ದಳು...
" ಎಕ್ಸ್‍ಕ್ಯೂಸ್ ಮಿ .....ಸ್ವಲ್ಪ ವೇಟ್ ಮಾಡ್ತೀಯಾ ?" ಚಲನಾ ಬೇರೆ ಗೆಸ್ಟ್‍ಗಳನ್ನು ಅಟೆಂಡ್ ಮಾಡಲು ಹೋದಳು....
ಶತಭಿಷ ಚಲನಾಳಿಗಾಗಿ ಕಾಯುತ್ತಿದ್ದ....ಆಕೆಯ ಜೊತೆ ಬಹಳಷ್ಟು ವಿಚಾರ ಮಾತನಾಡುವುದಕ್ಕಿತ್ತು...ಆಕೆಯ ಸಲಹೆ-ಸೂಚನೆ ಆತನಿಗೆ ಬಹಳ ಮಹತ್ವದ್ದಾಗಿತ್ತು...ಆಗಾಗ ಆತನಿಗೇನೋ ಅಪರಾಧಿ ಭಾವ ಕಾಡುತ್ತಿತ್ತು...ಆದರೆ ಬಿಸಿನೆಸ್ಸಿನ ಸಕ್ಸೆಸ್ಸು ಅದನ್ನು ಮರೆಸಿಬಿಡುತ್ತಿತ್ತು...ಮತ್ತೇನೋ ಹೊಸ ಸಾಹಸಕ್ಕೆ ಪ್ರೇರೇಪಿಸುತ್ತಿತ್ತು....
ಆತ ಚಲನಾಳ ಬರುವಿಕೆಗೆ ಕಾದು ಸಿಗರೇಟು ಹಚ್ಚಿದ್ದ....
ಅಷ್ಟರಲ್ಲಿ ಸ್ಥಿರೆಯ ಮೆಸ್ಸೇಜು ಬಂದಿತ್ತು....
-ಚಿನ್ಮಯ
22/2/2019

No comments: