Saturday, February 2, 2019

ಶಾಂತಿನಿಕೇತನ್ ಅಪಾರ್ಟ್‍ಮೆಂಟ್ಸ್, ಐ.ಟಿ.ಪಿ.ಎಲ್.

"ಆರ್ ಯು ವರ್ಜಿನ್?" ಆಕೆ ಕೊನೆಯ ಪ್ರಶ್ನೆ ಎಂಬಂತೆ ಕೇಳಿದ್ದಳು.
"ಆಫ್ ಕೋರ್ಸ್ ನಾಟ್" ಆತ ನಗುತ್ತಲೇ ಉತ್ತರಿಸಿದ್ದ. ಆಕೆ ನಕ್ಕು ತಲೆ ಕೆಳ ಹಾಕಿದ್ದಳು.
"ಯಾಕೆ?" ಆತ ಪ್ರಶ್ನೆ ಹಾಕಿದ್ದ.
"ಏನಿಲ್ಲ...." ಆಕೆ ನಾಚಿಕೊಂಡಿದ್ದರೂ ತೋರಿಸಿಕೊಂಡಂತಿರಲಿಲ್ಲ.
"ನೀವ್ ಓಪನ್ ಆಗೇ ಪ್ರಶ್ನೆ ಕೇಳಿದೀರಾ...ನಾನ್ ಫ್ರಾಂಕ್ ಆಗೇ ಆನ್ಸರ್ ಮಾಡಿದೀನಿ. ಸೋ.. "
"ಸೋ...?"
"ಏನಿಲ್ಲಾ ಬಿಡಿ..."
"ಹಮ್...ಹೇಳ್ಬಾರ್ದು ಅಂತೇನಿಲ್ಲಾ"
"ನಾನ್ ಕೇಳ್ಳಿ ಅಂತಾ ಸುಮ್ನಿದ್ರಾ?"
"ಮೇ ಬಿ"
"ಓ. ಕೆ...ಹೇಳಿ".. ಆತ ಕುರ್ಚಿಯಿಂದ ಮುಂದಕ್ಕೆ ಬಾಗಿದ್ದ...
"ನಥಿಂಗ್...ಇಟ್ಸ್ ಜಸ್ಟ್....ಒಬ್ರಿಗಾದ್ರೂ ಎಕ್ಸ್‍ಪೀರಿಯನ್ಸ್ ಇರ್ಬೇಕು ಅಂತಾ ಅಷ್ಟೇ" ಆಕೆ ನಗು ತಡೆಯಲೆಂದು ಬಾಯಿ ಮುಚ್ಚಿಕೊಂಡಳು
"ಹಾ ಹಾ...ನೈಸ್...ನೀವೇ ಕ್ವಶ್ಚನ್ ಕೇಳಿ ನೀವೇ ಆನ್ಸರ್ ಕೂಡಾ ಹೇಳ್ತಿದೀರಾ..."
"ಹಾ ಹಾ...ಯಾಹ್..ಮೇ ಬಿ..."
ಇಬ್ಬರೂ ಜೋರಾಗಿ ನಕ್ಕರು...
"ಬೈ ದ ಬೈ...ಲಾಸ್ಟ್ ಕ್ವಶ್ಚನ್...ನಂಗೆ ಇದ್ಕಿಂತಾ ಮುಂಚೆ ಒಂದ್ ಎಂಗೇಜ್‍ಮೆಂಟ್ ಆಗಿತ್ತು. ಅದ್ರಿಂದ ನಿಮ್ಗೇ ಪ್ರಾಬ್ಲಂ ಆಗಲ್ಲಾ ಅಲ್ವಾ?" ಆಕೆ ದೃಢ ಮನಸ್ಸಿನಿಂದ ಕೇಳಿದ್ದಳು.
"ಎವರಿಬಡಿ ಹ್ಯಾಸ್ ಅ ಪಾಸ್ಟ್...ವಿ ಶುಡ್ ಮೂವ್ ಆನ್...ನಿಮಗ್ ಪ್ರಾಬ್ಲಂ ಇಲ್ಲಾ ಅಂದ್ರೆ ನಂಗೇನ್ ಪ್ರಾಬ್ಲಂ ಇಲ್ಲಾ..." ಆದ ನಗುತ್ತಾ ಹೇಳಿದ್ದ.
"ನಿನ್ನೆಗೆ ನಾಳೆದ್ ನಾಳೆಗೆ...ಇಂದೂ ನಮ್ಮದೇ..." ಪಕ್ಕದ ಹಾಸ್ಟೆಲಿನಲ್ಲಿ ಹುಡುಗಿಯರು ಅಂತಾಕ್ಷರಿ ಆಡುತ್ತಿದ್ದರು....
ಅವರಿಬ್ಬರೂ ಅದು ಇದು ಮಾತಾಡುತ್ತಾ, ಆಗಾಗ ನಗುತ್ತಿದ್ದರು. ಮೊಬೈಲ್ ನಂಬರ್ ಬದಲಾಯಿಸಿಕೊಂಡರು. ಫೇಸ್‍ಬುಕ್ಕ್‍ನಲ್ಲಿ ಕನೆಕ್ಟ್ ಆದರು. ಕೆಳಗಡೆ ಬಾಲ್ಕನಿಯಲ್ಲಿ ನಿಂತಿದ್ದ ಅಮ್ಮಂದಿರು ಕೈ ಕೈ ಹಿಡಿದುಕೊಂಡು ನಗುಚೆಲ್ಲಿದರು...
***
ಶಾಂತಿನಿಕೇತನ್ ಅಪಾರ್ಟ್‍ಮೆಂಟ್ಸ್, ಐ.ಟಿ.ಪಿ.ಎಲ್.
"ಆರ್ ಯು ಸೀರಿಯಸ್?" ಆತನನ್ನು ಮತ್ತೊಮ್ಮೆ ಕೇಳಿದ್ದಳು. ಆಕೆ ಕುಂದಲಹಳ್ಳಿ, ಮಾರತ್‍ಹಳ್ಳಿಯ ಕಾಂಕ್ರೀಟು ಲೇಯೌಟ್‍ಗಳಲ್ಲಿ ಯಾವುದೋ ಒಂದು ಬೆಳಕನ್ನು ಕಾಣದ ಫ್ಲಾಟ್‍ಅನ್ನು ನಿರೀಕ್ಷಿಸುತ್ತಿದ್ದಳು. ಆದರೆ ಆತ ಮಾತ್ರ ಆಕೆಗೆ ಹೇಳದಂತೆ ಶಾಂತಿನಿಕೇತನ್ ಅಲ್ಲಿ ಫ್ಲಾಟೊಂದನ್ನು ಲೀಸಿಗೆ ಪಡೆದಿದ್ದ. ಆಕೆಗೆ ನಂಬಲಾಗುತ್ತಿರಲಿಲ್ಲ. ನಾಲ್ಕು ವರುಷಗಳಿಂದ ಆಕೆ ಅದೇ ಏರಿಯಾದಲ್ಲಿ ಕೆಲಸ ಮಾಡುತ್ತಿದ್ದವಳು. ದೊಡ್ಡ ದೊಡ್ಡ ಕಂಪನಿಗಳ ಮ್ಯಾನೇಜರ್, ಟೀಮ್-ಲೀಡ್ ಪೋಸ್ಟಿನವರು ಮಾತ್ರ ಅಂತಹ ಪ್ರತಿಷ್ಠಿತ ಅಪಾರ್ಟ್‍ಮೆಂಟಿನಲ್ಲಿ ಇರುತ್ತಿದ್ದುದೆಂದು ಆಕೆ ಗೊತ್ತಿತ್ತು. ಅಷ್ಟೆಲ್ಲಾ ದುಡ್ಡಿರಬಹುದಾ? ಆಕೆಗೆಲ್ಲೋ ಅನುಮಾನ....ಸಂಬಂಧ ಕೂಡಿಸುವಾಗ ಭಾವ ಹೇಳಿದ್ದುದು, ಆತ ಮಾಸ್ಟರ್ ಡಿಗ್ರೀ ಓದಿದ್ದಾನಂತೆ, ಶೇರ್ ಮಾರ್ಕೇಟಿನಲ್ಲಿ ಕೆಲಸ ಮಾಡುತ್ತಾನಂತೆ, ಸಧ್ಯಕ್ಕೆ ಅವನಿಗೆ ಭಾರೀ ಹೆಸರಿದೆಯಂತೆ, ಜೊತೆಗೆ ಊರಿನಲ್ಲಿ ಭಾರೀ ಜಮೀನಿದೆಯಂತೆ ಎಂದು...ಅಣ್ಣ ಮತ್ತೊಮ್ಮೆ ವಿಚಾರಿಸಿ, ಆತನ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನೇ ತಿಳಿಸಿದ್ದ.  ಅಷ್ಟು ಸಣ್ಣ ವಯಸ್ಸಿಗೇ ಸೈಟು-ಕಾರುಗಳನ್ನು ಖರೀದಿಸಿದ್ದಕ್ಕೆ ಸಂತೋಷನ್ನೂ ವ್ಯಕ್ತಪಡಿಸಿದ್ದ. ವಾಡಿಕೆಗೆಂಬಂತೆ, ಎಂಗೇಜ್‍ಮೆಂಟಿನ ಮುಂಚೆ ಅವರಿಬ್ಬರೂ, ಆರ್ಥಿಕ ಸ್ಥಿತಿಗತಿಯ ಬಗ್ಗೆ ಮಾತನಾಡಿದ್ದರು. ಆಗ ಆತ ಹೇಳಿದ್ದಿಷ್ಟೇ "ದುಡ್ಡು ನನ್ನ ಪಾಲಿಗೆ ಒಂದು ಸಂಖ್ಯೆ ಅಷ್ಟೆ. ಜೀವನ ಅದಕ್ಕಿಂತ ದೊಡ್ಡದು. ಯು ಕಾನ್ಟ್ ಎಕ್ಸ್‍ಪ್ಲೇನ್ ವಾಟ್ ಇಸ್ ದ ಕಾಸ್ಟ್ ಓಫ್ ಎಕ್ಸ್‍ಪೀರಿಯನ್ಸ್...ಯು ಮಸ್ಟ್ ಫೀಲ್ ಇಟ್". ಆಕೆ ಹೆಚ್ಚೇನೂ ಕೇಳಿರಲಿಲ್ಲ...ಅಷ್ಟಕ್ಕೂ ಆ ಸಂಭಾಷಣೆ ನಡೆದಿದ್ದೇ ಜೇ.ಡಬ್ಲು ಮ್ಯಾರಿಯಟ್ ಹೊಟೇಲಿನಲ್ಲಿ!
ಆಕೆಗೆ ಅಮ್ಮನ ಕಡೆಯಿಂದ ಸ್ಪಷ್ಟವಾದ ಗೈಡ್‍ಲೈನ್‍ಗಳಿದ್ದವು. ಮದುವೆತನಕ ಆಕೆ ಆತನ ಜೊತೆ ಸ್ವಚ್ಛಂದವಾಗಿ ಇರುವಂತಿರಲಿಲ್ಲ. "ಬಡಕೊಂಡೆ ಅವತ್ತೇ...ವಿನಯ್ ಜೊತೆ ಸಿನೆಮಾ ಹೋಗ್ಬೇಕಾದ್ರೆನೇ...ಮದ್ವೆ ಆಗೋ ತನ್ಕಾ ಜಾಸ್ತಿ ಏನೂ ಬೇಡ ಅಂತಾ , ಎಲ್ ಕೇಳ್ತಿಯಾ? ಹೋದ್ನಲ್ಲ ಬೇಡಾ ಅಂತಾ...ಸ್ವಲ್ಪ ದೊಡ್ಡೋರ್ ಹೇಳಿದ್ ಕೇಳು...ಮದ್ವೆ ಅಂತಾ ಒಂದ್ ಆಗೋ ತನ್ಕಾ ಸ್ವಲ್ಪ ಬುದ್ಧಿ ನೆಲದ್ ಮೇಲ್ ಇರ್ಲಿ... " ಮೊದಲ ಎಂಗೇಜ್‍ಮೆಂಜ್ ಮುರಿದಾಗಿಲಿನಿಂದ ಅಮ್ಮ ಗೊಣಗುತ್ತಲೇ ಇರುತ್ತಿದ್ದಳು. ಬಹುಷಃ ಈಕೆಯೇ ತೀರಾ ಓಪನ್ ಆಗಿ ಮಾತಾಡುತ್ತಿದ್ದಳೇನೋ...ವಿನಯ್ ಏನೆಂದುಕೊಂಡಿದ್ದನೋ...ತತ್‍ಪರಿಣಾಮ, ಈಕೆ ಆತನ ಬಳಿ ಹಿತಮಿತವಾಗೇ ಬೆರೆಯುತ್ತಿದ್ದಳು. ಆತನೂ ಏನು ತೀರಾ ಫೋರ್ಸ್ ಮಾಡುತ್ತಿರಲಿಲ್ಲ...ಟ್ರೇಡಿಂಗ್ ಅವರ್ಸ್‍ನಲ್ಲಿ ಕಾಲ್ ಮಾಡಿದರೆ ಚೂರು ರೇಗುತ್ತಿದ್ದ. ತಡರಾತ್ರಿ ಇವಳು ಮಲಗಿದ ಮೇಲೆ ಕಾಲ್ ಮಾಡಿ ಎಬ್ಬಿಸುತ್ತಿದ್ದ. ಅಷ್ಟೇ!
**
ಮದುವೆಯ ಸಂಭ್ರಮ ಮುಗಿದು, ಬಾಲಿಗೊಂದು ಟ್ರಿಪ್ ಮುಗಿಸಿ ಇಬ್ಬರೂ ಮತ್ತೆ ಕೆಲಸಕ್ಕೆ ಮರಳಿದ್ದರು. ಆಕೆಯ ತಾಯಿ ಹದಿನೈದು ದಿನ ಅಲ್ಲಿಯೇ ಇದ್ದು ಮನೆಯನ್ನು ಸೆಟ್ ಮಾಡಿಕೊಟ್ಟು ಊರಿಗೆ ಹಿಂದಿರುಗಿದ್ದರು. ಕೆಲವೇ ದಿನಗಳಲ್ಲಿ ಯುಗಾದಿ ಬರುವುದಿತ್ತು...ಅವರಿಬ್ಬರೂ ಹೋಗಲೇಬೇಕಿತ್ತು...ಆತನ ಆಫೀಸು, ಆಕೆಯ ಆಫೀಸು ಮನೆಯಿಂದ ಹತ್ತಿರದಲ್ಲೇ ಇದ್ದವು. ಹೀಗೆಯೇ ದಿನ ಸಾಗುತ್ತಿರುವಾಗ ಒಂದು ದಿನ ಬೆಳಿಗ್ಗೆ ಆತ "ವಿಷ್ ಮಿ ಗುಡ್‍ಲಕ್" ಎಂದು ಆಕೆಯನ್ನು ಕೇಳಿಕೊಂಡಿದ್ದ. ಹಿಂದಿನ ರಾತ್ರಿಯೆಲ್ಲ ಸರಿಯಾಗಿ ನಿದ್ದೆ ಮಾಡಿರಲಿಲ್ಲ. "ಗುಡ್‍ಲಕ್" ಎಂದು ಆಕೆ ನಗೆಯೊಂದನ್ನು ಚೆಲ್ಲಿದ್ದಳು. ಆತನೇ ಅಡುಗೆ ಮನೆಯವರೆಗೆ ಬಂದು ಲಂಚ್‍ಬಾಕ್ಸ್ ತೆಗೆದುಕೊಂಡು ಹೊರಟುಹೋಗಿದ್ದ. ಸಂಜೆ ಆಕೆ ಮನೆಗೆ ಬರುವವರೆಗೆ ಎಲ್ಲ ಶಾಂತವಾಗಿತ್ತು. ಬೆಡ್‍ರೂಮಿನಲ್ಲಿ ಲೈಟ್ ಹಾಕದಂತೇ ಆತ ಬಿದ್ದುಕೊಂಡಿದ್ದ.. ಇದೇನಿದು ಹೀಗೆ ಎಂದು ಕೇಳಿದಾಗ ಏನೂ ಸರಿಯಾಗಿ ಮಾತಾಡಿರಲಿಲ್ಲ. ಆಕೆ ಚೂರು ಗಾಬರಿಯಾದರೂ, ಜಾಸ್ತಿಯೇನು ತಲೆ ಕೆಡಿಸಿಕೊಂಡಿರಲಿಲ್ಲ. ಮರುದಿನದಿಂದ ಒಂದು  ವಾರ ಆತ ಸರಿಯಾಗಿ ಮಾತಾಡಲೇ ಇಲ್ಲ. ಊಟ-ತಿಂಡಿಯಲ್ಲಂತೂ ಆಸಕ್ತಿಯೇ ಇದ್ದಂತಿಲ್ಲ. ನಿದ್ದೆಯೂ ದೂರ. ಆಕೆ ಕೊನೆಗೊಂದು ರವಿವಾರ ಗಟ್ಟಿಯಾಗೇ ಕೇಳಿದಳು, ಆಗ ಗೊತ್ತಾದದ್ದಿಷ್ಟು. "ಆತ ಷೇರಿನಲ್ಲಿ ಕೈಸುಟ್ಟುಕೊಂಡಿದ್ದ. ಅದನ್ನು ಸರಿ ಮಾಡಲೆಂದು ಬೇರೆ ಯಾರಿಂದರೂ ಹಣ ಪಡೆದು ಇನ್ವೆಸ್ಟ್ ಮಾಡಿದ್ದ. ಅದೂ ಲಾಸಿನಲ್ಲಿತ್ತು...ಈತನಿಗೆ ದಿಕ್ಕು ತೋಚದಾಗಿತ್ತು..."
ಆಕೆ ತನಗೆ ಗೊತ್ತಾದ್ದನ್ನು ಮಾಡಿದಳು. ಒಡವೆ ಒತ್ತೆ ಇಟ್ಟು ಅರ್ಜಂಟಿನ ಬಡ್ಡಿ ಕಟ್ಟಿದಳು. ಆಫೀಸ್ ಕ್ಲೋಸ್ ಮಾಡಿಸಿದಳು. ಮನೆ ಅದಾಗಲೇ ಲೀಸಿನಲ್ಲಿ ಇದ್ದುದ್ದರಿಂದ ಆಕೆಯ ಸಂಬಳದಲ್ಲಿ ಜೀವನ ಚೆನ್ನಾಗಿಯೇ ನಡೆಯುತ್ತಿತ್ತು. ಪಕ್ಕದ ಮನೆಯಲ್ಲಿ ಗಲಾಟೆ ನಡೆಯುವ ತನಕ!
**
ಪಕ್ಕದ ಮನೆಯಲ್ಲಿ ಗಂಡ-ಹೆಂಡಿರ ನಡುವೆ ಎಲ್ಲವೂ ಸರಿಯಿರಲಿಲ್ಲ. ಬಹುತೇಕ ಡೈವರ್ಸ್ ಆಗಲಿದೆ ಎಂದು ಅವರ ಮನೆಯ ಆಂಟಿ, ಸ್ಥಿರೆಗೆ ಯಾವತ್ತೋ ಹೇಳಿದ ನೆನಪು. ಸ್ಥಿರಾ ಕೂಡಾ ಪಕ್ಕದ ಮನೆಯವರ ಬಗ್ಗೆ ಜಾಸ್ತಿಯೇನು ತಲೆಕೆಡಿಸಿಕೊಂಡಿರಲಿಲ್ಲ. ಆಂಟಿ ಊರಿನಿಂದ ಬಂದಾಗ , ಈಕೆಯ ಮನೆಗೂ ಬರುತ್ತಿದ್ದರು. ಆಕೆಯ ಮಗ ಆಗಾಗ ಮೆಟ್ಟಿಲಿನಲ್ಲೋ, ಲಿಫ್ಟಿನಲ್ಲೋ ಸಿಕ್ಕಾಗ ಹಾಯ್ ಎನ್ನುತ್ತಿದ್ದ. ಆದರೀಗ ತಾಯಿ-ಮಗ ಇಬ್ಬರೂ ಮನೆಯನ್ನು ಖಾಲಿ ಮಾಡಿ ಹೊರಟಿದ್ದರು. ರಾಜೀ ಸಂಧಾನದ ಅನುಸಾರ ಆಂಟಿಯ ಸೊಸೆ ಆ ಮನೆಯಲ್ಲಿ ಇರತೊಡಗಿದ್ದಳು. ಸಿಗರೇಟಿನ ವಾಸನೆ ಯಾವಾಗಲೂ ಆ ಕಡೆಯಿಂದ ಘಂ ಎನ್ನುತ್ತಿತ್ತು. ಪಾಪ್ ಮ್ಯೂಸಿಕ್ ಅರಚಿಕೊಳ್ಳುತ್ತಿತ್ತು. ಮನೆಯ ಮುಂಭಾಗದಲ್ಲಿ ಏನೇನೋ ಅರ್ಥವಾಗದ್ದನ್ನು ಗೀಚಲಾಗಿತ್ತು. ಆಕೆ ಚಿತ್ರ-ವಿಚಿತ್ರವಾಗಿ ಬಟ್ಟೆ ಹಾಕಿರುತ್ತಿದ್ದಳು. ಒಮ್ಮೊಮ್ಮೆ ಹಗಲೇ ಚಿತ್ತಾದಂತೆ ಇರುತ್ತಿದ್ದಳು. ಆಕೆಯನ್ನು ಕಂಡರೆ ಸ್ಥಿರಾಳಿಗೆ ಏನೋ ಅಲವರಿಕೆ. ಏನೆಂದು ಅರ್ಥವಾಗುತ್ತಿರಲಿಲ್ಲ. ಅದು ಅರ್ಥವಾಗಿದ್ದು ಒಂದು ದಿನ ಎಂದಿನಂತೆ ಕುಡಿದು ಮಲಗಿದ್ದ ಶತಭಿಷ ಮಧ್ಯರಾತ್ರಿಯಲ್ಲಿ "ಚಲನಾ ಚಲನಾ.." ಎಂದು ಕನವರಿಸಿದಾಗಲೇ!
**
ಮರುದಿನ ಬೆಳಿಗ್ಗೆ ಹಾಲಿನವನು ಎಷ್ಟು ಬೆಲ್ ಮಾಡಿದರೂ ಶತಭಿಷ ಎದ್ದು ಬಾಗಿಲು ತೆರೆಯಲೇ ಇಲ್ಲ. ಅರೆಗಣ್ಣಿನಲ್ಲೇ ಎದ್ದ ಸ್ಥಿರೆ ಹಾಲು ಕಾಯಿಸಿ ಬಂದು ಶತಭಿಷನನ್ನು ಝಾಡಿಸಿದಳು. ಶತಭಿಷ ಎಂದಿನ ಆಲಸೀತನದಿಂದ ಹೂಂ ಹೂಂ ಎನ್ನುತ್ತಲಿದ್ದ. ಆಕೆಗೆ ಪಿತ್ತ ನೆತ್ತಿಗೇರಿ ಹಿಂದಿನ ದಿನದ ಕನವರಿಕೆಯ ಬಗ್ಗೆ ಕೇಳಿದಳು...ಶತಭಿಷ ಇದ್ದಕ್ಕಿದ್ದಂತೇ ಎದ್ದುನಿಂತ...ಮತ್ತೊಮ್ಮೆ ಆಕೆಯ ಬಳಿ ಕನವರಿಕೆಯ ಬಗ್ಗೆ ಕೇಳಿದ. ಆಕೆ ಚಲನಾಳ ಅಂದ್ರೆ ಯಾರು? ಎಂದಳು. ಆತ ಉತ್ತರಿಸದೇ ಬಾತ್‍ರೂಮಿಗೆ ಹೋದ. ಬಹುಷಃ ಅಳಹತ್ತಿದ್ದ. ಆಕೆಗೇ ಪಾಪ ಅನ್ನಿಸಿತು. ವಾಪಸ್ ಬಂದವನು ಕಸ ಗುಡಿಸಲು ಶುರುವಿಟ್ಟುಕೊಂಡಿದ್ದ. ನಂತರ ಸ್ನಾನ ಮಾಡಿ-ಜಪಕ್ಕೆ ಕೂತ. ಆಕೆ ಅಡುಗೆ ಮಾಡಿಟ್ಟು ಆಫೀಸಿಗೆ ಹೋಗುವ ಮುನ್ನ ಸಾರಿ ಎಂದಳು. ಆತ ಪೂಜೆ ಮಾಡುತ್ತಿರುವವನಂತೆ ನಟಿಸಿದ. ಕುಡಿಯುವುದನ್ನು ನಿಲ್ಲಿಸಿದ. ಕೆಲಸ ಹುಡುಕುತ್ತೇನೆಂದು ಇಂಟರ್‍ವ್ಯೂಗೆ ಹೋಗತೊಡಗಿದ. 
ಮುಂದಿನ ಶನಿವಾರ ಆಕೆ ಬೆಳಿಗ್ಗೆಯೇ ಮನೆ ಕ್ಲೀನ್ ಮಾಡಲು ಶುರು ಮಾಡಿದ್ದಳು. ಶತಭಿಷನ ಕೋಣೆಯಲ್ಲಿ ಒಂದಿಷ್ಟು ಮುದುಡಿದ ಹಾಳೆಗಳು ಸಿಕ್ಕವು...ಅದರಲ್ಲೇನೋ ಬರೆದಂತಿತ್ತು. ಬರೆದು ಹೊಡೆದು ಬರೆದು ಮತ್ತೆ ಮುದ್ದೆ ಮಾಡಿ ಎಸೆದಂತಿತ್ತು. ಅಕ್ಷರಗಳು ಸೊಟ್ಟಗಾಗಿದ್ದವು. ಬರೆಯುವುದನ್ನೆ ಮರೆತವರು , ನೆನಪಿಸಿಕೊಂಡು ಮತ್ತೆ ಬರೆದಂತಿತ್ತು.  ಜೊತೆಗೆ ಮದುವೆಯಾದಾಗಿನಿಂದ ಸಜ್ಜದ ಮೇಲೆಯೇ ಇದ್ದ ಹಳೆಯ ಸೂಟ್ ಕೇಸ್ ಒಂದು ಕೆಳಗೆ ಬಂದಿತ್ತು. ಕುತೂಹಲಕ್ಕೆಂದು ಆಕೆ ಅದನ್ನೊಮ್ಮೆ ತೆರೆದಳು..ಶತಭಿಷನ ಬಿ.ಇ ಮತ್ತು ಎಂ.ಟೆಕ್ ಸರ್ಟಿಫಿಕೇಟುಗಳು, ಅದರ ಜೊತೆಗೊಂದಿಷ್ಟು ಪ್ರಾಜೆಕ್ಟಿನ ರಿಪೋರ್ಟುಗಳು, ಆತನಿಗೆ ಬಂದಿದ್ದ ಪ್ರಶಸ್ತಿಗಳು...ಜೊತೆಗೊಂದು ಡೈರಿ...ಶತಭಿಷ ಡೈರಿ ಬರೆಯುತ್ತಿದ್ದನಾ? ಊಹುಂ ಅದರಲ್ಲಿದ್ದು ಒಂದಿಷ್ಟು ಚಿತ್ರಗಳು. ಅದರ ಪಕ್ಕದಲ್ಲೊಂದಿಷ್ಟು ಸಾಲುಗಳು..ಸಾಲಿನ ಕೆಳಗೆ ಆತನದೇ ಹೆಸರು "ಶತಭಿಷ". ಆಕೆಗೆ ಆಶ್ವರ್ಯವಾಯಿತು. ಚಿತ್ರಗಳನ್ನೊಮ್ಮೆ ದಿಟ್ಟಿಸಿದಳು. ಕೊನೆಯಲ್ಲಿ, ಮೂಲೆಯಲ್ಲೆಲ್ಲೋ ಬರೆಯಲಾಗಿತ್ತು "ಆರ್ಟ್ ಬೈ ಚಲನಾ ಭಾರಧ್ವಾಜ್"
**
"ಹೆಂಗಾಯ್ತು ಇಂಟರ್‍ವ್ಯೂ?" ಆಕೆ ಕರೆಂಟ್ ಬಿಲ್ ತುಂಬುತ್ತಾ ಕೇಳಿದಳು. ಆತ ಆಕೆಗೆ ಇಷ್ಟವಾದ ರೋಸ್ ಜಾಮೂನ್ ಎದುರಿಗಿಟ್ಟ. "ವಾವ್...ಕಂಗ್ರಾಟ್ಸ್.." ಆಕೆ  ಖುಷಿಯಿಂದ ತಬ್ಬಿಕೊಂಡಳು. "ಥ್ಯಾಂಕ್ ಯು..." ಆತ ಜೊತೆಗೇ ತಂದಿದ್ದ ನಾಲ್ಕಾರು ಟೆಕ್ಸ್ಟ್ ಬುಕ್‍ಗಳನ್ನು ಕವರಿನಿಂದ ತೆಗೆದು ಮೇಜಿನ ಮೇಲಿಟ್ಟ. "ಬುಕ್ಸಾ? ಯಾಕಿದು?" ಆಕೆ ಅನುಮಾನದಿಂದ ಕೇಳಿದಳು. "ಆ ವಿಲ್ ಟೀಚ್ ಫ್ರಾಮ್ ಟುಮಾರ್ರೋ..." ಎಂದು ನಿರಾಸೆಯಿಂದ ಉತ್ತರಿಸಿದ್ದ. "ಅಂದ್ರೆ? ನೀನ್ ಯಾವ್ ಜಾಬ್‍ಗೆ ಅಪ್ಲೈ ಮಾಡಿದ್ದೆ?" ಆಕೆ ಹತ್ತಿರ ಬಂದು ಕೇಳಿದಳು..."ಇಲ್ಲೇ ಒಂದ್ ಇಂಜಿನಿಯರಿಂಗ್ ಕಾಲೇಜ್‍ನಲ್ಲಿ ಲಿಂಕ್ ಇತ್ತು...ಅಪ್ಲೈ ಮಾಡಿದ್ದೆ. ನಾಟ್ ಅ ಗ್ರೇಟ್ ಪ್ರೊಫೈಲ್. ಬಟ್ ಸುಮ್ನೆ ಮನೆಲ್ ಕೂತ್ರೇ ಬೋರ್ ಆಗತ್ತೆ. ಸೋ ಮೈಂಡ್ ಡೈವರ್ಟ್ ಮಾಡಣಾ" ಅಂತಾ...
"ಓಹ್. ಓಕೆ...ನೈಸ್. ಗುಡ್ ಫಾರ್ ಯು.. ಏನೋ ಮಾಡು.." ಆಕೆ ಕಿಚನ್ ಕಡೆ ಹೆಜ್ಜೆ ಹಾಕಿದಳು. ಪ್ರೈವೇಟ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಲೆಕ್ಚರಿಂಗ್ ಕೆಲಸ ಶತಭಿಷನ ಮಟ್ಟಕ್ಕೆ ತೀರಾ ಕಡಿಮೆ ಎಂದು ಆಕೆಗೂ ಅನಿಸಿತ್ತು. ಆದರೆ ಮನೆಯಲ್ಲೇ ಇದ್ದು ಷೇರ್ ಮಾರ್ಕೇಟ್ ಬಗ್ಗೆ ತಲೆ ಕೆಡಿಸಿಕೊಳ್ಳುವ ಬದಲು, ಅದನ್ನಾದರೂ ಮಾಡಲಿ ಎಂದು ಸುಮ್ಮನಾದಳು. ಶತಭಿಷನ ದಿನಚರಿ ನಿಧಾನವಾಗಿ ಸೆಟ್ ಆಗುತ್ತಿತ್ತು. ಮೊದಲಿಗಿಂತ ಚೆನ್ನಾಗಿ ಮಾತಾನಾಡುತ್ತಿದ್ದ-ನಿದ್ದೆ ಮಾಡುತ್ತಿದ್ದು-ಊಟ ಮಾಡುತ್ತಿದ್ದ. ಆದರೆ ಒಮ್ಮೊಮ್ಮೆ ಚಲನಾ ವಿಚಾರವಾಗಿ ಸ್ಥಿರೆಗೆ ನಿದ್ದೆ ಹತ್ತುತ್ತಿರಲಿಲ್ಲ. ನಿಧಾನವಾಗಿ ಸರಿಯಾಗುತ್ತಿದ್ದ ಶತಭಿಷನ ಮನಸ್ಸನ್ನು ಕಲುಕಲು ಆಕೆಗೆ ಇಷ್ಟವಿರಲಿಲ್ಲ. ಅಷ್ಟಕ್ಕೂ, ಚಿತ್ರ ಬಿಡಿಸಿದ ಚಲನಾ ತಮ್ಮ ಪಕ್ಕದ ಮನೆಯ ಚಲನಾಳೇ ಎಂಬುದಕ್ಕೆ ಸ್ಥಿರೆಯ ಬಳಿ ಸಾಕ್ಷ್ಯವೇನೂ ಇರಲಿಲ್ಲ.
**
ಶತಭಿಷ ಆರೇಳು ತಿಂಗಳ ಬಳಿಕ ಮತ್ತೆ ಹಣವನ್ನು ಸಂಪಾದಿಸಿದ್ದ. ಸಂಬಳ ಬಂದ ಖುಷಿಯಲ್ಲಿ ಆತ  ಮತ್ತು ಸ್ಥಿರೆ ಶಾಪಪಿಂಗ್ ಹೊರಟಿದ್ದರು. ಚಿಕ್ಕಪೇಟೆಗೆ ಹೋಗಿ, ಊರಹಬ್ಬಕ್ಕೆ ಬಟ್ಟೆ ಖರೀದಿಸುವ ಕಾರ್ಯಕ್ರಮ ಇತ್ತು. ಹಬ್ಬಕ್ಕೆ ಬಂದಾಗಲೆಲ್ಲ ಏನೋ ನೆಪ ಹೇಳಿ ತಪ್ಪಿಸಿಕೊಂಡಿದ್ದ ಸ್ಥಿರೆಗೆ ಈ ಬಾರಿ ಗಂಡನ ಜೊತೆ ಎರಡು ಮೂರು ದಿನ ಊರಿನಲ್ಲಿ  ನೆಮ್ಮದಿಯಿಂದ ಕಾಲ ಕಳೆಯುವ ಹಂಬಲವಿತ್ತು. ದಾರಿಯ ನಡುವೆ ಚಿತ್ರಸಂತೆ ಇರುವ ಬಗ್ಗೆ ಗೊತ್ತಾಯಿತು. ಶಾಪಿಂಗ್ ಅಂದರೆ ಶತಭಿಷ ಬೋರ್ ಆಗುತ್ತಾನಾದುದರಿಂದ ಸ್ಥಿರೆ ಮೊದಲಿಗೆ ಚಿತ್ರಸಂತೆಗೇ ಹೋಗೋಣ ಎಂದಳು. ಅದಕ್ಕೆ ಪೂರಕವಾಗಿ ಶತಭಿಷನೂ ಚಿತ್ರಗಳನ್ನು ಎಂಜಾಯ್ ಮಾಡುತ್ತಿದ್ದ. ನಡೆಯುತ್ತಾ ಹೋಗುತ್ತಿರವಾಗ ಸ್ಥಿರೆಗೆ ದೂರದ ಸ್ಟಾಲ್ ಒಂದರಲ್ಲಿ ಚಲನಾಳನ್ನು ಕಂಡಂತೇ ಭಾಸವಾಯಿತು. ಆಕೆಯೇ ಹೌದೋ ಅಲ್ಲವೋ ಅನುಮಾನವಿತ್ತು.. ಶತಭಿಷನನ್ನು ಆ ಕಡೆ ಕರೆದೊಯ್ಯಲು ಹೋದರೆ ಆತ ಈ ಕಡೆ ಹೋಗೋಣ ಅನ್ನುತ್ತಿದ್ದ. ಒಂದೆರಡು ಬಾರಿ ಹೀಗಾದ ಮೇಲೆ ಆಕೆಯೇ ಆತನ ಬಳಿ "ನಮ್ ನೇಬರ್ ಚಲನಾ ಇದ್ದಂಗಿದೆ" ಎಂದು ಬಾಯಿ ಬಿಟ್ಟು ಹೇಳಿ ಎಳೆದುಕೊಂಡು ಹೋದಳು.. ಬಹುಷಃ ಹೋಗಬಾರದಿತ್ತೇನೊ!
**
ಆ ದಿನ ಚಲನಾ ಲಕ್ಷಣವಾಗಿ ಕಾಣಿಸುತ್ತಿದ್ದಳು. ಬಿಳಿ ಕುರ್ತಾ-ಜೀನ್ಸ್ ಹಾಕಿದ್ದ ಆಕೆ, ಜಡೆ ಹೆಣೆದಿದ್ದಳು, ದೊಡ್ಡ ಬಿಂದಿ ಇಟ್ಟು ಎಲ್ಲರನ್ನೂ ನಗುತ್ತಾ ಮಾತನಾಡಿಸುತ್ತಿದ್ದಳು. ಸ್ಥಿರಾಳನ್ನೂ ಆತ್ಮೀಯವಾಗಿ ಸ್ವಾಗತಿಸಿದಳು. ಪಕ್ಕದಲ್ಲಿದ್ದವರಿಗೆ ಮೈ ನೇಬರ್ಸ್ ಎಂದು ಪರಿಚಯಿಸಿದಳು. ಸ್ಥಿರಾ ಆಕೆಯ ಪೇಂಟಿಂಗ್ಸ್ ಬಗ್ಗೆ ಅಚ್ಚರಿ ವ್ಯಕ್ತಪಡಿಸಿ ಅಭಿನಂದಿಸಿದಳು. ಶತಭಿಷನ ಮುಖ ಮಾತ್ರ ಕೆಂಪಾಗಿತ್ತು...
"ಯು ಕಾಂಟ್ ಸೆಲ್ ದಿಸ್" ಆತ  ಚಲನಾಳ ಜೊತೆ ವಾದಿಸುತ್ತಿದ್ದ.
"ಯು ಕಾಂಟ್ ಸೇ ದಾಟ್ ಟು ಮಿ. ಇಟ್ಸ್ ಮೈ ಆರ್ಟ್" ಆಕೆ ವಾಪಸ್ ಕೊಟ್ಟಿದ್ದಳು.
"ವಾಟ್ ರಬಿಷ್..ಇದಕ್ಕೆಲ್ಲಾ ಬೆಲೆ ಕಟ್ಟಕ್ ಆಗತ್ತಾ?" ಶತಭಿಷನ ಮಾತಿನಲ್ಲಿ ನೋವಿತ್ತು.
"ಐ ನೋ...ಅದಕ್ಕೆ ಅಂತಾನೇ ಇಷ್ಟ್ ದಿನ ಸೆಲ್ ಮಾಡಿರ್ಲಿಲ್ಲ. ಬಟ್ ಈಗ ನಾನು ಹೆಲ್ಪ್‍ಲೆಸ್..ನನ್ ಲೈಫ್ ಕೂಡ ನಡಿಬೇಕಲ್ಲಾ?" ಆಕೆಯೂ ನಿಧಾನಕ್ಕೆ ಉತ್ತರಿಸಿದ್ದಳು.
"ಸೋ...ಯು ವಾನ್ಟ್ ಮನಿ ರೈಟ್. ಫೈನ್...ಆತ ಕ್ರೆಡಿಟ್ ಕಾರ್ಡನ್ನು ಆಕೆಯ ಕಡೆ ಚಾಚಿದ್ದ...
ಆಕೆ "ಕ್ಯಾಶ್ ಪ್ಲೀಸ್" ಎಂದಳು.
ಶತಭಿಷ, ಪರ್ಸಿನಲ್ಲಿದ್ದ ಎಲ್ಲಾ ಹಣವನ್ನು ಆಕೆಯ ಮುಂದಿಟ್ಟು ಆ ಚಿತ್ರವನ್ನು ಕಸಿದುಕೊಂಡ.
ಆಕೆ "ಐ ವಿಲ್ ಪ್ಯಾಕ್ ದಿಸ್ ಫಾರ್ ಯು"  ಎಂದರೂ, "ನೋ ಥ್ಯಾಂಕ್ಸ್" ಎಂದು ಅಲ್ಲಿಂದ ಹೊರಟೇ ಬಿಟ್ಟಿದ್ದ.
ಸ್ಥಿರೆಗೆ ಏನೂ ಅರ್ಥವಾಗಲಿಲ್ಲ. ಆತ ಆಕೆಯ ಕೈ ಹಿಡಿದು ಜೋರಾಗಿ ನಡೆದುಹೋಗುತ್ತಿದ್ದ. "ಸ್ಟಾಪ್" ಎಂದವಳೇ ಕೈ ಬಿಡಿಸಿಕೊಂಡು ಗಟ್ಟಿಯಾಗಿ ನಿಂತಳು. ಆತ ಆಕೆಯನ್ನು ದುರುಗುಟ್ಟಿ ನೋಡಿ ಕಾರ್ ಪಾರ್ಕಿಂಗ್ ಕಡೆ ನಡೆದ. ಬಟ್ಟೆಗಾಗಿ ಏ.ಟಿ.ಎಂನಿಂದ ಬಿಡಿಸಿದ್ದ ಹಣವನ್ನೆಲ್ಲ ಆತ ಚಲನಾಳಿಗೆ ಕೊಟ್ಟುಬಿಟ್ಟಿದ್ದ. ಸ್ಥಿರೆ ಅದೇ ಹಣದಲ್ಲಿ ಊರಹಬ್ಬಕ್ಕೆ ಸೀರೆ ತೆಗೆದುಕೊಳ್ಳಬೇಕೆಂದಿದ್ದಳು. ಬೇರೆ ಹಣ ಇಲ್ಲವೆಂದೇನಿಲ್ಲ, ಆದರೂ ಊರಹಬ್ಬಕ್ಕೆ ಗಂಡ ಕೊಡಿಸಿದ ಸೀರೆ ಉಟ್ಟುಕೊಂಡು ಹೋದರೆ ಮನಸ್ಸಿಗೇನೋ ಸಮಧಾನವಾಗುತ್ತಿತ್ತು. ಜೊತೆಗೆ ಆ ಚಿತ್ರಕ್ಕಾಗಿ ಶತಭಿಷನೇಕೆ ಅಷ್ಟೆಲ್ಲಾ ರಂಪ ಮಾಡಿದ? ಆ ಚಿತ್ರ ಅಷ್ಟೆಲ್ಲಾ ಮಹತ್ವದ್ದಾ? ಆಕೆಗೂ ಆತನಿಗೂ ಮೊದಲೇ ಪರಿಚಯವಿತ್ತಾ? ಸ್ಥಿರೆಯ ಮನಸ್ಸಿನಲ್ಲಿ ಪ್ರಶ್ನೆಗಳ ಸರಮಾಲೆ. ಆಕೆ ಕಾರಿನಲ್ಲಿ ಸುಮ್ಮನೆ ಕೂತಳು. ಶತಭಿಷ ಸಿಗರೇಟು ಹೊತ್ತಿಸಿದ್ದ. ಸ್ಥಿರೆಯ ಮೊಬೈಲಿಗೆ ಮೆಸೆಜೊಂದು ಬಂತು.
"ಥ್ಯಾಂಕ್ಸ್ ಫಾರ್ ಕಮಿಂಗ್ ಸ್ಥಿರಾ...... ಹ್ಯಾಪಿ ಫಾರ್ ಯು .. ಟೇಕ್ ಕೇರ್ ಆಫ್ ಹಿಮ್.
-ಚಲನಾ".
ಮೊಬೈಲನ್ನು ಎಸೆಯಬೇಕೆನ್ನಿಸಿತು....ಸೀಟಿನ ಪಕ್ಕಕ್ಕಿಡಲು ಜಾಗ ಹುಡುಕಿದಳು. ಎರಡು ಸೀಟುಗಳ ನಡುವೆ ಇದ್ದ ಫ್ರೆಮಿನಲ್ಲಿ ಹಾಲುಗಲ್ಲದ ಹುಡುಗಿಯೊಬ್ಬಳ ಚಿತ್ರವಿತ್ತು. ಚಿತ್ರದ ತುದಿಯಲ್ಲಿ ಆರ್ಟ್ ಬೈ ಚಲನಾ  ಎಸ್. ಎಂದು ಬರೆದಿತ್ತು. ಶತಭಿಷನ ಕಣ್ಣಲ್ಲಿ ಒಂದ್ಚೂರು ನೀರಿತ್ತು.
(ನಿಮಗೆ ಇಷ್ಟವಾದರೆ ಕತೆ ಮುಂದುವರೆಯಬಹುದು)
-ಚಿನ್ಮಯ
2/2/2019

4 comments:

Srikanth Manjunath said...

ಘಟ್ಟ ಪ್ರದೇಶದ ತಿರುವುಗಳ‌ ಹಾಗೆ ಓಡುತ್ತಿದೆ...ಆರಂಭ ಮಧ್ಯಾಂತರ..ಅಂತ್ಯ ಸೊಗಸಾಗಿದೆ..ಅಂತ್ಯವೆಂದರೆ ಅಂತ್ಯವಾಗದೆ..ಸಶೇಷವಾಗಿದೆ...

ಕುತೂಹಲದ ಘಟ್ಟದಲ್ಲಿ‌ ನಿಂತಿದೆ ..ಕಾರ್ಪೊರೇಟ್ ಜೀವನದ ಹಾದಿಯನ್ನು ಗುಪ್ತಗಾಮಿನಿಯ ಹಾಗೆ ಬಣ್ಣಿಸಿರುವುದು ಸೊಗಸಾಗಿದೆ..

ಮುಂದಿನ ಭಾಗಕ್ಕೆ ಜಾತಕ ಪಕ್ಷಿಯಾಗಿದ್ದೇನೆ ಚಿನ್ಯಯ್..ಔಟ್ ಪುಟ್ ಬರಲಿ ಬೇಗ!

Anand Burji said...

ಇಂಟರೆಸ್ಟಿಂಗ್ ಆಗಿದೆ ಸರ್.. ಖಂಡಿತಾ ಮುಂದುವರೆಸಿ.

ಚಿನ್ಮಯ ಭಟ್ said...

ಶ್ರೀಕಾಂತಣ್ಣಾ,
ನಿಮ್ಮ ಅನಿಸಿಕೆಗಳನ್ನು ಓದುವುದೇ ಒಂದು ಖುಷಿ..ಧನ್ಯವಾದ ನಿಮ್ಮ ಪ್ರೋತ್ಸಾಹಕ್ಕೆ :)

ಚಿನ್ಮಯ ಭಟ್ said...

ಧನ್ಯವಾದ ಆನಂದ :)